ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲಾತಿಯಲ್ಲಿ ಗಣನೀಯ ಕುಸಿತ

ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ನಲುಗಿದ ಮ್ಯಾಗೇರಿ ಸರ್ಕಾರಿ ಶಾಲೆ
Last Updated 11 ಜನವರಿ 2017, 6:34 IST
ಅಕ್ಷರ ಗಾತ್ರ

ಸುರಪುರ: ಸುಸಜ್ಜಿತ ಕಟ್ಟಡ, ಗುಣಮಟ್ಟದ ಬೋಧನೆ, ವಾಹನ ಸೌಲಭ್ಯ, ಅತ್ಯಾಧುನಿಕ ಸೌಕರ್ಯ, ಆಂಗ್ಲ ಮಾಧ್ಯಮ ಇತರ ಅನು ಕೂಲಗಳಿಂದ ಖಾಸಗಿ ಶಾಲೆಗಳು ಪಾಲಕರನ್ನು ಆಕರ್ಷಿಸುತ್ತಿವೆ.

ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ನಲುಗಿ ಹೋಗುತ್ತಿವೆ. ನಗರ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಗಣನೀಯವಾಗಿ ಕುಸಿದಿದೆ. ಬಿಸಿಯೂಟ, ಸೈಕಲ್‌, ಸಮವಸ್ತ್ರ, ಪಠ್ಯಪುಸ್ತಕ, ಕ್ಷೀರಭಾಗ್ಯ ಇತರ ಯೋಜನೆಗಳಿಂದ ಸರ್ಕಾರ ಮಕ್ಕಳನ್ನು ಸೆಳೆಯಲು ಪ್ರಯತ್ನಿಸಿದರೂ ದಾಖಲಾತಿ ಹೆಚ್ಚಳ ಆಗುತ್ತಿಲ್ಲ.

ತಾಲ್ಲೂಕು ಸಂಪೂರ್ಣ ನೀರಾವರಿಗೆ ಒಳಪಟ್ಟ ಮೇಲೆ ಧನಿಕರ ಸಂಖ್ಯೆ ಹೆಚ್ಚಿದೆ. ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಹೆಚ್ಚಿನ ಶುಲ್ಕ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

ನಗರದ ಮ್ಯಾಗೇರಿ ಓಣಿಯ ಲಕ್ಷ್ಮೀದೇವಿ ಜೇವರ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1991ರಲ್ಲಿ ಆರಂಭವಾಗಿದೆ. ಮೊದಲ 10 ವರ್ಷ ಶಾಲೆಯಲ್ಲಿ ಉತ್ತಮ ದಾಖಲಾತಿ ಇತ್ತು. ಕ್ರಮೇಣ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿತು.

1 ರಿಂದ 7ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಈಗ ಕೇವಲ 68 ಮಕ್ಕಳು ಅಭ್ಯಸಿಸುತ್ತಿದ್ದಾರೆ. ದಾಖಲಾತಿಯಷ್ಟೆ ಹಾಜರಾತಿ ಇರುವುದು ಸಮಾಧಾನಕರ. 4 ಜನ ಶಿಕ್ಷಕರು ಇದ್ದು ಉತ್ತಮ ಬೋಧನೆ ಮಾಡುತ್ತಿದ್ದಾರೆ.

ಬಡ ಮತ್ತು ಅಲ್ಪಸಂಖ್ಯಾತ ಮಕ್ಕಳ ಸಂಖ್ಯೆಯೇ ಹೆಚ್ಚು. 3 ತರಗತಿ ಕೋಣೆಗಳೂ ಸೇರಿದಂತೆ ಬಿಸಿಯೂಟ ಕೋಣೆ, ಶೌಚಾಲಯ ಇತರ ಎಲ್ಲಾ ಮೂಲಸೌಕರ್ಯಗಳನ್ನು ಶಾಲೆ ಹೊಂದಿದೆ. ಮಕ್ಕಳ ಕಲಿಕೆಗೆ ಅನುಕೂಲವಾಗಲು ಗೋಡೆ ಬರಹ ಮಾಡಲಾಗಿದೆ.

ಗುಣಮಟ್ಟದ ಶಿಕ್ಷಣಕ್ಕೆ ಶಾಲೆ ಹೆಸರಾಗಿದೆ. ಈ ಶಾಲೆಯಲ್ಲಿ ಓದಿದ ಮಕ್ಕಳು ದೊಡ್ಡ ಹುದ್ದೆಗಳಲ್ಲಿ ಇದ್ದಾರೆ. ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ ಮಾಡಲಾಗುತ್ತಿದೆ. ಮಕ್ಕಳ ದೇಹದಾರ್ಢ್ಯ ಸಕ್ಷಮವಾಗಿಸಲು ಡ್ರಿಲ್‌ ಮಾಡಿಸಲಾಗುತ್ತದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ.

ಆಗಾಗ ಕಿರು ಪರೀಕ್ಷೆ ತೆಗೆದುಕೊಂಡು ಮಕ್ಕಳ ಶಿಕ್ಷಣದ ಮಟ್ಟ ವೀಕ್ಷಿಸಲಾಗುತ್ತಿದೆ. ಪಾಲಕರನ್ನು ಕರೆಯಿಸಿ ಅವರ ಮಕ್ಕಳ ಪ್ರಗತಿ, ಹಿನ್ನಡೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಒದಗಿಸಲಾಗುತ್ತಿದೆ. ಕಾರಣ ಮಕ್ಕಳು ಪ್ರತಿಭಾ ಕಾರಂಜಿ ಇತರ ಸ್ಪರ್ಧೆಗಳಲ್ಲಿ ಸಾಧನೆ ಮಾಡುತ್ತಿದ್ದಾರೆ.

ಮಕ್ಕಳಲ್ಲಿ ಶಿಸ್ತು, ಸಂಯಮ, ವಿನಯ, ಹಿರಿಯರಿಗೆ ಗೌರವ ನೀಡುವುದು, ಧೈರ್ಯ, ವಿಧೇಯ ಗುಣಗಳನ್ನು ಬೆಳೆಸಲಾಗುತ್ತಿದೆ. ವ್ಯಕ್ತಿತ್ವ ವಿಕಸನಕ್ಕೆ ಕಾರ್ಯಕ್ರಮಗಳನ್ನು ಆಯೋಜಿ ಸಲಾಗುತ್ತಿದೆ. ಗ್ರಂಥಾಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ, ಆದರ್ಶ ಪುರುಷರ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಮಕ್ಕಳಿಗೆ ಓದುವ ಪರಿಪಾಠ ಬೆಳೆಸಲಾಗುತ್ತಿದೆ.

ಇಂತಹ ಉತ್ತಮ ಶಾಲೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಶಾಲೆಯ ಸುತ್ತಲೂ ಮನೆಗಳು ಇರು ವುದರಿಂದ ಮಕ್ಕಳ ಅಭ್ಯಾಸ ಕುಂಠಿತಗೊಳ್ಳುತ್ತಿದೆ. ಶಾಲೆಯ ಮುಂದೆ ಚರಂಡಿ ಇರುವುದರಿಂದ ದುರ್ನಾತ ಬೀರುತ್ತಿದೆ.

ಹೊಲಸು ಮನೆ ಮಾಡಿರುವುದರಿಂದ ಹಂದಿಗಳ ಆವಾಸ್ಥಾನವಾಗಿದೆ. ಮಕ್ಕಳು ಬಿಸಿಯೂಟ ಸೇವಿಸಲು ಇದರಿಂದ ತೊಂದರೆಯಾಗಿದೆ. ಶಾಲೆಯ ಮಹಡಿಯ ಮೇಲೆ ಸುತ್ತಲಿನ ಜನ ಬಟ್ಟೆ, ಧಾನ್ಯಗಳನ್ನು ಒಣಗಲು ಹಾಕುತ್ತಾರೆ. ಮಕ್ಕಳು ಆಟ ಆಡಲು ಮೈದಾನ ಇಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

‘ಜಾಥಾ ಮೂಲಕ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪಾಲಕರ ಮನವೊಲಿಸಲಾಗುತ್ತಿದೆ. ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಎಲ್ಲಾ ಶಿಕ್ಷಕರು ಸಮರ್ಪಕ ಬೋಧನೆ ಮಾಡುತ್ತಾರೆ. ಸರ್ಕಾರದ ಯೋಜನೆಗಳನ್ನು ಚಾಚುತಪ್ಪದೇ ಜಾರಿ ಮಾಡಿದರೂ ಪಾಲಕರು ನಮ್ಮ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿಲ್ಲ’ ಎಂಬುವುದು ಮುಖ್ಯ ಶಿಕ್ಷಕ ಎನ್‌.ಮೌನೇಶ ಅವರ ಅಳಲು.

‘ಸಮುದಾಯದ ಸಹಭಾಗಿತ್ವ ಉತ್ತಮವಾಗಿದೆ. ಓಣಿಯ ಜನರು ಉತ್ತಮ ಸಹಕಾರ ನೀಡುತ್ತಾರೆ. ಶಾಲೆಗೆ ಆಗಾಗ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ ನೀಡುತ್ತಾರೆ. ಇಂತಹ ಉತ್ತಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ನಮಗೆ ಹೆಮ್ಮೆ’ ಎನ್ನುತ್ತಾರೆ ಶಿಕ್ಷಕರಾದ ಸುನಂದಾ ವಾಲು, ಎಸ್‌. ನಾಗಲಕ್ಷ್ಮಿ, ಜಯಂತಿ.
–ಅಶೋಕ ಸಾಲವಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT