ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಅರ್ಥವ್ಯವಸ್ಥೆಗೆ ಪರಿವರ್ತನೆ ಅನಿವಾರ್ಯ

Last Updated 11 ಜನವರಿ 2017, 8:23 IST
ಅಕ್ಷರ ಗಾತ್ರ

ಹುಕ್ಕೇರಿ: ಮುಂಬರುವ ದಿನಗಳಲ್ಲಿ ಸರ್ಕಾರ ಸಂಪೂರ್ಣ ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡಲಿದೆ. ಹೊಸ ವ್ಯವಸ್ಥೆಗೆ  ತಕ್ಕಂತೆ ಪರಿವರ್ತನೆ ಅತ್ಯಗತ್ಯ ಉಪನ್ಯಾಸಕ ಆರ್.ಡಿ. ಸವಣೂರ ಹೇಳಿದರು.

ನಬಾರ್ಡ್ ಆಶ್ರಯದಲ್ಲಿ ಮಂಗಳವಾರ ಪಟ್ಟಣದ ಡಿ.ಸಿ.ಸಿ ಬ್ಯಾಂಕಿನಲ್ಲಿ ಏರ್ಪಡಿಸಿದ್ದ ಡಿಜಿಟಲ್ ಆರ್ಥಿಕ ಸಾಕ್ಷರತಾ ಅರಿವು ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.
ಇದರಿಂದ ಸಾರಿಗೆ, ಆಹಾರ ಧಾನ್ಯ ಖರೀದಿ, ಮಾರಾಟ ಮತ್ತು ಬ್ಯಾಂಕಿಂಗ್ ಸೇರಿದಂತೆ ಪ್ರತಿಯೊಂದು ವ್ಯವಹಾರಗಳು ಹಣ ಚಲಾವಣೆ ಇಲ್ಲದೇ ಡೆಬಿಟ್, ಕ್ರೆಡಿಟ್, ಪೇಟಿಎಂ ಕಾರ್ಡ್ ಬಳಕೆ ಮೂಲಕ ನಡೆಯುತ್ತವೆ ಎಂದರು.

ಬ್ಯಾಂಕಿನ ಗ್ರಾಹಕರಾಗಿರುವ ರೈತರು ಕಡ್ಡಾಯವಾಗಿ ಆಧಾರ್, ಪ್ಯಾನ್ ಮತ್ತು ಮೊಬೈಲ್ ನಂಬರ್ ಬ್ಯಾಂಕ್ ಖಾತೆಗೆ ಜೋಡಿಸಲು ಸಹಕರಿಸಬೇಕು ಎಂದು ಸಲಹೆ ನೀಡಿದರು.

ಡಿ.ಸಿ.ಸಿ ಬ್ಯಾಂಕಿನ ಸಾಲ ಮತ್ತು ಆರ್ಥಿಕ ವ್ಯವಹಾರಗಳ ವಿಭಾಗದ ಶಾಖಾ ವ್ಯವಸ್ಥಾಪಕ ಎಸ್.ಬಿ.ಬಾಗೇವಾಡಿ ಹಾಗೂ ಸುಭಾಷ ಚೌಗಲೆ  ಮಾತನಾಡಿ ₹ 500 ಮತ್ತು ₹ 1000 ಗಳ ಬಳಕೆ ರದ್ದತಿಯ ನಂತರ ದೇಶದಲ್ಲಿ ಅಂದಾಜು ₹15 ಲಕ್ಷ ಕೋಟಿ ಠೇವಣಿ ಆಗಿದೆ. ಮುಂಬರುವ ದಿನಗಳಲ್ಲಿ ಪಾಶ್ಚಿಮಾತ್ಯ ದೇಶಗಳಂತೆ ನಗದುರಹಿತ ವ್ಯವಹಾರ ಅಳವಡಿಸಲಾಗುತ್ತಿದೆ. ಇದರಿಂದ ಆರ್ಥಿಕತೆಯಲ್ಲಿ ಪಾರದರ್ಶಕ ಆಗಲಿದ್ದು ವಂಚನೆ ಸಾಧ್ಯವಿಲ್ಲ ಎಂದು ಹೇಳಿದರು.

ಬಡ, ಮಧ್ಯಮ ವರ್ಗದವರು ಹಾಗೂ ರೈತ ಬಾಂಧವರು ಮೊಬೈಲ್ ಮೂಲಕ ವ್ಯವಹರಿಸುವುದನ್ನು ಕಲಿಯಬೇಕು. ಅದಕ್ಕಾಗಿ ಬ್ಯಾಂಕ್ ಮಿತ್ರ ಅಥವಾ ಸಿಬ್ಬಂದಿ ತರಬೇತಿ ನೀಡುತ್ತಾರೆ ಎಂದು ಅವರು ತಿಳಿಸಿದರು.

ಬ್ಯಾಂಕ ತಾಲ್ಲೂಕು ನಿಯಂತ್ರಣಾಧಿಕಾರಿ ಎನ್.ಎಸ್. ಬಿರಾದಾರಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮೊಬೈಲ್ ಬ್ಯಾಂಕಿಂಗ್ ವ್ಯವಹಾರದಿಂದ ರೈತರ ಶೋಷಣೆ ತಪ್ಪುತ್ತದೆ. ಕೆಲ ರೈತರಲ್ಲಿ ಗೊತ್ತಾಗುವುದಿಲ್ಲ ಎಂಬ ಅಭಿಪ್ರಾಯವಿದೆ. ಈ ಮೊದಲು ಮೊಬೈಲ್ ಬಳಕೆ ಪ್ರಾರಂಭವಾದಾಗ ಬಳಸಲು ಬರುವುದಿಲ್ಲ ಎಂದಿದ್ದರು. ಅನಕ್ಷರಸ್ಥರು ಸಹ ಈಗ ಸುಲಭವಾಗಿ ಬಳಸುತ್ತಿದ್ದಾರೆ. ಆದ್ದರಿಂದ ರೈತರು ಕಳವಳ ಪಡುವಂತಹ ಸ್ಥಿತಿ ಇಲ್ಲವೆಂದು ತಿಳಿಸಿದರು.

ಪ್ರಾತ್ಯಕ್ಷಿಕೆ: ಇದೇ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ ಮಿತ್ರ ಬಡಕುಂದ್ರಿಯ ಮಲ್ಲಿಕಾರ್ಜುನ ಗುಂಡುಕಲ್ಲೆ ಅವರು ನಗದು ರಹಿತ ವ್ಯವಹಾರ ಬಳಕೆಯ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು. ನಂತರ  ಆ್ಯಪ್ ಬಳಕೆ ವಿವರಿಸಿದರು. ಬ್ಯಾಂಕ್ ನಿರೀಕ್ಷಕ ಎ.ಎಂ. ಜಮಖಂಡಿ ಸ್ವಾಗತಿಸಿದರು. ಎಂ.ಆರ್. ಜಕ್ಕಪ್ಪಗೋಳ ನಿರೂಪಿಸಿದರು. ಹಾಲಪ್ಪನವರ ವಂದಿಸಿದರು.

‘ನಗದುರಹಿತ ವ್ಯವಹಾರಕ್ಕೆ ಸಜ್ಜಾಗಿ’
ಎಂ.ಕೆ.ಹುಬ್ಬಳ್ಳಿ: ನಗದು ವಹಿವಾಟಿಗೆ ಕಡಿವಾಣ ಹಾಕಿ ಎಲ್ಲರೂ ನಗದುರಹಿತ ವ್ಯವಸ್ಥೆಗೆ ಮುಂದಾಗಬೇಕು ಎಂದು ನಬಾರ್ಡ್ ಅಧಿಕಾರಿ ಕೆ.ಡಿ.ಸವಣೂರ ಹೇಳಿದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ  ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಆರ್ಥಿಕ ಸಾಕ್ಷರತಾ ಅರಿವು ಕಾರ್ಯಕ್ರಮದಲ್ಲಿ  ಮಾತನಾಡಿದರು. 

ಕೇವಲ ನಗದು ವ್ಯವಹಾರದಿಂದ ಭ್ರಷ್ಟಾಚಾರ ಹೆಚ್ಚುವ ಸಾಧ್ಯತೆ ಇರುತ್ತದೆ.  ನಗದು ರಹಿತ ವಹಿವಾಟು ನಡೆಸುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ದೇಶದ ಆದಾಯ ಹೆಚ್ಚಿಸಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಬಡವರ ಅನುಕೂಲ, ಅಭಿವೃದ್ಧಿಗೆ ಬ್ಯಾಂಕ್‌ಗಳ ಮೂಲಕ ಸರ್ಕಾರ ನೀಡುತ್ತಿರುವ ವಿಮೆ ಸೇರಿದಂತೆ ಮತ್ತಿತರ ಸೌಲಭ್ಯ  ಪಡೆಯಬೇಕು ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್‌ ಅಧಿಕಾರಿ ಎಸ್.ಬಿ. ಬಾಗೇವಾಡಿ ಮಾತನಾಡಿ, ನಗದು ರಹಿತ ವ್ಯವಹಾರ ಸದ್ಯ ಕಷ್ಟ ಅನಿಸಿದರೂ ಮುಂದೆ ಅನುಕೂಲವಿದೆ ಎಂಬುದನ್ನು ನೆನಪಿಡಬೇಕು ಎಂದರು.

ನಗದುರಹಿತ ವ್ಯವಹಾರ ಕುರಿತು ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಿದರು.  ಬಿಡಿಸಿಸಿ ಬ್ಯಾಂಕ್‌ ಶಾಖೆ ಅಧಿಕಾರಿ ಎಸ್.ಎಸ್. ಕಮತಿ, ಎನ್.ಎಸ್. ಹಾರೂಗೊಪ್ಪ, ಸುತ್ತಲಿನ ಗ್ರಾಮಗಳ ಪಿಕೆಪಿಎಸ್ ಕಾರ್ಯದರ್ಶಿ, ಮಹಿಳಾ ಸಂಘದ ಸದಸ್ಯೆಯರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಡಿಜಿಟಲ್‌ ವಹಿವಾಟಿಗೆ ತೆರೆದುಕೊಳ್ಳಲು ಸಲಹೆ
ಹುಕ್ಕೇರಿ: ಕಡಿಮೆ ನಗದು ಉಪಯೋಗಿಸಿ ತಂತ್ರಜ್ಞಾನದ ಪರಿಕರ ಉಪಯೋಗಿಸಿ ದೇಶದ ಅರ್ಥವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಳೀಯಶಾಖೆಯ ಮ್ಯಾನೇಜರ್ ಪರಶುರಾಮ ಬದಿ ಹೇಳಿದರು.

ಅವರು ಸ್ಥಳೀಯ ಎಸ್.ಎಸ್.ಎನ್. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಡಿ ಆಯೋಜಿಸಿದ್ದ ‘ವಿತ್ತೀಯ ಸಾಕ್ಷರತಾ ಅಭಿಯಾನದಡಿ ಇ–ಬ್ಯಾಂಕಿಂಗ್: ಅರ್ಥವ್ಯವಸ್ಥೆಯಲ್ಲಿ ಡಿಜಿಟಲ್ ಹಣದ ಉಪಯೋಗ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಭಾರತವು ಮುಂದುವರಿಯುತ್ತಿರುವ ರಾಷ್ಟ್ರ. ಇಲ್ಲಿಯವರೆಗೆ ಬಹುಪಾಲು ನಗದು ಹಣದ ರೂಪದಲ್ಲಿ ಅರ್ಥ ವ್ಯವಸ್ಥೆ ಸಾಗಿದೆ. ಆದರೆ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಅದರ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.

ಅರ್ಥ ವ್ಯವಸ್ಥೆಯಲ್ಲಿ ಹಣದ ವಿಕಸನ ಕುರಿತು ವಿವರಿಸಿದ ಅವರು 109 ಕೋಟಿ ಜನರಿಗೆ ಆಧಾರ್ ಕಾರ್ಡ್ ನೀಡಿದೆ. ಜೊತೆಗೆ 100 ಕೋಟಿಗೂ ಹೆಚ್ಚು ಜನರು ಮೊಬೈಲ್ ಹೊಂದಿದ್ದು, ಅಷ್ಟೇ ಸಂಖ್ಯೆಯ ಜನರು ಬ್ಯಾಂಕಿನಲ್ಲಿ ಎಸ್.ಬಿ. ಖಾತೆ ಹೊಂದಿದ್ದಾರೆ. ಹೀಗಾಗಿ ಹಂತ ಹಂತವಾಗಿ ಡಿಜಿಟಲ್ ಮೂಲಕ ಅರ್ಥವ್ಯವಸ್ಥೆಯ ಕಾರ್ಯಾಚರಣೆ ಮಾಡಲು ಸಾಧ್ಯ ಎಂದರು.

ದೇಶದಲ್ಲಿ 1.35 ಲಕ್ಷ ಬ್ಯಾಂಕು ಶಾಖೆಗಳು, 1.55 ಲಕ್ಷ ಅಂಚೆ ಕಚೇರಿಗಳು, 1.25 ಲಕ್ಷ ವ್ಯವಹಾರ ಕೇಂದ್ರಗಳು ಮತ್ತು 1.25 ಲಕ್ಷ ಐಸಿಟಿ ಸೇವಾ ಕೇಂದ್ರಗಳು ಇವೆ. ಇ–ಬ್ಯಾಂಕಿಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳಲು ಯುವಜನತೆ ಮುಂದಾಗಬೇಕು. ಇದಕ್ಕೆ ಮಾನಸಿಕ ಪರಿವರ್ತನೆ ಅಗತ್ಯ ಎಂದು ತಿಳಿಸಿದರು.
ಟಿಜಿಟಲ್ ಮೂಲಕ ಹಣ ಬಟವಡೆ ಮಾಡುವ ವಿಧಾನಗಳು, ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಕುರಿತು ವಿವರ ನೀಡಿದರು.

ಪ್ರಾಚಾರ್ಯ ಡಾ.ಎಸ್.ಎಸ್. ಗವತಿ ಅಧ್ಯಕ್ಷತೆ ವಹಿಸಿದ್ದರು. ಜಿಮ್ಖಾನಾ ಅಧ್ಯಕ್ಷ ಪ್ರೊ. ಸಿ.ಜಿ. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಅಧಿಕಾರಿ ಪ್ರೊ.ಬಿ.ಡಿ. ಮಾಳಗೆ ಸ್ವಾಗತಿಸಿದರು. ಪ್ರೊ. ಸೋಮೇಶ್ ಹುದ್ದಾರ ನಿರೂಪಿಸಿದರು. ಪ್ರೊ.ಪಿ.ಜಿ.ಕೊಣ್ಣೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT