ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಹಲವು ಸಮಸ್ಯೆ

ಬೆಳಗಾವಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೂಲ ಸೌಲಭ್ಯ ಕೊರತೆ, ಅವಸ್ಥೆಯ ಆಗರವಾದ ಹಾಸ್ಟೆಲ್‌ಗಳು
Last Updated 11 ಜನವರಿ 2017, 8:45 IST
ಅಕ್ಷರ ಗಾತ್ರ

ಬೆಳಗಾವಿ: ಮಂಜೂರಾದ ಸಂಖ್ಯೆ ಗಿಂತಲೂ ಹೆಚ್ಚಿನ ವಿದ್ಯಾರ್ಥಿನಿಯರ ವಾಸ. ಬಾಡಿಗೆ ಕಟ್ಟಡದ ವಸತಿ ನಿಲಯಗಳಲ್ಲಿ ಕೊಠಡಿಗಳ ಕೊರತೆ. ನೆಲದ ಮೇಲೆ, ಅಡುಗೆ ಕೋಣೆ ಯಲ್ಲಿರುವ ಊಟದ ಕುರ್ಚಿ– ಟೇಬಲ್‌ನಲ್ಲಿ ಕುಳಿತು ಅಭ್ಯಾಸ. ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸದಿರು ವುದರಿಂದ ಇದ್ದರೂ ಇಲ್ಲದಂತಿರುವ ಟಿವಿಗಳು. ತಾಂತ್ರಿಕ ದೋಷದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಸಿಸಿಟಿವಿ ಕ್ಯಾಮೆರಾಗಳು.

– ಜಿಲ್ಲೆಯಲ್ಲಿ ಸಮಾಜಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿನಿಲಯಗಳಲ್ಲಿರುವ ಕೊರತೆಗಳಿವು.

ಎರಡೂ ಇಲಾಖೆಯಿಂದ ಜಿಲ್ಲೆಯಲ್ಲಿ ಒಟ್ಟು 67 ವಸತಿನಿಲಯಗಳಿವೆ. ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಹುತೇಕ ವಸತಿ ನಿಲಯಗಳಲ್ಲಿ ಮಂಜೂರಾದ ಸಂಖ್ಯೆ ಗಿಂತಲೂ ಹೆಚ್ಚಿನ ವಿದ್ಯಾರ್ಥಿನಿ ಯರಿದ್ದಾರೆ. ಇದರಿಂದಾಗಿ, ವಿದ್ಯಾರ್ಥಿನಿ ಯರಿಗೆ ಮಂಚ, ಹಾಸಿಗೆ ಹಾಗೂ ಕೊಠಡಿಯಲ್ಲಿ ಅಭ್ಯಾಸಕ್ಕೆ ಬೇಕಾದ ಸೌಲಭ್ಯಗಳಿಲ್ಲ. ಒಂದೇ ಬೆಡ್‌ನಲ್ಲಿ ಇಬ್ಬರು ಅಡ್ಜಸ್ಟ್‌ ಮಾಡಿಕೊಳ್ಳಬೇಕಾದ ಅನಿವಾರ್ಯತೆ.

‘ಹೆಚ್ಚುವರಿ ವಿದ್ಯಾರ್ಥಿನಿಯರು’ ಕೊಠಡಿಯಲ್ಲಿ ಓದಲು ಕುರ್ಚಿ, ಟೇಬಲ್‌ ಇಲ್ಲದಿರುವುದರಿಂದ ಊಟದ ಹಾಲ್‌ನಲ್ಲಿನ ಕುರ್ಚಿ ಹಾಗೂ ಟೇಬಲ್‌ ನಲ್ಲಿ ಕುಳಿತು ಅಭ್ಯಾಸ ಮಾಡುವ ಸ್ಥಿತಿ ಇದೆ.

‘ಹೆಚ್ಚುವರಿ’ ಸಮಸ್ಯೆ: ಇಲ್ಲಿನ ಸದಾಶಿವ ನಗರದ ಪ. ಜಾತಿ ಹಾಗೂ ಪ. ಪಂಗಡದ ಮೆಟ್ರಿಕ್‌ ನಂತರದ ಹಾಸ್ಟೆಲ್‌ನಲ್ಲಿ ನಿಗದಿಗಿಂತಲೂ ಹೆಚ್ಚಿನ ವಿದ್ಯಾರ್ಥಿನಿ ಯರಿದ್ದಾರೆ. ಮಂಜೂರಾದ 75ರ ಬದಲಿಗೆ 100 ಹಾಗೂ ಇನ್ನೊಂದು ಹಾಸ್ಟೆಲ್‌ನಲ್ಲಿ 100ರ ಬದಲಿಗೆ 122 ವಿದ್ಯಾರ್ಥಿನಿಯರಿದ್ದಾರೆ. ಇದರಿಂದ, ಸೌಲಭ್ಯಗಳ ಕೊರತೆ ಎದುರಾಗಿದೆ.

‘ಅರ್ಜಿ ಹಾಕಿದವರೆಲ್ಲರಿಗೂ ಪ್ರವೇಶ ನೀಡುವಂತೆ ಇಲಾಖೆ ಹೇಳಿದೆ. 22 ವಿದ್ಯಾರ್ಥಿನಿಯರು ಹೆಚ್ಚುವರಿ ಇದ್ದಾರೆ. ಹೀಗಾಗಿ, ಕೊಠಡಿಯಲ್ಲಿ 6ರ ಬದಲಿಗೆ 8 ವಿದ್ಯಾರ್ಥಿನಿಯರಿಗೆ ವಸತಿ ಒದಗಿಸ ಲಾಗಿದೆ. ಹೆಚ್ಚುವರಿಯಾದವರಿಗೆ ಪ್ರವೇಶದ ವೇಳೆಯೇ ಜಾಗದ ಕೊರತೆಯ ಸಂಗತಿ ತಿಳಿಸಿ, ಬಾಂಡ್‌ ಬರೆಸಿಕೊಳ್ಳಲಾಗಿದೆ. ಆದರೂ ಹೆಚ್ಚುವರಿ ಮಂಚ ಹಾಗೂ ಹಾಸಿಗೆ ಒದಗಿಸುವಂತೆ ಇಲಾಖೆಗೆ ಬೇಡಿಕೆ ಸಲ್ಲಿಸಿದ್ದೇವೆ. ಬಿಸಿನೀರಿಗೆ ಸೋಲಾರ್‌ ಅಳವಡಿಸ ಲಾಗಿದೆ. ಮಳೆಗಾಲದಲ್ಲಷ್ಟೇ ಬಿಸಿನೀರಿಗೆ ತೊಂದರೆಯಾಗುತ್ತದೆ.

ವಿದ್ಯಾರ್ಥಿನಿ ಯರಿಗೆ ನೀಡಲು ಸ್ಯಾನಿಟರಿ ಪ್ಯಾಡ್‌ಗಳನ್ನು ಸಾಕಷ್ಟು ಪೂರೈಸಲಾಗಿದೆ. ಪ್ಯಾಡ್‌ಗಳನ್ನು ಸುಡುವ ಯಂತ್ರವೂ ಇದೆ (ಇನ್‌ಸಿನಿರೇಟರ್‌). ಆಹಾರ ಪದಾರ್ಥಕ್ಕೇನೂ ಕೊರತೆ ಇಲ್ಲ. ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸದೆ ಇರುವುದರಿಂದ ಟಿವಿ ಬಳಸಲಾಗುತ್ತಿಲ್ಲ. ಟಿವಿ ಅಗತ್ಯವಿಲ್ಲ ಎಂದು ವಿದ್ಯಾರ್ಥಿನಿ ಯರೂ ಹೇಳುತ್ತಾರೆ’ ಎಂದು ವಾರ್ಡನ್ ಗೌರಿ ಜಾಡಗೌಡ ಅವರು ಹಾಸ್ಟೆಲ್‌ಗೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದರು.

ಪೂರಕ ಸೌಲಭ್ಯ ಒದಗಿಸಬೇಕು: ಈ ಹಾಸ್ಟೆಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆಯಾದರೂ ತಾಂತ್ರಿಕ ದೋಷದಿಂದ ಕಂಪ್ಯೂಟರ್‌ನಲ್ಲಿ ಎಲ್ಲ ದೃಶ್ಯಗಳೂ ಮೂಡುತ್ತಿಲ್ಲ. ಕಾಂಪೌಂಡ್‌ ಇದ್ದು, ರಾತ್ರಿ ಕಾವಲುಗಾರರನ್ನು ಹೊರಗುತ್ತಿಗೆ ಮೇಲೆ ನೇಮಿಸಲಾಗಿದೆ. ‘ಹಾಸ್ಟೆಲ್‌ನಲ್ಲಿ ಊಟ, ತಿಂಡಿಗೇನೂ ತೊಂದರೆ ಇಲ್ಲ. ಕಾಲೇಜಿಗೂ ಊಟದ ಡಬ್ಬಿ ತೆಗೆದುಕೊಂಡು ಹೋಗುತ್ತೇವೆ. ಕಾಲೇಜಿನಿಂದ ಬಂದಾಗ ಊಟ ಖಾಲಿಯಾಗಿದ್ದರೆ ಮಾಡಿಕೊಡುತ್ತಾರೆ’ ಎಂದು ವಿದ್ಯಾರ್ಥಿನಿ ಕಮಲಾಕ್ಷಿ ನಾಯಕ ತಿಳಿಸಿದರು.

‘ಬಹುತೇಕ ಹಾಸ್ಟೆಲ್‌ಗಳಲ್ಲಿ ಕ್ರೀಡಾ ಸಾಮಗ್ರಿಗಳು ಪೂರೈಕೆಯಾಗಿಲ್ಲ. ಬಹು ತೇಕ ಹಾಸ್ಟೆಲ್‌ಗಳಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಿಲ್ಲ. ಕೆಲವೆಡೆ ಸಿಸಿಟಿವಿ ಕ್ಯಾಮೆರಾ ಅಳ ವಡಿಸಿಲ್ಲ. ನಿರ್ವಹಣೆಯಲ್ಲಿಯೂ ಕೊರತೆ ಕಂಡುಬರುತ್ತಿದೆ. ಬಾಡಿಗೆ ಕಟ್ಟಡ ಗಳಲ್ಲಿರುವ ಹಾಸ್ಟೆಲ್‌ಗಳಲ್ಲಿ ಸಮರ್ಪಕ ಸೌಲಭ್ಯ ಒದಗಿಸಲಾಗಿಲ್ಲ. ಕಾಂಪೌಂಡ್‌ ವ್ಯವಸ್ಥೆ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಹೇಳಿದರು.

‘ಹೆಚ್ಚುವರಿ ವಿದ್ಯಾರ್ಥಿನಿಯರಿಗೆ ಸೀಟು ಕೊಡಿ ಎಂದೇನೋ ಸರ್ಕಾರ ಹೇಳಿದೆ. ಇದರಿಂದ ಕೆಲವರಿಗೆ ಅನುಕೂಲವಾಗಿದೆ. ಆದರೆ, ಇದಕ್ಕೆ ತಕ್ಕಂತೆ ಪೂರಕ ಸೌಲಭ್ಯ ಒದಗಿಸಬೇಕು. ಚಿಕ್ಕದಾದ ಒಂದೇ ಬೆಡ್‌ನಲ್ಲಿ ಇಬ್ಬರು ಮಲಗಲು ಕಷ್ಟ. ಕೆಲವರು ನೆಲದ ಮೇಲೆಯೇ ಚಾಪೆ ಹಾಕಿಕೊಂಡು ಮಲಗುತ್ತಾರೆ. ಚಳಿಗಾಗದಲ್ಲಂತೂ ಬಹಳ ತೊಂದರೆಯಾಗುತ್ತದೆ. ಮಂಚ–ಹಾಸಿಗೆ ವ್ಯವಸ್ಥೆ ಮಾಡಿದರೆ ಅನುಕೂಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಸದ ಕೆಲ ವಿದ್ಯಾರ್ಥಿನಿಯರು ಪ್ರತಿಕ್ರಿಯಿಸಿದರು.

ಟಿವಿ ಕಡ್ಡಾಯವೇನಲ್ಲ:  ‘ಇಲಾಖೆಯ ಎಲ್ಲ ಹಾಸ್ಟೆಲ್‌ಗಳಿಗೂ ಮಂಚ ಒದಗಿಸ ಲಾಗಿದೆ. ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗಳಲ್ಲಿ ಆಗಾಗ ಪಾಠ ಹೇಳಿಕೊಡಲಾಗುತ್ತದೆ. ಪುಸ್ತಕಗಳನ್ನು ಪೂರೈಸಲಾಗಿದೆ. ರಾತ್ರಿ ಕಾವಲುಗಾರರನ್ನು ನೇಮಿಸಲಾಗಿದೆ. ಶೇ 95ರಷ್ಟು ಹಾಸ್ಟೆಲ್‌ಗಳಿಗೆ ಮಹಿಳಾ ವಾರ್ಡನ್‌ಗಳೇ ಇದ್ದಾರೆ. ಟಿವಿ ಕಡ್ಡಾಯವೇನಿಲ್ಲ; ಹೀಗಾಗಿ ಎಲ್ಲ ಕಡೆಯೂ ಇಲ್ಲ.

ಪರ್ಯಾಯ ವಿದ್ಯುತ್‌ ವ್ಯವಸ್ಥೆಗೆ ಯುಪಿಎಸ್‌, ಜನರೇಟರ್‌ ಸೌಲಭ್ಯವಿದೆ. ಕುಡಿಯಲು ಶುದ್ಧೀಕರಿಸಿದ ನೀರು ಪೂರೈಸಲಾಗುತ್ತಿದೆ. ಕ್ರೀಡಾ ಸಾಮಗ್ರಿಗಳನ್ನೂ ನೀಡಲಾಗಿದೆ. ಸ್ಯಾನಿಟರಿ ಪ್ಯಾಡ್‌ ಕೊರತೆ ಇಲ್ಲ’ ಎಂದು ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಮಾಹಿತಿ ನೀಡಿದರು. ‘ಇಲಾಖೆಯ 4 ಹಾಸ್ಟೆಲ್‌ಗಳಷ್ಟೇ ಬಾಡಿಗೆ ಕಟ್ಟಡದಲ್ಲಿವೆ. ವಿವಿಧೆಡೆ ದುರಸ್ತಿಗಾಗಿ ₹ 3 ಕೋಟಿ ಅನುದಾನ ಕೇಳಿದ್ದೇವೆ’ ಎಂದು  ಅವರು  ಹೇಳಿದರು.

16 ವಾರ್ಡನ್‌ ಹುದ್ದೆ ಖಾಲಿ!
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ 42 ಹಾಸ್ಟೆಲ್‌ಗಳಲ್ಲಿ 9 ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. ಉಳಿದವು ಬಾಡಿಗೆ ಕಟ್ಟಡದಲ್ಲಿವೆ. 8 ಹೊಸ ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿದೆ. 16 ವಾರ್ಡನ್‌ ಹುದ್ದೆಗಳು ಖಾಲಿಇದ್ದು, ಇತರ ಹಾಸ್ಟೆಲ್‌ಗಳ ವಾರ್ಡನ್‌ಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಇದರಿಂದ ಹಾಸ್ಟೆಲ್‌ಗಳ ಸಮರ್ಪಕ ನಿರ್ವಹಣೆ ಸಾಧ್ಯವಾಗತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT