ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆಯಿಂದ ನೀರು ಪೂರೈಕೆ ನಿರ್ವಹಣೆ

Last Updated 11 ಜನವರಿ 2017, 9:38 IST
ಅಕ್ಷರ ಗಾತ್ರ

ಹಾಸನ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀಡಿರುವ ನೀರು ಪೂರೈಕೆ ನಿರ್ವಹಣೆಯನ್ನು ವಾಪಸ್‌ ಪಡೆಯಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ನಗರಸಭೆ ಕುವೆಂಪು ಸಭಾಂಗಣ ದಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರ ತೀವ್ರ ವಿರೋಧದ ಕಾರಣಕ್ಕೆ ₹ 82 ಲಕ್ಷ ವೆಚ್ಚದ ಯೋಜನೆಯನ್ನು ವಾಪಸ್‌ ಪಡೆಯಲು ನಿರ್ಧರಿಸಲಾಯಿತು.

ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಯಶವಂತ್‌, ಜಲಮಂಡಳಿ ಅವರು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈಗಾಗಲೇ ₹ 17 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ. ಇದರ ನಡುವೆ ನಗರಕ್ಕೆ ನೀರು ಪೂರೈಕೆ ಮಾಡುವ ಹೊಣೆಯನ್ನು ಮಂಡಳಿಗೆ ವಹಿಸಿರುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಮತ್ತೊಬ್ಬ ಸದಸ್ಯ ಸುರೇಶ್ ಕುಮಾರ್‌, ಆರಂಭದಿಂದಲೂ ಜಲಮಂಡಳಿ ಮತ್ತು ನಿರ್ಮಿತಿ ಕೇಂದ್ರಕ್ಕೆ ಯೋಜನೆ ವಹಿಸುವುದಕ್ಕೆ ನನ್ನ ವಿರೋಧವಿದೆ. ನೀರು ಪೂರೈಕೆ ನಿರ್ವಹಣೆಗಾಗಿ ₹ 82 ಲಕ್ಷ ವೆಚ್ಚದ ಟೆಂಡರ್‌ ನೀಡಿರುವುದು ಸರಿಯಲ್ಲ. ಕೂಡಲೇ ವಾಪಸ್‌ ಪಡೆದು ನಗರಸಭೆ ವತಿಯಿಂದಲೇ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಅನಿಲ್‌ ಕುಮಾರ್‌, ನೀರು ಪೂರೈಕೆ ನಿರ್ವಹಣೆಯನ್ನು ಸದಸ್ಯರ ಒಪ್ಪಿಗೆ ಪಡೆದು ನೀಡಲಾಗಿದೆ. ಇದರಲ್ಲಿ ಯಾವುದೇ ಹಿಡನ್‌ ಅಜೆಂಡಾ ಇಲ್ಲ. ಯೋಜನೆ ವಿಫಲವಾದರೆ ನನಗೆ ಕೆಟ್ಟ ಹೆಸರು ಬರುತ್ತದೆ. ನನ್ನ ಮಾನ, ಮರ್ಯಾದೆ ಪ್ರಶ್ನೆ ಅಡಗಿದೆ. ಆದ್ದರಿಂದ ಎಲ್ಲರ ಒಪ್ಪಿಗೆ ಪಡೆದು ಜಿಲ್ಲಾಧಿಕಾರಿಗೆ ಪತ್ರ ಬರೆದು ವಾಪಸ್‌ ಪಡೆಯ ಲಾಗುವುದು ಎಂದು ಪ್ರಕಟಿಸಿದರು.

ಯಶವಂತ್‌ ಮಾತನಾಡಿ, ನಗರಸಭೆ ಇದುವರೆಗೂ ಸ್ಥಾಯಿ ಸಮಿತಿ ರಚಿಸಿಲ್ಲ. ಪಾರದರ್ಶಕ ಆಡಳಿತ ನೀಡಲು ಹಾಗೂ ಸಾರ್ವಜನಿಕರ ಹಣ ಪೋಲಾಗದಂತೆ ತಡೆಯಲು ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರನ್ನು ಒಳಗೊಂಡ ಕಾವಲು ಸಮಿತಿ ರಚಿಸಲಾಗುವುದು. ಸುರೇಶ್‌, ಕುಮಾರ್‌, ವಿದ್ಯಾ ಸೇರಿದಂತೆ 11 ಸದಸ್ಯರು ಇರುತ್ತಾರೆ. ಪ್ರತಿ ಹಂತದಲ್ಲೂ ಸದಸ್ಯರು ಆಡಳಿತದ ಮೇಲೆ ಕಣ್ಣು ಇಟ್ಟಿರುತ್ತಾರೆ. ಅಧಿಕಾರಿಗಳು ಒತ್ತಡಕ್ಕೆ ಮಣಿದು ಪಾರದರ್ಶಕ ಆಡಳಿತ ನೀಡದಿದ್ದರೆ ತಕ್ಕಶಾಸ್ತಿ ಮಾಡಲಾಗು ವುದು ಎಂದು ಎಚ್ಚರಿಸಿದರು.

ಸಮಿತಿ ರಚನೆಗೆ ಬೆಂಬಲ ವ್ಯಕ್ತಪಡಿಸಿದ ಅಧ್ಯಕ್ಷರು, ನನ್ನ ಮೇಲಿನ ಜವಾಬ್ದಾರಿ ಸ್ವಲ್ಪ ಕಡಿಮೆ ಮಾಡಿದ್ದೀರಿ ಎಂದರು. ಸುರೇಶ್‌ ಕುಮಾರ್‌ ಮಾತನಾಡಿ, ನಗರದ 35 ವಾರ್ಡ್‌ಗಳಲ್ಲಿ ಕೊರೆಸಿರುವ ಬೋರ್‌ವೆಲ್‌ಗಳಿಗೆ ಅಳವಡಿಸಿರುವ ಮೋಟಾರ್‌, ಪೈಪ್‌ ಕಾಮಗಾರಿ ಪರಿಶೀಲನೆ ನಡೆಸಲು ಅನುಮತಿ ನೀಡುವಂತೆ ನ. 25ರದು ನಗರಸಭೆಗೆ ಪತ್ರ ಬರೆದಿದ್ದೆ.  ಡಿ.29 ರಂದು ಸ್ಥಳ ಪರಿಶೀಲನೆಗೆ ಅನುಮತಿ ನೀಡಲಾಯಿತು.

ಆದರೆ, ಅದೇ ದಿನ ಮೈಸೂರಿನಲ್ಲಿ ಅಮೃತ್‌ ಯೋಜನೆ ಕುರಿತು ನಡೆಯುವ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಆಯುಕ್ತರು ಪತ್ರ ಬರೆದಿದ್ದರು. ಹೀಗಾಗಿ ಸ್ಥಳ ಪರಿಶೀಲನೆ ನಡೆಸಲು ಆಗಲಿಲ್ಲ. ಮತ್ತೊಮ್ಮೆ  ಅವಕಾಶ ನೀಡಬೇಕೆಂದು ಮಾಡಿಕೊಂಡ ಮನವಿಗೆ ಅಧ್ಯಕ್ಷರು ಜ. 12ರಂದು ವೀಕ್ಷಿಸಲು ಅನುಮತಿ ನೀಡಿದರು.

ನಗರದಲ್ಲಿ ಅನುಷ್ಠಾನಗೊಂಡಿರುವ ಯೋಜನೆ ಮತ್ತು ಕಾಮಗಾರಿಗೆ ಸಂಬಂಧಿಸಿದಂತೆ  ಮಾಹಿತಿ ನೀಡುವಂತೆ ಮಾಹಿತಿ ಹಕ್ಕಿನಲ್ಲಿ ಕೇಳಿದರೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವುದಿಲ್ಲ. ಸದಸ್ಯರ ಸ್ಥಿತಿ ಹೀಗಾದರೆ ಸಾಮಾನ್ಯ ಜನರ ಪಾಡೇನು ಎಂದು ಸುರೇಶ್‌ ಅಸಮಾಧಾನ ವ್ಯಕ್ತಪಡಿ ಸಿದರು. ಈ ಹಿಂದೆಯೂ ಮಾಹಿತಿ ಹಕ್ಕು ಆಯೋಗವು ಮಾಹಿತಿ ನೀಡಿದ ಅಧಿಕಾರಿಗಳಿಗೆ ₹ 30 ಸಾವಿರ ದಂಡ ವಿಧಿಸಿತ್ತು ಎಂಬುದನ್ನು ಸಭೆ ಗಮನಕ್ಕೆ ತಂದರು.

ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬದವರಿಗೆ ಅಂತ್ಯಸಂಸ್ಕಾರಕ್ಕೆ ₹ 3,500 ಆರ್ಥಿಕ ನೆರವು ನೀಡಲಾಗುವುದು ಎಂದು ಅನಿಲ್‌ ತಿಳಿಸಿದರು. ಸಭೆಯಲ್ಲಿ  ಉಪಾಧ್ಯಕ್ಷೆ ಲೀಲಾವತಿ, ಪೌರಾಯುಕ್ತ ನಾಗಭೂಷಣ್‌ ಹಾಗೂ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT