ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ಅಭಾವ; ಹೈನುಗಾರಿಕೆಗೆ ಪೆಟ್ಟು

Last Updated 11 ಜನವರಿ 2017, 9:56 IST
ಅಕ್ಷರ ಗಾತ್ರ

ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿ ನಲ್ಲಿ ಮಳೆ ಅಭಾವದಿಂದ ಭತ್ತದ ಬೆಳೆ ಪ್ರಮಾಣ ಕುಸಿದಿದ್ದು, ಹೈನುಗಾರಿಕೆ ನಂಬಿ ಬದುಕು ಸಾಗಿಸುತ್ತಿರುವ ರೈತರಿಗೆ ಹುಲ್ಲಿನ ಕೊರತೆ ಎದುರಾಗಿದೆ.

ಈ ಬಾರಿ ತಾಲ್ಲೂಕಿನಾದ್ಯಂತ 6,300 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ, ಮಳೆ ಕೊರತೆ ಹಾಗೂ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ ಕಾರಣ ಇಲ್ಲಿನ ರೈತರಿಗೆ ನೀರು ಇಲ್ಲದಂತಾಯಿತು. ರೈತರಿಗೆ ಕಟ್ಟು ನೀರು ಹರಿಸದ ಕಾರಣ ಕೇವಲ 3,300 ಹೆಕ್ಟೇರ್‌ನಲ್ಲಿ ಮಾತ್ರ ಭತ್ತ ಬೆಳೆಯಲಾ ಗಿದೆ. ಇದರಲ್ಲಿಯೂ ಸುಮಾರು 300 ಹೆಕ್ಟೇರ್ ಪ್ರದೇಶದ ಬೆಳೆ ನೀರಿಲ್ಲದೇ ಒಣಗಿ ಹೋಗಿದೆ. ಹೀಗಾಗಿ, ಈ ಬಾರಿ ಅರ್ಧಕ್ಕಿಂತಲೂ ಕಡಿಮೆ ಪ್ರಮಾಣದಷ್ಟು ಬೆಳೆ ಹಾಗೂ ಹುಲ್ಲು ರೈತರ ಕೈ ಸೇರಿದೆ.

ರೈತರಿಗೆ ಒಂದೆಡೆ ಭತ್ತ ಬೆಳೆ ಬೆಳೆಯುವ ಪ್ರದೇಶ ಕಡಿಮೆಯಾಗಿರು ವುದು ಬೇಸರದ ಸಂಗತಿಯಾದರೆ, ಹುಲ್ಲು ಸಹ ಇಲ್ಲವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿವರ್ಷ ಯಥೇಚ್ಚವಾಗಿ ಭತ್ತ ಬೆಳೆಯು ತ್ತಿದ್ದ ರೈತರು ಬಳಸಿ ಉಳಿದ ಹುಲ್ಲು ಮಾರಾಟ ಮಾಡುತ್ತಿದ್ದರು. ಆದರೆ, ಈ ಬಾರಿ ತಮಗೇ ಇಲ್ಲದಿರುವುದರಿಂದ ಮಾರಾಟ ಮಾಡುವ ಸಂದರ್ಭವೇ ಎದುರಾಗಿಲ್ಲ. ಇದರಿಂದ ಹೈನುಗಾರಿಕೆ ನಂಬಿರುವವರ ಬದುಕು ಅತಂತ್ರವಾಗಿದೆ.

ಹಿಂದಿನ ವರ್ಷ ಒಂದು ಕಂತೆ ಹುಲ್ಲಿಗೆ ₹ 20 ದರ ಇತ್ತು. ಆದರೆ, ಈ ಬಾರಿ ಒಂದು ಕಂತೆಗೆ ₹ 30 ನೀಡಿದರೂ ಹುಲ್ಲು ಮಾರಾಟ ಮಾಡುವವರೇ ಇಲ್ಲವಾಗಿದ್ದಾರೆ. ಜಾನುವಾರುಗಳಿಲ್ಲದ ಬೆರಳೆಣಿಕೆಯಷ್ಟು ರೈತರು ಮಾತ್ರ ಹುಲ್ಲು ಮಾರಾಟ ಮಾಡುತ್ತಿದ್ದಾರೆ. ದನ–ಕರುಗಳು ಮೇವಿಲ್ಲದೇ ಬಸವಳಿ ಯುತ್ತಿವೆ. ರೈತರು ಹುಲ್ಲು ಒದಗಿಸಲು ಸಾಧ್ಯವಾಗದೆ ಕೇಳಿದಷ್ಟು ಬೆಲೆಗೆ ಜಾನುವಾರು ಮಾರಾಟ ಮಾಡುತ್ತಿರು ವುದು ತಾಲ್ಲೂಕಿನಲ್ಲಿ ಕಂಡುಬರುತ್ತಿದೆ.

ಕಟಾವು ಯಂತ್ರ ನಿಷೇಧ: ರೈತರು ಪ್ರತಿವ ರ್ಷ ಭತ್ತದ ಬೆಳೆ ಕಟಾವು ಮಾಡಲು ಯಂತ್ರ ಬಳಸುತ್ತಿದ್ದರು. ಯಂತ್ರದ ಕಟಾವಿನಿಂದ ಹುಲ್ಲು ದೊರೆಯುತ್ತಿ ರಲಿಲ್ಲ. ಹೊಲದಲ್ಲಿಯೇ ಕೊಳೆತು ಗೊಬ್ಬರವಾಗಲು ಬಿಡುತ್ತಿದ್ದರು. ಆದರೆ, ಈ ಬಾರಿ ರೈತರು ಕಟಾವು ಯಂತ್ರದ ಬಳಿ ಸುಳಿದಿಲ್ಲ. ಮೇವಿನ ಕೊರತೆಯ ಮುನ್ಸೂಚನೆ ಅರಿತ ರೈತರು ಕೂಲಿ ಕಾರ್ಮಿಕರಿಂದಲೇ ಭತ್ತ ಬೆಳೆ ಕಟಾವು ಮಾಡಿಸಿ, ಹುಲ್ಲು ಸಂಗ್ರಹಿಸುತ್ತಿದ್ದಾರೆ.

ಹೊಲದಲ್ಲಿಯೇ ಭತ್ತ ಮಾರಾಟ: ಈ ಬಾರಿ ರೈತರು ಎಪಿಎಂಸಿ ಬದಲು ಹೊಲ ದಲ್ಲಿಯೇ ಭತ್ತ ಮಾರಾಟ ಮಾಡುತ್ತಿ ದ್ದಾರೆ. ರೈಸ್ ಮಿಲ್ ಮಾಲೀಕರು ರೈತನ ಬಳಿಗೆ ತೆರಳಿ ಕ್ವಿಂಟಾಲ್‌ಗೆ ₹ 1,700ರಿಂದ 1,900ರವರಗೂ ನೀಡಿ ಭತ್ತ ಖರೀದಿಸುತ್ತಿದ್ದಾರೆ. ಈ ವರ್ಷ ಮಳೆ ಇಲ್ಲದೆ ಇಳುವರಿ ಕುಂಠಿತಗೊಂಡಿರು ವುದೇ ಇದಕ್ಕೆ ಕಾರಣ.

ಹಿಂದಿನ ವರ್ಷ ಎಪಿಎಂಸಿಯಲ್ಲಿ ಪ್ರಥಮ ದರ್ಜೆ ಭತ್ತಕ್ಕೆ ₹ 1,600, ದ್ವಿತೀಯ ದರ್ಜೆ ಭತ್ತಕ್ಕೆ ₹ 1,500, ತೃತೀಯ ದರ್ಜೆ ಭತ್ತಕ್ಕೆ ₹ 1,420 ನೀಡಲಾಗುತ್ತಿತ್ತು. ಅಲ್ಲದೆ, ಒಂದು ಪಹಣಿಗೆ ಇಂತಿಷ್ಟೇ ಭತ್ತ ಮಾರಾಟ ಮಾಡಬೇಕು ಎಂಬ ನಿಯಮ ಇದೆ. ಜತೆಗೆ ಮಾರಾಟವಾದ ವಾರಗಳ ನಂತರ ಹಣ ಕೈ ಸೇರುತ್ತಿತ್ತು. ಆದರೆ, ಈ ಬಾರಿ ರೈತರು ಎಂಪಿಎಂಸಿ ಕಡೆ ಮುಖ ಮಾಡಿಲ್ಲ.

ರೋಗ ದೂರ: ‘ಈ ವರ್ಷ ಭತ್ತಕ್ಕೆ ಯಾವುದೇ ರೋಗ ಬರಲಿಲ್ಲ. ಪ್ರತಿ ವರ್ಷ ಅಕಾಲಿಕ ಮಳೆ ಸುರಿಯುತ್ತಿ ದರಿಂದ ಬೆಂಕಿ ರೋಗ ಸೇರಿದಂತೆ ಇತರೆ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಈ ಬಾರಿ ಅಕಾಲಿಕ ಮಳೆಯಾಗದ ಕಾರಣ ಬಿತ್ತನೆ ಮಾಡಿದ ಪ್ರದೇಶದಲ್ಲಿ ಉತ್ತಮ ಬೆಳೆಯಾಗಿದೆ’ ಎಂದು ಕೃಷಿ ತಾಂತ್ರಿಕ ಅಧಿಕಾರಿ ಗುರುಪ್ರಸಾದ್ ಹೇಳುತ್ತಾರೆ.
- ರವಿಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT