ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುರುವಾಯ್ತು ಜೋಸೆಫ್‌ ಶುಕ್ರದೆಸೆ...

Last Updated 11 ಜನವರಿ 2017, 20:30 IST
ಅಕ್ಷರ ಗಾತ್ರ

ಚಂದನವನದ ಹೊಸ ಫಸಲಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇವುಗಳಲ್ಲಿ ಗಟ್ಟಿ ಕಾಳುಗಳೆಷ್ಟು ಜೊಳ್ಳು ಎಷ್ಟು ಎಂಬ ಕುರಿತು ಭಿನ್ನಾಭಿಪ್ರಾಯಗಳೂ ಇವೆ.ಸಿನಿಮಾಗಳಲ್ಲಿ ಹೊಸತನ ಎಷ್ಟಿದೆ ಎನ್ನುವುದನ್ನು ಆಚೆಗಿರಿಸಿ ನೋಡಿದರೂ ಸಾಕಷ್ಟು ಸಂಖ್ಯೆಯಲ್ಲಿ ಹೊಸಬರು ಚಿತ್ರರಂಗಕ್ಕೆ ಅಡಿಯಿಡುತ್ತಿರುವುದಂತೂ ನಿಚ್ಚಳ.

‘ಮೊದಲ ಯತ್ನಗಳಿಗೆ’ ಪೂರಕವಾದ ವಾತಾವರಣ ನಿರ್ಮಾಣಗೊಂಡಿರುವುದೂ ಸತ್ಯ. ಇದೇ ನಂಬಿಕೆಯಲ್ಲಿ ಸಿನಿಮಾ ನಿರ್ದೇಶನದ ‘ಶುಕ್ರದೆಸೆ ಸ್ಟಾರ್ಟ್‌’ ಆಗಿದೆಯಾ ಎಂದು ಪರೀಕ್ಷಿಸಿಕೊಳ್ಳಲು ಹೊರಟಿದ್ದಾರೆ ಜೋಸೆಫ್‌ ನೀನಾಸಂ. ಅಂದ ಹಾಗೆ ಅವರ ಸಿನಿಮಾದ ಹೆಸರೇ ‘ಶುಕ್ರದೆಸೆ ಸ್ಟಾರ್ಟ್‌’!

‘ಅಮಾಯಕರನ್ನು ಈ ಸಮಾಜ, ಆಡಳಿತ ವ್ಯವಸ್ಥೆ ಟ್ರ್ಯಾಪ್‌ ಮಾಡಲು ಹೊರಟಾಗ ಅಮಾಯಕರು ಒಡ್ಡುವ ಪ್ರತಿರೋಧದ ಶಕ್ತಿಯೇ ನಮ್ಮ ಸಿನಿಮಾದ ಆತ್ಮ. ನಾವೆಲ್ಲರೂ ಅಮಾಯಕರೇ. ಈ ವ್ಯವಸ್ಥೆಯ ವಿರುದ್ಧ ಮಾತನಾಡಲು ಸಾಧ್ಯವಾಗದೆ ಷಡ್ಯಂತ್ರಕ್ಕೆ ಬಲಿಯಾಗುತ್ತಿರುತ್ತೇವಲ್ಲ, ಅದೇ ಈ ಸಿನಿಮಾದ ವಸ್ತು’ ಎನ್ನುತ್ತಾರೆ ಜೋಸೆಫ್‌.

‘ಎಲ್ಲರೂ ಶುಕ್ರದೆಸೆಗೆ ಪರದಾಡುತ್ತಿರುತ್ತಾರೆ. ದೊಡ್ಡವರು, ಚಿಕ್ಕವರು, ದುಡ್ಡಿರುವವರು, ಬಡವರು ಎಲ್ಲರೂ ಶುಕ್ರದೆಸೆ ಯಾವಾಗ ಆರಂಭವಾಗಬಹುದು ಎಂದು ಕಾಯುತ್ತಿರುತ್ತಾರೆ’ ಎಂದು ತಮ್ಮ ಚಿತ್ರಕ್ಕೆ ಈ ಶೀರ್ಷಿಕೆ ಇಟ್ಟಿರುವ ಹಿನ್ನೆಲೆಯನ್ನು ವಿವರಿಸುತ್ತಲೇ – ‘ಹಾಗಾದರೆ ನಿಜವಾದ ಶುಕ್ರದೆಸೆ ಯಾವುದು?’ ಎಂದು ಪ್ರಶ್ನಿಸಿಕೊಂಡು, ‘ಪ್ರೀತಿ ಪ್ರೇಮ ನಂಬಿಕೆಗಳನ್ನು ಗಳಿಸಿಕೊಳ್ಳುವುದೇ ನಿಜವಾದ ಶುಕ್ರದೆಸೆ’ ಎಂದು ಉತ್ತರವನ್ನೂ ಕೊಡುತ್ತಾರೆ.

ನಿರ್ದೇಶನದ ಟೋಪಿ ಇವರಿಗೆ ಮೊದಲ ಅನುಭವವಾದರೂ ಬಣ್ಣದ ಲೋಕದೊಂದಿಗೆ, ಅಭಿನಯ ಜಗತ್ತಿನೊಂದಿಗೆ ಇವರ ನಂಟು ತುಂಬಾ ಹಳೆಯದು. ಜೋಸೆಫ್‌ ಅವರ ಅನುಭವ ವೈವಿಧ್ಯವೂ ‘ಶುಕ್ರದೆಸೆ ಸ್ಟಾರ್ಟ್‌’ ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚಿಸುತ್ತದೆ.

ಜೋಸೆಫ್‌ ಕೇರಳದ ತಿರುವನಂತಪುರದವರು. ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತರಾಗಿದ್ದ ಅವರು 1991ರಲ್ಲಿ ಅಭಿನಯ ರಂಗ ಅಧ್ಯಯನ ಸಂಸ್ಥೆಯಲ್ಲಿ ನಟನಾಗಿ, ತಂತ್ರಜ್ಞನಾಗಿ ರಂಗಭೂಮಿ ಒಡನಾಟ ಬೆಳೆಸಿಕೊಂಡರು. ಹಾಗೆಯೇ ‘ಚಲಚ್ಚಿತ್ರ’ ಎಂಬ ಫಿಲಂ ಸೊಸೈಟಿಯ ಒಡನಾಟದಿಂದ ಸಿನಿಮಾ ಮಾಧ್ಯಮದ ಕುರಿತೂ ಆಸಕ್ತಿ ಬೆಳೆಸಿಕೊಂಡರು.

1998ರಲ್ಲಿ ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದಿದ್ದೂ ಅಲ್ಲದೇ ತಿರುಗಾಟದ ನಾಟಕದ ಪಾತ್ರಧಾರಿಯಾಗಿ ರಾಜ್ಯದಾದ್ಯಂತ ಪ್ರದರ್ಶನ ನೀಡಿದರು. ರಂಗಾಯಣದಲ್ಲಿಯೂ ಒಂದು ವರ್ಷ ಕೆಲಸ ಮಾಡಿದ ಅನುಭವ ಇದೆ.

ಗಿರೀಶ್ ಕಾಸರವಳ್ಳಿ ಅವರ ‘ಗೃಹಭಂಗ’ ಧಾರಾವಾಹಿ ಮೂಲಕ ಕ್ಯಾಮೆರಾ ಎದುರು ನಟನೆಗೆ ಇಳಿದ ಅವರು ನಂತರ ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿದರು.

ಮೋಹನ್‌ಲಾಲ್‌ ಅವರಿಗೆ ‘ಗುರು’ ಸಿನಿಮಾದಲ್ಲಿ ಅಂಧನ ಪಾತ್ರದಲ್ಲಿ ನಟಿಸಲು ತರಬೇತಿ ನೀಡಿದ್ದೂ ಇವರೇ. ಆ ಸಿನಿಮಾ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

ಕೇರಳದ ಕಲಾಮಂಡಳಂನಲ್ಲಿ ಕೂಡಿಯಾಟ್ಟಂ ತರಬೇತಿ ಪಡೆದರು. ಪರ್ಯಾಯ ಶಿಕ್ಷಣದ ವಿವಿಧ ಆಯಾಮಗಳನ್ನು ಹುಡುಕಿಕೊಂಡು ದೆಹಲಿ, ಡೆಹ್ರಾಡೂನ್‌ಗೂ ಹೋಗಿ ಕೆಲಸ ಮಾಡಿ ಬಂದಿರುವ ಅವರು ಡೆಹ್ರಾಡೂನ್‌ನಲ್ಲಿ ಒಂದು ಸಾಕ್ಷ್ಯಚಿತ್ರವನ್ನೂ ಮಾಡಿದ್ದಾರೆ. 2006ರಲ್ಲಿ ಮತ್ತೆ ಕರ್ನಾಟಕಕ್ಕೆ ಬಂದಾಗ ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಎರಡರಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡರು.

ಕನ್ನಡದಲ್ಲಿ ಸಂಚಾರಿ ವಿಜಯ್‌, ಭಜರಂಗಿ ಲೋಕಿ, ಅಶ್ವತ್ಥ್ ನೀನಾಸಂ, ಮಧು ಗುರಸ್ವಾಮಿ, ನರೇಶ್‌ ಗೌಡ, ನಿರಂಜನ್‌ ಶೆಟ್ಟಿ ಸೇರಿದಂತೆ ಹಲವು ಕಿರುತೆರೆ ಧಾರಾವಾಹಿ ಮತ್ತು ಸಿನಿಮಾ ಕಲಾವಿದರಿಗೆ ಜೋಸೆಫ್‌ ತರಬೇತಿ ನೀಡಿದ್ದಾರೆ.

ಗಿರೀಶ್‌ ಕಾಸರವಳ್ಳಿ, ಪಿ.ಎಚ್‌.ವಿಶ್ವನಾಥ್‌, ಜೇಕಬ್‌ ವರ್ಗೀಸ್‌, ಮಹೇಶ್‌, ಎಸ್‌.ಮಹೇಂದರ್‌ ಮುಂತಾದವರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಲೇ ಸಿನಿಮಾ ಮಾಧ್ಯಮದ ವ್ಯಾಕರಣವನ್ನು ಕಲಿತುಕೊಂಡಿರುವ ಜೋಸೆಫ್‌ ಅವರಿಗೆ, ಈಗ ಪೂರ್ಣ ಪ್ರಮಾಣದಲ್ಲಿ ಚಿತ್ರ ನಿರ್ದೇಶಿಸುವ ಕಾಲ ಕೂಡಿ ಬಂದಿದೆ.

‘ಶುಕ್ರದೆಸೆ ಸ್ಟಾರ್ಟ್’ ಸಿನಿಮಾಕ್ಕೆ ತಾರಾಗಣ ಬಹುತೇಕ ಅಂತಿಮಗೊಂಡಿದೆ. ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಅನುಭವ ಇರುವ ಮತ್ತು ಯಶಸ್ಸು ಗಳಿಸಿರುವ ವ್ಯಕ್ತಿಗಳನ್ನೇ ಅವರು ಸೇರಿಸಿದ್ದಾರೆ. ಮಲಯಾಳಂ ನಟ ಪ್ರಕಾಶ್‌ ಬಾರೆ ಈ ಚಿತ್ರದಲ್ಲಿ ಖಳನ ಪಾತ್ರದಲ್ಲಿ ನಟಿಸಿದ್ದಾರೆ. ಮುಂಬೈನ ಅನುಪಮ್ ಖೇರ್‌ ನಟನಾ ಸಂಸ್ಥೆಯಲ್ಲಿ ಅಭಿನಯ ತರಬೇತಿ ಪಡೆದಿರುವ ಅನಿಲ್‌ ನಾಯಕನಾಗಿ ನಟಿಸುತ್ತಿದ್ದಾರೆ. ನಮ್ರತಾ ಎನ್ನುವ ಹೊಸ ಹುಡುಗಿ ಚಿತ್ರದ ನಾಯಕಿ.

ವಿಮಲ್‌ ಜೈನ್‌ ಮತ್ತು ಅರ್ಜುನ್‌ ಗೌಡ ಎಂಬಿಬ್ಬರು ಈ ಸಿನಿಮಾಕ್ಕೆ ಹಣ ಹೂಡಲು ಮುಂದೆ ಬಂದಿದ್ದಾರೆ. ಶಶಿಧರ ಅಡಪ ಈ ಸಿನಿಮಾವನ್ನು ಕಲಾತ್ಮಕವಾಗಿ ಸಿಂಗರಿಸಲು ಸಜ್ಜಾಗುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಬಿಜಿ ಬಾಲ್‌ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಮಹಾರಾಷ್ಟ್ರದ ಮಹಾವೀರ್‌ ಎಂಬುವವರು ಧ್ವನಿ ನಿರ್ವಹಣೆ ನೋಡಿಕೊಳ್ಳುತ್ತಾರೆ. ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ನ ವಿಕಾಸ್‌ ‘ಶುಕ್ರದೆಸೆ...’ಗೆ ಕ್ಯಾಮೆರಾ ಕಣ್ಣಾಗಲಿದ್ದಾರೆ.

‘ಹೀಗೆ ಕನ್ನಡ, ಮರಾಠಿ, ಮಲಯಾಳಂ ಚಿತ್ರರಂಗದ ಪರಿಣತ ಕಲಾವಿದರು–ತಂತ್ರಜ್ಞರನ್ನು ಸೇರಿಸಿಕೊಂಡು ಸಿನಿಮಾ ಮಾಡುತ್ತಿದ್ದೇವೆ. ಆದ್ದರಿಂದ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಇರಲು ಸಾಧ್ಯವಾಗಿದೆ’ ಎನ್ನುತ್ತಾರೆ ಜೋಸೆಫ್‌.

ಈಗಾಗಲೇ ಒಂದು ಹಾಡಿನ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಫೆಬ್ರುವರಿಯಿಂದ ಮತ್ತೆ ಚಿತ್ರೀಕರಣಕ್ಕೆ ತೊಡಗಿಸಿಕೊಳ್ಳಲು ಯೋಜಿಸಿದೆ. ಗೋವಾ, ಕರ್ನಾಟಕ, ಕೇರಳದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಿಸುವ ಯೋಜನೆ ಇದೆ.

‘ಈಗ ಬರುತ್ತಿರುವ ಹೊಸ ರೀತಿಯ ಸಿನಿಮಾಗಳ ಸಾಲಿನಲ್ಲಿ ಈ ಸಿನಿಮಾವೂ ಸೇರುತ್ತದೆ. ಜನರಿಗೆ ಮೆಚ್ಚುಗೆಯಾಗುತ್ತದೆ’ ಎಂದು ವಿಶ್ವಾಸದಿಂದಲೇ ನುಡಿಯುವ ಜೋಸೆಫ್‌ ಅವರಿಗೆ ಮುಂದೆಯೂ ಕನ್ನಡ ಚಿತ್ರರಂಗದಲ್ಲಿಯೇ ಮುಂದುವರಿಯುವ ಆಸೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT