ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟದ ಸುಗ್ಗಿಹುಗ್ಗಿ ತಿಪಟೂರಿನಲ್ಲಿ

Last Updated 12 ಜನವರಿ 2017, 5:42 IST
ಅಕ್ಷರ ಗಾತ್ರ

ತಿಪಟೂರು: ಬರದ ನಡುವೆ ಬೇಸರಗೊಂಡಿರುವ ರೈತರಿಗೆ ಚೈತನ್ಯ ತುಂಬಲು ನಗರದಲ್ಲಿ ಜ. 15 ಮತ್ತು 16ರಂದು ರಾಜ್ಯ ಮಟ್ಟದ ಸುಗ್ಗಿ ಹುಗ್ಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ಸುಗ್ಗಿಹುಗ್ಗಿ ಕಾರ್ಯಕ್ರಮದ ಕಾರಣ ಬುಧವಾರ ನಡೆದ ಪೂರ್ವಭಾವಿಸಭೆ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು. ಜಾನಪದ ಕಲಾತಂಡಗಳನ್ನು ಪ್ರೋತ್ಸಾಹಿಸುವ ಜತೆಗೆ ಗ್ರಾಮೀಣ ಸೊಗಡು ಪರಿಚಯಿಸಲು ಸರ್ಕಾರ ಮೂರು ವರ್ಷಗಳ ಹಿಂದೆ ರಾಜ್ಯ ಮಟ್ಟದ ಸುಗ್ಗಿಹುಗ್ಗಿ ಕಾರ್ಯಕ್ರಮ ಆರಂಭಿಸಿತ್ತು.

ಎರಡು ವರ್ಷ ಕಾರ್ಯಕ್ರಮ ಬೆಂಗಳೂರಿನಲ್ಲೇ ನಡೆದಿತ್ತು. ಇಂತಹ ವಿಶಿಷ್ಟ ಕಾರ್ಯಕ್ರಮ ಗ್ರಾಮೀಣ ಭಾಗದಲ್ಲಿ ನಡೆಯಬೇಕು ಮತ್ತು ರೈತರಿಗೆ ಉತ್ಸಾಹ ತುಂಬಬೇಕು ಎಂಬ ಉದ್ದೇಶದಿಂದ ಸರ್ಕಾರದಲ್ಲಿ ಒತ್ತಡ ಹಾಕಿ ಮೊದಲ ಬಾರಿಗೆ ರಾಜಧಾನಿಯಿಂದ ಹೊರಗೆ ತರಲಾಗಿದೆ. ಸಂಪೂರ್ಣ ಸಾಂಸ್ಕೃತಿಕ ಕೇಂದ್ರಿತ ಈ ಕಾರ್ಯಕ್ರಮಕ್ಕೆ ಸಂಕ್ರಾಂತಿ ಮತ್ತು ಸುಗ್ಗಿ ಕಾಲದ ಸಾಂದರ್ಭಿಕತೆ ಇದೆ. ಇದು ಒಟ್ಟಾರೆ ಕಾರ್ಯಕ್ರಮದ ಸಾಂಕೇತಿಕವಾಗಿರುತ್ತದೆ. ರಾಜ್ಯದ ಪ್ರಸಿದ್ಧ ಕಲಾ ತಂಡಗಳು ವೈವಿಧ್ಯಮಯ ಪ್ರದರ್ಶನ ನೀಡಲಿವೆ. ಸ್ಥಳೀಯವಾಗಿ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಈ ಜಿಲ್ಲೆಯ ತಾಲ್ಲೂಕುಗಳ ತಂಡಗಳನ್ನೂ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಎರಡು ದಿನಗಳ ಈ ಕಾರ್ಯಕ್ರಮವನ್ನು ಸುಲಲಿತವಾಗಿ ನಡೆಸಬೇಕೆಂಬ ಉದ್ದೇಶದಿಂದ ಅಧಿಕಾರಿಗಳನ್ನು ಒಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ತೀರ್ಮಾನಿಸಲಾಗಿದೆ. ಕರಪತ್ರ ಮತ್ತು ಟಾಂಟಾಂ ಮೂಲಕ ಹಳ್ಳಿಗಳಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ವೀಕ್ಷಿಸುವ ಈ ಅವಕಾಶ ತಾಲ್ಲೂಕಿನ ಜತೆಗೆ ಸಿಕ್ಕಿದೆ.

ಕಾರ್ಯಕ್ರಮ ನಡೆಯುವ ಕೆ.ಆರ್. ಬಡಾವಣೆ ಬಯಲು ರಂಗ ಮಂದಿರವನ್ನು ಸುಗ್ಗಿ-ಸಂಕ್ರಾಂತಿ ಸಂಭ್ರಮದ ರೀತಿಯಲ್ಲಿ ಶೃಂಗರಿಸಲಾಗುವುದು. ಸಾಂಪ್ರದಾಯಿಕ ಕಣ ನಿರ್ಮಿಸಿ ವಿವಿಧ ಧಾನ್ಯಗಳ ರಾಶಿ ಹಾಕಲಾಗುವುದು. ವೀಕ್ಷಕರಿಗೆ ಎಳ್ಳುಬೆಲ್ಲ, ಅವರೆ ಕಡ್ಲೆ, ನನ ಅಕ್ಕಿಬೆಲ್ಲ ನೀಡಲಾಗುವುದು. ರಾಶಿಗೆ ಪೂಜೆ ಸಲ್ಲಿಸುವ ಮೂಲಕವೇ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಎತ್ತಿನ ಗಾಡಿ ಅಲಂಕಾರ ಸ್ಪರ್ಧೆ ಇದೆ. ಕ್ರಮವಾಗಿ ₹ 5000, 2500 ಮತ್ತು 1500 ನಗದು ಬಹುಮಾನವಿದೆ ಎಂದರು.

ನಗರಸಭೆ ಅಧ್ಯಕ್ಷ ಟಿ.ಎನ್. ಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ.ಬಿ. ಶಶಿಧರ್, ಉಪ ವಿಭಾಗಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ತಹಶೀಲ್ದಾರ್ ಗಂಗೇಶ್ ಸೇರಿದಂತೆ ವಿವಿಧ ಅಧಿಕಾರಿಗಳು, ರೈತ ಮುಖಂಡರಾದ ಬಿ.ಎಸ್. ದೇವರಾಜ್, ಯೋಗೀಶ್ವರಸ್ವಾಮಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT