ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದ ಆಟದಲ್ಲಿ ಗೆಲ್ಲದ ‘ಸುಧಾರಕ’

Last Updated 12 ಜನವರಿ 2017, 5:47 IST
ಅಕ್ಷರ ಗಾತ್ರ

ತುಮಕೂರು: ಬಹುಶಃ ಆ ಬಾಲಕನಿಗೆ ಮುಂದಿನ ಬದುಕು ಹೀಗಾಗುತ್ತದೆ ಎಂದು ಗೊತ್ತಿದ್ದರೆ ರೈಲ್ವೆ ಗೇಟ್‌ ಬಳಿ ಪ್ಯಾಂಟು ಕಳಚಿ ಪಂಚೆ ಧರಿಸುತ್ತಿರಲಿಲ್ಲವೇನೋ....
ಎಲ್ಲವೂ ಸಿಕ್ಕರೂ ಏನನ್ನು ಗಳಿಸಿಕೊಳ್ಳಲಾಗದೆ ಸಿದ್ದಗಂಗಾ ಮಠದ ಉತ್ತರಾಧಿಕಾರದ ವಿವಾದದಲ್ಲೆ ಬದುಕನ್ನು ಸಮಾಪ್ತಿಗೊಳಿಸಿದ ಗುಬ್ಬಿ ತಾಲ್ಲೂಕಿನ ಗೊಲ್ಲರಹಳ್ಳಿ ಮಠದ ಗೌರಿಶಂಕರ ಸ್ವಾಮೀಜಿ ಕಥೆ ಇದು.

ಗೌರಿಶಂಕರರ ಪೂರ್ವಾಶ್ರಮದ ಹೆಸರು ಜಗದೀಶ್‌. ಸಿದ್ದಗಂಗಾ ಮಠದಿಂದ ಇಪ್ಪತ್ತಾರು ಕಿಲೋ ಮೀಟರ್‌ ದೂರದಲ್ಲಿರುವ ಸೀತಕಲ್ಲಿನ ಕೃಷಿಕ ಕುಟುಂಬದಿಂದ ಬಂದ ಜಗದೀಶ್‌, ಬಾಲ್ಯದಿಂದಲೇ ಮಠದಲ್ಲಿ ಓದಿ ಬೆಳೆದವರು.

ಮಠದ ಸಿದ್ದಗಂಗಾ ತಾಂತ್ರಿಕ ಕಾಲೇಜಿನಲ್ಲಿ (ಎಸ್‌ಐಟಿ) ಬಿ.ಇ ಪದವಿ ಮತ್ತು ಪೂನಾದಲ್ಲಿ ಎಂಟೆಕ್‌ ಪದವಿ ಪಡೆದಿದ್ದರು. ಮಠದ ಬಗ್ಗೆ ಜಗದೀಶ್‌ ಅವರಿಗೆ ಇನ್ನಿಲ್ಲದ ಭಕ್ತಿ. ಮಠಕ್ಕೆ ಪ್ಯಾಂಟು, ಚಪ್ಪಲಿ ಹಾಕಿಕೊಂಡು ಹೋದರೆ ಅಪಚಾರ ಆಗುತ್ತದೆ ಎಂಬ ಭ್ರಮೆಯಲ್ಲಿ ಕ್ಯಾತ್ಸಂದ್ರ ರೈಲ್ವೆ ಗೇಟ್‌ ಬಳಿ ಕಾಲೇಜಿನ ಅಂಗಿ, ಫ್ಯಾಂಟು ಕಳಚಿ,  ಪಂಚೆ, ಬೇರೊಂದು ಅಂಗಿ, ಟವೆಲ್‌ ಹಾಕಿಕೊಂಡು ಮಠದ ಕೊಠಡಿಯೊಳಗೆ ಸೇರುತ್ತಿದ್ದರು.

ಹುಡುಗನ ಈ ಪರಿಪಾಠ ಕೆಲವರಿಗೆ ನಗು ತರಿಸುತ್ತಿತ್ತು. ಆದರೆ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿಗೆ ಈ ಹುಡುಗನ ಮೇಲೆ ಪ್ರೀತಿ ಬೆಳೆಯಿತು. ಮಠದ ಬಗ್ಗೆ ಇಷ್ಟೊಂದು ಭಕ್ತಿ, ಗೌರವವುಳ್ಳ ಈ ಹುಡುಗನೆ ಉತ್ತರಾಧಿಕಾರಿ ಯಾಕಾಗಬಾರದು ಎಂದು ಚಿಂತಿಸಿದರು. ಇದೇ ವೇಳೆ ಉತ್ತರಾಧಿಕಾರಿಯಾಗಿ ಶಿಷ್ಯನನ್ನು ನೇಮಿಸಿಕೊಳ್ಳಲು ಮಠದ ಭಕ್ತರು ಸ್ವಾಮೀಜಿಗೆ ಅಧಿಕಾರ ನೀಡಿದರು. ಸಿದ್ದಗಂಗಾ ಸ್ವಾಮೀಜಿ ಮೆಚ್ಚಿಕೊಂಡ ಜಗದೀಶ್‌ ಮುಂದೆ ಗೌರಿಶಂಕರ ಸ್ವಾಮೀಜಿ ಆಗಿ ದೀಕ್ಷೆ ಸ್ವೀಕರಿಸಿದರು.

‘ಗೌರಿಶಂಕರ ಸ್ವಾಮೀಜಿ ಮಠದ ಉತ್ತರಾಧಿಕಾರಿಯಾದ ನಂತರ ಮಠದಲ್ಲಿ ಏನ್ನೆಲ್ಲ ಬದಲಾವಣೆಗಳಾದವು. ಮಠದ ಬಗ್ಗೆ ಹೊಂದಿದ್ದ ಅಪಾರ ಭಕ್ತಿ, ನಿಷ್ಠೆಯೇ ಅವರಿಗೆ ಮುಳುವಾಯಿತು’ ಎನ್ನುವಾಗ ಭಕ್ತರೊಬ್ಬರು ಕಣ್ಣೀರಾದರು.

‘ಸಾಕಷ್ಟು ಲಿಂಗಾಯತರು ಮಠದಿಂದ ನೆರವು ಪಡೆದಿದ್ದರು. ಅದರಲ್ಲಿ ಹಲವು ಮಂದಿ ನೆರವು ವಾಪಸ್‌ ನೀಡಿರಲಿಲ್ಲ. ಇಂಥವರಿಗೆ ನೆರವು ನೀಡದಂತೆ ಗೌರಿಶಂಕರರು ಶಿವಕುಮಾರ ಸ್ವಾಮೀಜಿಗೆ ಕೋರಿಕೆ ಸಲ್ಲಿಸಿದರು. ಈ ಘಟನೆ ನಂತರ ಹಲವು ಬದಲಾವಣೆಗಳು ನಡೆದವು. ಇವುಗಳಲ್ಲಿ ಸಾಕಷ್ಟು ಹಿರಿಯ ಸ್ವಾಮೀಜಿ ಗಮನಕ್ಕೆ ಬರಲೇ ಇಲ್ಲ’ ಎಂದು ಅವರು ನೆನಪಿಸಿಕೊಂಡರು.

‘ಗೌರಿಶಂಕರ ಸ್ವಾಮೀಜಿಗೆ ದಾಸೋಹ ವ್ಯವಸ್ಥೆಯ ಉಸ್ತುವಾರಿಯನ್ನು ಹಿರಿಯ ಸ್ವಾಮೀಜಿ ನೀಡಿದ್ದರು. ಅವರನ್ನು ಮಠದಿಂದ ಹೊರಹಾಕುವ ಒಂದೆರಡು ವರ್ಷದ ಹಿಂದೆಯಷ್ಟೆ ಉತ್ತರ ಕರ್ನಾಟಕದಿಂದ ಎರಡು ಸಾವಿರಕ್ಕೂ ಅಧಿಕ ಭಕ್ತರು ಮಠಕ್ಕೆ ಬಂದಿದ್ದರು. ಅಡುಗೆ ಮಾಡಲು ಪಾತ್ರೆಗಳು ಸಾಕಾಗಲಿಲ್ಲ. ಪಾತ್ರೆಗಳೆಲ್ಲ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಮನೆಗಳಲ್ಲಿ ಇವೆ ಎಂಬುದನ್ನು ಅರಿತರು. ತಾವೇ ಆ ಮನೆಗಳಿಂದ ಬಕೀಟು, ಸೌಟು ಮತ್ತಿತರ ಪಾತ್ರೆಗಳನ್ನು ಮರಳಿ ತಂದರು. ದಾಸೋಹಕ್ಕೆ ಚ್ಯುತಿ ಬರದಂತೆ ನಡೆಸಿದರು. ಮರುದಿನ ಅಷ್ಟೂ ಪಾತ್ರೆಗಳನ್ನು ಡಾ.ಶಿವಕುಮಾರ ಸ್ವಾಮೀಜಿ ಮುಂದಿಟ್ಟು ಶಿಕ್ಷಕರ ಬಾನಗಡಿಗಳನ್ನು ಬಿಚ್ಚಿಟ್ಟರು. ಅಲ್ಲಿಂದಾಚೆಗೆ ನಿಜವಾದ ಸಮಸ್ಯೆಗಳು ಆರಂಭವಾದವು’ ಎಂದು ಅವರು ಘಟನೆಗಳನ್ನು ನೆನಪಿಸಿಕೊಂಡರು.

‘ಸಲಿಂಗ ಕಾಮದ ಆರೋಪಕ್ಕೂ ಮೊದಲು ಗೌರಿಶಂಕರ ಸ್ವಾಮೀಜಿಯನ್ನು ಅರೆ ಹುಚ್ಚರನ್ನಾಗಿ ಮಾಡುವ ಪ್ರಯತ್ನವೂ ನಡೆಯಿತು. ಅವರಿಂದ ಆರ್ಶೀವಾದ ಪಡೆಯುವ ನೆಪದಲ್ಲಿ ಗುಂಡು ಸೂಜಿಯಿಂದ ಅವರ ಕಾಲುಗಳಿಗೆ ಚುಚ್ಚಲಾಗುತ್ತಿತ್ತು. ಅವರ ಪಾದುಕೆಗಳನ್ನು ಅದಲು–ಬದಲು ಮಾಡಲಾಗುತ್ತಿತ್ತು. ಒಣಗಲು ಹಾಕಿದ್ದ ಕಾವಿ ಬಟ್ಟೆಗಳನ್ನು ಅಲ್ಲಲ್ಲಿ ಹರಿದು ಹಾಕುತ್ತಿದ್ದರು. ಇವೆಲ್ಲವನ್ನೂ ಗೌರಿಶಂಕರರು ಸಹಿಸಿಕೊಂಡರು. ಆದರೂ ಕೊನೆಯಲ್ಲಿ ಸಲಿಂಗಕಾಮದ ಆರೋಪ ಹೊರಿಸಿ ಹೊರ ಹಾಕಲಾಯಿತು’ ಎಂದು ಗೌರಿಶಂಕರ ಸ್ವಾಮೀಜಿಯ ಆಪ್ತ ಭಕ್ತರೊಬ್ಬರು ದುಃಖ ತೋಡಿಕೊಂಡರು.

ಗೌರಿಶಂಕರರಿಗೆ ಲಿಂಗಾಯತರು ಅಷ್ಟೇ ಅಲ್ಲ. ಬೇರೆ ಜಾತಿಯಲ್ಲೂ ಆತ್ಮೀಯರು ಇದ್ದರು. ಎಲ್ಲರೊಂದಿಗೂ ಅಕ್ಕರೆಯಿಂದ ಇರುತ್ತಿದ್ದರು. ತಾರತಮ್ಯ ಎನ್ನುವುದು ಅವರ ಬಳಿ ಸುಳಿಯಲೇ ಇಲ್ಲ ಎಂಬುದು ಭಕ್ತರ ಮಾತುಗಳು.

ಮಠದಿಂದ ಹೊರ ಹಾಕಿದಾಗ ಸಾಕಷ್ಟು ಭಕ್ತರು ಗೌರಿಶಂಕರರ ಪರ ದೊಡ್ಡ ಧ್ವನಿ ಎತ್ತಿದ್ದರು. ತಮಗೆ ಮಠದಲ್ಲಿ ಜಾಗ ಕೊಡಿಸುವಂತೆ ಆಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ಕೂಡ ನಡೆಸಿದ್ದರು.

ಬಿಜೆಪಿಯ ಆಗಿನ ಮುಖಂಡ, ವಕೀಲ ರಾಮಲಿಂಗಯ್ಯ ಅವರು ಗೌರಿಶಂಕರರ ಪರ ಬಲವಾಗಿ ನಿಂತಿದ್ದವರು. ಅವರಷ್ಟೆ ಅಲ್ಲ ಕೋರಾ ಹೋಬಳಿ, ಬೆಳ್ಳಾವಿ ಹೋಬಳಿ, ಚೇಳೂರು ಹೋಬಳಿಯ ಭಕ್ತರ ಬೆಂಬಲ ಕೂಡ ಸಿಕ್ಕಿತ್ತು. ಸ್ವಾತಂತ್ರ್ಯ ಹೋರಾಟಗಾರ ಕ್ಯಾತ್ಸಂದ್ರದ ರಾಜಪ್ಪ ಅವರು ಗೌರಿಶಂಕರರಿಗೆ ಬೆಂಬಲವಾಗಿ ನಿಂತಿದ್ದ ಮತ್ತೊಬ್ಬ ಭಕ್ತ. ಮಠದಿಂದ ಹೊರಹಾಕಿದಾಗ ತಮ್ಮ ಮನೆಯಲ್ಲಿ ತಂಗಲು ಅವಕಾಶ ನೀಡಿದ್ದರು. ಗುಬ್ಬಿಯ ಆಗಿನ ಶಾಸಕ ಜಿ.ಎಸ್‌.ಶಿವನಂಜಪ್ಪ, ಪೆಟ್ರೋಲ್‌ ಬಂಕ್‌ ಸ್ವಾಮಿ, ಟೈಗರ್‌ ನಾಗಪ್ಪ ಮತ್ತಿತರರು ಗೌರಿಶಂಕರರ ಪರ ಇದ್ದರು. ಶಿವನಂಜಪ್ಪ ಕೊನೆವರೆಗೂ ಸಿದ್ದಗಂಗಾ ಮಠಕ್ಕೆ ಕಾಲಿಡಲೇ ಇಲ್ಲ.

‘ಮಠದಲ್ಲಿ ಗಲಾಟೆ ನಂತರ ಅವರಿಗೆ ಶಿವಪೂಜೆಗೆ ಕೂಡ ಅವಕಾಶ ಕೊಟ್ಟಿರಲಿಲ್ಲ. ಪ್ರಸಾದ ಕೂಡ ನೀಡಿರಲಿಲ್ಲ. ಅವರನ್ನು ಮಠದಿಂದ ನಮ್ಮ ಮಾವ ಹಾಗೂ ಕೆಲವು ಮಹಿಳೆಯರು ಹೋಗಿ ಕರೆದುಕೊಂಡು ಬಂದರು. ಮನೆಯಲ್ಲಿ ಶಿವಪೂಜೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಎರಡು ವರ್ಷ ನಮ್ಮ ಮನೆಯಲ್ಲೆ ಪೂಜೆ ಸಲ್ಲಿಸುತ್ತಿದ್ದರು. ಮಕ್ಕಳಿರುವ ಮನೆಯಲ್ಲಿ ಇರಬಾರದು ಎಂದು ನಂತರ ಗುಬ್ಬಿಗೆ ಸ್ಥಳಾಂತರವಾದರು’ ಎಂದು ರಾಜಪ್ಪ ಅವರ ಸೊಸೆ ಕುಸುಮಾ ಸುದರ್ಶನ್ ನೆನಪು ಹಂಚಿಕೊಂಡರು.

ಸ್ವಾಮೀಜಿ ಇತಿಹಾಸ
ಜಗದೀಶ್‌– ಪೂರ್ವಾಶ್ರಮದ ಹೆಸರು. 1946ರಲ್ಲಿ ಜನನ. 1975 ಮೇ 26ರಂದು ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ನೇಮಕ. 1987 ರಲ್ಲಿ ಶ್ರೀಗಳ ಮೇಲೆ ಸಲಿಂಗ ಕಾಮದ ಆರೋಪ. 1988ರ ಮಾರ್ಚ್‌ 31ರಂದು ಮಠದಿಂದ ಉಚ್ಛಾಟನೆ. ಸ್ವಾಮೀಜಿ ಅವರನ್ನು ತಪ್ಪಿತಸ್ಥ ಎಂದು 2004ರ ಜನವರಿ 30ರಂದು ಹೇಳಿದ ಹೈಕೋರ್ಟ್‌ ₹25 ಲಕ್ಷ ದಂಡ ಹಾಗೂ ಜೈಲುವಾಸ ಶಿಕ್ಷೆ ನೀಡಿತು. ಸುಪ್ರೀಂಕೋರ್ಟ್‌ 2008ರಲ್ಲಿ ಹೈಕೋರ್ಟ್‌ ತೀರ್ಪು ವಜಾಗೊಳಿಸಿತು. ಈಗ ಉತ್ತರಾಧಿಕಾರದ ವಿವಾದವು ನಗರದ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆಯುತ್ತಿದೆ.


ಕೈ ಹಿಡಿಯದ ರಾಜಕೀಯ
ಸುಪ್ರೀಂ ಕೋರ್ಟ್‌ನಿಂದ ದೋಷಮುಕ್ತರಾಗಿ ಬಂದ ಗೌರಿಶಂಕರ ಸ್ವಾಮೀಜಿ ರಾಜಕೀಯವಾಗಿ ನೆಲೆ ಕಂಡುಕೊಳ್ಳುವ ಆಸೆ ಕೂಡ ನೆರವೇರಲಿಲ್ಲ. 2009ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡರು.


ಮೂರು ವರ್ಷದ ಹಿಂದೆ ಭೇಟಿ
ನ್ಯಾಯಾಲಯದಲ್ಲಿರುವ ಮಠದ ಉತ್ತರಾಧಿಕಾರಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುವ ಪ್ರಯತ್ನವನ್ನು ಭಕ್ತ ರಾಮಲಿಂಗಪ್ಪ ಅವರ ಮೂಲಕ ಮೂರು ವರ್ಷದ ಹಿಂದೆ ಮಾಡಲಾಗಿತ್ತು. ಚಿಕ್ಕತೊಟ್ಲುಕೆರೆ ಮಠದಲ್ಲಿ ಗುರು–ಶಿಷ್ಯರನ್ನು ಮುಖಾಮುಖಿಯಾಗಿದ್ದರು. ಕೆಲಹೊತ್ತು ಇಬ್ಬರು ಗೌಪ್ಯವಾಗಿ  ಮಾತನಾಡಿದ್ದರು. ಆ ವೇಳೆ ಗೌರಿಶಂಕರರು ಗುರುವಿನ ಪಾದಪೂಜೆ ನೆರವೇರಿಸಿದ್ದರು. ಆದರೆ ಮಾತುಕತೆ ಮುರಿದುಬಿತ್ತು.


ನನಸಾಗದ ಪಾದಪೂಜೆ
‘ಒಂದೇ ಒಂದು ಸಲ ಗುರುಗಳ ಪಾದಪೂಜೆ ಮಾಡಬೇಕು. ಅವರನ್ನು ನೋಡಬೇಕು ಅನ್ನಿಸುತ್ತಿದೆ’ ಎನ್ನುವಾಗ ಗೌರಿಶಂಕರ ಸ್ವಾಮೀಜಿ ಗದ್ಗದಿತರಾದರು.

ಕಳೆದ ವರ್ಷ  ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯ ಹದಗೆಟ್ಟಾಗ ಅವರನ್ನು ನೋಡಲು ಗೌರಿಶಂಕರ ಸ್ವಾಮೀಜಿಗೆ ನ್ಯಾಯಾಲಯ ಅವಕಾಶ ನೀಡಿತ್ತು. ಅದರಂತೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲು ಬಂದಿದ್ದರು. ಆದರೆ ‘ಮಠಕ್ಕೆ ಅವರು ಬರುವುದು ಬೇಡ’ ಎಂದು ಶಿವಕುಮಾರ ಸ್ವಾಮೀಜಿ ಪೊಲೀಸರಿಗೆ ಪತ್ರ ಬರೆದ ಕಾರಣ ಅದು ನೆರವೇರಲಿಲ್ಲ.  ಆಗ ಅವರ ಕಣ್ಣೀರು ಹಾಕಿದ್ದರು.

ಮಾಜಿ ಶಾಸಕ ದಿವಂಗತ ಜಿ.ಎಸ್‌.ಶಿವನಂಜಪ್ಪ ಮನೆಯಲ್ಲಿ ಮಧ್ಯಾಹ್ನದವರೆಗೂ ಕಾದು ನಂತರ ವಾಪಸ್ಸಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT