ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ನಿಲ್ದಾಣದಲ್ಲಿ ಹಣ ಯಾಚಿಸಿದ ವಿದೇಶಿಯರು!

60 ರಿಂದ 70 ವಿದೇಶಿಯರಿದ್ದ ತಂಡ; ಬೆಂಗಳೂರಿಗೆ ಹೋಗಬೇಕಿದ್ದು, ನಿಮ್ಮ ನೆರವು ಬೇಕು
Last Updated 12 ಜನವರಿ 2017, 6:00 IST
ಅಕ್ಷರ ಗಾತ್ರ
ಹೊಸಪೇಟೆ: ವಿದೇಶಿ ಪ್ರವಾಸಿಗರ ತಂಡವೊಂದು ಇಲ್ಲಿಯ ಬಸ್‌ ನಿಲ್ದಾಣದ ಆವರಣದಲ್ಲಿ ಬುಧವಾರ ನಾಲ್ಕೈದು ಗಂಟೆಗಳ ಕಾಲ ಬೀಡು ಬಿಟ್ಟು, ಸಾರ್ವಜನಿಕರಿಂದ ಹಣಕ್ಕಾಗಿ ನೆರವು ಯಾಚಿಸಿತು.
 
ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಬಸ್‌ ನಿಲ್ದಾಣದ ಆವರಣಕ್ಕೆ ಬಂದ 60 ರಿಂದ 70 ವಿದೇಶಿಯರಿದ್ದ ತಂಡ, ಒಂದೆಡೆ ತಮ್ಮ ಲಗ್ಗೇಜುಗಳನ್ನು ಇರಿಸಿ ಅಲ್ಲಿಯೇ ಠಿಕಾಣಿ ಹೂಡಿದರು. ಈ ಪೈಕಿ ಕೆಲವರು, ‘30 ದೇಶಗಳ ಸುಮಾರು 100 ಜನರು ವಿಶ್ವಶಾಂತಿಗಾಗಿ ಭಾರತ ಪರ್ಯಟನೆ ಕೈಗೊಂಡಿದ್ದೇವೆ. ನಾವು ಬೆಂಗಳೂರಿಗೆ ಹೋಗಬೇಕಿದ್ದು, ನಿಮ್ಮ ನೆರವು ಬೇಕು...’ ಎಂದು ರಟ್ಟಿನ ಮೇಲೆ ಹಿಂದಿ ಯಲ್ಲಿ ಬರೆದಿದ್ದುದನ್ನು ತೋರಿಸುತ್ತ ಜನರಿಂದ ಹಣ ಸಂಗ್ರಹಿಸತೊಡಗಿದರು. ಮತ್ತೆ ಕೆಲವರು ತಮ್ಮ ಜತೆಗೆ ತಂದಿದ್ದ ಸಂಗೀತ ವಾದ್ಯಗಳನ್ನು ಬಾರಿಸುತ್ತ, ಹರಟುತ್ತ ಕೂತಿದ್ದರು. ಇಷ್ಟೊಂದು ಸಂಖ್ಯೆಯ ವಿದೇಶಿಗರು ಒಂದೇ ಕಡೆ ಸೇರಿದ್ದನ್ನು ಕಂಡು ಬಸ್‌ ನಿಲ್ದಾಣ ಹಾಗೂ ಹೊರಗೆ ಓಡಾಡುತ್ತಿದ್ದ ಜನರು ಅಲ್ಲಿ ಬಂದು ಜಮಾಯಿಸಿದರು. ಇದರಿಂದ ಬಸ್‌ ನಿಲ್ದಾಣದ ಆವರಣ ಗೊಂದಲದ ಗೂಡಾಗಿತ್ತು. 
 
ಬೆಳಿಗ್ಗೆ 11ರ ಸುಮಾರಿಗೆ ನಿಲ್ದಾಣಕ್ಕೆ ಬಂದ ಪೊಲೀಸರು, ವಿದೇಶಿಯರನ್ನು ಅಲ್ಲಿಂದ ಕಳುಹಿಸಿಕೊಟ್ಟರು. ಅಲ್ಲಿ ಸೇರಿದ್ದವರ ಪೈಕಿ ಯಾರೊಬ್ಬರೂ ಬಸ್ಸುಗಳಲ್ಲಿ ಹೋಗಲಿಲ್ಲ. ಬದಲಾಗಿ ಕಾಲ್ನಡಿಗೆಯಲ್ಲೆ ಬೇರೆಡೆಗೆ ತೆರಳಿದರು. ಮಾಧ್ಯಮದವರು ಛಾಯಾಚಿತ್ರ ಸೆರೆ ಹಿಡಿಯಲು ಮುಂದಾದಾಗ ಗುಂಪಿನಲ್ಲಿ ದ್ದವರ ಪೈಕಿ ಕೆಲವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
 
ಇದಕ್ಕೂ ಮುನ್ನ ಗುಂಪಿನಲ್ಲಿದ್ದ ಕೆಲ ವಿದೇಶಿಯರನ್ನು ‘ಪ್ರಜಾವಾಣಿ’ ಮಾತ ನಾಡಿಸಿದಾಗ ಒಬ್ಬೊಬ್ಬರು ಒಂದೊಂದು ರೀತಿಯ ಗೊಂದಲಕಾರಿ ಹೇಳಿಕೆ ನೀಡಿದರು.
‘ಹಂಪಿ ನೋಡಲು ಬಂದಿದ್ದೆವು. ಆದರೆ, ಯಾರೋ ನಮಗೆ ಮೋಸ ಮಾಡಿದ್ದಾರೆ. ಅದಕ್ಕಾಗಿ ಜನರ ಬಳಿ ಹಣಕ್ಕಾಗಿ ನೆರವು ಕೇಳುತ್ತಿದ್ದೇವೆ’ ಎಂದು ಹೆಸರು ಹೇಳಿಸಲಿಚ್ಛಿಸದ ಪ್ರವಾಸಿಗ ರೊಬ್ಬರು ತಿಳಿಸಿದರು. 
 
‘ವಿಶ್ವಶಾಂತಿ, ಪ್ರಜಾಪ್ರಭುತ್ವ ಮತ್ತು ಪರಿಸರ ಸಂರ್ಕಷಣೆ ಕುರಿತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಜಗತ್ತಿನಾದ್ಯಂತ ಸಂಚಾರ ಮಾಡುತ್ತಿದ್ದೇವೆ. ಮಹಿಳೆಯರು ಸೇರಿದಂತೆ ವಿವಿಧ ದೇಶಗಳ ಸುಮಾರು 70 ಜನ ‘ರೇನ್‌ಬೊ ಫ್ಯಾಮಿಲಿ’ ಹೆಸರಿನಲ್ಲಿ ಕೂಟ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದು ಸ್ವೀಡನ್‌ ದೇಶದ ಪ್ರಜೆ ಜೊನಥನ್‌ ಹೇಳಿದರು.
 
‘ವಿವಿಧ ಪಟ್ಟಣಗಳಿಗೆ ಹೋಗಬೇಕಿರುವ ಕಾರಣ ಸಾರಿಗೆ, ಆಹಾರ ಮತ್ತು ದೈನಂದಿನ ಅಗತ್ಯಕ್ಕೆ ಹಣ ಬೇಕಾಗಿದ್ದು, ಸಾರ್ವಜನಿಕರಿಂದ ನೆರವು ಕೇಳುತ್ತಿದ್ದೇವೆ’ ಎಂದು ತಿಳಿಸಿದರು.
 
‘ಹಂಪಿಗೆ ಬಂದಿದ್ದೆವು. ಬೆಂಗಳೂರಿಗೆ ಹೋಗಬೇಕಿದೆ. ಅದಕ್ಕಾಗಿ ಜನರ ಬಳಿ ಹಣ ಕೇಳುತ್ತಿದ್ದೇವೆ. ಇಷ್ಟು ಬಿಟ್ಟು ಬೇರೇನೂ ಕೇಳಬೇಡಿ’ ಎಂದು ಸ್ಪೇನ್‌ ಪ್ರಜೆಯೊಬ್ಬರು ಮನವಿ ಮಾಡಿದರು.
 
‘ಎಲ್ಲೆಡೆ ಶಾಂತಿ, ಸೌಹಾರ್ದ ನೆಲೆಸಲು ಶ್ರಮಿಸುತ್ತಿದ್ದೇವೆ. ಮುಂದಿನ ಪಯಣ ಕ್ಕಾಗಿ ರೂಪುರೇಷೆ ತಯಾರಿಸಲು ಬಸ್‌ ನಿಲ್ದಾಣದಲ್ಲಿ ಸಂಗೀತ ನುಡಿಸುತ್ತ ಕೂತಿ ದ್ದೆವು. ನಮ್ಮನ್ನು ನೋಡಿ ಜನ ಸೇರಿ ದರು. ಮೂರು ದಿನಗಳಿಂದ ಹಂಪಿ ಯಲ್ಲಿದ್ದೆವು’ ಎಂದು ಆಸ್ಟ್ರೇಲಿಯಾ ಪ್ರಜೆಯೊಬ್ಬರು ಹೇಳಿದರು.
 
**
ವಿದೇಶಿಯರ ತಂಡದಲ್ಲಿದ್ದ ಕೆಲವರು ಬರಬೇಕಿತ್ತು. ಎಲ್ಲರೂ ಬಸ್‌ ನಿಲ್ದಾಣದ ಆವರಣದಲ್ಲಿ ಅವರಿಗಾಗಿ ಕಾದು ಕುಳಿತಿದ್ದರು. ಬೆಂಗ ಳೂರಿಗೆ ಹೋಗಬೇಕಿದೆ ಎಂದಿದ್ದಾರೆ.
-ಕುಮಾರಚಂದ್ರ
ಡಿವೈಎಸ್‌ಪಿ, ಹೊಸಪೇಟೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT