ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಅಕ್ರಮ ಸಾಗಣೆ ತಡೆಗೆ ಸೂಚನೆ

Last Updated 12 ಜನವರಿ 2017, 9:48 IST
ಅಕ್ಷರ ಗಾತ್ರ

ಬೀದರ್: ಅಕ್ರಮವಾಗಿ ಜಾನುವಾರು ಸಾಗಣೆ ಮಾಡುವ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್. ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅಧೀನದ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಎಸ್‌ಪಿಸಿಎ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಿಂದ ನೆರೆಯ ರಾಜ್ಯಗಳಿಗೆ ಅಕ್ರಮವಾಗಿ ಜಾನುವಾರು ಸಾಗಣೆ ಮಾಡುತ್ತಿರುವ ಬಗೆಗೆ ದೂರುಗಳು ಬಂದಿವೆ. ಪೊಲೀಸ್‌ ಅಧಿಕಾರಿಗಳು ಅಕ್ರಮ ಜಾನುವಾರು ಸಾಗಣೆದಾರರ ವಿರುದ್ಧ  ಕ್ರಮ ಜರುಗಿಸಬೇಕು ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಮಲ್ಲೇಶ ವೀರಶೆಟ್ಟಿ ಗಣಪುರ ಸೂಚನೆ ನೀಡಿದರು.

ಅಂತಹ ಯಾವುದೇ ಪ್ರಕರಣಗಳು ನಮ್ಮಲ್ಲಿ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಲು ಯತ್ನಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಡಾ.ಆರ್.ಸೆಲ್ವಮಣಿ ಅವರು, ಜಿಲ್ಲಾ ಪೊಲೀಸರು ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪರಿಶೀಲಿಸಿದರೆ ನಿಖರ ಮಾಹಿತಿ ತಿಳಿಯಲಿದೆ ಎಂದರು.

ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಕಸಾಯಿಖಾನೆಗಳ ಪರಿಶೀಲನೆ ನಡೆಸಬೇಕು. ಪರವಾನಗಿ ಇಲ್ಲದ ಕಸಾಯಿಖಾನೆಗಳಿದ್ದರೆ ತಕ್ಷಣ ಅವುಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಬರ ಇದ್ದಾಗ ಜಿಲ್ಲೆಯಲ್ಲಿ ಗೋಶಾಲೆಗಳನ್ನು ತೆರೆಯಲಾಗಿತ್ತು. ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು ಎಂದು ಎಸ್‌ಪಿಸಿಎ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ.ಡಿ.ಎಸ್.ಹವಾಲ್ದಾರ್ ಸಭೆಗೆ ಮಾಹಿತಿ ನೀಡಿದರು.

ರಸ್ತೆಯಲ್ಲಿನ ಬಿಡಾಡಿ ದನಗಳ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಸ್ತೆಯ ಮೇಲಿನ ದನಗಳನ್ನು ಗೋಶಾಲೆಗೆ ತೆಗೆದುಕೊಂಡು ಹೋಗಬೇಕು. ಮಾಲೀಕರಿಗೆ ದಂಡ ವಿಧಿಸಿದ ಮೇಲೆ ಅವುಗಳನ್ನು ಬಿಡುಗಡೆ ಮಾಡಬೇಕು ಎಂದು ಗಣಪುರ  ಹೇಳಿದರು. ಪಶು ಸಂಗೋಪನಾ ಇಲಾಖೆ, ಅರಣ್ಯ, ಕೃಷಿ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT