ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕರ್‌ಗೆ ಜಿಪಿಆರ್‌ಎಸ್‌ ಅಳವಡಿಕೆ ಕಡ್ಡಾಯ

Last Updated 12 ಜನವರಿ 2017, 11:02 IST
ಅಕ್ಷರ ಗಾತ್ರ

ಕುಷ್ಟಗಿ: ಅನಿವಾರ್ಯ ಪರಿಸ್ಥಿತಿಯಲ್ಲಿ ಜನವಸತಿ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಬೇಕಾದರೆ ಅಂಥ ಟ್ಯಾಂಕರ್‌ಗಳಿಗೆ ಜಿಪಿಆರ್‌ಎಸ್‌ ವ್ಯವಸ್ಥೆ ಅಳವಡಿಸುವುದು ಕಡ್ಡಾಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕಟರಾಜು ಹೇಳಿದರು.

ಬುಧವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು ಪೂರೈಕೆ, ಉದ್ಯೋಗ ಖಾತರಿ ಯೋಜನೆಗೆ ಸಂಬಂಧ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳ ಮಾಹಿತಿ ನೀಡಿದ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಅರವಿಂದ ಜೋಷಿ, ನೂರಕ್ಕೂ ಅಧಿಕ ಹಳ್ಳಿಗಳಲ್ಲಿ ನೀರಿನ ತೊಂದರೆ ಕಾಣಿಸಿಕೊಂಡಿದೆ. ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ, ಹಾಗಾಗಿ 30 ಖಾಸಗಿ ಕೊಳವೆಬಾವಿಗಳಿಂದ ಬಾಡಿಗೆ ಆಧಾರದ ಮೇಲೆ ನೀರು ಪಡೆಯಲಾಗುತ್ತಿದೆ. ರಾಮೋಜಿ ತಾಂಡಾ, ಗುಡ್ಡದದೇವಲಾಪೂರ, ಕಿಲಾರಹಟ್ಟಿ ಸೇರಿ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರು ಸಮಸ್ಯೆ ಗಂಭೀರವಾಗಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.

ನೀರು ಪೂರೈಕೆಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಸರಿಯಾಗಿರಬೇಕು, ಖಾಸಗಿ ಕೊಳವೆಬಾವಿ ಮಾಲೀಕರಿಗೆ ಪ್ರತಿ ತಿಂಗಳು ನಿಗದಿತ ದಿನದಲ್ಲಿ ಬಾಡಿಗೆ ಸಂದಾಯ ಮಾಡಬೇಕು ಎಂದು ಸಿಇಒ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಬಹಳಷ್ಟು ಜನ ಉದ್ಯೋಗ ಅರಸಿ ಗುಳೆ ಹೋಗಿದ್ದರೂ ಸಮರ್ಪಕ ರೀತಿಯಲ್ಲಿ ವೇತನ ದೊರೆಯದ ಕಾರಣ ಗ್ರಾಮಗಳಿಗೆ ಮರಳುವ ಸಾಧ್ಯತೆ ಇದೆ. ಅಂಥವರಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ದೊರಕಿಸಿಕೊಡಲು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು  ಎಚ್ಚರಿಕೆ ನೀಡಿದರು.

14ನೇ ಹಣಕಾಸು ಯೋಜನೆಯ ಹಣವನ್ನು ಕುಡಿಯುವ ನೀರಿನ ಕೆಲಸಗಳಿಗೆ ಮೀಸಲಿಡಬೇಕು. ಅನಿವಾರ್ಯ ಸಂದರ್ಭದಲ್ಲಿ ಮೇಲಧಿಕಾರಿಗಳಿಂದ ಅನುಮತಿ ಪಡೆದು ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿದರು.

ಕೆರೆಗಳ ಅಭಿವೃದ್ಧಿ ಸೇರಿದಂತೆ 21 ಅಂಶಗಳನ್ನು ಒಳಗೊಂಡ ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲಿ ಕೆಲಸ ನೀಡಬೇಕು ಮತ್ತು ಅವರಿಂದ ನಿಗದಿತ ದಾಖಲೆಗಳನ್ನು ಪಡೆಯುವುದು ಕಡ್ಡಾಯ ಮತ್ತು ಪ್ರತಿ ವಾರ ಕೂಲಿ ಪಾವತಿಸುವಂತೆ ಸೂಚಿಸಿದರು.

ಜಿ.ಪಂ ಉಪಕಾರ್ಯದರ್ಶಿ ಎನ್‌.ಕೆ.ತೊರವಿ, ರವಿ ಬಸರಿಹಳ್ಳಿ, ಯುನಿಸೆಫ್‌ ಅಧಿಕಾರಿ ರಾಮಸ್ವಾಮಿ ಕೃಷ್ಣನ್‌, ಕಾರ್ಯನಿರ್ವಹಣಾಧಿಕಾರಿ ಶಿವಪ್ಪ ಸುಬೇದಾರ ಸೇರಿದಂತೆ ಅಧಿಕಾರಿಗಳು ಇದ್ದರು.

ನಿರ್ಲಕ್ಷ್ಯ, ಅಧಿಕಾರಿಗಳಿಗೆ ತರಾಟೆ: ಕುಡಿಯುವ ನೀರು ಪೂರೈಕೆ, ವಸತಿ, ಉದ್ಯೋಗ ಖಾತರಿ ಯೋಜನೆ ಅಸಮರ್ಪಕ ಅನುಷ್ಠಾನದಲ್ಲಿ ಸಮಾಧಾನ ತರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡ ಸಿಇಒ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕರ್ತವ್ಯದಲ್ಲಿ ಲೋಪ ಕಂಡುಬಂದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು. ಸಮರ್ಪಕ ಉತ್ತರ ನೀಡದವರಿಗೆ ನೋಟಿಸ್‌ ಜಾರಿ ಮಾಡುವಂತೆ ಜಿ.ಪಂ ಉಪಕಾರ್ಯದರ್ಶಿ ಎನ್‌.ಕೆ.ತೊರವಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT