ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯಷ್ಟೇ ಆದ ನೀರಾವರಿ ಯೋಜನೆ

ಮೊಳಕಾಲ್ಮುರು: ಸಾವಿರ ಅಡಿ ಕೊರೆದರೂ ಸಿಗದ ಅಂತರ್ಜಲ, ಒಣಗಿದ ತೋಟಗಳು
Last Updated 12 ಜನವರಿ 2017, 11:16 IST
ಅಕ್ಷರ ಗಾತ್ರ
ಮೊಳಕಾಲ್ಮುರು: ಮಳೆ ಕೊರತೆ ಹಾಗೂ ಶಾಶ್ವತ ನೀರಾವರಿ ಸೌಲಭ್ಯ ಇರದ ಕಾರಣ ತಾಲ್ಲೂಕಿನ ಅಂತರ್ಜಲ ಮಟ್ಟ 800ರಿಂದ 1,000 ಅಡಿಗೆ ಕುಸಿದಿದ್ದು, ಆತಂಕ ಮೂಡಿಸಿದೆ. 
 
ಭದ್ರಾ ಮೇಲ್ದಂಡೆ ಯೋಜನೆ ಆರಂಭಗೊಂಡಿದ್ದು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ದಾವಣಗೆರೆ ಜಿಲ್ಲೆ ಜಗಳೂರು, ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಮತ್ತು ಸಂಡೂರು ತಾಲ್ಲೂಕುಗಳಿಗೆ ಕೃಷಿ ಹಾಗೂ ಕುಡಿಯುವ ನೀರು ನೀಡುವ ಉದ್ದೇಶ ಹೊಂದಿದೆ. ಆದರೆ, ನಂತರ ಸಿದ್ಧಗೊಂಡ ಕೆ.ಡಿ.ರೆಡ್ಡಿ ವರದಿಯಲ್ಲಿ ಈ ಐದು ತಾಲ್ಲೂಕುಗಳು ಹೊರಗುಳಿದು, ಅನ್ಯಾಯಕ್ಕೆ ಒಳಗಾಗಿವೆ. ಈ ಬಗ್ಗೆ ನ್ಯಾಯಾಲಯಲ್ಲಿ ದಾವೆ ಹೂಡಿದ್ದರೂ ಸರ್ಕಾರ ಈ ತಾಲ್ಲೂಕುಗಳಿಗೆ ಯೋಜನೆ ಅಡಿ ನೀರು ನೀಡಲಿದೆ ಎಂದು ಹೇಳಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈಚೆಗೆ ಪ್ರಕರಣವನ್ನು ವಜಾ ಮಾಡಲಾಗಿದೆ ಎಂದು ತಾಲ್ಲೂಕು ನೀರಾವರಿ ಹೋರಾಟ ಸಮಿತಿ ತಿಳಿಸಿದೆ.
 
ತಾಲ್ಲೂಕಿನಲ್ಲಿ 5–6 ವರ್ಷಗಳಿಂದ ಮಳೆ ಕೈಕೊಟ್ಟಿದೆ. ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ತುಂಗಭದ್ರಾ ಹಿನ್ನೀರು ಮೂಲಕ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಪಾವಗಡ ತಾಲ್ಲೂಕಿಗೆ ಕುಡಿಯುವ ನೀರು ನೀಡಲು ಅಂದಾಜು ₹ 1700 ಕೋಟಿ ಯೋಜನೆಗೆ ಆರಂಭಿಕ ಅನುಮತಿ ನೀಡಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ತಂದು, ಕಾರ್ಯಾರೂಪಕ್ಕೆ ಮುಂದಾಗ ದಿದ್ದಲ್ಲಿ ಕುಡಿಯುವ ನೀರಿನ ಬವಣೆ ಉಲ್ಬಣಿಸುವುದರಲ್ಲಿ ಅನುಮಾನವಿಲ್ಲ ಎಂದು ವಿರೂಪಾಕ್ಷಪ್ಪ, ಗಂಗಾಧರ್, ಶ್ರೀನಿವಾಸ್, ಮಂಜಣ್ಣ ಆತಂಕ ವ್ಯಕ್ತಪಡಿಸಿದರು.
 
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಜ್ಜಂಪುರ ಪೋಷಕ ನಾಲೆಯಿಂದ 9.4 ಟಿಎಂಸಿ ನೀರನ್ನು ಕುಡಿಯುವ ನೀರಿನ ನೆಪದಲ್ಲಿ ತುಮಕೂರು ಜಿಲ್ಲೆಗೆ ತೆಗೆದುಕೊಂಡು ಹೋಗುವುದನ್ನು ಕೈಬಿಡಬೇಕು, 1969ರ ನೀಲನಕ್ಷೆ ಪ್ರಕಾರ ಭದ್ರಾ ಮೇಲ್ದಂಡೆ ಯೋಜನೆ ಯನ್ನು ಕೈಗೆತ್ತಿಕೊಳ್ಳಬೇಕು, ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಐದು ತಾಲ್ಲೂಕುಗಳಿಗೆ ತಕ್ಷಣವೇ ನೀರು ನೀಡಬೇಕು, ಏತ ನೀರಾವರಿ ಮೂಲಕ ಹೇಮಾವತಿ ನದಿಯಿಂದ 26 ಟಿಎಂಸಿ ನೀರು ನೀಡಲು ಲಭ್ಯವಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಐದು ತಾಲ್ಲೂಕುಗಳಲ್ಲಿ ಬಂದ್ ಸಹ ಮಾಡಲಾಗಿದೆ. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯೋಜನೆಯು ಆಗ್ರಹ ಹಂತದಲ್ಲಿಯೇ ಉಳಿದುಕೊಂಡಿದೆ ಎಂದು ದೂರಲಾಗಿದೆ. 
 
ಭದ್ರಾ ಮೂಲ ಯೋಜನೆಯಲ್ಲಿ ತರೀಕೆರೆ ತಾಲ್ಲೂಕಿನ 33,400 ಎಕರೆ, ಭದ್ರಾವತಿ ತಾಲ್ಲೂಕಿನ 8,100 ಎಕರೆ, ಚನ್ನಗಿರಿ ತಾಲ್ಲೂಕಿನ 2000 ಎಕರೆ, ಹೊಸದುರ್ಗ ತಾಲ್ಲೂಕಿನ 59,500 ಎಕರೆ, ಜಗಳೂರು ತಾಲ್ಲೂಕಿನ 28,000 ಎಕರೆ, ಮೊಳಕಾಲ್ಮುರು ತಾಲ್ಲೂಕಿನ 38,000 ಎಕರೆ, ಚಳ್ಳಕೆರೆ ತಾಲ್ಲೂಕಿನ 1,61,000 ಎಕರೆ, ಕೂಡ್ಲಿಗಿ ತಾಲ್ಲೂಕಿನ 69,400 ಎಕರೆ ಮತ್ತು ಸಂಡೂರು ತಾಲ್ಲೂಕಿನ 10,600 ಎಕರೆ ಸೇರಿದಂತೆ ಒಟ್ಟು 4.10 ಲಕ್ಷ ಎಕರೆ ಮತ್ತು 3.17 ಲಕ್ಷ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಒಟ್ಟು 7.17 ಲಕ್ಷ ಎಕರೆಗೆ ನೀರು ಉಣಿಸಬೇಕಿತ್ತು ಎಂದು ತಾಲ್ಲೂಕು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮಾರನಾಯಕ ಹೇಳುತ್ತಾರೆ.
 
ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ 2020–2025ರ ವೇಳೆಗೆ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕು ಗಳು ಮರುಭೂಮಿಯಾಗಬಹುದು  ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
 
***
ನಾಗಾರ್ಜುನ ಸಾಗರ ನೀರು!
ನೆರೆ ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನ ಕೆರೆಗಳಿಗೆ ನೂರಾರು ಕಿ.ಮೀ., ದೂರ ನಾಗಾರ್ಜುನ ಸಾಗರದಿಂದ ನೀರು ಹಾಯಿಸುವ ಯೋಜನೆ ಜಾರಿ ಮಾಡಲಾಗಿದೆ, ಯೋಜನೆ ಕಾರ್ಯರೂಪದಲ್ಲಿದ್ದು ಪೂರ್ಣಗೊಳಿಸಲು ಸಮಯ ನಿಗದಿ ಮಾಡಲಾಗಿದೆ. ಅಲ್ಲಿರುವ ನೀರಾವರಿ ಆಸಕ್ತಿ ಇಲ್ಲಿನ ಜನಪ್ರತಿನಿಧಿಗಳಿಗೆ ಏಕಿಲ್ಲ. ನೀರಾವರಿ ಹೋರಾಟಕ್ಕೆ ಸಂಬಂಧಪಟ್ಟಂತೆ ಫ್ಲೆಕ್ಸ್‌ ಹಾಕಿಸಿಕೊಳ್ಳುವುದು, ಭರವಸೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಬದಲು ಶ್ರಮ ಹಾಕಿ ಕಾರ್ಯರೂಪಕ್ಕೆ ತಂದಲ್ಲಿ ಜನರೇ ಚಪ್ಪಾಳೆ, ಫ್ಲೆಕ್ಸ್ ಹಾಕುತ್ತಾರೆ ಎನ್ನುತ್ತಾರೆ ರೈತರು.
 
**
ತಾಲ್ಲೂಕಿನ ಮುಂಭಾಗದ ಲ್ಲಿರುವ ರಾಯದುರ್ಗ ತಾಲ್ಲೂಕು ತುಂಗಭದ್ರಾ ಮುಂಭಾಗದ ನೀರು ಬಳಸಿಕೊಂಡು ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ತುರ್ತಾಗಿ ಕಲ್ಪಿಸುತ್ತಿದೆ. ಇದನ್ನು ಇಲ್ಲಿನ ರಾಜಕಾರಣಿಗಳು ಮಾದರಿಯಾಗಿ ತೆಗೆದುಕೊಳ್ಳಬೇಕು.
– ಜನಸಂಸ್ಥಾನ ವಿರೂಪಾಕ್ಷಪ್ಪ, ಮೊಳಕಾಲ್ಮುರು.
 
**
–ಕೊಂಡ್ಲಹಳ್ಳಿ ಜಯಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT