ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ; ಮೆರವಣಿಗೆ

ಶೃಂಗೇರಿ ವಿದ್ಯಾರ್ಥಿ ಆತ್ಮಹತ್ಯೆ: ಉನ್ನತ ತನಿಖೆಗೆ ವಿದ್ಯಾರ್ಥಿಗಳ ಆಗ್ರಹ; ಎಬಿವಿಪಿ ನೇತೃತ್ವದಲ್ಲಿ ಧರಣಿ, ಹುಸಿಯಾದ ಭರವಸೆ
Last Updated 13 ಜನವರಿ 2017, 6:50 IST
ಅಕ್ಷರ ಗಾತ್ರ
ಬಳ್ಳಾರಿ: ಶೃಂಗೇರಿಯ ಎಬಿವಿಪಿ ಕಾರ್ಯಕರ್ತ ಅಭಿಷೇಕ್‌ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ನೂರಾರು ವಿದ್ಯಾರ್ಥಿಗಳು ಸಂಘಟನೆಯ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು.
 
ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಅಭಿಷೇಕ ಅವರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆರೋಪದ ಕುರಿತು ನಿಸ್ಪಕ್ಷಪಾತ ತನಿಖೆ ನಡೆಯಬೇಕು. ಪ್ರಕರಣ ದಾಖಲಾಗಲು ಕಾರಣರಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಚನ್ನಬಸಪ್ಪ ಮಾಳಿ ಆಗ್ರಹಿಸಿದರು.
 
ಜಿಲ್ಲಾ ಸಂಚಾಲಕ ಗೋವಿಂದರೆಡ್ಡಿ, ನಗರ ಘಟಕದ ಕಾರ್ಯದರ್ಶಿ ಜೆ.ಎಸ್.ಕಾರ್ತಿಕ್, ಮುಖಂಡರಾದ ಹೇಮರೆಡ್ಡಿ, ಗಿರಿರಾಜ್ ನೇತೃತ್ವ ವಹಿಸಿದ್ದರು.
 
ಕೂಲಿಗಾಗಿ ಪ್ರತಿಭಟನೆ
ಕಂಪ್ಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ  ಸಮೀಪದ ದೇವಸಮುದ್ರ ಗ್ರಾಮದ ನರೇಗಾ ಕೂಲಿಕಾರರು ಗುರುವಾರ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
 
’ಕಾಲುವೆಗೆ ನೀರಿಲ್ಲದಂಗ ಆಗಿ ಈ ಬಾರಿ ಬ್ಯಾಸಿಗೆ ಬೆಳೆ ಇಲ್ಲ. ಇದ್ರಿಂದ ಊಟಕ್ಕೂ ತ್ರಾಸು, ಮಕ್ಕಳ ಮರಿನೂ ಜೋಪಾನ ಮಾಡೋಕ ಕಷ್ಟ ಆಗೈತಿ’ ಎಂದು ಕುರುಬರ ಅಳ್ಳಳ್ಳಿ ಗಾದಿಲಿಂಗಮ್ಮ ಅಳಲು ತೋಡಿಕೊಂಡರು.
 
  ನಮ್ಮ ಪರಿಸ್ಥಿತಿ ಕೇಳಿ ಪಂಚಾಯ್ತರಾದರೂ ಕೂಲಿ ಕೆಲ್ಸ ಕೊಡ್ತರೆ ಅಂದ್ರೆ ಅವರು ನಮ್ಮ ಮಾತು ಕಿವ್ಯಾಗ ಹಕ್ಯಾವಳ್ರು ಎಂದು ನೋವಿನಿಂದ ಹೇಳಿದರು.
 
ಭ್ರಷ್ಟಾಚಾರ ಮುಕ್ತ ಕರ್ನಾಟಕ ಗ್ರಾಮ ಘಟಕ ಪ್ರಧಾನ ಕಾರ್ಯದರ್ಶಿ ಸೂಗೂರು ಶೇಖರ್ ಮಾತನಾಡಿ, 2016–17ನೇ ಸಾಲಿನ ನರೇಗಾ ಯೋಜನೆಯಡಿ ₹  22.70ಲಕ್ಷ ವೆಚ್ಚದ 20 ಕಾಮಗಾರಿಗಳಿಗೆ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಇದರಲ್ಲಿ ₹ 4 ಲಕ್ಷ ವೆಚ್ಚದ ಕಾಲುವೆ ಹೂಳು ತೆಗೆಯುವ ಎರಡು ಕಾಮಗಾರಿಯನ್ನು ಮಾತ್ರ 150 ಕಾರ್ಮಿಕರಿಗೆ ನೀಡಿದ್ದು ಬಿಟ್ಟರೆ ಇಲ್ಲಿಯವರೆಗೆ ಬೇರೆ ಕಾಮಗಾರಿಗಳ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿದರು.
 
ಜ.9ರಂದು ಕೂಲಿ ಕೆಲಸ ಕೊಡುವುದಾಗಿ ಪಿಡಿಓ ದೇವೇಶ್ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಕೂಲಿ ಕೆಲಸ ಕೊಡದೆ ವೃಥಾ ನಮ್ಮನ್ನು ಅಲೆಸುತ್ತಿದ್ದಾರೆ ಎಂದು ದೂರಿದರು. ಪ್ರತಿಭಟನೆಯಲ್ಲಿ ರೇಣುಕಮ್ಮ, ಸೂಗೂರು ಈರಮ್ಮ, ಗಂಗಾವತಿ ನಾಗಮ್ಮ, ಎಸ್. ತಾಯಮ್ಮ, ಸೂಗೂರು ಹುಲಿಗೆಮ್ಮ, ಕರೇಗೌಡ್ರು ಈರಮ್ಮ, ಗುರುಬಸಮ್ಮ, ಗಂಗಾವತಿ ನಾಗಮ್ಮ, ಮಲ್ಲಿಕಾರ್ಜುನ, ಗಂಗಾವತಿ ರಾಜ, ಜಮಾಪುರ ಬಸವರಾಜ, ಗಾದಿಲಿಂಗ, ಬಸವರಾಜ, ಜಡೆಪ್ಪ, ಸಾದಪ್ಪ ಸೇರಿದಂತೆ  ಇತರರು ಭಾಗವಹಿಸಿದ್ದರು.  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ಭಾಸ್ಕರ ದೂರವಾಣಿಯಲ್ಲಿ ಪ್ರತಿಕ್ರಿಯಿಸಿ, ಇದೇ 13ರಿಂದ ನರೇಗಾ ಅಡಿ ಕೂಲಿ ಕೆಲಸ ಕೊಡಲಾಗುವುದು. ಬಾಕಿ ಇರುವ ಕೂಲಿ ಪಾವತಿಸುವಂತೆ ಪಿಡಿಓ ದೇವೇಶ್‌ ಅವರಿಗೆ ಆದೇಶಿಸಲಾಗುವುದು ಎಂದು ಭರವಸೆ ನೀಡಿದರು.
 
**
371ಜೆ  ಸಮರ್ಪಕ ಜಾರಿಗೆ ಒತ್ತಾಯ
ಬಳ್ಳಾರಿ: 371(ಜೆ) ಅಧಿನಿಯಮವನ್ನು ಅನುಷ್ಠಾನ ಮಾಡುವಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಹೈದರಾಬಾದ್ ಕರ್ನಾಟಕ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯರು ನಗರದಲ್ಲಿ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಅವರಿಗೆ ಮನವಿಪತ್ರವನ್ನು ಸಲ್ಲಿಸಿದರು.
 
 ಸರ್ಕಾರಿ ನೌಕರರ ಬಡ್ತಿ ವೇಳೆ  ಅನುಸರಿಸಬಹುದಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡದೆ ಈ ಭಾಗದ ನೌಕರರಿಗೆ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.  ಅಧಿನಿಯಮದ ಆದೇಶ ಪಾಲನೆ ವೇಳೆಯಲ್ಲಿ ಇಲಾಖೆಗಳ ಮೇಲಧಿಕಾರಿಗಳು ನೌಕರರ ಜೇಷ್ಠತಾ ಪಟ್ಟಿ ಬಿಡುಗಡೆ ಮಾಡುವಾಗಲೂ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. 
 
ಪೂರ್ವಾಪರ ಮಾಹಿತಿಯಿಲ್ಲದೆ ಈ ಭಾಗದ ನೌಕರರಿಂದ ಸ್ಥಳೀಯ ವೃಂದದ ಐಚ್ಛಿಕ ಆಯ್ಕೆಯನ್ನು ಪಡೆದಿರುವುದು ಕಾನೂನು ಬಾಹಿರವಾಗಿದೆ. ಅದನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ನೌಕರರ ಜೇಷ್ಠತಾ ಪಟ್ಟಿ ಬಿಡುಗಡೆಗೊಳಿಸುವಾಗ 2014ನೇ ಇಸವಿಯ ಜನವರಿ 29ರ ಆದೇಶಾನುಸಾರ ನಲವತ್ತು ದಿನಗಳ ಕಾಲಾವಕಾಶ ನೀಡಿ ಅಂತಿಮ ಜೇಷ್ಠತಾ ಜೇಷ್ಠತಾ ಪಟ್ಟಿ ತಯಾರಿಸಬೇಕಿತ್ತು. ಈವರೆಗೆ ಪಟ್ಟಿಯನ್ನು ತಯಾರಿಸದೆ ಈ ಭಾಗದ ನೌಕರರನ್ನು ಅವಕಾಶ ವಂಚಿತರನ್ನಾಗಿ ಮಾಡಲಾಗಿದೆ ಎಂದು ದೂರಿದರು.ವಿವಿಧ ಸಂಘಗಳ ಪದಾಧಿಕಾರಿಗಳಾದ ಎಂ.ಟಿ.ಮಲ್ಲೇಶ, ಕೆ.ಹನುಮಂತಪ್ಪ, ವೀರೇಶ, ಪಿ.ಅಲ್ಲಾಬಕ್ಷಿ, ಜಿ.ಕೆ.ರಾಮಕೃಷ್ಣ, ವಿ.ಆನಂದನಾಯ್ಕ, ಸಿ.ನಿಂಗಪ್ಪ, ವೆಂಕಟೇಶ, ಎ.ಕೆ.ರಾಮಣ್ಣ, ಕೆ.ಶಿವಶಂಕರ ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT