ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಆಹಾರ ಕಾಳಸಂತೆಯಲ್ಲಿ ಮಾರಾಟ

ಮದ್ದೂರು ತಾ.ಪಂ ಸಭೆಯಲ್ಲಿ ಸದಸ್ಯೆಯರ ಆರೋಪ
Last Updated 13 ಜನವರಿ 2017, 8:22 IST
ಅಕ್ಷರ ಗಾತ್ರ
ಮದ್ದೂರು: ಅಂಗನವಾಡಿ ಕೇಂದ್ರಗಳಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸಲು ನೀಡಿರುವ ಪೌಷ್ಟಿಕ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆಯರು ಆರೋಪಿಸಿದ ಘಟನೆ ಗುರುವಾರ ನಡೆದ ತಾ.ಪಂ ಸಭೆಯಲ್ಲಿ ನಡೆಯಿತು. 
 
ತಾ.ಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ ಅವರ  ಅಧ್ಯಕ್ಷತೆಯಲ್ಲಿ ಗುರುವಾರ ಆರಂಭಗೊಂಡ ಸಾಮಾನ್ಯ ಸಭೆಯಲ್ಲಿ ಸದಸ್ಯೆಯರಾದ ಅರುಣಾ ಹಾಗೂ ಸವಿತಾ ಅವರು ಪೌಷ್ಟಿಕ ಆಹಾರ ವಿತರಣೆಯ ಲೋಪವಾಗಿರುವ ವಿಷಯ ಪ್ರಸ್ತಾಪಿಸಿ, ಅಂಗನವಾಡಿ ಮಕ್ಕಳಿಗೂ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಅಹಾರ ವಿತರಿಸುತ್ತಿಲ್ಲ. ಈ ಬಗ್ಗೆ ಗ್ರಾಮಸ್ಥರ ಪ್ರಶ್ನೆಗೆ ಅಂಗನವಾಡಿ ಕಾರ್ಯಕರ್ತೆಯರು  ಬೇಕಾಬಿಟ್ಟಿ ಉತ್ತರಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ತಾಲ್ಲೂಕಿನ ಬಹುತೇಕ ಅಂಗವಾಡಿ ಕೇಂದ್ರಗಳಲ್ಲಿ  ಶೌಚಾಲಯ ನಿರ್ಮಾಣಗೊಂಡಿಲ್ಲವೇಕೆ? ಎಂದು ಸದಸ್ಯ ದೇವೇಗೌಡ ಪ್ರಶ್ನಿಸಿದರೆ, ಕಳೆದರಡು ದಿನಗಳ ಹಿಂದೆ ಹೊಸಗಾವಿಯಲ್ಲಿ ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಕುಕ್ಕರ್ ಮುಚ್ಚಳ ಸಿಡಿದಿದೆ. ಆದರೆ  ಯಾವುದೇ ಪ್ರಾಣಾಪಾಯವಾಗದಿರುವುದು ಸಮಾಧಾನ ತಂದಿದೆ.  ಈ ಘಟನೆಗೆ ಕಾರಣರಾದ ಸಿಬ್ಬಂದಿ  ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು  ಸದಸ್ಯ ತೋಯಜಾಕ್ಷ ಒತ್ತಾಯಿಸಿದರು. 
 
ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಸಿದ ಸಿಡಿಪಿಒ  ಚೇತನ್ ಕುಮಾರ್,  ಗರ್ಭಿಣಿಯರು ಎಲ್ಲಿ ತಮ್ಮ ಹೆಸರು ನೋಂದಾಯಿಸಿರುತ್ತಾರೋ ಅಲ್ಲಿ ಖಂಡಿತವಾಗಿ ಪೌಷ್ಟಿಕ ಆಹಾರ ದೊರೆಯುತ್ತವೆ. ಬೇರೆ ಕಡೆ ನೋಂದಾಯಿಸಿದ್ದರೆ ವಿತರಿಸಲು ಬರುವುದಿಲ್ಲ ಎಂದು ತಿಳಿಸಿದರು.
 
ಒಂದು ವೇಳೆ ನಮ್ಮ ಸಿಬ್ಬಂದಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿದ್ದರೆ,  ಲಿಖಿತ ದೂರು ನೀಡಿದರೆ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ ಸ್ಪಷ್ಟನೆ ನೀಡಿದರು. 
 
ಶೌಚಾಲಯ ನಿರ್ಮಾಣ ಜಿ.ಪಂ ಎಂಜಿನಿಯರ್ ವಿಭಾಗದಿಂದ ನಡೆಯುತ್ತಿದೆ.  ಅನುದಾನ ಕೊರತೆಯಿಂದ  ಶೌಚಾಲಯ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ.    ಹೊಸಗಾವಿ ಅಂಗನವಾಡಿ ಕೇಂದ್ರದಲ್ಲಿ ಕುಕ್ಕರ್ ಸಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮೇಲೆ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದರು.
 
ತಾ.ಪಂ ಸದಸ್ಯ ಸತೀಶ್, ಪ್ರತಿಯೊಂದು ಹಳ್ಳಿಯ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮವಾಗ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಹಳ್ಳಿಗಳಲ್ಲಿ ರೈತರ ಯುವಜನರ ಜೀವನ ಹಾಳಾಗುತ್ತಿದೆ. ಅಬಕಾರಿ ಅಧಿಕಾರಿಗಳು ಜನರ ಕಣ್ಣೊರೆಸಲು ಮಾತ್ರ ಅಲ್ಲೊಂದು ಇಲ್ಲೊಂದು ದಾಳಿ ನಡೆಸಿ, ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು. 
 
ಅಬಕಾರಿ ಪಿಎಸ್‌ಐ ಲೋಕೇಶ್ ಮಾತನಾಡಿ, ಸಮಾಜವನ್ನು ಪಾನಮುಕ್ತ ಮಾಡಲು ಕೇವಲ ಅಬಕಾರಿ ಇಲಾಖೆಯಿಂದರಿಂದಲೇ ಮಾತ್ರ ಸಾಧ್ಯವಿಲ್ಲ. ಗ್ರಾಮದ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಪ್ರತಿನಿಧಿಗಳು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ  ಸಹಕಾರ ನೀಡಿದರೆ ಮಾತ್ರ ಪಾನಮುಕ್ತ ಸಮಾಜ ನಿರ್ಮಾಣ ಸಾಧ್ಯ. ಕಳೆದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ತಾಲ್ಲೂಕಿನಲ್ಲಿ ಒಟ್ಟು  231 ಪ್ರಕರಣ ದಾಖಲು ಮಾಡಲಾಗಿದೆ.  212 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದರು.
 
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. 
 
ತಾಪಂ ಉಪಾಧ್ಯಕ್ಷ ರಘು, ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾಗೋಪಿ, ಸದಸ್ಯರಾದ ಶಾಂತಾಕುಚೇಲ, ಲೀಲಾವತಿ,ಧನಲಕ್ಷ್ಮಿ, ಮಹದೇವಮ್ಮ, ವೆಂಕಟೇಶ್,  ಚಿಕ್ಕಮರಿಯಪ್ಪ, ಮೋಹನ್ ಸೇರಿದಂತೆ  ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 
 
***
ಕೃಷಿ ಇಲಾಖೆ ಅಧಿಕಾರಿ ತರಾಟೆಗೆ
ಮದ್ದೂರು: ಕೃಷಿ ಇಲಾಖೆಯ ಸವಲತ್ತುಗಳ ಕುರಿತು ತಾ.ಪಂ ಸದಸ್ಯರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಸದಸ್ಯ ಅಂದಾನಿ, ಗ್ರಾ.ಪಂ ಅಧ್ಯಕ್ಷ ದಾಸಪ್ಪ, ಪುಟ್ಟಸ್ವಾಮಿ ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ಅವರನ್ನು ತರಾಟೆಗೆ ತೆಗೆದುಕೊಂಡರು.
 
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ನಾಗರಾಜು,  ರೈತ ಸಂಪರ್ಕ ಕೇಂದ್ರಗಳಲ್ಲಿ  ಕೃಷಿ ಅಧಿಕಾರಿಗಳು ಕೊರತೆಯಿರುವುದರಿಂದ ಮಾಹಿತಿ ತಲುಪಿಲ್ಲ.  ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಎಂದು  ಸಭೆಗೆ  ತಿಳಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT