ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಶಂಕರ ಶ್ರೀಗೆ ಭಕ್ತರ ಕೊನೆಯ ವಿದಾಯ

ಜಂಗಮ ಮಠದಲ್ಲಿ ಕ್ರಿಯಾ ಸಮಾಧಿ: ಜ.22ಕ್ಕೆ ಭಕ್ತಿ ಸಮರ್ಪಣೆ ಕಾರ್ಯಕ್ರಮ
Last Updated 13 ಜನವರಿ 2017, 9:57 IST
ಅಕ್ಷರ ಗಾತ್ರ
ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಗೊಲ್ಲಹಳ್ಳಿ ಜಂಗಮ ಮಠದ ಆವರಣದಲ್ಲಿಯೇ ಗೌರಿಶಂಕರ ಸ್ವಾಮೀಜಿ ಮಣ್ಣಾದರು. ಶ್ರೀಗಳ ಪಾರ್ಥೀವ ಶರೀರವನ್ನು ವೀರಶೈವ ಧರ್ಮದ ವಿಧಿ ವಿಧಾನಗಳ ಪ್ರಕಾರ ಕ್ರಿಯಾ ಸಮಾಧಿ ಮಾಡಲಾಯಿತು.
 
ಮುಂಜಾನೆ 5ರಿಂದಲೇ ಪೂಜಾದಿ ಕಾರ್ಯಕ್ರಮ ಆರಂಭಿಸಲಾಯಿತು. ಸಮಾಧಿ ಗುಂಡಿಯೊಳಗೆ ನಿರ್ಮಿಸಿದ ನಾಲ್ಕು ಗೋಡೆಗಳ ಮಧ್ಯೆ ಪಾರ್ಥಿವ ಶರೀರವನ್ನು ಕೂರಿಸಿ ಸಂಜೆ 4.30ರವರೆಗೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಸಂಜೆ 5ಕ್ಕೆ ಅಂತ್ಯಕ್ರಿಯೆ ನೆರವೇರಿತು. ಓಂ ನಮಃ ಶಿವಾಯ, ಹರಹರ ಶಂಕರ, ಗೌರಿಶಂಕರ ಎಂಬ ಜೈಕಾರ ಮೊಳಗಿಸಿದ ಭಕ್ತ ವೃಂದ, ಗುರುಗಳಿಗೆ ವಿದಾಯದ ನಮನ ಸಲ್ಲಿಸಿತು.
 
ಇದಕ್ಕೂ ಮುನ್ನ ಪಾರ್ಥೀವ ಶರೀರವನ್ನು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದ ಸುತ್ತ ಪ್ರದಕ್ಷಣೆ ಮಾಡಿಸಲಾಯಿತು. ಬಂಡೆಮಠದ ಶ್ರೀಗಳು ಶರೀರಕ್ಕೆ ರುದ್ರಾಭಿಷೇಕ ನೆರವೇರಿಸಿದರು. ಬಿಲ್ವಪತ್ರೆ, ವಿಭೂತಿ, ಪಳನಿ ಭಸ್ಮದ ಪುಡಿಯೊಂದಿಗೆ ಶ್ರೀಗಳನ್ನು ಕ್ರಿಯಾಸಮಾಧಿ ಮಾಡಲಾಯಿತು.
 
ಬೆಟ್ಟದಹಳ್ಳಿ ಮಲ್ಲಿಕಾರ್ಜುನ ಸ್ವಾಮಿ ಭಜನಾ ತಂಡ, ತ್ಯಾಗಟೂರು ಅರಕೇಶ್ವರಸ್ವಾಮಿ ಭಜನಾ ತಂಡಗಳು ಇಡೀ ದಿನ ಅಖಂಡ ಭಜನೆ ಮಾಡಿದರು. ಚಿಕ್ಕ ತೊಟ್ಲುಕೆರೆ ಅಟವಿ ಮಠದ ಅಟವಿ ಶಿವಲಿಂಗ ಸ್ವಾಮೀಜಿ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರದ ಖಾನಿಮಠದ ಶ್ರೀಗಳು, ಕೆರೆಗೋಡಿ ರಂಗಾಪುರ ಮಠದ ಗುರು ಪರದೇಶಿ ದೇಶಿಕೇಂದ್ರ ಸ್ವಾಮೀಜಿ ಅವರು ಅಂತ್ಯ ಸಂಸ್ಕಾರಕ್ಕೆ ಅಣಿ ಮಾಡಿದರು.
 
ಬೆಳ್ಳಾವಿಯ ಕಾರದ ವೀರಬಸವ ಸ್ವಾಮೀಜಿ, ತೆವಡೆಹಳ್ಳಿಯ ಗೋಸಲ ಶ್ರೀಗಳು, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಗೋಡೆಕೆರೆಯ ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಮೃತ್ಯುಂಜಯ ಸ್ವಾಮೀಜಿ, ಬಿ.ಕೋಡಿಹಳ್ಳಿಯ ಬಸವ ಭೃಂಗೇಶ್ವರ ಸ್ವಾಮೀಜಿ, ರಾಮೇನಹಳ್ಳಿ ಶಿವಪಂಚಾಕ್ಷರಿ ಸ್ವಾಮೀಜಿ, ತೊರೆ ಮಠದ ರಾಜಶೇಖರ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ರೇವಣ್ಣಸಿದ್ದೇಶ್ವರ ಸ್ವಾಮೀಜಿ, ಶಿಡ್ಲೇಕೋಣದ ಸಂಜಯ ಕುಮಾರ ಸ್ವಾಮೀಜಿ ಕ್ರಿಯಾವಿಧಿಗಳಲ್ಲಿ ಪಾಲ್ಗೊಂಡಿದ್ದರು. ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಸಚಿವ ಎಸ್‌.ಶಿವಣ್ಣ, ಬಿಜೆಪಿ ಮುಖಂಡ ಎಂ.ಬಿ.ನಂದೀಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಟಿ.ಕೃಷ್ಣಪ್ಪ, ಡಾ.ನವ್ಯಬಾಬು, ತುಮಕೂರು ಹಾಗೂ ಗುಬ್ಬಿ ವೀರಶೈವ ಸಮಾಜದ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 
 
**
ಮಾಧ್ಯಮದವರ ವಿರುದ್ದ ಭಕ್ತರ ಸಿಟ್ಟು
ಗುರುವಾರ ಬೆಳಿಗ್ಗೆ ಖಾನಿಮಠದ ಶ್ರೀಗಳು ಕ್ರಿಯಾಸಮಾಧಿಯ ಬಗ್ಗೆ ದೃಶ್ಯ ಮಾಧ್ಯಮದವರಿಗೆ ಮಾಹಿತಿ ನೀಡುತ್ತಿದ್ದರು. ಆಗ ಕೆಲ ಭಕ್ತರ ದಂಡು ದೃಶ್ಯ ಮಾಧ್ಯಮದವರ ವಿರುದ್ಧ ಆಕ್ರೋಶ ಹೊರಹಾಕಿದರು.
 
‘ನಿನ್ನೆಯಿಂದ ನೀವು ಎಲ್ಲಿ ಹೋಗಿದ್ದೀರಿ. ಈಗ ಬಂದಿದ್ದೀರಾ. ಇಲ್ಲಿ ಚಿತ್ರೀಕರಿಸುವುದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಹರಿಹಾಯ್ದರು.
 
**
ಉತ್ತರಾಧಿಕಾರಿ ಆಯ್ಕೆ ಕುರಿತ ಚರ್ಚೆ?
ಗೌರಿಶಂಕರ ಶ್ರೀಗಳ 11ನೇ ದಿನದ ಕಾರ್ಯದಲ್ಲಿ ಜಂಗಮ ಮಠದ ಉತ್ತರಾಧಿಕಾರಿ ಆಯ್ಕೆ ಕುರಿತು ಚರ್ಚಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
 
ಜ.22 ರಂದು ನಡೆಯುವ ಭಕ್ತಿ ಸಮರ್ಪಣೆ ನಡೆಯುವ ಭಕ್ತರು ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ ಭಕ್ತಿ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಮಠಾಧಿಪತಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸೀತಕಲ್ಲು, ಮೆಳೇಹಳ್ಳಿ, ಗೊಲ್ಲಹಳ್ಳಿ, ಗುಬ್ಬಿ ತಾಲ್ಲೂಕಿನ ಭಕ್ತರು, ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. 
 
**
ಶ್ರೀಗಳ ಗದ್ದುಗೆ ಕೈಲಾಸ ಮಂಟಪ
ಗೌರಿಶಂಕರ ಶ್ರೀಗಳ ಸಮಾಧಿಯನ್ನು ಕೈಲಾಸ ಮಂಟಪವಾಗಿ ಮಾಡಲು ಗುರುವಾರ ನಡೆದ ಸಭೆಯಲ್ಲಿ ಭಕ್ತರು ತೀರ್ಮಾನಿಸಿದರು. ಇದಕ್ಕಾಗಿ ₹50 ಸಾವಿರ ದೇಣಿಗೆಯನ್ನು ಭಕ್ತರೇ ನೀಡಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT