ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರ ಗಂಭೀರ ಆರೋಪ ಸ್ವತಂತ್ರ ತನಿಖೆ ನಡೆಯಲಿ

Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ

ಶಿಸ್ತಿಗೆ ಹೆಸರಾದ ನಮ್ಮ ಸಮವಸ್ತ್ರ ಪಡೆಗಳ ಯೋಧರಿಗೆ ಕೊಡುತ್ತಿರುವ ಆಹಾರ, ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ ಎಂಬ ಅಸಮಾಧಾನ, ಅತೃಪ್ತಿ  ಬಯಲಿಗೆ ಬಂದಿದೆ. ಗಡಿ ಕಾವಲು ಯೋಧರಿಗೆ ನೀಡುವ ಅಡುಗೆಯ ಗುಣಮಟ್ಟ ಹಾಗೂ ನಿತ್ಯವೂ  ಒಣ ರೊಟ್ಟಿ, ಪರೋಟಾ, ರುಚಿಯಿಲ್ಲದ ಬೇಳೆ ಸಾರು...

ಹೀಗೆ ಒಂದೇ ಬಗೆಯ ಊಟದ ಬಗ್ಗೆ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧ ತೇಜ್‌ಬಹದ್ದೂರ್‌ ಯಾದವ್‌ ತನ್ನ ಬೇಗುದಿಯನ್ನು ಹೊರ ಹಾಕಿದ ನಂತರ ಇನ್ನೂ ಇಬ್ಬರು ಯೋಧರು ತಮ್ಮ ನೋವು ತೋಡಿಕೊಂಡಿದ್ದಾರೆ.

ಇವರಲ್ಲಿ ಒಬ್ಬರು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್) ಕಾನ್‌ಸ್ಟೆಬಲ್‌ ಜೀತ್‌ ಸಿಂಗ್‌. ಇನ್ನೊಬ್ಬರು ಸೇನಾ ಪಡೆಯ ಲಾಲ್ಸ್‌ ನಾಯಕ್‌ ಯಗ್ಯಪ್ರತಾಪ್‌ ಸಿಂಗ್‌. ಪಿಂಚಣಿಯಲ್ಲಿನ ತಾರತಮ್ಯ ಮತ್ತು ಸೇನೆಯಲ್ಲಿ ತಮ್ಮನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ತಮ್ಮ ಕಷ್ಟ ಹೇಳಿಕೊಳ್ಳಲು ಇವರೆಲ್ಲ ಬಳಸಿದ್ದು ವಿಡಿಯೊ ಮತ್ತು ಸಾಮಾಜಿಕ ಜಾಲತಾಣವನ್ನು. ಹೀಗಾಗಿ ಇವರ ನೋವಿಗೆ ಹೆಚ್ಚಿನ ಸ್ಪಂದನೆ ಸಿಕ್ಕಿದೆ.

ಸಾರ್ವಜನಿಕರೂ ಪ್ರತಿಕ್ರಿಯಿಸುತ್ತಿದ್ದಾರೆ. ಇವೆಲ್ಲ ಸೇನೆ ಮತ್ತು ಕೇಂದ್ರೀಯ ಪೊಲೀಸ್‌ ಪಡೆಗಳಲ್ಲಿ ಕಂಪನ ಎಬ್ಬಿಸಿವೆ. ಸರ್ಕಾರ ಮತ್ತು ಆಯಾ ಪಡೆಗಳ ಉನ್ನತ ಅಧಿಕಾರಿಗಳು ನಿರ್ಲಕ್ಷಿಸಲು ಸಾಧ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ವರದಿ ನೀಡುವಂತೆ ಪ್ರಧಾನಿ ಕಚೇರಿ ಕೂಡ ಸೂಚನೆ ಕೊಟ್ಟಿದೆ.
ಸೇನೆಯಲ್ಲಿ ಪೂರೈಕೆಯಾಗುತ್ತಿರುವ ಆಹಾರದ ಗುಣಮಟ್ಟ ಸರಿ ಇಲ್ಲ ಎಂದು ಮಹಾ ಲೇಖಪಾಲರ (ಸಿಎಜಿ) ವರದಿ ಅನೇಕ ತಿಂಗಳ ಹಿಂದೆಯೇ  ಹೇಳಿತ್ತು.

ಅದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಈಗಿನ ಮುಜುಗರದಿಂದ ಪಾರಾಗಬಹುದಿತ್ತೇನೋ? ಏಕೆಂದರೆ ಪ್ರತಿಕೂಲ ಹವಾಮಾನದಲ್ಲೂ ದೇಶವನ್ನು ಕಾಯುವ ಯೋಧರಿಗೆ ಒಳ್ಳೆಯ ಊಟ, ಅಗತ್ಯಗಳಿಗೆ ತಕ್ಕ ಉಡುಪು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಸರ್ಕಾರದ ಆದ್ಯ ಕರ್ತವ್ಯ. 

ಅದನ್ನು ಬಿಟ್ಟು, ‘ಎಲ್ಲವೂ ಸರಿಯಾಗಿದೆ, ಯೋಧರಲ್ಲಿ ಯಾವುದೇ ಅತೃಪ್ತಿ ಇಲ್ಲ’ ಎಂದು ಬಿಎಸ್‌ಎಫ್‌, ಸಿಆರ್‌ಪಿಎಫ್‌ ಉನ್ನತ ಅಧಿಕಾರಿಗಳು ಈಗ ಸಮರ್ಥಿಸಿಕೊಳ್ಳಲು ಹೊರಟಿರುವುದು ಹಾಸ್ಯಾಸ್ಪದ. ‘ಯಾದವ್‌ ನಡವಳಿಕೆ ಸರಿ ಇಲ್ಲ; ಮಾನಸಿಕ ಸ್ಥಿತಿ ಸರಿ ಇಲ್ಲ. ಅವರನ್ನು ಹಿಂದೆ ಕೋರ್ಟ್ ಮಾರ್ಷಲ್‌ಗೆ ಒಳಪಡಿಸಲಾಗಿತ್ತು’ ಎಂದು ಬಿಎಸ್‌ಎಫ್‌ ಮಹಾ ನಿರ್ದೇಶಕರು ತರಾತುರಿಯಲ್ಲಿ ಸಮಜಾಯಿಷಿ ಕೊಡಲು ಮುಂದಾಗಿದ್ದು ವಿಷಯ ಮುಕ್ತಾಯ ಮಾಡುವ ಬದಲು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಆಹಾರ ಪೂರೈಕೆಯಲ್ಲಿ  ನ್ಯೂನತೆ ಇರುವುದು ನಿಜವೇ ಆಗಿದ್ದರೆ, ‘ಅದನ್ನು ಸರಿಪಡಿಸಿ’ ಎಂಬ ಯೋಧನ ಮೊರೆಯಲ್ಲಿ ತಪ್ಪು ಹುಡುಕಲು ಹೋಗಬಾರದು. ಆಹಾರದ ಗುಣಮಟ್ಟದ ಬಗ್ಗೆ ಬೇರೆ ಯಾರೂ ತಕರಾರು ಎತ್ತಿಲ್ಲ ಎನ್ನುವುದು ಸಮರ್ಥನೆಯಲ್ಲ.  ಈ ವಿಚಾರದಲ್ಲಿ ಬಿಎಸ್‌ಎಫ್‌ ಮುಖ್ಯಸ್ಥರನ್ನು ಕೇಂದ್ರ ಗೃಹ ಸಚಿವಾಲಯ ತರಾಟೆಗೆ ತೆಗೆದುಕೊಂಡಿರುವುದು ಸರಿಯಾಗಿದೆ.

ಅತೃಪ್ತಿ ತೋಡಿಕೊಂಡ ಯೋಧರಲ್ಲಿ ಒಬ್ಬರು ಸಿಆರ್‌ಪಿಎಫ್‌ ಮತ್ತು ಸೇನೆಯ ನಡುವೆ ಸೌಲಭ್ಯ, ಪಿಂಚಣಿ ಮತ್ತಿತರ ಸೇವಾ ವಿಷಯಗಳಲ್ಲಿನ ತಾರತಮ್ಯವನ್ನು ಪ್ರಶ್ನಿಸಿದ್ದಾರೆ. ಅದು ದಿಢೀರನೆ ತೀರ್ಮಾನಿಸಿ ಪರಿಹರಿಸುವ ವಿಷಯ ಅಲ್ಲ. ಮತ್ತೊಬ್ಬ ಯೋಧನ ಕೋಪ ಇರುವುದು, ಸೈನಿಕರನ್ನು ಅಧಿಕಾರಿಗಳ ಬೂಟು ಪಾಲಿಷ್‌ ಮಾಡಲು ಬಳಸಿಕೊಳ್ಳುವುದರ ಬಗ್ಗೆ. ಇಂತಹ ದೂರುದುಮ್ಮಾನಗಳ ಚರ್ಚೆಗೆ ಆಂತರಿಕ ವೇದಿಕೆಗಳಿವೆ.

ಯಾವ ಸಂದರ್ಭದಲ್ಲಿಯೂ ಶಿಸ್ತನ್ನು ಉಲ್ಲಂಘಿಸಬಾರದು. ಅಲ್ಲದೆ, ಇವೆಲ್ಲ ಸಾರ್ವಜನಿಕ ಚರ್ಚೆಯ ವಸ್ತುಗಳಾಗಬಾರದು. ಕೇಂದ್ರ  ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ಮತ್ತು ಸೇನೆಯ ಮುಖ್ಯಸ್ಥರೂ ಇದನ್ನೇ ಹೇಳಿದ್ದಾರೆ. ಆದರೆ ಇಂತಹ ಪರಿಸ್ಥಿತಿ ಏಕೆ ಉದ್ಭವವಾಯಿತು ಎಂಬುದನ್ನು ಇವರೆಲ್ಲ ಅರಿತುಕೊಳ್ಳಬೇಕು.

ಶಿಸ್ತಿನ ಹೆಸರಿನಲ್ಲಿ ಅತೃಪ್ತಿ, ಅಸಮಾಧಾನವನ್ನು ಹೆಚ್ಚುಕಾಲ ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದು ನಿಜ. ಆದರೆ ಸಮವಸ್ತ್ರ ಪಡೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲ ಕಟ್ಟುಪಾಡು, ನಿರ್ಬಂಧಗಳಿವೆ. ಅದನ್ನು ಪಾಲಿಸುವುದು ಅವರ ಕರ್ತವ್ಯ. ಅಂತಹ ನಿಯಂತ್ರಣಕ್ಕೆ ತಾವು ಸಿದ್ಧರಿಲ್ಲ ಎನ್ನುವವರು ಸೇನೆ, ಪೊಲೀಸ್‌, ಅರೆಸೇನೆ ಮತ್ತಿತರ ಭದ್ರತಾ ಪಡೆಗಳನ್ನು ಸೇರಲು ಹೋಗಬಾರದು. ನಿಯಮಾವಳಿಯಂತೆ ನಡೆದುಕೊಳ್ಳಲೇ ಬೇಕು.

ಅದು ಅವರ ವೃತ್ತಿಯ ಅವಿಭಾಜ್ಯ ಅಂಗ. ಈ ಕಾರಣಕ್ಕಾಗಿಯೇ ಭದ್ರತಾ ಪಡೆಗಳಿಗೆ ಅನೇಕ ಕಾನೂನುಬದ್ಧ ರಕ್ಷಣೆಗಳಿವೆ. ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವವರ ರಕ್ಷಣಾ ಕಾನೂನು, ಮಾಹಿತಿ ಹಕ್ಕು ಕಾನೂನುಗಳು ಇವಕ್ಕೆ ಅನ್ವಯಿಸುವುದಿಲ್ಲ. ಭದ್ರತಾ ಪಡೆಗಳ ಉನ್ನತ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವಾಲಯಗಳು ಇದನ್ನೇ ಗುರಾಣಿ ಮಾಡಿಕೊಳ್ಳಬಾರದು.

ಅನ್ಯಾಯ ಮುಂದುವರಿಯಲು ಅವಕಾಶ ಕೊಡಬಾರದು. ಯೋಧರ ಆರೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು. ಅವರ ಆಹಾರ, ಸೌಕರ್ಯಗಳನ್ನು ನುಂಗುತ್ತಿರುವವರು ಇದ್ದರೆ ಅಂಥವರನ್ನು ಗುರುತಿಸಿ ಕಠಿಣವಾಗಿ ಶಿಕ್ಷಿಸಬೇಕು. ತಪ್ಪುಗಳಿಗೆ ಮೇಲಿನವರನ್ನು ಹೊಣೆ ಮಾಡಬೇಕು. ಆಗ ಇಂತಹ ದೂರುಗಳು ಕಡಿಮೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT