ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಪ್ರಗತಿಗೆ ಕಂಪ್ಯೂಟರ್‌ ಪೂರಕ

ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್‌.ಆರ್‌.ನಿರಂಜನ ಅಭಿಮತ
Last Updated 14 ಜನವರಿ 2017, 12:04 IST
ಅಕ್ಷರ ಗಾತ್ರ
ಕಲಬುರ್ಗಿ: ವಿದ್ಯಾರ್ಥಿಗಳಿಗೆ ಮೊಬೈಲ್‌, ಗ್ಯಾಜೆಟ್‌ ಮತ್ತು ಕಂಪ್ಯೂಟರ್‌ ಬಳಸಬೇಡಿ ಎಂದು ಹೇಳುವುದು ಅಪರಾಧ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಆರ್‌.ನಿರಂಜನ ಹೇಳಿದರು.
 
ನಗರದ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಸರ್ವಜ್ಞ ಮತ್ತು ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ವಸತಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಶಿವರಾಜ ಪಾಟೀಲ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲರ ಬದುಕು–ಯುವ ವಿದ್ಯಾರ್ಥಿಗಳಿಗೆ ಪ್ರೇರಣೆ’ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ಕಂಪ್ಯೂಟರ್‌ ಬಳಸಲು ಬಾರದ ವ್ಯಕ್ತಿಯನ್ನು ಇಂದು ಅವಿದ್ಯಾವಂತ ಎಂದು ಕರೆಯಲಾಗುತ್ತಿದೆ. ಮೊಬೈಲ್‌ ಶಿಕ್ಷಕನ ಪಾತ್ರ ವಹಿಸುತ್ತಿದೆ. ಉದಾಹರಣೆಗೆ ಎಸ್‌ಎಂಎಸ್‌ ಬರೆಯುವಾಗ ಸರಿ ಪದವನ್ನು ತಿಳಿಸಿಕೊಡುತ್ತದೆ. ಮೊಬೈಲ್‌, ಗ್ಯಾಜೆಟ್‌, ಕಂಪ್ಯೂಟರ್‌ ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗಿವೆ. ಆದರೆ ವಿದ್ಯಾರ್ಥಿಗಳು ಯಾವುದನ್ನು ಹೇಗೆ ಮತ್ತು ಎಷ್ಟು ಬಳಸಬೇಕು ಎಂದು ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ದಿನಕ್ಕೆ 18 ಗಂಟೆ ಅಧ್ಯಯನ ಮಾಡಬೇಕು ಎಂದು ಹೇಳಿದರು.
 
ಅವಕಾಶ ಇಲ್ಲ ಎನ್ನುವುದು ತಪ್ಪು. ಡಾ.ಎ.ಪಿ.ಜೆ ಅಬ್ದುಲ್‌ ಕಲಾಂ ಅವರು ಕಡು ಬಡತನದಲ್ಲಿ ಜನಿಸಿ ರಾಷ್ಟ್ರಪತಿ ಆದರು. ನಾನು ಚಿಕ್ಕವನಿದ್ದಾಗ ಮನೆಯಲ್ಲಿ ತಿನ್ನಲು ಅನ್ನ ಕೂಡ ಸಿಗುತ್ತಿರಲಿಲ್ಲ. ಹಬ್ಬಹರಿದಿನಗಳಲ್ಲಿ ಮಾತ್ರ ಅನ್ನ ಮಾಡುತ್ತಿದ್ದರು. ಈಗಿನ ಮಕ್ಕಳಿಗೆ ಆಹಾರದ ಕೊರತೆ ಇಲ್ಲ. ಕಲಿಕೆಗೆ ಸರ್ಕಾರದ ಹಲವು ಸೌಲಭ್ಯಗಳಿವೆ. ಇವುಗಳ ಸದುಪಯೋಗ ಪಡೆದು ಹೆಚ್ಚು ಅಭ್ಯಾಸ ಮಾಡಬೇಕು. ದೇಶ ಎದುರಿಸುತ್ತಿರುವ ಸಮಸ್ಯೆಗಳು ವಿದ್ಯಾರ್ಥಿಗಳ ಸಮಸ್ಯೆಗಳಾಗಬೇಕು ಎಂದರು.
 
ಹೆಡ್‌ ಹೆಲ್ಡ್‌ ಹೈ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ರಮೇಶ್‌ ಬಲ್ಲಿದ್‌ ಮಾತನಾಡಿ, ಜ್ಞಾನವನ್ನು ಹಣ ಕೊಟ್ಟು ಸಂಪಾದನೆ ಮಾಡಲು ಸಾಧ್ಯವಿಲ್ಲ. ರ್‍ಯಾಂಕ್‌ ಮತ್ತು ಪ್ರಮಾಣ ಪತ್ರ ಪಡೆಯಲು ಮಾತ್ರ ವಿದ್ಯಾಭ್ಯಾಸ ಮಾಡದೆ ಜ್ಞಾನಕ್ಕಾಗಿ ಓದಬೇಕು. ವಿದ್ಯಾರ್ಥಿಗಳು ಸುಂದರ ಕಲ್ಪನೆಯ ಕನಸು ಹೊಂದಬೇಕು. ಅವುಗಳನ್ನು ನನಸಾಗಿಸಲು ಕಠಿಣ ಪರಿಶ್ರಮ ಪಡಬೇಕು ಎಂದು ಹೇಳಿದರು.
 
ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಅಮರೇಶ ಯತಗಲ್‌ ಉಪನ್ಯಾಸ ನೀಡಿ, ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲರು ದೇವದುರ್ಗ ತಾಲ್ಲೂಕಿನ ಮಲ್ಲದಕಲ್ಲು ಗ್ರಾಮದಲ್ಲಿ ಜನಿಸಿದರು. ಜೀವನದೊಂದಿಗೆ ಹೋರಾಡುತ್ತಾ ಸಾಧನೆ ಶಿಖರವನ್ನೇರಿದವರು. ಸ್ವಾಮಿ ವಿವೇಕಾನಂದರು ಮತ್ತು  ಪಾಟೀಲರಂಥ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
 
ವಕೀಲರ ಸಂಘದ ಅಧ್ಯಕ್ಷ ಬಿ.ಆರ್‌.ಪಾಟೀಲ, ಮಾನವ ಕಂಪ್ಯೂಟರ್‌ ಬಸವರಾಜ ಉಮರಾಣಿ ಮಾತನಾಡಿದರು. ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹ ಸಂಸ್ಥಾಪಕ ಚನ್ನಾರಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗೀತಾ ಚನ್ನಾರಡ್ಡಿ ಪಾಟೀಲ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ, ಅಭಿಷೇಕ ಪಾಟೀಲ, ಪ್ರಾಂಶುಪಾಲರಾದ ಎಂ.ಸಿ.ಕಿರೇದಳ್ಳಿ, ಮಿನುತಾ ಆರ್‌.ಬಿ ಇದ್ದರು. ಗಂಗಾಧರ ಬಡಿಗೇರ ನಿರೂಪಿಸಿದರು.
 
ಸರ್ವಜ್ಞ ಚಿಣ್ಣರ ಲೋಕದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಕಿತ್ತೂರು ಚನ್ನಮ್ಮ ಹಾಡಿನ ನೃತ್ಯ ಗಮನ ಸೆಳೆಯಿತು.
 
**
ಫ್ಯಾನ್‌, ಲೈಟ್‌, ಬಸ್‌, ಕಾರ್‌, ಟೈಮ್, ಪ್ಲೇಟ್‌, ರೈಸ್‌ ಇತ್ಯಾದಿ ಇಂಗ್ಲಿಷ್‌ ಪದಗಳನ್ನು ಅವಿದ್ಯಾವಂತರೂ ಬಳಸುತ್ತಾರೆ.  ಭಾಷೆ ಹೆಚ್ಚು ಬಳಕೆಯಿಂದ ಬರುತ್ತದೆ. ಅದರಂತೆಯೇ ಇಂಗ್ಲಿಷ್‌ ಕೂಡ.
-ರಮೇಶ್‌ ಬಲ್ಲಿದ್‌, ಸಂಪನ್ಮೂಲ ವ್ಯಕ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT