ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತೆಯ ಹಿಂದಿನ ಕತೆ

ಪ್ರಬಂಧ
Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ
ಕತೆಗಾರ್ತಿ ಸುಮಂಗಲಾರವರ ಎರಡನೆಯ ಕಥಾಸಂಕಲನ ‘ಜುಮುರು ಮಳೆ’ಯನ್ನು ನಾನು ‘ಛಂದ ಪುಸ್ತಕ’ದ ಮೂಲಕ ಪ್ರಕಟಿಸಿದ್ದೇನೆ. ಸಾಮಾನ್ಯವಾಗಿ ಕಥಾಸಂಕಲನದಲ್ಲಿರುವ ಒಂದು ವಿಶೇಷ ಕತೆಯ ಹೆಸರನ್ನು ಪುಸ್ತಕಕ್ಕೂ ಇಡುವುದು ಕನ್ನಡ ಪುಸ್ತಕೋದ್ಯಮದಲ್ಲಿರುವ ರೂಢಿಯಾಗಿದೆ. ಆದರೆ ರೂಢಿಯನ್ನು ಮುರಿದು ಹೊಸತೊಂದರ ದಾರಿಯನ್ನು ತುಳಿಯುವುದು ಯಾವತ್ತೂ ನನ್ನ ಸ್ವಭಾವ. ಆ ಕಾರಣಕ್ಕಾಗಿ ಈ ಸಂಕಲನಕ್ಕೆ ಸಂಪೂರ್ಣವಾಗಿ ಹೊಸತೇ ಆದ ಹೆಸರು ಸೂಚಿಸಿರೆಂದು ಸುಮಂಗಲಾರನ್ನು ಕೇಳಿಕೊಂಡೆ. ಅದಕ್ಕೆ ಅವರು ಒಪ್ಪಿ, ‘ಜುಮುರು ಮಳೆ’ ಎಂಬ ಸುಂದರ ಹೆಸರನ್ನು ಸೂಚಿಸಿದರು. ಮಲೆನಾಡಿನಲ್ಲಿ ಬಾಲ್ಯ ಕಳೆದ ಅವರಿಗೆ ಮಳೆಯ ಮೇಲೆ ವಿಶೇಷ ಪ್ರೀತಿಯಿರುವುದರಿಂದ, ಆ ಹೆಸರು ಹೆಚ್ಚು ಸೂಕ್ತವಾಗಿತ್ತು. ಅದೇ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಿಸಿದ್ದೂ ಆಯ್ತು.
 
ಹಾಗಂತ ಇದು ಪೂರ್ತಿಯಾಗಿ ನನ್ನ ಸ್ವಂತ ಆಲೋಚನೆಯೇನೂ ಅಲ್ಲ. ಈ ಹಿಂದೆ ವೀಣಾ ಶಾಂತೇಶ್ವರ ಅವರು ತಮ್ಮ ಕಥಾಸಂಕಲನವೊಂದಕ್ಕೆ ‘ಹಸಿವು’ ಎಂದು ನಾಮಕರಣ ಮಾಡಿದ್ದು ನನ್ನ ಈ ಯೋಚನೆಗೆ ಪ್ರೇರಣೆಯಾಗಿತ್ತು. ಆ ಸಂಕಲನದಲ್ಲಿ ‘ಹಸಿವು’ ಎನ್ನುವ ಕತೆಯೇನೂ ಇರಲಿಲ್ಲ. ಅದಕ್ಕೆ ಅವರು ಮುನ್ನುಡಿಯಲ್ಲಿಯೇ ಸಮರ್ಥವಾದ ಕಾರಣವನ್ನು ಬರೆದುಕೊಂಡಿದ್ದರು. “ಒಂದಿಲ್ಲೊಂದು ಬಗೆಯ ಹಸಿವು ಇಲ್ಲದ ಮನುಷ್ಯನೇ ಇಲ್ಲ...” ಎಂದು ಹೇಳಿದ್ದರು. ‘ಕವಲು’ ಕತೆಯ ಮೀನಾಕ್ಷಿಯದು ಪ್ರೀತಿಯ ಹಸಿವು, ‘ಅವಳ ಸ್ವಾತಂತ್ರ್ಯ’ದ ವಿಮಲಾಳದು ಕೌಟುಂಬಿಕ ನೆಮ್ಮದಿಯ ಹಸಿವು, ‘ಮರ್ಯಾದೆ’ ಕತೆಯ ಅಪ್ಪನಿಗೆ ಒಡನಾಟದ ಹಸಿವು ಎಂದು ವಿವರಿಸಿದ್ದರು. ಈ ಮಾತುಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿದ್ದವು. ಆದರೆ ಅನಂತರದ ಕತೆಗಾರರು ಈ ಮಾದರಿಯನ್ನು ಮತ್ತೆ ಮುಂದುವರಿಸಿದ್ದು ನನಗೆ ಅಷ್ಟಾಗಿ ಕಂಡಿರಲಿಲ್ಲ. ಆದ್ದರಿಂದ ನಮ್ಮ ‘ಛಂದ ಪುಸ್ತಕ’ದಿಂದ ಹೊರಬರುವ ಕಥಾಸಂಕಲನಕ್ಕೆ ವಿಭಿನ್ನ ಹೆಸರನ್ನು ನೀಡಬೇಕೆನ್ನುವುದು ನನ್ನ ಇಚ್ಛೆಯಾಗಿತ್ತು. ಸುಮಂಗಲಾ ಅವರ ಕಥಾಸಂಕಲನದಿಂದ ಆ ಆಸೆಯೂ ಪೂರ್ತಿಗೊಂಡಿತ್ತು.
 
ಎರಡು ವರ್ಷಗಳ ನಂತರ ‘ಜುಮುರು ಮಳೆ’ ಕಥಾಸಂಕಲನಕ್ಕೆ ಇನ್‌ಫೋಸಿಸ್‌ ಫೌಂಡೇಶನ್‌ ವತಿಯಿಂದ ಬಹುಮಾನವೊಂದು ಬಂತು. ಶ್ರೀಮತಿ ಸುಧಾಮೂರ್ತಿಯವರು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಧಾರವಾಡದ ಒಂದು ಸುಂದರ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕತೆಗಾರ್ತಿಗೆ ಕೊಡುವುದಕ್ಕೆ ನಿಶ್ಚಯಿಸಲಾಯಿತು. ವೀಣಾ ಶಾಂತೇಶ್ವರ ಅವರೇ ಈ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದರು. ಯೋಗಾಯೋಗವೆನ್ನುವಂತೆ ನನ್ನನ್ನು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬರಲು ಅವರು ಕೋರಿಕೊಂಡಿದ್ದರು. ನಾನು ಸಂತೋಷದಿಂದ ಒಪ್ಪಿಕೊಂಡು ಧಾರವಾಡಕ್ಕೆ ಹೋದೆ.
 
ನನ್ನ ಭಾಷಣದಲ್ಲಿ ಈ ಕೃತಿಯ ಹೆಸರಿನ ವಿಶೇಷವನ್ನು ನಾನು ವಿವರಿಸಿದೆ. ಅದು ಹೇಗೆ ವೀಣಾ ಶಾಂತೇಶ್ವರ ಅವರ ‘ಹಸಿವು’ ಕಥಾಸಂಕಲನ ನನಗೆ ಪ್ರೇರಣೆ ಎನ್ನುವುದನ್ನು ಮುಕ್ತವಾಗಿ ಹೇಳಿ, ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದೆ. ಸಭೆಯಲ್ಲಿ ನಾನಾಡಿದ ಮಾತುಗಳು ಬಹಳಷ್ಟು ಜನರಿಗೆ ಇಷ್ಟವಾಗಿ, ನನ್ನನ್ನು ಅಭಿನಂದಿಸಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ಮುಗಿದಿತ್ತು. ಅನಂತರ ವೀಣಾ ಶಾಂತೇಶ್ವರ ನನ್ನೊಡನೆ ಮಾತನಾಡಿ, ಮರುದಿನ ತಮ್ಮ ಮನೆಗೆ ಊಟಕ್ಕೆ ಬರಬೇಕೆಂದು ಆಹ್ವಾನವನ್ನು ಕೊಟ್ಟಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವಾರು ಸಾಹಿತಿ ಮಿತ್ರರಿಗೂ ಅವರು ಆಹ್ವಾನವನ್ನು ವಿಸ್ತರಿಸಿದ್ದರು.
 
ಮರುದಿನ ಸೊಗಸಾದ ಮಂಡಿಗೆ ಊಟವನ್ನು ಹಾಕಿಸಿ, ಒಳ್ಳೆಯ ಆತಿಥ್ಯವನ್ನು ನೀಡಿದ ವೀಣಾರವರು ಒಂದು ವಿಶೇಷ ಮಾಹಿತಿಯನ್ನು ನನಗೆ ನೀಡಿದರು. “ನೀವು ನನ್ನ ಕಥಾಸಂಕಲನದ ಬಗ್ಗೆ ಆಡಿದ ಮಾತುಗಳು ಪೂರ್ತಿ ಸತ್ಯ ಅಲ್ಲ. ನನಗೆ ‘ಹಸಿವು’ ಎಂದು ಅದಕ್ಕೆ ಹೆಸರಿಡುವ ಆಸೆಯೇನೂ ಇರಲಿಲ್ಲ. ಆದರೆ ಆ ಪುಸ್ತಕದ ಪ್ರಕಾಶಕರು ಮಾಡಿದ ಒಂದು ತಪ್ಪಿನಿಂದಾಗಿ ನಾನು ಅಂತಹ ಸಂದಿಗ್ಧಕ್ಕೆ ಸಿಕ್ಕು ಬಿದ್ದೆ” ಎಂದು ಹೇಳಿದರು. ನನಗೆ ಅವರ ಮಾತು ವಿಶೇಷ ಕುತೂಹಲವನ್ನು ಮೂಡಿಸಿತು. ಅದರ ವಿವರಗಳನ್ನು ಹೇಳಲು ಕೇಳಿಕೊಂಡೆ.
 
“ನನ್ನ ಪುಸ್ತಕದ ಜೊತೆಗೆ ಬಂಡಾಯ ಕತೆಗಾರರೊಬ್ಬರ ಪುಸ್ತಕವನ್ನು ಪ್ರಕಟಿಸಲು ಪ್ರಕಾಶಕರು ಯೋಜನೆ ಮಾಡಿದ್ದರು. ಆ ಬಂಡಾಯ ಕತೆಗಾರರ ಸಂಕಲನದ ಹೆಸರು ‘ಹಸಿವು’ ಎಂದಾಗಿತ್ತು. ಆದರೆ ಮುಖಪುಟವನ್ನು ಮುದ್ರಿಸುವಾಗ ಅವರು ಒಂದು ಪ್ರಮಾದವನ್ನು ಮಾಡಿಬಿಟ್ಟಿದ್ದರು. ನನ್ನ ಹೆಸರಿನ ಕಥಾಸಂಕಲನದ ಮುಖಪುಟಕ್ಕೆ ‘ಹಸಿವು’ ಎಂದೂ, ಅವರ ಹೆಸರಿನ ಕಥಾಸಂಕಲನದ ಮುಖಪುಟಕ್ಕೆ ನಾನು ಯೋಚನೆ ಮಾಡಿದ ಹೆಸರನ್ನು ಹಾಕಿ ಮುದ್ರಿಸಿಬಿಟ್ಟಿದ್ದರು. ನಾನು ನಡೆದ ಪ್ರಮಾದವನ್ನು ಅವರ ಗಮನಕ್ಕೆ ತಂದು, ಅದನ್ನು ಬದಲಾಯಿಸಲು ಕೇಳಿಕೊಂಡೆ. ಅವರು ಸುತಾರಾಂ ಒಪ್ಪಲಿಲ್ಲ. ಆ ದಿನಗಳಲ್ಲಿ ಮುಖಪುಟವೊಂದನ್ನು ಮುದ್ರಿಸುವುದು ಬಹು ದುಬಾರಿಯ ವಿಷಯವಾಗಿತ್ತು. “ಮುನ್ನುಡಿಯಲ್ಲಿ ನೀವೇ ಏನಾದರೂ ಸಮರ್ಥನೆಯ ಮಾತುಗಳನ್ನು ಬರೆಯಿರಮ್ಮಾ” ಎಂದು ಪ್ರಕಾಶಕರು ಬೇಡಿಕೊಂಡರು. ಬೇರೆ ದಾರಿಯಿಲ್ಲದೆ ‘ಮೀನಾಕ್ಷಿಗೆ ಪ್ರೀತಿಯ ಹಸಿವು, ವಿಮಾಲಗೆ ಕೌಟುಂಬಿಕ ಹಸಿವು, ಅಪ್ಪನಿಗೆ ಒಡನಾಟದ ಹಸಿವು’ ಅಂತ ಬಹಳಷ್ಟು ಸಮರ್ಥನೆಯನ್ನು ಬರೆದುಕೊಂಡುಬಿಟ್ಟೆ. ನಿಮಗೆ ಅದೇ ಇಷ್ಟವಾಗಿದೆ ಅನ್ನೋದು ಬಹಳ ವಿಶೇಷ ಅನ್ನಿಸ್ತು” ಎಂದು ಹೇಳಿದರು. ಅಲ್ಲಿಯವರೆಗೆ ಊಟದಲ್ಲಿ ಸವಿದ ರುಚಿಯಾದ ಮಂಡಿಗೆ ನನ್ನ ಗಂಟಲಿಗೆ ಬಂದ ಹಾಗಾಗಿತ್ತು.
 
ಇದೇ ತರಹದ ಅನುಭವ ನನಗೆ ಹಲವಾಗಿವೆ. ‘ಕತೆಯ ಹಿಂದಿನ ಕತೆ’ ಎಂದು ಹಲವು ಕತೆಗಾರರು ಹೇಳಿಕೊಳ್ಳುತ್ತಾರಲ್ಲಾ, ಬಹುಶಃ ಇದು ಅದೇ ಇರಬಹುದೇನೋ ಎನ್ನುವುದು ನನ್ನ ಊಹೆ. ಇಲ್ಲದ ತಳಹದಿಯ ಮೇಲೆ ನಾವು ಬೇರೇನೋ ಮಂದಿರವನ್ನು ಕಟ್ಟಿಕೊಂಡಿರುತ್ತೇವೆ ಮತ್ತು ಅದನ್ನು ಗಾಢವಾಗಿ ನಂಬಿರುತ್ತೇವೆ. ಆದರೆ ಸಾಹಿತ್ಯವೆನ್ನವುದು, ಅದರಲ್ಲೂ ಸೃಜನಶೀಲ ಸಾಹಿತ್ಯವು, ಕಲ್ಪನೆಯ ಅರಮನೆಯೇ ಆದ್ದರಿಂದ ನಡೆದ ಪ್ರಮಾದಕ್ಕೆ ಬೇಸರ ಪಡುವಂತಹದ್ದೇನೂ ಇಲ್ಲವೆಂದು ನಾನು ಭಾವಿಸುತ್ತೇನೆ. ಒಂದು ರೀತಿಯಲ್ಲಿ ಅದು ಸಂತೋಷ ಕೊಡುವ, ಕಚಗುಳಿ ಇಡುವ ಸಂಗತಿಯೇ ಆಗಿರುತ್ತದೆ. ವೀಣಾ ಶಾಂತೇಶ್ವರರಂತಹ ಸೃಜನಶೀಲ ಕತೆಗಾರ್ತಿಗೆ ಪ್ರಮಾದವೊಂದನ್ನು ಹೊಸ ಆಯಾಮವಾಗಿ ಪರಿವರ್ತನೆಗೊಳಿಸುವ ಶಕ್ತಿಯಿರುತ್ತದೆ.
 
ನಾನು ತಾಂಜಾನಿಯಾ ದೇಶದಲ್ಲಿರುವ ‘ಕಿಲಿಮಂಜಾರೋ’ ಎಂಬ ಪರ್ವತದ ಆರೋಹಣ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುವಾಗ, ಮುಂಬಯಿಯಲ್ಲಿ ವಿಮಾನ ಬದಲಾಯಿಸಬೇಕಿತ್ತು. ಹೇಗೂ ಮುಂಬಯಿಯ ಮೂಲಕ ಬರುತ್ತೇನಾದ ಕಾರಣ, ಹಿರಿಯರಾದ ಯಶವಂತ ಚಿತ್ತಾಲರನ್ನು ಭೇಟಿಯಾಗಿ ಬರೋಣವೆಂದು ನಿರ್ಧರಿಸಿ, ಮುಂಬಯಿಯಲ್ಲಿ ಒಂದು ದಿನ ಉಳಿದುಕೊಂಡೆ. ಫೋನ್‌ ಮಾಡಿದಾಗಲೆಲ್ಲಾ ನನ್ನನ್ನು ಮನೆಗೆ ಬಾ ಎಂದು ಪ್ರೀತಿಯಿಂದ ಅವರು ಆಹ್ವಾನಿಸುತ್ತಿದ್ದರು. ಗೆಳೆಯರೊಬ್ಬರನ್ನು ಜೊತೆ ಮಾಡಿಕೊಂಡು ಬ್ಯಾಂಡ್‌ ಸ್ಟಾಂಡ್‌ನ ಅವರ ಮನೆಗೆ ಹೋದೆ. ಸಮುದ್ರದ ಕಿನಾರೆಗೆ ತೆರೆದುಕೊಂಡಿರುವ ಕಿಟಕಿಯ ಬಳಿ ತಮ್ಮ ಆರಾಮ ಆಸನವನ್ನು ಹಾಕಿಕೊಂಡು ಕುಳಿತಿದ್ದ ಚಿತ್ತಾಲರು ಬಹು ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡರು. ತಿನ್ನಲು ಕುಡಿಯಲು ನಮಗೆ ಕೊಟ್ಟು, ತಮ್ಮ ಹೊಸ ಕತೆಯ ಬಗ್ಗೆ ಬಹಳಷ್ಟು ಮಾತನಾಡಿದರು. ತಮ್ಮ ಸೊಗಸಾದ ಅಕ್ಷರಗಳಲ್ಲಿ ಬರೆದ ಆ ಕತೆಯ ಹಾಳೆಗಳನ್ನು ನನಗೆ ತೋರಿಸಿ, ಒಂದಿಷ್ಟು ಓದಲು ಹೇಳಿದರು.
 
ಆ ವಯಸ್ಸಿನಲ್ಲಿಯೂ ಅವರ ಕಥನದ ಉತ್ಸಾಹವನ್ನು ಕಂಡು ನನಗೆ ಅಚ್ಚರಿಯಾಗಿತ್ತು. ಅವರ ದುಂಡನೆಯ ಅಕ್ಷರಗಳನ್ನು ಸವರಿ, ವಿಚಿತ್ರ ನವಿರನ್ನು ಅನುಭವಿಸಿದ್ದೆ.
ಅನಂತರ ನಾನು ಮುಂಬಯಿಗೆ ಬಂದ ಕಾರಣವನ್ನು ವಿಚಾರಿಸಿದ್ದರು. ನನ್ನ ಕಿಲಿಮಂಜಾರೋ ಚಾರಣವನ್ನು ಸ್ಥೂಲವಾಗಿ ವಿವರಿಸಿದೆ. “ನಂಗೂ ಕಿಲಿಮಂಜಾರೋ ಗೊತ್ತು...” ಎಂದು ನಸುನಗೆಯನ್ನು ಬೀರುತ್ತಾ ಹೇಳಿದರು. ನಾನು ವಿಸ್ಮಯದಿಂದ “ಅಲ್ಲಿಗೆ ಹೋಗಿದ್ರಾ ಸಾರ್‌?” ಎಂದು ವಿಚಾರಿಸಿದೆ. “ಅಲ್ಲಿಗೆ ಹೋಗೋದೇನೂ ಬೇಕಿಲ್ಲ. ನಮ್ಮ ಹೆಮಿಂಗ್ವೇ ಕಿಲಿಮಂಜಾರೋ ಬಗ್ಗೆ ಒಂದು ಒಳ್ಳೆ ಕತೆ ಬರೆದಿದಾನೆ. ಪರ್ವತದ ಮೇಲೆ ಹಿಮದಲ್ಲಿ ಒಂದು ಚಿರತೆ ಸತ್ತು ಬಿದ್ದಿರುತ್ತೆ. ಅದನ್ನು ಸಾವಿನ ಸಂಕೇತವಾಗಿ ಬಳಸಿದ್ದಾನೆ. ಕಾಲೇಜಿನ ದಿನದಿಂದಲೂ ಹಲವಾರು ಬಾರಿ ಅದನ್ನು ಓದಿದ್ದೇನೆ” ಎಂದು ವಿವರಿಸಿದ್ದರು.
 
ನಾನು ಹೆಚ್ಚಾಗಿ ಇಂಗ್ಲಿಷ್‌ ಸಾಹಿತ್ಯವನ್ನು ಓದಿಕೊಂಡವನಲ್ಲ. ಈ ಕತೆಯನ್ನಂತೂ ದೇವರಾಣೆಗೂ ಓದಿರಲಿಲ್ಲ. ಆದರೆ ಅವರು ಹೇಳಿದ ವಿವರ ಮಾತ್ರ ನನಗೆ ಕಚಗುಳಿ ಇಟ್ಟಿತು. ಅದೇ ತಾನೆ ಕಿಲಿಮಂಜಾರೋ ಹತ್ತಿ ಬಂದಿದ್ದ ನನಗೆ, ಆ ಕತೆಯ ಘಟನೆಯ ದೋಷ ತಕ್ಷಣಕ್ಕೆ ಮನಸ್ಸಿಗೆ ಹೊಳೆದು ಬಿಟ್ಟಿತು. ಕಿಲಿಮಂಜಾರೋ ಪರ್ವತದಲ್ಲಿ ಒಂದು ಎತ್ತರದ ನಂತರ ಯಾವುದೇ ಪ್ರಾಣಿ ಇರಲು ಸಾಧ್ಯವೇ ಇಲ್ಲ. ಇದ್ದಕ್ಕಿದ್ದಂತೆಯೇ ವಾತಾವರಣದ ಉಷ್ಣಾಂಶದಲ್ಲಿ ವಿಪರೀತ ಏರಿಳಿತಗಳಾಗುತ್ತವಾದ್ದರಿಂದ, ಮನುಷ್ಯರನ್ನು ಹೊರತುಪಡಿಸಿದರೆ ಬೇರೆ ಜೀವಿಗಳು ಅಲ್ಲಿಗೆ ಖಂಡಿತಾ ಬರುವುದಿಲ್ಲ.
 
ಚಿರತೆಯೊಂದು ಆರು ಸಾವಿರ ಮೀಟರ್‌ ಎತ್ತರದ ಪರ್ವತದ ತುದಿಯಲ್ಲಿ ಹಿಮದ ನಡುವೆ ಸತ್ತು ಬಿದ್ದಿರುವುದು ಕತೆಯಲ್ಲಿ ಸಾಧ್ಯವೇ ಹೊರತು, ವಾಸ್ತವದಲ್ಲಿ ಅಲ್ಲ. ಆದರೆ ಅದನ್ನು ಚಿತ್ತಾಲರಿಗೆ ಹೇಳುವುದೆ ಅಥವಾ ಬೇಡವೆ ಎನ್ನುವ ಸಂದಿಗ್ಧ ನನ್ನಲ್ಲಿ ಮೂಡಿತು. ಸಾವು ಮತ್ತು ಸಂಕೇತಗಳನ್ನು ವಿಪರೀತವಾಗಿ ಹಚ್ಚಿಕೊಂಡಿರುವ ಚಿತ್ತಾಲರಿಗೆ ಆ ಕತೆ ತುಂಬಾ ಇಷ್ಟವಾಗಿರುವುದು ಸಹಜವಾಗಿತ್ತು. ಕಾಲೇಜಿನ ದಿನಗಳಿಂದಲೂ ಆ ಕತೆಯನ್ನು ಹಲವಾರು ಬಾರಿ ಓದಿ ಸವೆದಿರುವ ಚಿತ್ತಾಲರಿಗೆ, ಈ ಎಂಬತ್ತರ ಇಳಿವಯಸ್ಸಿನಲ್ಲಿ ಕಹಿವಾಸ್ತವವನ್ನು ಹೇಳಿ ನಾನು ಸಾಧಿಸುವುದಾದರೂ ಏನು? ಕತೆಯೆನ್ನುವುದು ಕಲ್ಪನೆಯ ಕೂಸೇ ಅಲ್ಲವೆ? ಆದ್ದರಿಂದ ಆ ಕತೆಯನ್ನು ಓದಿ ಖುಷಿ ಪಡಲು ಕಾರಣವಾದ ಅವರ ಕಿಲಿಮಂಜಾರೋ ಪರ್ವತದ ಅಜ್ಞಾನವು ಹಾಗೇ ಇದ್ದರೆ ಒಳ್ಳೆಯದೆನ್ನಿಸಿತು. ಸುಮ್ಮನೆ ಅವರು ಹೇಳಿದ್ದನ್ನು ಕೇಳಿಸಿಕೊಂಡು “ತುಂಬಾ ಒಳ್ಳೆಯ ಕತೆ ಸಾರ್‌” ಎಂದು ಹೊಗಳಿ ವಾಪಾಸಾಗಿದ್ದೆ. ಎಷ್ಟೋ ಬಾರಿ ಕತೆಯ ಹಿಂದಿನ ಕತೆ ತಿಳಿಯದಿದ್ದರೆ ನಮಗೆ ಒಳಿತಾಗುತ್ತದೆ. Ignorance is a bliss (ಅಜ್ಞಾನವೆನ್ನುವುದು ಒಂದು ವರ) ಅಂತ ಒಂದು ಗಾದೆಯಿದೆಯಲ್ಲವೆ, ಅದು ಇಂತಹದಕ್ಕೇ ಹೇಳಿರುವುದು ಎಂದು ಭಾವಿಸಿದ್ದೇನೆ.
 
ಈ ಎರಡಕ್ಕೂ ವಿಭಿನ್ನವಾದ ಅನುಭವವೊಂದನ್ನು ನನ್ನ ಕತೆಗಳ ಅಭಿಮಾನಿಯೊಬ್ಬರು ನನಗೆ ತಿಳಿಸಿದ್ದರು. ನಲವತ್ತರ ಆಸುಪಾಸಿನ ಈ ಮಹಿಳೆ ಸರಕಾರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಮಗನೊಬ್ಬ ಈಗ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಅವರ ಪತಿ ಬಹು ಹಿಂದೆಯೇ ಅಪಘಾತವೊಂದರಲ್ಲಿ ತೀರಿಕೊಂಡಿದ್ದರು. ಅವರು ತಮ್ಮ ಬದುಕಿನ ಕಷ್ಟದ ದಿನಗಳನ್ನು ತೆರೆದ ಮನಸ್ಸಿನಿಂದ ನನ್ನೊಡನೆ ಹಂಚಿಕೊಂಡರು. “ಆಗ ನಂಗಿನ್ನೂ ಮೂವತ್ತು ವರ್ಷ ವಯಸ್ಸು ಸಾರ್‌. ಗಂಡನೇ ನನ್ನ ಸರ್ವಸ್ವ ಆಗಿದ್ರು. ನಮ್ಮದು ಅಂತರ್ಜಾತೀಯ ವಿವಾಹ. ಆದ್ದರಿಂದ ನಮ್ಮಿಬ್ಬರ ಅಪ್ಪ–ಅಮ್ಮಂದಿರೂ ನಮಗೆ ದೂರವಾಗಿದ್ದರು. ಅದರ ಬಿಸಿ ತಾಕದಂತೆ ಯಜಮಾನರು ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ತಿದ್ದರು. ಮುದ್ದಾದ ಮಗ ಬೇರೆ ಹುಟ್ಟಿದ್ದ. ಬದುಕು ಸ್ವರ್ಗದಂತೆ ಕಾಣುತ್ತಿತ್ತು. ಅಂತಹ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಇವರ ಆಕಸ್ಮಿಕ ಸಾವು ಸಿಡಿಲಿನಂತೆ ನನ್ನ ಮೇಲೆ ಎರಗಿತು. ಮನೆಯಲ್ಲಿ ಬಹು ಮುದ್ದಾಗಿ ನನ್ನನ್ನು ಬೆಳೆಸಿದ್ದರು. ಮದುವೆಯ ನಂತರ ಬದುಕಿನ ಸಣ್ಣಪುಟ್ಟ ವ್ಯವಹಾರಗಳನ್ನೂ ಯಜಮಾನರೇ ನೋಡಿಕೊಳ್ಳುತ್ತಿದ್ದರು. ಆದ್ದರಿಂದ ನನಗೆ ಹೆಚ್ಚಿನ ಪ್ರಪಂಚಜ್ಞಾನ ಇರಲೇ ಇಲ್ಲ. ನನ್ನ ಅಸಹಾಯಕ ಪರಿಸ್ಥಿತಿಯಿಂದಾಗಿ ತಡೆಯಲಾರದಷ್ಟು ದುಃಖವಾಗುತ್ತಿತ್ತು. ದಿನಪೂರ್ತಿ ಅಳುತ್ತಿದ್ದೆ. ಮುಂದೇನು ಮಾಡಬೇಕು ಎನ್ನುವುದನ್ನು ಯೋಚಿಸಲೂ ಸಾಧ್ಯವಿರಲಿಲ್ಲ.
 
ನನ್ನ ಯೋಚನಾಶಕ್ತಿಯೇ ಬರುಡಾಗಿ ಹೋಗಿತ್ತು. ಬಂಧು–ಬಳಗದವರೂ ಯಾರೂ ಸಹಾಯಕ್ಕೆ ಬರಲಿಲ್ಲ. ಅಂತರ್ಜಾತೀಯ ವಿವಾಹ ಮಾಡಿಕೊಂಡಿದ್ದಕ್ಕೇ ಇಂತಹ ಕಷ್ಟವನ್ನು ಭಗವಂತ ಕೊಟ್ಟಿದ್ದಾನೆ ಎಂದು ಬೆನ್ನ ಹಿಂದೆ ಮಾತನಾಡಿಕೊಳ್ಳುತ್ತಿದ್ದರು. ಕೊನೆಗೆ ಮಗನ ಸಮೇತ ಕಾವೇರಿ ನದಿಯಲ್ಲಿ ಬಿದ್ದು ನನ್ನ ಬದುಕಿನ ನೋವಿಗೆ ಕೊನೆ ಹಾಡುವುದು ಅಂತ ನಿರ್ಧರಿಸಿಬಿಟ್ಟಿದ್ದೆ. ಅಂತಹ ಹೊತ್ತಿನಲ್ಲಿ ಗೆಳತಿಯೊಬ್ಬಳು ನನ್ನನ್ನು ಜ್ಯೋತಿಷಿಯೊಬ್ಬರ ಹತ್ತಿರ ಕರೆದುಕೊಂಡು ಹೋದಳು. ಅವರು ನನ್ನ ಕಷ್ಟವನ್ನೆಲ್ಲಾ ಸಾವಧಾನದಿಂದ ಆಲಿಸಿದರು. ಕೊನೆಗೆ ಒಂದು ಪೂಜೆಯನ್ನು ನಿರಂತರವಾಗಿ ಆರು ತಿಂಗಳ ಕಾಲ ಮಾಡಿದರೆ, ನನ್ನೆಲ್ಲಾ ಕಷ್ಟಗಳು ಪರಿಹಾರವಾಗುತ್ತವೆ ಎಂದು ಸೂಚಿಸಿದರು. ನನಗೆ ಏನನ್ನಾದರೂ ನಂಬಲೇ ಬೇಕಿತ್ತು. ಅವರ ಮುಖದಲ್ಲಿ ವಿಶೇಷ ಕಾಂತಿಯಿತ್ತು. ಆದ್ದರಿಂದ ಅವರ ಮಾತನ್ನು ನಂಬಲು ನಿರ್ಧರಿಸಿ, ಅವರು ಹೇಳಿದಂತೆ ಪೂಜೆಯನ್ನು ಆರು ತಿಂಗಳ ಕಾಲ ನಿರಂತರವಾಗಿ ಮಾಡಿದೆ. ನೀವು ನಂಬ್ತೀರೋ ಇಲ್ವೋ ಸಾರ್, ಆರು ತಿಂಗಳು ಕಳೆದ ಮೇಲೆ ನನ್ನೆಲ್ಲಾ ಸಮಸ್ಯೆಗಳು ಪರಿಹಾರವಾಗಿದ್ದವು” ಎಂದು ಹೇಳಿದರು. ವಿಪರೀತವಾಗಿ ಸಾಹಿತ್ಯವನ್ನು ಓದಿಕೊಂಡಿರುವ ಈ ಹೆಣ್ಣುಮಗಳು ಇಂತಹ ಮಾತನ್ನು ಹೇಳಿದ್ದು ಕೇಳಿ ನನಗೆ ತಮಾಷೆಯೆನ್ನಿಸಿತು. ಸಾಹಿತ್ಯದ ಬುದ್ಧಿವಂತರೆಲ್ಲಾ ಸೇರಿ ಜ್ಯೋತಿಷ್ಯ ಶಾಸ್ತ್ರವನ್ನು ಮೌಢ್ಯ ಎಂದು ನಿರ್ಧರಿಸಿ ಕಾನೂನುಬಾಹಿರ ಮಾಡಬೇಕೆಂದು ನಿಶ್ಚಯಿಸಿರುವ ಈ ಹೊತ್ತಿನಲ್ಲಿ ಈಕೆಯ ಮಾತುಗಳನ್ನು ಅರಗಿಸಿಕೊಳ್ಳುವುದಾದರೂ ಹೇಗೆ? ಆದ್ದರಿಂದ ಸುಮ್ಮನೆ ಕಿರುನಗೆಯೊಂದನ್ನು ಬೀರಿದೆ. ಆಕೆಗೆ ನನ್ನ ಮನಸ್ಸು ಅರ್ಥವಾಯ್ತು.
 
“ನಂಗೊತ್ತು ಸಾರ್‌, ನೀವು ಇದನ್ನ ನಂಬಲ್ಲ ಅಂತ. ನಿಜ ಹೇಳಬೇಕು ಅಂದ್ರೆ ನಾನೂ ಈಗ ಇದನ್ನು ನಂಬಲ್ಲ. ಆದರೆ ಆ ಹೊತ್ತಿನಲ್ಲಿ ನಡೆದ ಪವಾಡವೇ ಬೇರೆಯಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಹಗಲು–ರಾತ್ರಿಯೆನ್ನದೆ ನನ್ನನ್ನು ಕಾಡುತ್ತಿತ್ತು. ಆ ಹೊತ್ತಿನಲ್ಲಿ ಈ ಜ್ಯೋತಿಷಿ ನನ್ನ ಈ ಕಟು ನಿರ್ಧಾರ ಆರು ತಿಂಗಳ ಕಾಲ ಮುಂದೂಡುವಂತೆ ಮಾಡಿಬಿಟ್ಟ. ಎಂತಹದೋ ಪೂಜೆಯ ನೆಪವೂ ನನಗೆ ಆಗ ಸಾಕಿತ್ತು. ಆರು ತಿಂಗಳಿನಲ್ಲಿ ನನ್ನ ಆತ್ಮಹತ್ಯೆಯ ಯೋಚನೆಯೇ ದೂರವಾಗಿತ್ತು. ಜೊತೆಗೆ ಕಾಲದ ಚಿಕಿತ್ಸೆಯಿಂದಾಗಿ ಬದುಕಿನ ನೋವಿನ ಪ್ರಮಾಣವೂ ಕಡಿಮೆಯಾಗಿತ್ತು. ಎಲ್ಲಕ್ಕೂ ಹೆಚ್ಚಾಗಿ ಯಜಮಾನರು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿಯೇ ನನಗೆ ಅನುಕಂಪದ ಆಧಾರದ ಮೇಲೆ ಕೆಲಸವನ್ನು ಕೊಟ್ಟಿದ್ದರು.
 
ಬದುಕು ಹೊಸತೊಂದು ದಾರಿಯನ್ನೇ ತೋರಿತ್ತು. ಕೇವಲ ಆರು ತಿಂಗಳ ಕಾಲ ನನ್ನ ಮನಸ್ಸನ್ನು ಬೇರೆಡೆಗೆ ತಿರುಗಿಸುವ ಕೆಲಸವನ್ನು ಯಾರಾದರೂ ಮಾಡಬೇಕಿತ್ತು. ಅದನ್ನು ಈ ಜ್ಯೋತಿಷಿ ಬಹು ಜಾಣತನದಲ್ಲಿ ಮಾಡಿದ್ದ. ಆತನ ಹತ್ತಿರ ಹೋಗದಿದ್ದರೆ ಈವತ್ತು ನಾನು ಮತ್ತು ನನ್ನ ಮಗ ಇಬ್ಬರೂ ಬದುಕಿರುತ್ತಿರಲಿಲ್ಲ ಸಾರ್. ಈಗ ಮಗ ಇಷ್ಟೆತ್ತರ ಬೆಳೆದು ನಿಂತಿದ್ದಾನೆ. ಇಂತಹ ಹುಡುಗನನ್ನು ಸಾಯಿಸುವ ಯೋಚನೆ ಮಾಡಿದ್ದೆನಲ್ಲ ಅಂತ ನಂಗೆ ಪಾಪಪ್ರಜ್ಞೆ ಮೂಡುತ್ತದೆ. ನೀವು ಏನೇ ಹೇಳಿ, ಈ ಜ್ಯೋತಿಷಿಗಳು ನಮ್ಮ ಬಡಭಾರತ ದೇಶದ ಆಪ್ತಸಮಾಲೋಚಕರಾಗಿದ್ದರು. ಬರೀ ಎಲೆ, ಅಡಿಕೆ, ಹತ್ತು ರೂಪಾಯಿ ದಕ್ಷಿಣೆಯನ್ನು ಮಾತ್ರ ನಾನು ಆತನಿಗೆ ಕೊಟ್ಟಿದ್ದು. ಈ ಕಾಲದ ಯಾವ ಮನೋವೈದ್ಯ ಅಥವಾ ಆಪ್ತಸಮಾಲೋಚಕ ಅಷ್ಟು ಕಡಿಮೆ ಹಣಕ್ಕೆ ನಮ್ಮ ಸಮಸ್ಯೆಯನ್ನು ದೂರ ಮಾಡುತ್ತಾನೆ ಹೇಳಿ?” ಎಂದು ನನಗೆ ಸವಾಲು ಹಾಕಿದರು. ಅದಕ್ಕೆ ಹೇಗೆ ಉತ್ತರಿಸಬೇಕೆಂದು ನನಗೆ ಅರ್ಥವಾಗಿರಲಿಲ್ಲ.
 
ಕತೆಯ ಹಿಂದಿನ ಕತೆ ಬಹು ಸಂಕೀರ್ಣವಾದದ್ದು. ತಕ್ಷಣಕ್ಕೆ ನಮಗದು ದಕ್ಕುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT