ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಂದ್ರದಿಂದ ಆರ್‌ಬಿಐ ಸ್ವಾತಂತ್ರ್ಯ ಹರಣ’

ಉರ್ಜಿತ್‌ ಪಟೇಲ್‌ಗೆ ಸಿಬ್ಬಂದಿ ಪತ್ರ: ಹಣಕಾಸು ಸಚಿವಾಲಯದ ಅಧಿಕಾರಿ ನೇಮಕಕ್ಕೆ ಆಕ್ಷೇಪ
Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಸ್ವಾಯತ್ತತೆಯನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ ಎಂದು ದೂರಿ ಆರ್‌ಬಿಐ ನೌಕರರು ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ಪತ್ರ ಬರೆದಿದ್ದಾರೆ.

ನೋಟುಗಳ ಮುದ್ರಣ, ಸಾಗಾಟ ಕೆಲಸಗಳ ಉಸ್ತುವಾರಿಗೆ ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರನ್ನು ನಿಯೋಜಿಸಿರುವುದಕ್ಕೆ ನೌಕರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ‘ಆರ್‌ಬಿಐನ ಸ್ವಾಯತ್ತ ಸ್ಥಾನವನ್ನು ಗೌರವಿಸುತ್ತೇವೆ’ ಎಂಬ ಸಮಜಾಯಿಷಿ ನೀಡಿದೆ.

ನೌಕರರ ಪತ್ರ: ನೋಟು ರದ್ದತಿಯ ನಂತರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಕಾರಣ ಆರ್‌ಬಿಐನ ಪ್ರತಿಷ್ಠೆ ಸರಿಪಡಿಸಲಾಗಷ್ಟು ಹಾಳಾಗಿದೆ. ನೋಟು ಮುದ್ರಣ, ಅದನ್ನು ಚಲಾವಣೆಗೆ ಬಿಡುವ ಕೆಲಸ ಆರ್‌ಬಿಐನದ್ದು. ಈ ಕೆಲಸಕ್ಕೆ ಹಣಕಾಸು ಸಚಿವಾಲಯದ ಅಧಿಕಾರಿಯನ್ನು ನೇಮಿಸಿದ್ದು, ಆರ್‌ಬಿಐನ ಅಧಿಕಾರ ಕಿತ್ತುಕೊಳ್ಳುವುದಕ್ಕೆ ಸಮ ಎಂದು ಗವರ್ನರ್‌ಗೆ ಬರೆದ ಪತ್ರದಲ್ಲಿ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ದಶಕಗಳ ಪ್ರಯತ್ನದ ಫಲವಾಗಿ ಆರ್‌ಬಿಐ ಉತ್ತಮ ಹೆಸರು ಸಂಪಾದಿಸಿತ್ತು. ಇದಕ್ಕೆ ಸಂಸ್ಥೆಯ ಸಿಬ್ಬಂದಿಯ ಕೆಲಸ ಹಾಗೂ ನ್ಯಾಯಯುತವಾಗಿ ರೂಪಿಸಿದ ನೀತಿಗಳು ಕಾರಣ. ಆದರೆ ಅವೆಲ್ಲವೂ ಕ್ಷಣಮಾತ್ರದಲ್ಲಿ ಪುಡಿಪುಡಿಯಾಗಿವೆ. ಇದರಿಂದ ನಮಗೆ ನೋವಾಗಿದೆ’ ಎಂದು ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳು ಹಾಗೂ ನೌಕರರ ಸಂಯುಕ್ತ ವೇದಿಕೆ ಬರೆದ ಪತ್ರದಲ್ಲಿ ಹೇಳಲಾಗಿದೆ.

ಗವರ್ನರ್ ಪಟೇಲ್ ಅವರಿಗೆ ಈ ಪತ್ರ ಬರೆದಿರುವುದನ್ನು ಅಖಿಲ ಭಾರತ ಆರ್‌ಬಿಐ ನೌಕರರ ಒಕ್ಕೂಟದ ಸಮೀರ್ ಘೋಷ್‌ ಮತ್ತು ಅಖಿಲ ಭಾರತ ಆರ್‌ಬಿಐ ಕಾರ್ಮಿಕರ ಸಂಘದ ಸೂರ್ಯಕಾಂತ ಮಹಾದಿಕ್ ಖಚಿತಪಡಿಸಿದ್ದಾರೆ.

ತಮ್ಮ ವೇದಿಕೆಯು ಆರ್‌ಬಿಐನ 18 ಸಾವಿರಕ್ಕೂ ಹೆಚ್ಚಿನ ನೌಕರರನ್ನು ಪ್ರತಿನಿಧಿಸುತ್ತದೆ ಎಂದು ಘೋಷ್‌ ತಿಳಿಸಿದರು.

‘ಆರ್‌ಬಿಐನ ಅತ್ಯುನ್ನತ ಹುದ್ದೆಯಲ್ಲಿ ಇರುವವರು ನೀವು (ಪಟೇಲ್). ಈ ಸಂಸ್ಥೆಯ ಗವರ್ನರ್ ನೀವು. ಸಂಸ್ಥೆಯ ಸ್ವಾಯತ್ತ ಸ್ಥಾನ ಮತ್ತು ಘನತೆ ಉಳಿಸಬೇಕಿರುವ ನೀವು, ಹಣಕಾಸು ಸಚಿವಾಲಯದ ಅನಗತ್ಯ ಹಸ್ತಕ್ಷೇಪ ತಡೆಯಲು ಅಗತ್ಯ ಕ್ರಮವನ್ನು ದಯವಿಟ್ಟು ಕೈಗೊಳ್ಳಿ. ಈಗಿನ ಬೆಳವಣಿಗೆಗಳಿಂದ ಸಿಬ್ಬಂದಿ ಅವಮಾನಿತರಾಗಿದ್ದಾರೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

ನೋಟುಗಳ ಮುದ್ರಣ, ಅವುಗಳನ್ನು ಚಲಾವಣೆಗೆ ಬಿಡುವ ಕೆಲಸವನ್ನು ಆರ್‌ಬಿಐ 1935ರಿಂದಲೂ ಮಾಡುತ್ತಿದೆ. ಈ ಕೆಲಸ ಮಾಡಲು ಹಣಕಾಸು ಸಚಿವಾಲಯದ ನೆರವಿನ ಅಗತ್ಯ ಇಲ್ಲ ಎಂದು ಪತ್ರದಲ್ಲಿ ಖಾರವಾಗಿ ಬರೆಯಲಾಗಿದೆ.

ಆರ್‌ಬಿಐನ ಮಾಜಿ ಗವರ್ನರ್‌ಗಳಾದ ಡಾ. ಮನಮೋಹನ್ ಸಿಂಗ್, ವೈ.ವಿ. ರೆಡ್ಡಿ ಮತ್ತು ಬಿಮಲ್ ಜಲಾನ್ ಅವರು ಸಂಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ನೌಕರರು ಈ ಪತ್ರ ಬರೆದಿದ್ದಾರೆ.

ಹಸ್ತಕ್ಷೇಪ ನಿರಾಕರಿಸಿದ ಸಚಿವಾಲಯ

ನವದೆಹಲಿ (ಪಿಟಿಐ): ಆರ್‌ಬಿಐನ ಕಾರ್ಯಗಳಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರ್‌ಬಿಐ ಸಿಬ್ಬಂದಿ ಮಾಡಿರುವ ಆರೋಪವನ್ನು ಕೇಂದ್ರ ಹಣಕಾಸು ಸಚಿವಾಲಯ  ಅಲ್ಲಗಳೆದಿದೆ.

‘ಸಾರ್ವಜನಿಕ ಹಿತಾಸಕ್ತಿ ಇರುವ ವಿಚಾರಗಳಲ್ಲಿ ಆರ್‌ಬಿಐ ಮತ್ತು ಸರ್ಕಾರದ ನಡುವೆ ಸಮಾಲೋಚನೆ ಆಗಬೇಕು ಎಂದು ಕಾನೂನಿನಲ್ಲಿ ಹೇಳಿದ್ದರೆ ಅಂಥ ಸಂದರ್ಭಗಳಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ಅಲ್ಲದೆ, ಸಮಾಲೋಚನೆ ನಡೆಸುವುದು ಒಂದು ಪದ್ಧತಿಯಾಗಿ ಬೆಳೆದುಬಂದಿದ್ದರೆ, ಅದನ್ನು ಅನುಸರಿಸಲಾಗುತ್ತದೆ. ಇಂಥ ಸಮಾಲೋಚನೆಗಳನ್ನು ಸ್ವಾಯತ್ತತೆಯಲ್ಲಿನ ಹಸ್ತಕ್ಷೇಪ ಎಂದು ಭಾವಿಸಬಾರದು’ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಆರ್‌ಬಿಐನ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಸರ್ಕಾರ ಸಂಪೂರ್ಣವಾಗಿ ಗೌರವಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ’ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT