ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೆಗುರುತು ಮೂಡಿಸುತ್ತಿರುವ ದಾವಣಗೆರೆ ಮಲ್ಲರು

Last Updated 15 ಜನವರಿ 2017, 19:30 IST
ಅಕ್ಷರ ಗಾತ್ರ

ದಾವಣಗೆರೆಯಲ್ಲಿ ಕುಸ್ತಿ ಈಚೆಗೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅರ್ಜುನ ಹಲಕುರ್ಕಿ, ರಫೀಕ್‌ ಹೊಳಿ, ಕಾರ್ತಿಕ್‌ ಕಾಟೆ ಅವರಂಥ ಪ್ರತಿಭಾನ್ವಿತ ಕುಸ್ತಿಪಟುಗಳಿಂದ ಇನ್ನೂ ಉತ್ತಮ ಸಾಧನೆ ನಿರೀಕ್ಷಿಸಬಹುದು.  ಈ ಕುರಿತು ನಾಗೇಶ್‌ ಶೆಣೈ ಬರೆದಿದ್ದಾರೆ.

ಬೆಣ್ಣೆದೋಸೆಗೆ ಬಹಳ ಹಿಂದಿನಿಂದಲೂ ಖ್ಯಾತಿ ಪಡೆದಿರುವ ದಾವಣಗೆರೆ ನಗರ ಕುಸ್ತಿಯಲ್ಲೂ ಹೆಸರು ಪಡೆಯುತ್ತಿದೆ. ಪಾರಂಪರಿಕ ಶೈಲಿಯ ಕುಸ್ತಿ ಇಲ್ಲಿ ಜನಪ್ರಿಯವಾಗಿದೆ. ಇದರ ಜೊತೆಗೆ ಸ್ಪರ್ಧಾತ್ಮಕ ಶೈಲಿಯ ಕುಸ್ತಿಯೂ ಜನಪ್ರಿಯವಾಗುತ್ತಿದೆ. ಸೀಮಿತ ಸೌಲಭ್ಯಗಳನ್ನೇ ಬಳಸಿಕೊಂಡು ಇಲ್ಲಿನ ಪೈಲ್ವಾನರು ಇತ್ತೀಚಿನ ಕೆಲವು ವರ್ಷಗಳಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕಗಳನ್ನು ಕೊರಳಿಗೇರಿಸಿಕೊಳ್ಳುತ್ತಿದ್ದಾರೆ.

ರಫೀಕ್‌ ಹೊಳಿ, ಕಾರ್ತಿಕ್‌ ಕಾಟೆ, ಅರ್ಜುನ್‌ ಹಲಕುರ್ಕಿ, ಎಸ್‌.ಕೆಂಚಪ್ಪ, ಆನಂದ ಎಲ್‌.. ಹೀಗೆ ಉತ್ತಮ ಸಾಧನೆ ತೋರಿದ ಪೈಲ್ವಾನರ ಪಟ್ಟಿ ಬೆಳೆಯುತ್ತ ಹೋಗುತ್ತದೆ. ದಾವಣಗೆರೆ ಕ್ರೀಡಾನಿಲಯದ ಕುಸ್ತಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಈ ಪೈಲ್ವಾನರು, ಕಿರಿಯರಿಗೂ ಸ್ಫೂರ್ತಿ ತುಂಬುತ್ತಿದ್ದಾರೆ.

ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ಇತ್ತೀಚೆಗಷ್ಟೇ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಕುಸ್ತಿ ಕ್ರೀಡೆಗಳ 19 ವರ್ಷದೊಳಗಿನವರ ವಿಭಾಗದಲ್ಲಿ ಇತ್ತೀಚೆಗೆ ಶ್ರೀನಿವಾಸ್‌ ಮತ್ತು ವಿನೋದ್‌ ಬಡಿಗೇರ್‌ ಬೆಳ್ಳಿಯ ಪದಕ ಗೆದ್ದು ಕೊಂಡಿದ್ದಾರೆ. ಶ್ರೀನಿವಾಸ್‌ 74 ಕೆ.ಜಿ. ಫ್ರೀಸ್ಟೈಲ್‌ನಲ್ಲಿ, ವಿನೋದ್‌ 50 ಕೆ.ಜಿ. ಗ್ರೀಕೊ ರೋಮನ್‌ ವಿಭಾಗದಲ್ಲಿ ಸ್ಪರ್ಧಿಸಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ಬರುವ ಈ ತರಬೇತಿ ಕೇಂದ್ರದಲ್ಲಿ 70 ಮಂದಿ ತರಬೇತಿ ಪಡೆಯುತ್ತಿದ್ದಾರೆ. ವಿದ್ಯಾನಗರದಲ್ಲಿರುವ ಕ್ರೀಡಾ ವಸತಿನಿಲಯದಲ್ಲಿದ್ದು, ವ್ಯಾಸಂಗ ಮಾಡುವ 18 ಮಂದಿ ವಿದ್ಯಾರ್ಥಿಗಳು ಇವರಲ್ಲಿ ಒಳಗೊಂಡಿದ್ದಾರೆ. 

ರಫೀಕ್‌ ಹೊಳಿ ಕಾಮನ್‌ವೆಲ್ತ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. 2015ರಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ (ಪ್ರಿ ಒಲಿಂಪಿಕ್‌ ಅರ್ಹತಾ ಸುತ್ತು) ಭಾಗವಹಿಸಿದ್ದಾರೆ. ಅದೇ ವರ್ಷ ಕಜಕಸ್ತಾನದಲ್ಲಿ ನಡೆದ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲಿ ಪೋಲೆಂಡ್‌ನ ಸ್ಪರ್ಧಿಗೆ ಮಣಿದಿದ್ದರು.

ಪ್ರತಿಭಾವಂತರ ದಂಡು: ಬಾಗಲಕೋಟೆ ತಾಲ್ಲೂಕಿನ ಅರ್ಜುನ ಹಲಕುರ್ಕಿ, ಕಳೆದ ವರ್ಷದ ಜುಲೈ ತಿಂಗಳಲ್ಲಿ ಟರ್ಕಿಯಲ್ಲಿ ನಡೆದ ಶಾಲಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ (50 ಕೆ.ಜಿ. ಗ್ರೀಕೊ ರೋಮನ್‌) ಬೆಳ್ಳಿಯ ಪದಕ ಪಡೆದ ಸಾಹಸಿ. ಅದಕ್ಕೆ ಒಂದು ತಿಂಗಳು ಮೊದಲು ಫಿಲಿಪೀನ್ಸ್‌ನಲ್ಲಿ ನಡೆದಿದ್ದ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಈತನದಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ನಲ್ಲಿ ನಡೆದ ವಿಶ್ವ ಕಿರಿಯರ ಚಾಂಪಿಯನ್‌ಷಿಪ್‌ನಲ್ಲಿ ಈತನಿಗೆ ಕೂದಲೆಳೆಯಿಂದ ಕಂಚಿನ ಪದಕ ಕೈತಪ್ಪಿತ್ತು.

ಕಾರ್ತಿಕ್‌ ಕಾಟೆ, ಕಳೆದೆರಡು ವರ್ಷಗಳಿಂದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಕೂಟದಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಎರಡು ಬಾರಿ ದಸರಾ ಕೇಸರಿ ಕಿರೀಟವನ್ನೂ ಕಾರ್ತಿಕ್‌  ಧರಿಸಿದ್ದಾರೆ.

2016ರಲ್ಲಿ ಕ್ರೀಡಾರತ್ನ ಪ್ರಶಸ್ತಿ ಪಡೆದ ಆನಂದ ಎಲ್‌, ಕೂಡ ರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದ ಮಲ್ಲನೇ. ದಾವಣಗೆರೆ ವಿ.ವಿ. ಪ್ರತಿನಿಧಿಸಿ ಕಳೆದ ವರ್ಷ ಮೈಸೂರಿನಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಕುಸ್ತಿ ಸ್ಪರ್ಧೆಗಳಲ್ಲಿ ಬೆಳ್ಳಿಯ ಪದಕ ಗೆದ್ದವನೀತ.
ಇನ್ನೊಬ್ಬ ಪ್ರತಿಭಾವಂತ ಕೆಂಚಪ್ಪ ಎಸ್‌. ಕೂಡ ಶಾಲಾ ಕ್ರೀಡೆಗಳಲ್ಲಿ ಸತತ ಆರು ವರ್ಷ ಪದಕಗಳನ್ನು  ಗೆದ್ದವರು. ಭಾರತ ಜೂನಿಯರ್‌ ತಂಡದ ಆಯ್ಕೆ ಶಿಬಿರದಲ್ಲೂ ಭಾಗವಹಿಸಿದ್ದಾರೆ.

ತರಬೇತಿ ಕೇಂದ್ರದಲ್ಲಿ ಎನ್‌ಐಎಸ್‌ ಕುಸ್ತಿ ತರಬೇತುದಾರ ಶಿವಾನಂದ ಆರ್‌. ಅವರು 16 ವರ್ಷಗಳಿಂದ ತರಬೇತಿ ನೀಡುತ್ತಿದ್ದಾರೆ. ‘ಯುರೋಪಿನ ಹಂಗೆರಿಯಲ್ಲಿ ಮೂರು ತಿಂಗಳ ಐಸಿಸಿ ಕೋರ್ಸ್‌ ಪಡೆದಿದ್ದು ಸಾಕಷ್ಟು ನೆರವಾಯಿತು. ಅಲ್ಲಿ ಪಡೆದ ವೈಜ್ಞಾನಿಕ ತರಬೇತಿ ಕುಸ್ತಿಪಟುಗಳನ್ನು ಸ್ಪರ್ಧೆಗೆ ಪರಿಣಾಮಕಾರಿಯಾಗಿ ಸಜ್ಜುಗೊಳಿಸಲು ಸಹಕಾರಿಯಾಯಿತು’ ಎಂದು ಅವರು ಹೇಳುತ್ತಾರೆ.

‘ಕುಸ್ತಿಪಟುಗಳು ಆಂಜನೇಯ ಬಡಾವಣೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸಹಕಾರ ದೊರೆಯುತ್ತಿದ್ದು, ತಿಂಗಳ ಹಿಂದೆ ಇಲ್ಲಿಗೆ ಹೊಸ ಮ್ಯಾಟ್‌ ಕೊಟ್ಟಿದ್ದಾರೆ. ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವಂತೆ ಇಲಾಖೆಗೆ ಮನವಿ ಮಾಡಿದ್ದೇನೆ’ ಎಂದು ಅವರು ಹೇಳುತ್ತಾರೆ.

ಉತ್ತರಪ್ರದೇಶದ ಗೊಂಡಾದಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ರಾಜ್ಯದ 16 ಮಂದಿಯ ತಂಡದಲ್ಲಿ ದಾವಣಗೆರೆ ಕುಸ್ತಿ ತರಬೇತಿ ಕೇಂದ್ರದ 13 ಮಂದಿ ಇದ್ದರು ಎಂಬುದು ಗಮನಾರ್ಹ.

ದಕ್ಕದ ಅಕಾಡೆಮಿ ಭಾಗ್ಯ
ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಕುಸ್ತಿ ಅಕಾಡೆಮಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಉತ್ತಮ ಕುಸ್ತಿಪಟುಗಳನ್ನು ತಯಾರಿಸುತ್ತಿರುವ ದಾವಣಗೆರೆ ಜಿಲ್ಲೆಗೆ ಅನ್ಯಾಯವಾಗಬಾರದು. ದಾವಣಗೆರೆಯಲ್ಲಿ ಪುರುಷರ ವಿಭಾಗದ ಅಕಾಡೆಮಿ ಸ್ಥಾಪಿಸಿದರೆ ಅನುಕೂಲವಾಗುತ್ತದೆ ಎಂಬುದು ಜಿಲ್ಲಾ ಕುಸ್ತಿ ಸಂಘದ ಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT