ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಬಿಎಲ್‌ನಲ್ಲಿ ಕಲಬುರ್ಗಿ ಅಂಪೈರ್‌

Last Updated 15 ಜನವರಿ 2017, 19:30 IST
ಅಕ್ಷರ ಗಾತ್ರ

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಎರಡು ಬಾರಿ ಅಂಪೈರ್‌ ಆಗಿ ಕರ್ತವ್ಯ ನಿರ್ವಹಿಸಿದ ಕರ್ನಾಟಕದ ಏಕೈಕ ತೀರ್ಪುಗಾರ  ಯೋಗೇಶ್‌ ಅವರು ಕಲಬುರ್ಗಿಯವರು. ಹೈದರಾಬಾದ್‌ ಕರ್ನಾಟಕದ ಕ್ರೀಡಾ ಚಟುವಟಿಕೆಗಳ ಇದೀಗ ಎದ್ದು ಕಾಣುವ ಇವರ ಬಗ್ಗೆ ಸಿದ್ದೇಶ್‌ ಎಂ.ಎಸ್‌.  ಬರೆದಿದ್ದಾರೆ.

ಕಲಬುರ್ಗಿಯಲ್ಲಿ ಬ್ಯಾಡ್ಮಿಂಟನ್ ಬೆಳವಣಿಗೆಗೆ ಶ್ರಮಿಸುತ್ತಿರುವವರಲ್ಲಿ ಯೋಗಿ ರಾಜೇಂದ್ರ ಪಾಟೀಲ (ಯೋಗೇಶ್‌) ಪ್ರಮುಖ ಹೆಸರು. ಅಂಪೈರಿಂಗ್‌, ಕೋಚಿಂಗ್‌, ಸಂಘಟನೆ ಹಾಗೂ ಆಡಳಿತಾಧಿಕಾರಿಯಾಗಿ ಅವರು ಬ್ಯಾಡ್ಮಿಂಟನ್‌ ನೊಂದಿಗೆ ಬೆಸೆದುಕೊಂಡಿದ್ದಾರೆ. ಆಟಗಾರನಾಗಲು ಹೊರಟು, ಕೋಚಿಂಗ್‌ನತ್ತ ಹೊರಳಿ, ಅಂಪೈರ್‌ ಆಗುವವರೆಗೆ ಅವರು ಸಾಕಷ್ಟು ಹಾದಿ ಸವೆಸಿದ್ದಾರೆ.

ಸದ್ಯ ನಡೆಯುತ್ತಿರುವ ಪಿಬಿಎಲ್‌ ಆವೃತ್ತಿಯ ಪಂದ್ಯಗಳಲ್ಲಿ 40 ವರ್ಷದ ಯೋಗೇಶ್‌  ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿ ಆರು ಬಾರಿ ಚೇರ್‌ ಅಂಪೈರ್‌, ಆರು ಬಾರಿ ಸರ್ವೀಸ್‌ ಜಡ್ಜ್‌ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ ಟೂರ್ನಿಯಲ್ಲಿಯೂ ಅಂಪೈರ್‌ ಆಗಿದ್ದರು.  ಪಿಬಿಎಲ್‌ನಲ್ಲಿ ಕಾರ್ಯನಿರ್ವಹಿಸಿದ ರಾಜ್ಯದ ಏಕೈಕ ಅಂಪೈರ್‌ ಯೋಗೇಶ್‌ ಎಂಬುದು ಗಮನಾರ್ಹ.

2010ರಲ್ಲಿ ಗ್ರೇಡ್‌–2 ಮತ್ತು 2013ರಲ್ಲಿ ಗ್ರೇಡ್–1 ಅಂಪೈರಿಂಗ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅವರು, 2009ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಐವಾಸ್‌ ವರ್ಲ್ಡ್‌್ ಗೇಮ್ಸ್‌, ಬಿಡಬ್ಲ್ಯುಎಫ್‌ನ ಇಂಡಿಯಾ ಸೂಪರ್‌ ಸೀರೀಸ್‌, ಟಾಟಾ ಓಪನ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಟೂರ್ನಿ, ಸೈಯದ್ ಮೋದಿ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿ ಸೇರಿದಂತೆ 120ಕ್ಕೂ ಹೆಚ್ಚು ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟ ಹಾಗೂ ಸ್ಥಳೀಯ ಟೂರ್ನಿಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡಿದ ಅನುಭವಿ.

‘ಪಿಬಿಎಲ್‌ನಲ್ಲಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಕಾರ್ಯನಿರ್ವಹಿಸಿದ ಅಂಪೈರ್‌ಗಳಿಗೆ ಮಣೆ ಹಾಕಲಾಗುತ್ತದೆ. ದೇಶದ ಬಹುತೇಕ ರಾಜ್ಯಗಳಲ್ಲಿ ನಿರ್ಣಾಯಕನಾಗಿ ಕರ್ತವ್ಯ ನಿರ್ವಹಿಸಿರುವ ಅನುಭವವಿದ್ದು, ನನ್ನಲ್ಲಿನ ಸಾಮರ್ಥ್ಯ ಗುರುತಿಸಿ, ಎರಡನೇ ತಲೆಮಾರಿನ ನಿರ್ಣಾಯಕರನ್ನು ರೂಪಿಸುವ ಉದ್ದೇಶದಿಂದ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ ಅವಕಾಶ ನೀಡುತ್ತಿದೆ’ ಎನ್ನುತ್ತಾರೆ ಯೋಗೇಶ್‌.

‘ಈ ಬಾರಿಯ ಪಿಬಿಎಲ್‌ನಲ್ಲಿ ಆಟವನ್ನು ಮತ್ತಷ್ಟು ರೋಚಕವಾಗಿಸುವ ನಿಟ್ಟಿನಲ್ಲಿ ಅಂಕಗಳನ್ನು 15ರ ಬದಲಿಗೆ 11ಕ್ಕೆ ಇಳಿಸಲಾಗಿದೆ. ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದ್ದಲ್ಲದೇ, ಖ್ಯಾತ ಆಟಗಾರರು ಆಡಿದ್ದರಿಂದ ಒತ್ತಡವಿತ್ತು. ಸ್ಕೋರ್‌ ಬೋರ್ಡ್‌ ನೋಡಿಕೊಳ್ಳುವುದರ ಜೊತೆಗೆ, ನಮ್ಮ ತಲೆಯ ಮೇಲೆ ಕ್ಯಾಮೆರಾ ಅಳವಡಿಸಲಾಗಿತ್ತು. ಇದರ ನಡುವೆ ಸ್ಥಳೀಯವಾಗಿ ಸಾಕಷ್ಟು ಪರಿಚಿತರು ಇದ್ದುದರಿಂದ ಒಂದು ತಪ್ಪು ನಿರ್ಣಯವೂ ನನ್ನನ್ನು ಮುಜುಗರಕ್ಕೆ ನೂಕುವ ಅಪಾಯವಿತ್ತು. ಆದರೆ, ಈ ಒತ್ತಡವನ್ನು ಮೀರಿ ನಿಂತಿದ್ದಕ್ಕೆ ಸಂತೋಷವಿದೆ’ ಎನ್ನುತ್ತಾರೆ ಅವರು.

ಮೂಲತಃ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಾನಾಪುರ ಗ್ರಾಮದ ಯೋಗೀಶ್‌, ದಶಕಗಳ ಹಿಂದೆಯೇ ಕಲಬುರ್ಗಿಯ ಆಳಂದ ಕಾಲೊನಿಗೆ ಬಂದು ನೆಲೆಸಿದ್ದಾರೆ. ಬ್ಯಾಡ್ಮಿಂಟನ್‌ ಆಟಗಾರನಾಗಿ ಮಿಂಚುವ ಆಸೆ ಹೊತ್ತು ರಾಕೆಟ್‌ ಹಿಡಿದಿದ್ದ ಅವರು ಆರ್ಥಿಕ ಸಮಸ್ಯೆಯಿಂದ ತನ್ನ ಆಸೆಯನ್ನು ಕೈಬಿಡಬೇಕಾ
ಯಿತು. ಇಷ್ಟಕ್ಕೆ ನಿರಾಸರಾಗದ ಅವರು ಮತ್ತೊಂದು ರೀತಿಯಲ್ಲಿ ಆಟದ ಭಾಗವಾಗುವ ಯೋಚನೆಯಲ್ಲಿದ್ದಾಗ ಕೈಹಿಡಿದಿದ್ದು ಕೋಚಿಂಗ್‌.

ತಾನೂ ಕಲಿಯುತ್ತಾ, ಇತರರಿಗೂ ಕಲಿಸುತ್ತಾ ಬೆಳೆದ ಯೋಗೇಶ್‌, ಅಭಿಷೇಕ್‌ ಸೋನರಕರ್‌, ಗೀತಾ ಸೋನರಕರ್‌, ರೋಹನ್‌, ರೋಹಿತ್‌, ಸುನಿಲ್ ಬಾವಿಮನಿರಂಥ ಆಟಗಾರರನ್ನು ರೂಪಿಸಿದ್ದಾರೆ. ಒಂದು ಹಂತ ದಾಟಿದ ನಂತರ ಅವರ ಶಿಷ್ಯ ಬಳಗ ವೃತ್ತಿಪರ ಕೋರ್ಸ್‌ಗಳತ್ತ ಮುಖ ಮಾಡಿದ್ದಾರೆ.  ಕಲಬುರ್ಗಿಯಲ್ಲಿ ಎರಡು ಬಾರಿ ರಾಷ್ಟ್ರೀಯ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್ ಹಾಗೂ ಈಚೆಗೆ ಮುಕ್ತಾಯವಾದ ರಾಜ್ಯ ರ್‍ಯಾಂಕಿಂಗ್ ಬ್ಯಾಡ್ಮಿಂಟನ್‌ ಟೂರ್ನಿಗಳು ಅವರಲ್ಲೊಬ್ಬ ಸಂಘಟನಕಾರ ಸಹ ಇದ್ದಾನೆ ಎಂಬುದನ್ನು ಪರಿಚಯಿಸಿವೆ.

‘ನಮ್ಮಲ್ಲಿ ಸಾಕಷ್ಟು ಸೌಕರ್ಯಗಳಿವೆ. ಆದರೆ, ಬಳಕೆ ಮಾಡಿಕೊಳ್ಳುವವರು ವಿರಳ. ಅದಕ್ಕಾಗಿ ದೊಡ್ಡ ಟೂರ್ನಿ ಆಯೋಜಿಸಿದರೆ ಅವುಗಳನ್ನು ವೀಕ್ಷಿಸಿ ತಮ್ಮ ಮಕ್ಕಳನ್ನು ಅದೇ ನಿಟ್ಟಿನಲ್ಲಿ ಪೋಷಕರು ಬೆಳೆಸಲು ಮುಂದಾಗುತ್ತಾರೆ ಎಂಬ ಆಶಯವಿದೆ’ ಎನ್ನುವುದು ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯ ಕಾರ್ಯಕಾರಿ ಸದಸ್ಯರೂ ಆದ ಯೋಗೀಶ್ ಅವರ ಅಭಿಮತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT