ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಪರಿಶ್ರಮವೇ ಕ್ರೀಡಾಕ್ಷೇತ್ರದ ಜೀವಾಳ

Last Updated 16 ಜನವರಿ 2017, 4:48 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಆಸಕ್ತಿ, ಪರಿಶ್ರಮದಿಂದ  ಕ್ರೀಡಾಕ್ಷೇತ್ರದಲ್ಲಿ ಹೆಸರು ಮಾಡಲು ಸಾಧ್ಯವೇ ಹೊರತು ಯಾವುದೇ ಶಿಫಾರಸು ಅಥವಾ ಇನ್ನಾರೊದೋ ಬೆಂಬಲದಿಂದ ಸಾಧ್ಯವಿಲ್ಲ’ ಎಂದು ಹೊಸದುರ್ಗ ಕುಂಚಿಟಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಬಸವ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹಳೆಯ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ ವಾಲಿಬಾಲ್ ಅಸೋಸಿಯೇನ್ ಮತ್ತು ರಾಜ್ಯ ವಾಲಿಬಾಲ್ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಿರುವ 43ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಪಂದ್ಯಾವಳಿಯ ಮೂರನೇ ದಿನವಾದ ಭಾನುವಾರ ಸಂಜೆಯ ಸಭಾ ಕಾರ್ಯಕ್ರಮದಲ್ಲಿ ‘ಚಾಂಪಿಯನ್‌ಷಿಪ್ ಟ್ರೋಪಿ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ರಾಜಕಾರಣದಲ್ಲಿ ಅಪ್ಪ, ಅಣ್ಣ, ಅಜ್ಜನ ಹೆಸರು ಹೇಳಿಕೊಂಡು ಮುಂದಿನ ಪೀಳಿಗೆಗಳು ಬೆಳವಣಿಗೆ ಕಾಣಬಹುದು. ಮಠ ಪೀಠಗಳಲ್ಲೂ ಸ್ವಾಮೀಜಿ ಅವರ ಕೃಪೆಯಿಂದ ಮುನ್ನಡೆಯಬಹುದು. ಆದರೆ ಕ್ರೀಡೆಯಲ್ಲಿ ಆ ಶಿಫಾರಸು ಪರಂಪರೆ ನಡೆಯುವುದಿಲ್ಲ. ಕ್ರೀಡಾಪಟುವಿಗೆ ಚಾಣಾಕ್ಷತನ, ಬುದ್ಧಿವಂತಿಕೆ, ಪರಿಶ್ರಮವಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದು ವಿಶ್ಲೇಷಿಸಿದರು.

‘ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದೆ.   ಕ್ರೀಡಾಪಟುಗಳಿಗೆ ಕೊರತೆಯಿಲ್ಲ. ಆದರೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಕಡಿಮೆ.  ಬಡತನದಿಂದ ಬಂದ ಪೀಟರ್ ಸನ್, ಮಹೇಂದ್ರಸಿಂಗ್ ದೋನಿಯಂಥ ಕ್ರೀಡಾಪಟುಗಳು  ವಿಶ್ವ ಖ್ಯಾತಿ ಪಡೆದಿದ್ದಾರೆ’ ಎಂದರು.

‘ಪಂದ್ಯಾವಳಿಗಳನ್ನು ನಡೆಸುವುದು ಸುಲಭವಲ್ಲ. ಅದಕ್ಕೆ ಅನೇಕ ಅಡ್ಡಿ ಆತಂಕಗಳಿರುತ್ತವೆ. ಪಂದ್ಯಗಳು ಮಾತ್ರವಲ್ಲ, ಸಭೆ ಸಮಾರಂಭಗಳನ್ನು ನಡೆಸುವುದು ಕಷ್ಟವಾಗಿದೆ. ಆದರೆ, ಒಳ್ಳೆ ಆಲೋಚನೆ, ಮನಸ್ಸು ಇದ್ದರೆ ಯಾವುದೇ ಅಡೆತಡೆಗಳು ಅಡ್ಡಿಯಾಗುವುದಿಲ್ಲ’ ಎಂದರು.

‘ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಚಿತ್ರದುರ್ಗದಲ್ಲಿ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್ ಪಂದ್ಯಾವಳಿ ಆಯೋಜಿಸಿ ಯಶಸ್ವಿಯಾಗಿದ್ದಾರೆ. ಕಲ್ಲಿನ ನಾಡು ಕಲೆ, ಪ್ರತಿಭೆ, ಕ್ರೀಡೆಯ ನಾಡಾಗಲಿ’ ಎಂದು ಹಾರೈಸಿದರು.

ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಮಾತನಾಡಿ, ‘ಕ್ರೀಡೆ, ಸಂಸ್ಕೃತಿಯನ್ನು ಜತೆಯಾಗಿ ತೆಗೆದುಕೊಂಡು ಹೋಗುವುದು ಅಪರೂಪ. ಇಂಥ ಕ್ರೀಡೆಯಿಂದ ಭಾರತವನ್ನು ಬೇರೆ ದೇಶಗಳು ನೋಡುವಂತಾಗಿದೆ. ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಪಡೆಯುವುದು ತುಂಬಾ ಕಡಿಮೆ. ಆದರೆ, ಇಂಥ ಪಂದ್ಯಾ ವಳಿಗಳಿಂದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್ ಟ್ರೋಪಿ’ಯನ್ನು ಅಮರ್‌ನಾರಾಯಣ್, ಶಾಂತವೀರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಮತ್ತಿತರರು ಅನಾವರಣ ಗೊಳಿಸಿದರು. ಇದಕ್ಕೂ ಮುನ್ನ ಅತಿಥಿಗಳು ಕ್ರೀಡಾಪಟುಗಳ ಸಹಯೋಗದಲ್ಲಿ ಟ್ರೋಫಿಗಳನ್ನು ವಾಲಿಬಾಲ್ ಪಂದ್ಯಾವಳಿ ನಡೆಯುವ ಅಂಕಣದ ಸುತ್ತಾ ಮೆರವಣಿಗೆ ಮಾಡಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಸೈಟ್‌ಬಾಬು, ರಾಕ್‌ಫೋರ್ಟ್ ಶಾಲೆಯ ದ್ಯಾಮಣ್ಣ, ಶಂಕರ್‌ಮೂರ್ತಿ, ನಾಗಣ್ಣ, ಸಿದ್ದಾಪುರ, ವಿ.ಜಿ.ಎಸ್.ರಾಜಣ್ಣ, ಚಿತ್ರ ನಿರ್ಮಾಪಕ ರೆಹಮಾನ್, ಹರೀಶ್ ಉಪಾಧ್ಯ, ಅನಿಲ್‌ಕುಮಾರ್, ಕಾರ್ತಿಕ್ ವೇದಿಕೆಯಲ್ಲಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಡಿ.ಎನ್.ಮೈಲಾರಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT