ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪ, ಪ್ರತ್ಯಾರೋಪದಲ್ಲಿ ವರ್ತಮಾನ

‘ಕರ್ನಾಟಕ ಏಕೀಕರಣ 60’ ವಿಚಾರ ಸಂಕಿರಣ
Last Updated 16 ಜನವರಿ 2017, 4:56 IST
ಅಕ್ಷರ ಗಾತ್ರ

ತುಮಕೂರು: ‘ಭೂತ ಕಾಲ ವೈಭವೀಕರಿಸಿ ವರ್ತಮಾನ ಕಾಲವನ್ನು ಆರೋಪ ಪ್ರತ್ಯಾರೋಪ ಮಾಡುವಲ್ಲಿ ಕಳೆಯುತ್ತಿದ್ದೇವೆ’ ಎಂದು  ಪಿಯುಸಿಎಲ್‌ ಕಾರ್ಯದರ್ಶಿ ದೊರೆರಾಜ್‌ ಕಳವಳ ವ್ಯಕ್ತಪಡಿಸಿದರು.

ನಗರದ ಸಿದ್ದಗಂಗಾ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್, ಪದವಿಪೂರ್ವ ಕಾಲೇಜು ಇತಿಹಾಸ ವೇದಿಕೆ ಆಯೋಜಿಸಿದ್ದ ‘ಕರ್ನಾಟಕ ಏಕೀಕರಣ 60’ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದು ನಾವು ವಿಘಟನೆಯ ಕಾಲಘಟ್ಟದಲ್ಲಿದ್ದೇವೆ. ದೇಶದಲ್ಲಿ ಆರ್ಥಿಕ, ಸಾಮ್ರಾಜ್ಯಶಾಹಿ ಆಡಳಿತ ನಡೆಯುತ್ತಿದೆ. ಸಮಕಾಲೀನ ವಿಘಟನೆಯನ್ನು ಸವಾಲಾಗಿ ಸ್ವೀಕರಿಸಬೇಕು. ಸಂಪತ್ತು ಅಧಿಕಾರ ಕೇಂದ್ರಿಕರಣವಾಗುತ್ತಿದೆ. ಇದನ್ನ ವಿಕೇಂದ್ರಿಕರಣ ಮಾಡಬೇಕಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಮಾನವರು ಮಾಡುತ್ತಿರುವ ದಾಳಿ ತಪ್ಪಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕನ್ನಡಪರ ಹೋರಾಟಗಾರ ರಾ.ನಂ. ಚಂದ್ರಶೇಖರ್‌ ಮಾತನಾಡಿ, ‘ಹರಿದು ಹಂಚಿ ಹೋಗಿದ್ದ ಕನ್ನಡಿಗರು ಒಂದಾಗಬೇಕು ಎಂದು ಆಡಳಿತ ದೃಷ್ಟಿಯಿಂದ ಬ್ರಿಟಿಷರು ಬಯಸಿದ್ದರು. ಆದರೆ ಮೈಸೂರು ಸಂಸ್ಥಾನದವರಿಗೆ ಇದು ಇಷ್ಟವಿರಲಿಲ್ಲ. ಚೆನ್ನಬಸಪ್ಪ ಮೊದಲ ಬಾರಿಗೆ ಗಟ್ಟಿಯಾದ ಧ್ವನಿಯಲ್ಲಿ ಕನ್ನಡ ಮಾತಾಡುವವರು ಒಂದಾಗಬೇಕು ಎಂದು ಪ್ರತಿಪಾದಿಸಿದರು.

1903ರಲ್ಲಿ ಬೆನಗಲ್‌ ರಾಮರಾವ್ ಅವರು ವಾಗ್ಭೂಷಣ ಪತ್ರಿಕೆಯ ಸಂಪಾದಕೀಯದಲ್ಲಿ ಕರ್ನಾಟಕ ಏಕೀಕರಣವಾಗಬೇಕು ಎಂಬ ಪದ ಬಳಸಿದರು. 1908 ರಲ್ಲಿ ಧಾರವಾಡದಲ್ಲಿ ಮೊದಲ ಕನ್ನಡಿಗರ ಸಮಾವೇಶ ನಡೆಯಿತು ಎಂದು ನೆನಪು ಮಾಡಿಕೊಂಡರು.

ಅಂದಾನಪ್ಪ ಮೇಟಿ, ಸಿದ್ದಪ್ಪಕಂಬಳಿ, ಕೆಂಗಲ್ ಹನುಂತಯ್ಯ  ಸೇರಿ ಸಾವಿರಾರು ಕನ್ನಡಿಗರ ಹೋರಾಟ  ಕರ್ನಾಟಕ ಏಕೀಕರಣಕ್ಕೆ ಕಾರಣವಾಯಿತು ಎಂದರು.

‘ ಕೆಂಗಲ್‌ ಹನುಂತಯ್ಯ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದರು ಮಾತ್ರವಲ್ಲದೆ ಏಕೀಕರಣಕ್ಕಾಗಿ ತಮ್ಮ ಅಧಿಕಾರಕಳೆದು ಕೊಂಡ ಏಕೈಕರು’ ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇತಿಹಾಸ ಪ್ರಾಧ್ಯಾಪಕ ಡಿ.ಎನ್.ಯೋಗೀಶ್ವರಪ್ಪ, ಸಿ.ಯತಿರಾಜು, ಕೆಂಕೆರೆ ಹನುಮಂತೇಗೌಡ ಉಪನ್ಯಾಸ ನೀಡಿದರು. ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್‌. ರೇವಣ್ಣ, ಸಿದ್ದಗಂಗಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಉಮಾದೇವಿ, ಉಪನ್ಯಾಸಕ ಲಿಂಗರಾಜಪ್ಪ, ಗರಿಕೆ ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT