ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿ ಹಾವಳಿ: ನಾಗರಿಕರ ಆತಂಕ

ನಿಯಂತ್ರಣ ಕ್ರಮಕ್ಕೆ ಗೊಂದಲದಲ್ಲಿ ನಗರಸಭೆ; ಟೆಂಡರ್ ಕರೆದರೂ ಸಿಗದ ಸ್ಪಂದನೆ
Last Updated 16 ಜನವರಿ 2017, 5:19 IST
ಅಕ್ಷರ ಗಾತ್ರ

ಮಂಡ್ಯ: ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ನಿಯಂತ್ರಿಸಬೇಕು ಎಂಬ ಕೂಗು ಸಾರ್ವಜನಿಕರಿಂದ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ.
ಆದರೆ, ನಗರಸಭೆ ಹಾವಳಿ ನಿಯಂತ್ರಿಸಲು ಮಾಡಿದ ಯತ್ನಗಳಿಗೂ ಫಲ ಸಿಗದ್ದರಿಂದ ಮುಂದೇನು ಮಾಡಬೇಕು ಎಂಬ ಗೊಂದಲದಲ್ಲಿದೆ.

ನಾಯಿಗಳನ್ನು ನಿಯಂತ್ರಿಸಬೇಕು ಎಂದು ನಗರಸಭೆಯ ಸಾಮಾನ್ಯಸಭೆ ಹಾಗೂ ಹೊರಗಡೆ ಮೂರು ವರ್ಷಗಳಿಂದ  ಜನರಿಂದ ಒತ್ತಾಯವಿದೆ.
ನಾಯಿ ಕಡಿತದಿಂದ ಆಗಾಗ ಜನರು ಆಸ್ಪತ್ರೆಗೆ ದಾಖಲಾಗುತ್ತಲೇ ಇದ್ದಾರೆ. ಪ್ರಮುಖ ರಸ್ತೆಗಳೂ ಸೇರಿ ಎಲ್ಲೆಡೆ ನಾಯಿಗಳ ಹಿಂಡು ಕಾಣಬಹುದಾಗಿದೆ.

ಕೆಲವೆಡೆ ರಸ್ತೆ ಮಧ್ಯೆ ಮಲಗಿರುತ್ತವೆ. ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಚಾಲನೆ ಮಾಡುವ ಸ್ಥಿತಿ ಇದೆ. ಹೋಟೆಲ್‌ಗಳ ಮೇಲಿಲ್ಲ ನಿಯಂತ್ರಣ: ಹೋಟೆಲ್‌, ರಸ್ತೆ ಬದಿಯ ಆಹಾರದ ಅಂಗಡಿಗಳ ಮೇಲೆ ನಿಯಂತ್ರಣ ಇಲ್ಲದಿರುವುದೂ ಬೀದಿಗಳಲ್ಲಿ ನಾಯಿಗಳ ಸಂತತಿ ಹೆಚ್ಚಲು ಕಾರಣವಾಗಿದೆ.

ಸಸ್ಯಾಹಾರ, ಮಾಂಸಾಹಾರ ಮಾರುವ, ರಸ್ತೆ ಬದಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕುತ್ತಾರೆ. ಅದೇ ನಾಯಿಗಳಿಗೆ ಆಹಾರವಾಗಿದೆ. ಅದನ್ನು ತಿಂದ ನಾಯಿಗಳು ಆಹಾರವಿಲ್ಲದಾಗ ಜನರ ಮೇಲೆ ಮುಗಿ ಬೀಳುತ್ತಿವೆ.

ವಾಹನಗಳಿಗೆ ದುಂಬಾಲು: ಕೆಲವೆಡೆ ವಾಹನಗಳಲ್ಲಿ ಹೊರಟರೆ ಅವುಗಳ ಹಿಂದೆಯೇ ನಾಯಿಗಳು ದುಂಬಾಲು ಬೀಳುತ್ತವೆ. ದ್ವಿಚಕ್ರ ವಾಹನ ಚಾಲಕರು ಗಾಬರಿಯಾಗಿ ಬಿದ್ದಿರುವ ಉದಾಹರಣೆಗಳೂ ಸಾಕಷ್ಟಿವೆ. ಕೆಲವರು ನಾಯಿಗಳ ಹಾವಳಿಯಿಂದ ಮಾರ್ಗ ಬದಲಿಸಿದ್ದಾರೆ.

ಪಾದಚಾರಿಗಳಿಗೆ ಕಷ್ಟ:  ಮಂಡ್ಯದಲ್ಲಿ ಪಾದಚಾರಿಗಳ ಕಷ್ಟ ಹೇಳತೀರದಾಗಿದೆ. ಬಹುತೇಕರು ನಾಯಿಗಳಿವೆಯೇ ಎಂದು ನೋಡಿಯೇ ರಸ್ತೆಗಿಳಿಯಬೇಕು.
ಹಿಂಡು, ಹಿಂಡಾಗಿ ತಿರುಗುವ ನಾಯಿಗಳನ್ನು ನೋಡಿದಾಗ ಒಂದು ಕ್ಷಣ ಮನದಲ್ಲಿ ಭಯ ಮೂಡಲಿದೆ. ತಡ ರಾತ್ರಿ ಬರುವವರು ಮನೆಗಳಿಗೆ ನಡೆದು ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಅಸಹಾಯಕ ನಗರಸಭೆ
ಮಂಡ್ಯ:  ಬೀದಿ ನಾಯಿ ನಿಯಂತ್ರಣ ಕುರಿತು ನಗರಸಭೆಯು ಅಸಹಾಯಕ ಸ್ಥಿತಿಯಲ್ಲಿ ಇದೆ. ಎರಡು ವರ್ಷದ ಹಿಂದೆ ಕೆಲ ಬೀದಿನಾಯಿಗಳು ಸಾವನ್ನಪ್ಪಿದ್ದವು. ಆಗ ಕೆಲ ಪ್ರಾಣಿ ಪ್ರೇಮಿಗಳು, ನಗರ ಸಭೆಯಿಂದಲೇ ಹೊಡೆದು ಸಾಯಿಸಲಾಗಿದೆ ಎಂದು ಕೂಗು ಹಾಕಿದರು. ಈ ಕುರಿತು ಕೇಂದ್ರದ ಸಚಿವರಿಗೂ ದೂರು ನೀಡಲಾಯಿತು.

ಆಗಿನ ಅಧ್ಯಕ್ಷರ ವಿರುದ್ಧ ದೂರು ದಾಖಲಾಯಿತು. ಅವುಗಳನ್ನು ಹಿಡಿದು ಬೇರೆಡೆ ಸಾಗಿಸಲು ಅನುಮತಿ ಇಲ್ಲ. ನಗರಸಭೆ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಬಗ್ಗೆ ಐದು ಬಾರಿ ಟೆಂಡರ್‌ ಕರೆದಿದೆ.

ಆದರೆ, ಯಾರೂ ಭಾಗವಹಿಸುತ್ತಿಲ್ಲ. ಇದರಿಂದಾಗಿ ಬೀದಿ ನಾಯಿಗಳ ನಿಯಂತ್ರಣ ಹೇಗೆ ಎಂಬ ಗೊಂದಲ ವನ್ನು ಎದುರಿಸುತ್ತಿದೆ. ಶಸ್ತ್ರಚಿಕಿತ್ಸೆ ನೀಡುತ್ತಿದ್ದ ದರ ಕಡಿಮೆ ಇದ್ದದ್ದರಿಂದ ಯಾರೂ ಗುತ್ತಿಗೆ ಪಡೆಯಲು ಮುಂದೆ ಬರುತ್ತಿರಲಿಲ್ಲ. ಈಗ ಹೆಚ್ಚಳವಾಗಿದೆ. ಈ ಬಾರಿ ಬರಬಹುದು ಎಂಬ ವಿಶ್ವಾಸ ನಗರಸಭೆಯ ಅಧಿಕಾರಿಗಳದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT