ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ನೀರಿನಲ್ಲಿ ಬೆಳೆದ ಜಾನುವಾರು ಮೇವು

ಅಮಾನಿ ಕೆರೆಯಲ್ಲಿ ಒಳಚರಂಡಿ ನೀರು
Last Updated 16 ಜನವರಿ 2017, 5:25 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದ ಹೊರ ವಲಯದ ಅಮಾನಿ ಕೆರೆಯಲ್ಲಿ ಕೆಲವರು ಒಳಚರಂಡಿ ನೀರು ಹರಿಸಿ ಜಾನುವಾರು ಮೇವು ಬೆಳೆದಿದ್ದಾರೆ. ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಜೋಳದ ದಂಟು ಬರಗಾಲದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸೀಮೆ ಹಸುಗಳ ಹಸಿವು ನೀಗುತ್ತಿದೆ.

ಕೆರೆಯಂಚಿನಲ್ಲಿ ನಿರ್ಮಿಸಲಾಗಿರುವ ರಸ್ತೆ ಪಕ್ಕದಲ್ಲಿಯೇ ಪಟ್ಟಣದ ಕೊಳಚೆ ನೀರನ್ನು ಹೊರಗೆ ಸಾಗಿಸುವ ದೊಡ್ಡ ಪೈಪ್‌ ಲೈನ್‌ ಹೋಗಿದೆ. ಕೆಲವರು ಪೈಪ್‌ಗೆ ಅಳವಡಿಸಲಾಗಿರುವ ಛೇಂಬರ್‌ಗಳಿಂದ ಹೊರಬಂದ ನೀರನ್ನು ಪೈಪ್‌ ಮೂಲಕ ಮೇವಿನ ಬೆಳೆಗೆ ಹರಿಸಿದರೆ, ಇನ್ನು ಕೆಲವರು ನೇರವಾಗಿ ಛೇಂಬರ್‌ಗೆ ಪೈಪ್‌ ಬಿಟ್ಟು ಡೀಸೆಲ್‌ ಪಂಪ್‌ಸೆಟ್‌ ಬಳಸಿ ಬೆಳೆಗೆ ನೀರು ಹರಿಸುತ್ತಿದ್ದಾರೆ.

ಅದು ಕೊಳಚೆ ನೀರಾಗಿರುವುದರಿಂದ ಮೇವಿನ ಬೆಳೆ ಹುಲುಸಾಗಿ ಬೆಳೆದಿದೆ. ಹೆಚ್ಚು ವಿಸ್ತೀರ್ಣದಲ್ಲಿ ಬೆಳೆದಿರುವುದರಿಂದ ರೈತರಿಗೆ ಖರೀದಿಸಲು ಮೇವು ಸಿಗುತ್ತಿದೆ.

ಮೇವು ಬೆಳದಿರುವ ರೈತರಲ್ಲಿ ಕೆಲವರು ಮೇವನ್ನು ತಮ್ಮ ಜಾನುವಾರು ಪಾಲನೆಗೆ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಮಾರಾಟಕ್ಕೆಂದೇ ಬೆಳೆದಿದ್ದಾರೆ. 25 ಗಜ ಉದ್ದ ಹಾಗೂ 5 ಗಜ ಅಗಲದ ವಿಸ್ತ್ರೀರ್ಣದಲ್ಲಿ ಬೆಳೆಯಲಾಗಿರುವ ಜೋಳದ ದಂಟು ₹ 5 ಸಾವಿರದಂತೆ ಮಾರಾಟವಾಗುತ್ತಿದೆ ಎಂದು ಮೇವು ಬೆಳೆಗಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಳ ಚರಂಡಿ ನೀರನ್ನು ಬಳಸಿಕೊಳ್ಳುವುದರ ಬಗ್ಗೆ ಪುರಸಭೆ ಆಕ್ಷೇಪಣೆ ಎತ್ತಿದೆ. ಕೊಳಚೆ ನೀರನ್ನು ಅಕ್ರಮವಾಗಿ ಬಳಸದಂತೆ ಎಚ್ಚರಿಕೆ ನೀಡಿದೆ. ಆದರೆ ಬರದ ಬವಣೆ ಅನುಭವಿಸುತ್ತಿರವ ರೈತರಿಗೆ ಇಲ್ಲಿ ಬೆಳೆಯಲಾಗಿರುವ ಹಸಿರು ಮೇವು ಸಂಜೀವಿನಿಯಾಗಿದೆ ಎಂದು ಮೇವು ಖರೀದಿಸಲು ಬರುವ ರೈತರು ಅಭಿಪ್ರಾಯಪಟ್ಟಿದ್ದಾರೆ.

ಹತ್ತಿರದ ಗ್ರಾಮ ಹಾಗೂ ಪಟ್ಟಣದ ರೈತರು ಕೆರೆಯಲ್ಲಿ ಬೆಳೆಯಲಾಗಿರುವ ಮೇವನ್ನು ಪೆಡೆಗಳ ಲೆಕ್ಕದಲ್ಲಿ ಖರೀದಿಸಿ, ಪ್ರತಿ ದಿನ ಬೆಳಿಗ್ಗೆ ಅಗತ್ಯವಿರುವಷ್ಟನ್ನು ಕೊಯ್ದು ಕೊಂಡೊಯ್ಯುತ್ತಾರೆ. ದೂರದ ಗ್ರಾಮಗಳಿಂದ ಬಂದು ಮೇವು ಖರೀದಿಸುವ ರೈತರು, ಕೊಯ್ದು ಟ್ರ್ಯಾಕ್ಟರ್‌ಗಳಲ್ಲಿ ಹೇರಿಕೊಂಡು ಹೋಗುತ್ತಿದ್ದಾರೆ. ಕೆಲವು ರೈತರು ಒಟ್ಟಾಗಿ ಮೇವು ಕೊಂಡು ಹಂಚಿಕೊಳ್ಳುತ್ತಾರೆ.

ನೀರಿನ ಅನುಕೂಲ ಇರುವ ರೈತರು ಬರಗಾಲದಲ್ಲಿ ಜಾನುವಾರು ಜೀವ ಉಳಿಸಲು ಹಸಿರು ಮೇವು ಬೆಳೆಯುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ.ತ್ರಿಲೋಕಚಂದ್ರ ಅವರು ಸಲಹೆ ಮಾಡಿದ ಬಳಿಕ, ಕಂದಾಯ ಹಾಗೂ ಪಶುಪಾಲನೆ ಇಲಾಖೆಯ ಅಧಿಕಾರಿಗಳು ಅಗತ್ಯ ಇರುವ ರೈತರಿಗೆ ಬಿತ್ತನೆ ಮಾಡಲು ಉಚಿತವಾಗಿ ಹುಲ್ಲಿನ ಬೀಜ ವಿತರಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಣ್ಗಾವಲಿನ ನಡುವೆ ಗ್ರಾಮೀಣ ಪ್ರದೇಶದ ರೈತರು ತರಕಾರಿ ಬೆಳೆಗಳ ಪಕ್ಕದಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ಹಸಿರು ಹುಲ್ಲು ಬೆಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT