ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರಮಿಕ ವರ್ಗದ ಉದ್ಧಾರಕ ಸಿದ್ದರಾಮೇಶ್ವರ’

Last Updated 16 ಜನವರಿ 2017, 6:46 IST
ಅಕ್ಷರ ಗಾತ್ರ

ಸುರಪುರ:  ‘12ನೇ ಶತಮಾನದ ಶ್ರೇಷ್ಠ ಶರಣರಲ್ಲಿ ಒಬ್ಬರಾಗಿರುವ ಶಿವಯೋಗಿ ಸಿದ್ದರಾಮೇಶ್ವರರು ಎಲ್ಲ ಸಮುದಾಯಗಳ ಮನ್ನಣೆಗೆ ಪಾತ್ರರಾಗಿದ್ದಾರೆ. ಕಾಯಕದಿಂದ ಯೋಗತ್ವ ಸಾಧಿಸಿದ ಅವರು ಶ್ರಮಿಕ ವರ್ಗದ ಉದ್ಧಾರಕರು’ ಎಂದು ಭೋವಿ ಸಮಾಜದ  ಮುಖಂಡ ಡಿ. ರಂಗನಾಥ ಕೆಂಭಾವಿ ಹೇಳಿದರು.

ನಗರದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ 845ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಸಿದ್ದರಾಮೇಶ್ವರರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪಗಳಾಗಿವೆ. ಸಾಮಾಜಿಕ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಜೀವನಕ್ಕೆ ಹೊಸ ಆಯಾಮಗಳನ್ನು ಒದಗಿಸಿಕೊಟ್ಟರು. ಕಾಯಕದಿಂದ ಯೋಗತ್ವ ಸಾಧಿಸಿ ಶ್ರೇಷ್ಠ ಶರಣರೆನಿಸಿದರು’ ಎಂದು ತಿಳಿಸಿದರು.

ಉಪನ್ಯಾಸಕ ವೆಂಕಟೇಶ ಅಮ್ಮಾಪುರಕರ ಮಾತನಾಡಿ, ‘ಶಿವಯೋಗಿ ಸಿದ್ದರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿದ್ದು, ಇವುಗಳ ಪೈಕಿ 1379 ವಚನಗಳು ಲಭ್ಯವಿದೆ. ಅವರ ವಚನಗಳು ಮೌಢ್ಯತೆ, ಕಂದಾಚಾರ, ಜಾತೀಯತೆ ಇತರ ಅನಿಷ್ಟಗಳನ್ನು ನಿರ್ಮೂಲನೆಗೊಳಿಸಿ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಕೆರೆ, ಬಾವಿ ನಿರ್ಮಾಣದ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು. ಸಾಮೂಹಿಕ ವಿವಾಹ ಏರ್ಪಡಿಸಿ ಅದರ ಪರಿಕಲ್ಪನೆ ಮೂಡಿಸಿದ ಮಹಾ ಮಾನವತಾವಾದಿ. ಇಂತಹ ಶರಣರ ವಚನಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುವ ಅಗತ್ಯವಿದೆ. ಅವರ ಜೀವನ, ವಚನ ಸಾಹಿತ್ಯ, ದಾಸೋಹ, ಕಾಯಕ ಜೀವನದ ಕುರಿತು ಅಧ್ಯಯನ ಪೀಠ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

‘ವಡ್ಡರ ಸಮೂದಾಯ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ, ಸಿದ್ದರಾಮೇಶ್ವರರ ಆಶಯದಂತೆ ಸಮಾಜದ ಮುಖ್ಯ ವಾಹಿನಿಗೆ ಬಂದು, ಎಲ್ಲಾ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಕ್ಕೇರಬೇಕು. ಅವರ ಚಿಂತನೆಗಳನ್ನು ಅಳವಡಿಸಿಕೊಂಡು, ಅವರ ಕನಸು ಸಾಕಾರಗೊಳಿಸಬೇಕು’ ಎಂದು ಕರೆ ನೀಡಿದರು.
 
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಸುರೇಶ ಅಂಕಲಗಿ ಮಾತನಾಡಿ, ‘ಶಿವಯೋಗಿ ಸಿದ್ದರಾಮೇಶ್ವರರ ವಿಚಾರಧಾರೆಗಳು ಸರ್ವಕಾಲಿಕ ಸತ್ಯ. ಅವರ ಸೇವೆಗೈದ ಅನೇಕ ಸಾಮಾಜಿಕ ಕಾರ್ಯಗಳು ಇಂದಿಗೂ ಸಮಾಜದ ಜನಮನದಲ್ಲಿ ನೆಲೆ ನಿಂತಿವೆ. ನಾವೆಲ್ಲ ಅವರ ವಿಚಾರಧಾರೆಗಳನ್ನು ಅನುಸರಿಸಿ ಸನ್ಮಾರ್ಗದಲ್ಲಿ ನಡೆಯಬೇಕು’ ಎಂದು ಸಲಹೆ ನೀಡಿದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಆರ್.ಎಫ್.ದೇಸಾಯಿ ಮಾತನಾಡಿ, ‘ಸಿದ್ದರಾಮೇಶ್ವರ ಸೇರಿದಂತೆ ಎಲ್ಲ ಶರಣರು ಒಂದು ಜಾತಿಗೆ ಸೀಮಿತವಾದವರಲ್ಲ. ಅವರು ಎಲ್ಲ ಜಾತಿ ಜನಾಂಗದ ಆದರ್ಶ ಪುರುಷರು. ವಡ್ಡರ ಸಮುದಾಯ ಸಿದ್ದರಾಮೇಶ್ವರರ ಸಂದೇಶಗಳನ್ನು ಪಾಲಿಸಿ ಮುಂದೆ ಬರಬೇಕು’ ಎಂದು ಕರೆ ನೀಡಿದರು. 

ನಗರಸಭೆ ಅಧ್ಯಕ್ಷೆ ಜ್ಯೋತಿ ವೆಂಕಟರಡ್ಡಿ ಬೋಯಿ ಜಯಂತ್ಯುತ್ಸವ ಉದ್ಘಾಟಿಸಿದರು. ಗ್ರೇಡ್‌ 2 ತಹಶೀಲ್ದಾರ್ ಸುಫೀಯಾ ಸುಲ್ತಾನ್, ನಗರಸಭೆ ಸದಸ್ಯರಾದ ಮನೋಹರ ಕುಂಟೋಜಿ, ಅಬ್ದುಲ ಕಲೀಂ ಜಹಗೀರದಾರ್, ದಾವುಲಸಾಬ್ ಚಿಟ್ಟಿವಾಲೆ, ಶಿವು ಎಲಿಗಾರ, ಪೌರಾಯುಕ್ತ ದೇವಿಂದ್ರ ಹೆಗ್ಗಡೆ, ವ್ಯವಸ್ಥಾಪಕ ಯಲ್ಲಪ್ಪನಾಯಕ, ಉಪ ಖಜಾನಾಧಿಕಾರಿ ಮಂಗಲಕುಮಾರ ಗುಡುಗುಂಟಿ, ಮುಖಂಡರಾದ ನಾಗಪ್ಪ ಕಟ್ಟಿಮನಿ, ಹಣಮಂತ ಕೊದ್ದಡ್ಡಿ, ನಾಗೇಶ ಪೂಜಾರಿ, ಆನಂದಕುಮಾರ ಅಮ್ಮಾಪುರಕರ್, ನಾಗಪ್ಪ ಜಾಲಹಳ್ಳಿ, ಲಚ್ಚಪ್ಪ ವಡ್ಡರ್, ಭೀಮಣ್ಣ, ಶಿವಪ್ಪ ಕುಪಗಲ್, ಮರೆಪ್ಪ ಗೊಬ್ಬೂರು, ಉಸ್ತಾದ್ ವಜಾಹತ್ ಹುಸೇನ್, ವೆಂಕಟೇಶ ಭಕ್ರಿ ಇದ್ದರು.

ಕಂದಾಯ ನಿರೀಕ್ಷಕ ಅಣವೀರಪ್ಪ ಸ್ವಾಗತಿಸಿದರು. ಹಣಮಂತ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ರವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT