ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆಗಳು, ಸಂಚಾರಕ್ಕೆ ಅಡಚಣೆ

ವಿವಿಧೆಡೆ ಕೇಬಲ್‌ ಅಳವಡಿಕೆಗಾಗಿ ರಸ್ತೆ ಅಗೆತ; ನಾಲ್ಕಾರು ತಿಂಗಳಾದರೂ ಮುಗಿಯದ ಅಭಿವೃದ್ಧಿ ಕಾಮಗಾರಿ
Last Updated 16 ಜನವರಿ 2017, 7:17 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದು, ಸಾರ್ವಜನಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.
ಕಾಮಗಾರಿಗಳು ಬೇಗ ಮುಗಿಯುವ ಸೂಚನೆಗಳು ಕಾಣುತ್ತಿಲ್ಲ. ಇದರಿಂದ ನಗರದ ಸಂಚಾರ ಸಮಸ್ಯೆಗಳು ಹಾಗೆಯೇ ಉಳಿದಿವೆ.

 ವಿದ್ಯುತ್‌ ಕೇಬಲ್‌ ಅಳವಡಿಕೆ ಕಾರ್ಯ ಆರಂಭವಾಗಿ ವರ್ಷ ಕಳೆದರೂ ಇಂದಿಗೂ ರಸ್ತೆ ಅಗೆಯುವ ಕಾರ್ಯ ಪೂರ್ಣಗೊಂಡಿಲ್ಲ. ಅಗೆದ ರಸ್ತೆಯನ್ನು ಮತ್ತೆ ಸರಿಪಡಿಸಲಾಗುತ್ತಿಲ್ಲ. ಇದರಿಂದ ನಗರದಲ್ಲಿ ಸಂಚಾರಕ್ಕೆ ಈಗ ಸಂಚಕಾರ ಎದುರಾಗಿದೆ.

ನಗರದ ಬಹುತೇಕ ಕಡೆಗಳಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ರಸ್ತೆ ಅಗೆದು ಕೇಬಲ್‌ ಹಾಕುವ ಕೆಲಸವೂ ಸಾಗಿದೆ. ಒಂದು ಕೆಲಸ ಮುಗಿಯಿತು ಎನ್ನುವುದ ರೊಳಗೆ ಇನ್ನೊಂದು ಕೆಲಸ ಆರಂಭ ವಾಗುವುದರಿಂದ, ಹದಗೆಟ್ಟ ರಸ್ತೆಗಳಲ್ಲಿಯೇ ಸಂಚರಿಸುವ ಅನಿವಾರ್ಯ ಸಾರ್ವಜನಿಕರದಾಗಿದೆ.

‘ಹದಗೆಟ್ಟ ರಸ್ತೆಗಳಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ಪರದಾಡುತ್ತಿರುವಾಗಲೇ ಹೆಸ್ಕಾಂನವರು ಕೇಬಲ್‌ಗಳನ್ನು ಅಳವಡಿಸಲು ರಸ್ತೆಗಳನ್ನು ಅಗೆಯುತ್ತಿರುವುಇದು ಅಡಚಣೆಯಾಗಿ ಪರಿಣಮಿಸಿದೆ. ಬೇಕಾಬಿಟ್ಟಿ ರಸ್ತೆ ಅಗೆತದಿಂದ ಬಹುತೇಕ ಕಡೆ ಚರಂಡಿ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಈ ಕಾಮಗಾರಿಗಳು ಆರಂಭವಾಗಿ ವರ್ಷ ಕಳೆದರೂ ಮುಗಿಯುವ ಸೂಚನೆಗಳು ಕಾಣುತ್ತಿಲ್ಲ. ಜನರಿಗೆ ಸಮಸ್ಯೆ ತಪ್ಪುತ್ತಿಲ್ಲ’ ಎನ್ನುವ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಅಪಾಯಕ್ಕೆ ಆಹ್ವಾನ: ಜನದಟ್ಟಣೆಯ ಪ್ರದೇಶಗಳಾದ ಕಾಕತಿ ವೇಸ್‌, ಶನಿವಾರ ಕೂಟ, ನಾರ್ವೇಕರ ಗಲ್ಲಿ, ವಿವೇಕಾನಂದ ಮಾರ್ಗ, ಕಚೇರಿ ರಸ್ತೆ, ಗವಳಿ ಗಲ್ಲಿ, ಲಿಂಗರಾಜ ವೃತ್ತ, ಬಡಕಲ ಗಲ್ಲಿ, ಶೆಟ್ಟಿಗಲ್ಲಿ, ಚವಾಟ ಗಲ್ಲಿ ಸೇರಿದಂತೆ ಎಲ್ಲ ಕಡೆ ಈಗ ಹದಗೆಟ್ಟ ರಸ್ತೆ, ಬಾಯ್ತೆರೆದ ಗುಂಡಿಗಳು ಕಾಣ ಸಿಗುತ್ತಿವೆ. ಇದು ಅಪಾಯಕ್ಕೆ ಆಹ್ವಾನವನ್ನೂ ನೀಡುತ್ತಿದೆ.

ಖಡೇಬಜಾರದ ಪೊಲೀಸ್‌ ಠಾಣೆಯ ಎದುರು ಅಗೆದ ನೆಲಕ್ಕೆ ಮಣ್ಣು ಹಾಕದ್ದರಿಂದ ರಸ್ತೆ ಮಧ್ಯದಲ್ಲಿಯೇ ನೆಲ ಕುಸಿದು, ದೊಡ್ಡ ಗುಂಡಿ ಬಿದ್ದಿದೆ. ಅಗೆದಿರುವ ಬಹುತೇಕ ಎಲ್ಲ ರಸ್ತೆಗಳಲ್ಲೂ ಇಂಥದೇ ಸನ್ನಿವೇಶ ಗೋಚರಿಸುತ್ತಿದೆ. ಈ ರಸ್ತೆಗಳಲ್ಲಿ ಕೊಂಚ ಆಯ ತಪ್ಪಿದರೂ, ಎಚ್ಚರ ವಹಿಸದಿದ್ದರೂ ಬಿದ್ದು ಕಾಲು ಮುರಿದುಕೊಳ್ಳಬೇಕಾಗುತ್ತದೆ ಎಂಬ ಆತಂಕವನ್ನು ಈ ಭಾಗದಲ್ಲಿ ನಿತ್ಯ ಸಂಚರಿಸುವ ಹಿರಿಯರಾದ ವಿವೇಕ ಜಾಧವ ಹೇಳಿದರು.

ಕಾಮಗಾರಿಗೆ ಸಮರ್ಥನೆ: ವಿದ್ಯುತ್‌ ಲೈನ್‌ಗಳನ್ನು ಭೂಗತಗೊಳಿಸುವ ಕಾರ್ಯ ಈಗಾಗಲೇ ಶೇ. 60ರಷ್ಟು ಮುಗಿದಿದೆ. ಬರುವ ಆರೇಳು ತಿಂಗಳಲ್ಲಿ ಅಂದರೆ ಮಳೆಗಾಲ ಆರಂಭದ ಮೊದಲು ಈ ಕಾರ್ಯ ಮುಗಿಸುವ ಯೋಜನೆ ಇದೆ. ಆ ನಿಟ್ಟಿನಲ್ಲಿ ಕೆಲಸಗಳನ್ನು ಚುರುಕುಗೊಳಿಸಲಾಗಿದೆ. ಅಲ್ಲಲ್ಲಿ ಜನರಿಗೆ ಅಡಚಣೆಯಾಗುತ್ತಿದೆ. ಆದರೆ, ರಸ್ತೆ ಅಗೆಯದೆ ಕೆಲಸ ಮಾಡುವುದಾದರೂ ಹೇಗೆ ಎಂಬ ಸಮರ್ಥನೆ ಹೆಸ್ಕಾಂ ಅಧಿಕಾರಿಗಳಿಂದ ಬರುತ್ತಿದೆ.

ಅಗೆದ ರಸ್ತೆಯಲ್ಲಿ ಮೊದಲು ಮಣ್ಣಿನಿಂದ ಸಮತಟ್ಟುಗೊಳಿಸಲಾಗುತ್ತಿದೆ. ಅದು ಗಟ್ಟಿಯಾದ ಬಳಿಕ ಕಲ್ಲು, ಕಡಿ ಹಾಕಿ ಡಾಂಬರು ಹಾಕಿ ಸರಿಪಡಿಸಲಾಗುತ್ತದೆ. ಕೆಲ ಕಡೆ ನೆಲ ಅಗಿಯುವಾಗ ಚರಂಡಿಗಳು ಒಡೆದು ನೀರು ರಸ್ತೆಗೆ ಬರುತ್ತಿದೆ. ತಕ್ಷಣ ಅದನ್ನು ಸರಿಪಡಿಸಲಾಗುತ್ತಿದೆ.

ಸಾರ್ವಜನಿಕರಿಗೆ ತೊಂದರೆ ಆಗದಂತೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ತ್ವರಿತಗತಿಯಲ್ಲಿ ಕೆಲಸ ಮಾಡಲಾಗತ್ತಿದೆ ಎಂದು ಲಿಂಗರಾಜ ವೃತ್ತದಲ್ಲಿ ಕೇಬಲ್‌ ಅಳವಡಿಕೆ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕ ಗಣೇಶ ಅನಗೋಳಕರ ಹೇಳಿದರು.

‘ಕಂಬಗಳು, ತಲೆ ಮೇಲೆ ತೂಗುವ ವೈರ್‌ಗಳ ತೊಂದರೆ ಬೇಡ ಎಂಬ ಕಾರಣದಿಂದ ವಿದ್ಯುತ್‌ ಪ್ರವಾಹದ ಕೇಬಲ್‌, ವೈರ್‌ಗಳನ್ನು ನೆಲದೊಳಗೆ ಅಳವಡಿಸಲಾಗುತ್ತಿದೆ. ದೀರ್ಘಾವಧಿ ಬಾಳಿಕೆ ಬರುವಂತೆ ಕೆಲಸ ಮಾಡಬೇಕಾಗುತ್ತದೆ. ಅದರಿಂದ ಕೆಲಸದಲ್ಲಿ ಸ್ವಲ್ಪ ವಿಳಂಬವಾಗುತ್ತಿದೆ.

ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಳ ಅಧಿವೇಶನದಿಂದ ಈ ಕಾರ್ಯ ಸ್ಥಗಿತಗೊಂಡಿತ್ತು. ಈಗ ಮತ್ತೆ ಚುರುಕಾಗಿದೆ. ಬರುವ ಮಳೆಗಾಲದ ಒಳಗೆ ನೆಲದೊಳಗೆ ಕೇಬಲ್‌ ಅಳವಡಿಸುವ ಕಾರ್ಯ ಪೂರ್ಣಗೊಳಿಸುವ ಉದ್ದೇಶ ಇದೆ. ಸಾರ್ವಜನಿಕರಿಗೆ ತೀವ್ರ ಅಡಚಣೆ ಉಂಟಾದಲ್ಲಿ ತಕ್ಷಣ ಸರಿಪಡಿಸಲಾಗುತ್ತದೆ’ ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಬಬಲೇಶ್ವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
–ಆರ್‌.ಎಲ್‌. ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT