ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ: ಆಲಮಟ್ಟಿ ಉದ್ಯಾನಕ್ಕೆ ಜನರ ಲಗ್ಗೆ

ಒಂದೇ ದಿನ ₹ 2 ಲಕ್ಷಕ್ಕೂ ಅಧಿಕ ಸಂಗ್ರಹ
Last Updated 16 ಜನವರಿ 2017, 8:28 IST
ಅಕ್ಷರ ಗಾತ್ರ

ಆಲಮಟ್ಟಿ(ನಿಡಗುಂದಿ): ಸಂಕ್ರಮಣದ ನಿಮಿತ್ತ ಆಲಮಟ್ಟಿಯ ವಿವಿಧ ಉದ್ಯಾನಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಿದ್ದ ಕಾರಣ  ಶನಿವಾರ ಒಂದೇ ದಿನ ಆಲಮಟ್ಟಿ ವ್ಯಾಪ್ತಿಯ ಎಲ್ಲಾ ಉದ್ಯಾನಗಳಿಂದ ₹ 2.20 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.

ಆಲಮಟ್ಟಿಯ ಆರು ಎಕರೆ ವಿಸ್ತಾರದ ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯಲ್ಲಿರುವ ಕೃಷ್ಣಾ ಉದ್ಯಾನ, ಏಳು ಎಕರೆ ವಿಸ್ತಾರದ ಲವಕುಶ ಉದ್ಯಾನ, ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿನ 40 ಎಕರೆ ವಿಸ್ತಾರದ ರಾಕ್ ಉದ್ಯಾನ, ಮೂರು ಎಕರೆ ವಿಸ್ತಾರದ ಸಂಗೀತ ಕಾರಂಜಿಗೆ ಹಿರಿಯರಿಗೆ ಪ್ರತಿಯೊಬ್ಬರಿಗೆ ₹10, ಮಕ್ಕಳಿಗೆ ₹5  ಪ್ರವೇಶ ದರವಿದೆ. ಇನ್ನೂ 77 ಎಕರೆ ವಿಸ್ತಾರದಲ್ಲಿನ ಮೊಘಲ್‌, ಇಟಾಲಿಯನ್‌ ಮತ್ತು ಫ್ರೆಂಚ್‌ ಉದ್ಯಾನಕ್ಕೆ ಪ್ರವೇಶ ದರವಿಲ್ಲ.

ಶನಿವಾರ ಆಲಮಟ್ಟಿಯ ರಾಕ್ ಉದ್ಯಾನಕ್ಕೆ 13,504 ಜನ ಭೇಟಿ ನೀಡಿದ್ದು, ಅಲ್ಲಿ ₹1,31,485, ಕೃಷ್ಣಾ ಉದ್ಯಾನಕ್ಕೆ 2430 ಜನ ಭೇಟಿ ನೀಡಿದ್ದು ಅಲ್ಲಿ ₹23,310, ಲವಕುಶ ಉದ್ಯಾನಕ್ಕೆ 1847 ಜನ ಭೇಟಿ ನೀಡಿದ್ದು ಅಲ್ಲಿ ₹17,770 ಹಣ ಸಂಗ್ರಹವಾಗಿದ್ದು, ಈ ಎಲ್ಲಾ ಉದ್ಯಾನಗಳ ಮೇಲ್ವಿಚಾರಣೆ ಕೆಬಿಜೆಎನ್ಎಲ್ ಅರಣ್ಯ ಇಲಾಖೆಯ ಆಧೀನದಲ್ಲಿದ್ದು  ಒಟ್ಟಾರೇ ₹1,78,565  ಸಂಗ್ರಹವಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಹೇಳಿದರು.

ಶನಿವಾರ ಸಂಗೀತ ಕಾರಂಜಿಯ ಎರಡು ಪ್ರದರ್ಶನಗಳು ನಡೆದಿದ್ದು, 5165 ಜನ ಭೇಟಿ ನೀಡಿದ್ದು, ಅದರಿಂದ ₹45,510  ಹಣ ಸಂಗ್ರಹವಾಗಿದೆ.
ಒಟ್ಟಾರೇ ಎಲ್ಲಾ ಉದ್ಯಾನಗಳಿಗೆ ಶನಿವಾರ ಒಂದೇ ದಿನ 22,946 ಜನ ಭೇಟಿ ನೀಡಿದ್ದು, ₹ 2,24,075 ಹಣ ಸಂಗ್ರಹವಾಗಿದೆ ಎಂದು ಕೆಬಿಜೆಎನ್ಎಲ್ ಮೂಲಗಳು ಹೇಳಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಆಲಮಟ್ಟಿಗೆ ಭೇಟಿ ನೀಡುವ ಜನರ ಸಂಖ್ಯೆ ಕಡಿಮೆಯಾಗಿದೆ. ಕಳೆದ ಬಾರಿ ₹3 ಲಕ್ಷ ವರೆಗೂ ಹಣ ಸಂಗ್ರಹವಾಗಿತ್ತು ಎಂಬುದು ಅಧಿಕಾರಿಗಳ ಅಂಬೋಣ.

ಭಾನುವಾರವೂ ಆಲಮಟ್ಟಿಯ ಉದ್ಯಾನಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಎಂದಿಗಿಂತಲೂ ಹೆಚ್ಚಾಗಿತ್ತು. ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಶನಿವಾರ, ಭಾನುವಾರ ಇಲ್ಲಿಯ ಹೆಲಿಪ್ಯಾಡ್ ಬಳಿ ವಾಹನಗಳ ನಿಲುಗಡೆಯ ಸೌಲಭ್ಯ ಕಲ್ಪಿಸಲಾಗಿದೆ.

ನೀರಿಲ್ಲದೇ ಪರದಾಡಿದ ಜನ: ಭಾನುವಾರ ಆಲಮಟ್ಟಿಯ ಮೊಘಲ್, ಸಂಗೀತ ಕಾರಂಜಿ, ರಾಕ್ ಉದ್ಯಾನದ ಬಳಿಯಿರುವ ಕುಡಿಯುವ ನೀರಿನ ತೊಟ್ಟಿಯಲ್ಲಿ ನೀರು ಬಾರದ ಕಾರಣ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ನಂತರ ಸಮಸ್ಯೆ ಅರಿತ ಉದ್ಯಾನದ ಸಿಬ್ಬಂದಿ ತೊಟ್ಟಿ ಯನ್ನು ಸರಿಪಡಿಸಿದರು.

ಸಂಗೀತ ಕಾರಂಜಿಗೆ ಹೋಗಲು ಪರದಾಡಿದ ಜನ: ವಾಹನಗಳ ಪಾರ್ಕಿಂಗ್ ಸ್ಥಳದಿಂದ ಸಂಗೀತ ಕಾರಂಜಿಯ ಎಂಟ್ರನ್ಸ್ ಪ್ಲಾಜಾ ವರೆಗೆ ಹೋಗಲು ಪ್ರವಾಸಿಗರು ಪರದಾಡಬೇಕಾಯಿತು. ಪಾರ್ಕಿಂಗ್ ಸ್ಥಳ ದೂರವಾಗಿದ್ದೆ ಇದಕ್ಕೆ ಕಾರಣವಾಯಿತು ಎಂದು ಪ್ರವಾಸಿಗರು ದೂರಿದರು. ಪಾರ್ಕಿಂಗ್‌ದ ಹಣವೂ ಪ್ರತ್ಯೇಕವಾಗಿದ್ದರಿಂದ ಅದರಿಂದಲೂ ಕೆಬಿಜೆಎನ್‌ಎಲ್‌ಗೆ ಹಣ ಬಂದಿದೆ.

‘ಪ್ರತಿ ವರ್ಷ ಆಲಮಟ್ಟಿಗೆ ಸಂಕ್ರಮಣದ ಸುತ್ತ ಮುತ್ತ ನಾಲ್ಕು ದಿನ ಹೆಚ್ಚಿನ ಸಂಖ್ಯೆಯ ಜನ ಬರುವುದರಿಂದ ಕೆಬಿಜೆಎನ್‌ಎಲ್ ವತಿಯಿಂದ ಸಂಕ್ರಾಂತಿ ಹಬ್ಬ ಆಚರಿಸಿ, ಈ ಭಾಗದ ಕಲೆ, ಸಂಸ್ಕೃತಿಯನ್ನು ಪರಿಚಯಿಸುವ, ನೀರಿನ ಮಹತ್ವ ತಿಳಿಸುವ ಕಾರ್ಯಕ್ರಮ ಏರ್ಪಡಿಸಿದ್ದರೆ ಚೆನ್ನಾಗಿತ್ತು’ ಎಂದು ಪ್ರವಾಸಿಗ, ಶಿಕ್ಷಕ ಹಳಿಯಾಳದ ಸಿದ್ದು ಬಿರಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.
-ಚಂದ್ರಶೇಖರ ಕೋಳೇಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT