ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುಡಿಯುವ ವರ್ಗವೇ ಸರ್ವಕಾಲಕ್ಕೂ ಶ್ರೇಷ್ಠ’

ಕಾಯಕಯೋಗಿ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅಭಿಮತ; ಸಾವಳಗಿಯಲ್ಲಿ ಜಯಂತಿ
Last Updated 16 ಜನವರಿ 2017, 8:26 IST
ಅಕ್ಷರ ಗಾತ್ರ

ಬಾಗಲಕೋಟೆ: ದುಡಿದು ತಮ್ಮ ದೇಹವನ್ನು ದಂಡಿಸುವವರೇ ನಿಜವಾದ ಕಾಯಕಯೋಗಿಗಳು ಎಂದು ಸಿದ್ದರಾಮೇಶ್ವರ ಸಂಸ್ಥಾನ ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿನ ನವನಗರದ ಡಾ. ಬಿ. ಆರ್‌. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಭಾನುವಾರ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಜನಸಂಖ್ಯೆಯ 11ರಷ್ಟಿರುವ ಭೋವಿ ಜನಾಂಗದವರು ಕೇವಲ ಶೇ 4ರಷ್ಟು ವಿದ್ಯಾವಂತರಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮಂದಿ ಸ್ಥಾನಮಾನ ಪಡೆದಿದ್ದಾರೆ. 12ನೇ ಶತಮಾನದಲ್ಲೇ ಸಿದ್ಧೇಶ್ವರರು ಶ್ರಮವಹಿಸಿ ದುಡಿಯುವುದನ್ನು ರೂಢಿಸಿಕೊಳ್ಳುವಂತೆ ಸಂದೇಶ ನೀಡಿದ್ದರು, ನಮ್ಮ ಸಮಾಜದವರು ತಮ್ಮ ಮಕ್ಕಳನ್ನು ಕೇವಲ ದುಡಿಮೆಗೆ ಸೀಮಿತಗೊಳಿಸದೇ ಅವರಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.

ತೋಟಗಾರಿಕಾ ವಿಶ್ವವಿದ್ಯಾಲಯ ಉಪನ್ಯಾಸಕಿ ಡಾ. ಉಮಾ ಅಕ್ಕಿ ವಿಶೇಷ ಉಪನ್ಯಾಸ ನೀಡಿ, ಕಲ್ಯಾಣದಲ್ಲಿ ನಡೆದ ಸಾಮಾಜಿಕ ಕ್ರಾಂತಿ ಮತ್ತು ವಚನ ಕ್ರಾಂತಿಯನ್ನು ನಾಡಿನೆಲ್ಲೆಡೆ ಸಂಚಾರದ ಮೂಲಕ ಜನ ಸಾಮಾನ್ಯರಲ್ಲಿ ತಿಳಿಸಿದವರು ಶರಣರು. 12 ನೇ ಶತಮಾನ ಚಳವಳಿಯನ್ನು ಸಮಾಜ ಸುಧಾರಣೆಗೆ ಕಾರ್ಯ ಮಾಡಿ, ಸಮಾಜದ ಅಂಕು ಡೊಂಕು ತಿದ್ದುವ ಕಾಯಕದಲ್ಲಿ ನಿರತರಾಗಿದ್ದರು. ಅಂತವರಲ್ಲಿ ಅಲ್ಲಮಪ್ರಭು, ಅಣ್ಣಬಸವಣ್ಣ, ಅಕ್ಕಮಹಾದೇವಿ, ಚೆನ್ನ ಬಸವಣ್ಣ ಮತ್ತು ಸಿದ್ದರಾಮೇಶ್ವರರು ಪ್ರಮುಖರು ಎಂದರು.

ಸಮಾಜದ ಮುಖಂಡ ಅಶೋಕ ಲಿಂಬಾವಳಿ ಮಾತನಾಡಿ, ಜಾತಿಗಳನ್ನು ಒಂದೂ ಗೂಡಿಸಬೇಕು ಎಂದು 12ನೇ ಶತಮಾನದಲ್ಲಿ ಶರಣರು ಅನುಭವ ಮಂಟಪದಲ್ಲಿ ಸೇರಿದ್ದರು. ಮೀಸಲಾತಿ ವ್ಯವಸ್ಥೆ ಇರುವುದರಿಂದ ಮಾತ್ರ ಎಲ್ಲ ಕ್ಷೇತ್ರದಲ್ಲಿ ಎಲ್ಲ ಸಮುದಾಯದ ಜನರು ಮೇಲೆ ಬರುತ್ತಿದ್ದಾರೆ. ಆದ್ದರಿಂದ ಶರಣರು, ದಾರ್ಶನಿಕರು, ಹಿರಿಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ನಡೆದುಕೊಳ್ಳಬೇಕು. ಸರ್ಕಾರದಿಂದ ಸಿಗುವ ಸವಲತ್ತು ಪಡೆದು ಆರ್ಥಿಕವಾಗಿ ಸಬಲರಾಗಲು ಚಿಕ್ಕ ಜನಾಂಗದವರು ಮುಂದೆ ಬರಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ, ಅಪಾರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ, ಉಪವಿಭಾಗ ಅಧಿಕಾರಿ ಶಂಕರಗೌಡ ಸೋಮನಾಳ, ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ವೆಂಕಟೇಶ ಗುಡಗುಂಟಿ, ಜಿಲ್ಲಾ ಪಂಚಾಯ್ತಿ ಸದಸ್ಯ ಹಂಚಿನಮನಿ ಇದ್ದರು. ನಟರಾಜ ಸಂಗೀತ ಶಾಲೆಯ ಮಕ್ಕಳಿಂದ ವಚನ ಗಾಯನ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮೊದಲು ಸಿದ್ದರಾಮೇಶ್ವರ ಭಾವಚಿತ್ರದ ಮೆರವಣಿಗೆ ಜಿಲ್ಲಾ ಆಡಳಿತ ಭವನದಿಂದ ಆರಂಭವಾಗಿ ನಗರದ ವಿವಿಧಡೆ ಸಂಚರಿಸಿ ಡಾ. ಬಿ.ಆರ್.ಅಂಬೇಡ್ಕರ್ ಭವನ ತಲುಪಿತು.

ನಾಡು ಕಟ್ಟಿದ ಭೋವಿ ಸಮಾಜ
ಇಳಕಲ್‌: 
ಭೋವಿ ಸಮುದಾಯ ಬೆವರಿನಿಂದ ನಾಡು ಕಟ್ಟಿದೆ. ಅಂಥ ಸಮುದಾಯವು ದುಶ್ಚಟಗಳಿಗೆ ಬಲಿಯಾಗದೇ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದಲ್ಲಿ ಭೋವಿ ಸಮಾಜ ಹಾಗೂ ಹುನಗುಂದ ತಾಲ್ಲೂಕು ಆಡಳಿತ ವತಿಯಿಂದ ನಡೆದ ಸಿದ್ಧರಾಮೇಶ್ವರರ 845ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಮಾಜ ಎಲ್ಲ ಜಾತಿ, ಸಮುದಾಯಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿದೆ. ಆ ಮೂಲಕ ಏಳ್ಗೆ ಹೊಂದುತ್ತಿರುವ ಸಮಾಜವಾಗಿದೆ.

ಕಾಯಕಕ್ಕೆ ಮಹತ್ವ ನೀಡಿದರೇ ಸುಖ, ಸಮೃದ್ಧಿ ದೊರಕುತ್ತದೆ ಎನ್ನುವುದಕ್ಕೆ ಈ ಸಮಾಜವೇ ಸಾಕ್ಷಿಯಾಗಿದೆ. ನಿಮ್ಮ ಶ್ರಮ ಹಾಗೂ ಕೌಶಲದ ಪರಿಣಾಮ ನಾವೆಲ್ಲರೂ ಸೂರು ಹೊಂದಿದ್ದೇವೆ. ಆಶ್ರಯ ಮನೆಗಳ ಹಂಚಿಕೆ ಸಂದರ್ಭದಲ್ಲಿ ಭೋವಿ ಸಮಾಜದ ಬಡವರಿಗೆ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ನಿವೃತ್ತ ಪ್ರಾಚಾರ್ಯ, ಜನಪದ ಸಾಹಿತಿ ಡಾ.ಶಂಭು ಬಳಿಗಾರ ಮಾತನಾಡಿ, ‘ ಸಿದ್ಧರಾಮೇಶ್ವರರು 12ನೇ ಶತಮಾನದ ಶ್ರೇಷ್ಠ ಶರಣರು. ಹರಿಹರ ರಗಳೆ ಹಾಗೂ ಜನಪದಗಳನ್ನು ಆಧಾರವಾಗಿಟ್ಟುಕೊಂಡು ರಾಘವಾಂಕ ರಚಿಸಿದ ‘ಸಿದ್ದರಾಮೇಶ್ವರ ಚರಿತ್ರೆ’  ಇವತ್ತು ಮುಖ್ಯ ಆಕರವಾಗಿದೆ.

ಸಿದ್ಧರಾಮೇಶ್ವರರು ಬಸವಣ್ಣ ಹಾಗೂ ಅಲ್ಲಮರ ಭೇಟಿಯ ಮುನ್ನ ಸೊನ್ನಲಿಗೆ (ಸೊಲ್ಲಾಪೂರ)ಯಲ್ಲಿ ಕೆರೆ ಹಾಗೂ ದೇವಸ್ಥಾನಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕಲ್ಯಾಣಕ್ಕೆ ತೆರಳಿದ ನಂತರ ಪ್ರಮುಖ ಶರಣರಲ್ಲಿ ಒಬ್ಬರಾಗಿ, ನೂರಾರು ವಚನಗಳನ್ನು ರಚಿಸಿ, ಸಮಾನತೆಗಾಗಿ ಹೋರಾಡಿದರು’ ಎಂದು ಹೇಳಿದರು.

ಬಾಗಲಕೋಟೆಯ ಭೋವಿ ಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಭೋವಿ ಸಮಾಜದ ಏಕತೆಯನ್ನು ಸಹಿಸದ ದುಷ್ಟ ಶಕ್ತಿಗಳಿವೆ. ಯಾವುದೇ ಕುತಂತ್ರಕ್ಕೆ ಒಳಗಾಗದೇ ಒಗ್ಗಟ್ಟು ಕಾಯ್ದುಕೊಂಡು ಮುಂದೆ ಸಾಗಬೇಕು. ತಾಯಂದಿರು ಸಮಾನ ಹಾಗೂ ಮನಸ್ಸು ಹಾಳು ಮಾಡುವ ಧಾರಾವಾಹಿಗಳಿಂದ ದೂರ ಇದ್ದು, ಶರಣರ ವಚನ ಸಾಹಿತ್ಯ ಓದಬೇಕು. ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು’ ಎಂದರು.

ಸಮಾರಂಭದಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ವೆಂಕಟೇಶ ಗುಡಗುಂಟಿ, ನಗರಸಭೆ ಉಪಾಧ್ಯಕ್ಷ ಮಹಾಂತೇಶ ಹನಮನಾಳ, ಸದಸ್ಯ ಮಹಾಂತೇಶ ಗುಳೇದಗುಡ್ಡ, ಹಿರಿಯರಾದ ನಾಗಪ್ಪ ಕನ್ನೂರ, ವೀರಣ್ಣ ಬಂಡಿ, ತಿಮ್ಮಣ್ಣ ಗುಡಗುಂಟಿ, ಎಪಿಎಂಸಿ ಸದಸ್ಯ ಮಂಜುನಾಥ ಕಟಗಿ, ಮೋಹನ ಮರೋಳ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳಿ ದೇಶಪಾಂಡೆ  ಉಪಸ್ಥಿತರಿದ್ದರು
-ಸಿದ್ಧರಾಮರ ಸ್ಮರಣೆ

ಸಾವಳಗಿ: ಗ್ರಾಮದ ವಿವಿಧೆಡೆ ಕಾಯಕ ಯೋಗಿ ಸಿದ್ಧರಾಮೇಶ್ವರ ಜಯಂತಿ ವಿಭೃಂಜಣೆಯಿಂದ ನಡೆಯಿತು. ಪಂಚಾಯ್ತಿ ಹಾಗೂ ಉಪ ತಹಶೀಲ್ದಾರ್‌ ಕಚೇರಿಯಲ್ಲಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ಭೂವಿ ಯುವ ವೇದಿಕೆ ರಾಜ್ಯ ಸಂಚಾಲಕ ಸಿದ್ದು ಬಂಡಿವಡ್ಡರ ಮಾತನಾಡಿದರು. ಉಪ ತಹಶೀಲ್ದಾರ ವೈ.ಎಚ್.ದ್ರಾಕ್ಷಿ, ಪಿಎಸ್‌ಐ ಲಕ್ಷ್ಮೀಕಾಂತ ಬಾಣಿಕೊಲ,  ಪ್ರಮುಖರಾದ ಮಹಾವೀರ ಜಮಖಂಡಿ, ರವಿ ಐಹೊಳಿ, ದುಂಡಪ್ಪಾ, ರಾಮಣ್ಣಾ ಬಂಡಿವಡ್ಡರ, ಮಹಾದೇವ, ತುಕಾರಾಮ, ತಾನಾಜಿ, ನಾತಾಜಿ, ಪರಶುರಾಮ, ಪಂಚಾಯ್ತಿಯ ಸಿಬ್ಬಂದಿ ಅಮೀತ ತಿಕೋಟಾ, ಪ್ರಭು ಮಾಳಿ ಮತ್ತಿತರರು ಇದ್ದರು.

ಜಯಂತಿಗೆ ಬಾರದ ಜನಪ್ರತಿನಿಧಿ
ಬಾಗಲಕೋಟೆ:
ಜಯಂತಿ ಕಾರ್ಯಕ್ರಮಕ್ಕೆ ಜನಪ್ರತಿನಿಧಿ ಗೈರು ಎದ್ದು ಕಾಣಿಸಿತು. ಸಚಿವರಾ ಉಮಾಶ್ರೀ, ಸ್ಥಳೀಯ ಶಾಸಕ ಎಚ್‌.ವೈ.ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲೆಯ ವಿವಿಧ ಪಕ್ಷದ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮತ್ತು ಮುಖಂಡರು ಸೇರಿದಂತೆ ಒಟ್ಟು 20 ಜನರ ಹೆಸರಿರುವ ಆಮಂತ್ರಣ ಪತ್ರಿಕೆಯಲ್ಲಿ ಯಾರು ಒಬ್ಬರೂ ಪಾಲ್ಗೊಂಡಿಲ್ಲ ಎಂದು ಸಮುದಾಯದ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.

*
ಸಮಾಜದ ಯುವಕರು  ಉತ್ತಮ ಶಿಕ್ಷಣ ಪಡೆಯಬೇಕು. ಬಸವಣ್ಣ ನ ವಿಚಾರ ಪ್ರತಿಯೊಬ್ಬರು ತಮ್ಮಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯ.
-ಅಶೋಕ ಲಿಂಬಾವಳಿ,
ಭೋವಿ ಸಮಾಜದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT