ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಮತಗಟ್ಟೆಯಲ್ಲಿ 3ಕ್ಷೇತ್ರಕ್ಕೆ ಚುನಾವಣೆ

ರಾಮನಗರ:17ಕ್ಕೆ ಕೃಷಿ ಮಾರುಕಟ್ಟೆ ಸಮಿತಿ ಚುನಾವಣೆ
Last Updated 16 ಜನವರಿ 2017, 8:38 IST
ಅಕ್ಷರ ಗಾತ್ರ

ರಾಮನಗರ:  ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಇದೇ 17ರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೂ ನಡೆಯಲಿರುವ ಮತದಾನ ಪ್ರಕ್ರಿಯೆ  ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್ ಎನ್‌. ರಘುಮೂರ್ತಿ ಹೇಳಿದರು.

ನಗರದ ಮಿನಿ ವಿಧಾನ ಸೌಧದಲ್ಲಿನ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ರಾಮನಗರ ತಾಲ್ಲೂಕಿನ ಒಟ್ಟು 3 ಕ್ಷೇತ್ರಗಳ ಪೈಕಿ ಕೃಷಿಕರ 2 ಹಾಗೂ ವರ್ತಕರ 1 ಕ್ಷೇತ್ರಗಳ ಚುನಾವಣೆಗೆ 24 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಕೂಟಗಲ್ ಕ್ಷೇತ್ರದಲ್ಲಿ 5316 ಮತದಾರರಿದ್ದು, 13 ಮತಗಟ್ಟೆಗಳು, ಬಿಳಗುಂಬ ಕ್ಷೇತ್ರದಲ್ಲಿ  6494 ಮತದಾರರಿದ್ದು 10 ಮತಗಟೆಗಳು, ವರ್ತಕರ ಕ್ಷೇತ್ರದಲ್ಲಿ 440 ಮತದಾರರಿದ್ದು 1 ಮತಗಟ್ಟೆ ಸ್ಥಾಪಿಸಲಾಗಿದೆ’ ಎಂದು ಹೇಳಿದರು.

‘ಪ್ರತಿ ಮತಗಟ್ಟೆಗೆ 4 ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದು, ಜತೆಗೆ ಮತದಾರರನ್ನು ಗುರುತಿಸುವ ಸಲುವಾಗಿ ಪಿಡಿಒ ಮತ್ತು ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಸ್ಥಳೀಯ ವಾಟರ್‍ ಮನ್‌ ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಈಗಾಗಲೇ ಕೃಷಿಕ್ಷೇತ್ರದಿಂದ 3, ವರ್ತಕರ ಕ್ಷೇತ್ರದಿಂದ 1 ಆವಿರೋಧ ಆಯ್ಕೆ ನಡೆದಿದೆ. ಮತದಾರರೇ ಇರದ ಹಿನ್ನೆಲೆಯಲ್ಲಿ ಸಂಸ್ಕರಣ ಕ್ಷೇತ್ರಕ್ಕೆ ಚುನಾವಣೆ ರದ್ದು ಪಡಿಸಲಾಗಿದೆ.

ಅಂದು ನಡೆಯಲಿರುವ ಚುನಾವಣೆ ಪಾರದರ್ಶಕವಾಗಿ ನಡೆಸಲಾಗುವುದು. ಜತೆಗೆ ಪೊಲೀಸರಿಂದ ಹೆಚ್ಚುವರಿ ಭದ್ರತೆ ಕೇಳಲಾಗಿದೆ. 7 ಸೂಕ್ಷ್ಮ, 8 ಅತಿಸೂಕ್ಷ್ಮ, 9 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮತದಾನ ಮಾಡುವ ರೈತರು ತಮ್ಮ ಭಾವಚಿತ್ರಹೊಂದಿರುವ 22 ದಾಖಲೆಗಳ ಪೈಕಿ ಯಾವುದಾದರೊಂದು ದಾಖಲೆ  ಕಡ್ಡಾಯವಾಗಿ ಹಾಜರು ಪಡಿಸಬೇಕು. ದಾಖಲೆ ಹಾಜರುಪಡಿಸದಿದ್ದರೆ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುವುದಿಲ್ಲ. ಮತದಾನದ ಸಮಯದಲ್ಲಿ ಮತದಾರರ ಎಡಗೈನ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುವುದು’ ಎಂದರು.

‘ತಾಲ್ಲೂಕಿನ ಒಟ್ಟು 24 ಮತಗಟ್ಟೆಗಳಿಗೆ ಒಟ್ಟು 96 ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 12244 ಮತದಾರನ್ನು ಗುರುತಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಪಿಎಂಸಿ ಚುನಾವಣೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಮರುಮತದಾನ ವಾದರೆ ಇದೇ 18ರ ಬೆಳಗ್ಗೆ 8 ರಿಂದ ಸಂಜೆ 4 ವರೆಗೆ ಅವಶ್ಯವಿದ್ದಲ್ಲಿ ಮರು ಮತದಾನ ನಡೆಯಲಿದೆ. ಇದೇ 19ರ  ಬೆಳಗ್ಗೆ 8 ರಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಣಿಕಾ ಕೇಂದ್ರದಲ್ಲಿ ಮತ ಎಣಿಕಾ ಕಾರ್ಯ ನಡೆಯಲಿದೆ.

ಒಂದು ಕೊಠಡಿಯಲ್ಲಿ ಐದು ಟೇಬಲ್ ನಂತೆ ಎರಡು ಭಾಗವಾಗಿ ಮತ ಏಣಿಕೆ ನಡೆಯಲಿದ್ದು ಮತ ಏಣಿಕೆ ಮುಗಿದ ನಂತರ ಫಲಿತಾಂಶ ಪ್ರಕಟಗೊಳಲಿದೆ’ ಎಂದು ಅವರು
ತಿಳಿಸಿದರು.

‘ಈ ಚುನಾವಣೆ ಸಾರ್ವತ್ರಿಕ ಚುನಾವಣೆಯಾಗಿರದೆ ಜತೆಗೆ ಪಕ್ಷಗಳ ಚಿಹ್ನೆಯ ಆಧಾರದ ಮೇಲೆ ನಡೆಯದಿರುವ ಹಿನ್ನೆಲೆಯಲ್ಲಿ ಯಾವುದೇ ನೀತಿ ಸಂಹಿತೆ ಇರುವುದಿಲ್ಲ.  ಇದೇ 20ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಚುನಾವಣಾ ಕಾರ್ಯಕ್ಕೆ 2 ಬಸ್, 2 ಮಿನಿ ಬಸ್, 5 ಜೀಪ್‌ಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಚುನಾವಣಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ಶಾಂತಿಯುತ ಮತದಾನ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು. ‘ಒಟ್ಟು 3ಕ್ಷೇತ್ರಗಳಿಗೆ ಕೂಟಗಲ್‌ನಿಂದ ಎಂ.ಜಗದೀಶ್, ಪುಟ್ಟರಾಮಯ್ಯ, ಮಹದೇವಯ್ಯ. ಬಿಳಗುಂಬದಿಂದ  ವೆಂಕಟರಂಗಯ್ಯ, ವೆಂಕಟಾಚಾರ್, ಪುಟ್ಟಸ್ವಾಮಯ್ಯ. ವರ್ತಕರ ಕ್ಷೇತ್ರದಿಂದ ಶಿವಕುಮಾರ್, ಕರಡೀಗೌಡ, ಅಕ್ಕುಲ್ಲಾ ಷರೀಫ್, ಸೈಯದ್ ಮುತಾಹಿರ್ ಸೇರಿದಂತೆ 10 ಅಭ್ಯರ್ಥಿಗಳು ಚುನಾವಣಾ ಕಣದಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT