ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಟ್‌ನಲ್ಲಿ ಅರಳುವ ಅಣಬೆ

ನಗರ ಕೃಷಿ
Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ತಾವೇ ತರಕಾರಿ ಬೆಳೆದು, ತಾಜಾ ತಿನ್ನುವ ಖುಷಿಯೇ ಬೇರೆ. ಆದರೆ ಈಗಿನ ಎಷ್ಟೋ ಮಕ್ಕಳಿಗೆ ತರಕಾರಿಗಳು ಹೇಗೆ ಬೆಳೆಯುತ್ತವೆ ಎಂಬುದೇ ಗೊತ್ತಿರುವುದಿಲ್ಲ. ಕೈಗೆ ಮಣ್ಣು ಮೆತ್ತಿಕೊಳ್ಳದೇ ಬೆಳೆಯುವ ಈ ಮಕ್ಕಳಲ್ಲಿ ಇಂಥ ಕುತೂಹಲ ಮೂಡಿಸುವ,  ಗಿಡಗಳೊಂದಿಗಿನ ಒಡನಾಟದ ಪುಟ್ಟ ಅನುಭವ ನೀಡುವ ಸಲುವಾಗಿ ಈ ‘ಮಶ್ರೂಮ್ ಗ್ರೋಯಿಂಗ್ ಕಿಟ್’ ವಿನ್ಯಾಸಗೊಳಿಸಿದ್ದಾರೆ ಜಿತು ನಾಯರ್.

ಮೂಲತಃ ಕೇರಳದವರಾದ ಜಿತು, ಪುಣೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಓದಿದವರು. ಸ್ವಲ್ಪ ವರ್ಷ ಎಂಜಿನಿಯರಿಂಗ್ ಕ್ಷೇತ್ರದಲ್ಲೇ ದುಡಿದರು. ಹವ್ಯಾಸವಾಗಿ ಅವರ ಜೊತೆ ತೋಟ ಮಾಡುವ ಆಸಕ್ತಿಯೂ ಇತ್ತು. ತಂದೆಯ ವರ್ಗಾವಣೆ ಸಲುವಾಗಿ ಬೆಂಗಳೂರಿಗೆ ಬಂದ ಅವರನ್ನು ಎಂಜಿನಿಯರಿಂಗ್‌ ಹುದ್ದೆಗಿಂತ ಹೆಚ್ಚು ಸೆಳೆದದ್ದು ಅಣಬೆ ಕೃಷಿ. ಇದೇ ನಿಟ್ಟಿನಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಎರಡು ವರ್ಷ ತರಬೇತಿ ಮುಗಿಸಿದರು.

ಮನೆಯಲ್ಲೇ ಸಣ್ಣಮಟ್ಟದಲ್ಲಿ ಅಣಬೆ ಕೃಷಿ ಕೈಗೊಂಡರು. ಮನೆಗೆ ಬಂದ ನೆಂಟರು, ಸ್ನೇಹಿತರು, ಮಕ್ಕಳು ಇವರು ಬೆಳೆದ ಅಣಬೆ ನೋಡಿ ಕಣ್ಣರಳಿಸುತ್ತಿದ್ದರು. ನಗರದಲ್ಲಿ ಬೆಳೆದ ಮಕ್ಕಳಿಗಂತೂ ತರಕಾರಿ, ಗಿಡಗಳ ಕುರಿತು ಏನೇನೂ ತಿಳಿದಿರಲಿಲ್ಲ. ಗಿಡಗಳ ಬಗ್ಗೆ ಮುಗ್ಧ ಪ್ರಶ್ನೆಗಳನ್ನು ಕೇಳುತ್ತಿದ್ದ ಮಕ್ಕಳನ್ನು ಕಂಡು, ಈ ಮಕ್ಕಳು ಪ್ರಕೃತಿಯಿಂದ ಎಷ್ಟು ದೂರವುಳಿದಿದ್ದಾರೆ ಎಂದು ಆಶ್ಚರ್ಯಪಟ್ಟರು. ಈ ಅಂಶವೇ ಜಿತು ಅವರಲ್ಲಿ ‘ರೆಡಿ ಟು ಫಾರ್ಮ್’ ಪರಿಕಲ್ಪನೆ ಹುಟ್ಟುವಂತೆ ಮಾಡಿದ್ದು. ನಗರದ ಮಕ್ಕಳಿಗೆ ಗಿಡ ಬೆಳೆಯುವ, ಅದರಿಂದ ಖುಷಿಪಡುವ ಅನುಭವ ನೀಡಲು ‘ಕಿಚನ್ ಫಾರ್ಮ್ಸ್‌’ ಸಂಸ್ಥೆ ಆರಂಭಿಸಿದರು. ಅದರ ಮೊದಲ ಉತ್ಪನ್ನವೇ ‘ಮಶ್ರೂಮ್ ಕಿಟ್’.

‘ಮಕ್ಕಳು ಮಣ್ಣಿನೊಂದಿಗೆ ಒಡನಾಡಬೇಕು. ಅವರಿಗೆ ತಾವು ಏನನ್ನು ತಿನ್ನುತ್ತಿದ್ದೇವೆ, ಅದು ಹೇಗೆ, ಎಲ್ಲಿ ಬೆಳೆಯುತ್ತದೆ ಎಂಬ ಕುರಿತು ಸಾಮಾನ್ಯಜ್ಞಾನ ಬೇಕು. ಈಗಿನ ಪೀಳಿಗೆಗೆ ಸಾವಯವದ ಮಹತ್ವ ತಿಳಿಯಬೇಕು. ಆ ನಿಟ್ಟಿನಲ್ಲಿ ಕಿಚನ್‌ ಫಾರ್ಮ್ಸ್‌ ಪ್ರಯತ್ನಗಳು ಸಾಗುತ್ತಿವೆ’ ಎನ್ನುತ್ತಾರೆ ಜಿತು.

ಅಣಬೆ ಕೃಷಿ ವಿಷಯದಲ್ಲೇ ಎರಡು ವರ್ಷ ಸಾಕಷ್ಟು ಅಧ್ಯಯನವನ್ನೂ ಕೈಗೊಂಡಿದ್ದ ಅವರಿಗೆ, ಮೊದಲ ಹೆಜ್ಜೆಯಾಗಿ ಅಣಬೆಯೇ ಒಳ್ಳೆ ಆಯ್ಕೆ ಎನ್ನಿಸಿತ್ತು. ಇದನ್ನೇ ಬೇರೆ ವಿಧದಲ್ಲಿ ಕೊಡಲು ಮುಂದಾದರು. ಈಗಾಗಲೇ ಅಣಬೆಯನ್ನು ಈ ರೀತಿ ಬೆಳೆಯುವ ವಿಧ ಸಾಕಷ್ಟು ಕಡೆ ಇದ್ದರೂ, ಆಧುನಿಕ ರೀತಿಯಲ್ಲಿ, ಮಕ್ಕಳಿಗೆ ಇಷ್ಟವಾಗುವಂತೆ ಕೊಡಬೇಕು ಎಂದು ಕಿಟ್‌ಗೆ ಆಧುನಿಕ ರೂಪ ಕೊಟ್ಟರು.

ಬಟನ್‌ ಅಣಬೆಗಳು ಇಲ್ಲಿ ಸಾಮಾನ್ಯವಾದ್ದರಿಂದ ವಿಶ್ವದ ಪ್ರಮುಖ ಮೂರು ಅಣಬೆ ಜಾತಿಯಲ್ಲಿ ಒಂದಾದ, ಹೆಚ್ಚು ವಿಟಮಿನ್, ಪೋಷಕಾಂಶಗಳನ್ನು ತುಂಬಿಕೊಂಡಿರುವ ಸಿಂಪಿ ಅಣಬೆ (ಓಯ್ಸ್‌ಟರ್‌)ಯನ್ನು ಆರಿಸಿಕೊಂಡರು. ಹತ್ತು ತಿಂಗಳ ಕಾಲ ಪ್ರಯೋಗದ ನಂತರ 2016 ನವೆಂಬರ್‌ನಲ್ಲಿ ಅಣಬೆಯ ಕಿಟ್ ರೂಪ ಪಡೆಯಿತು. ಇದೀಗ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿನ ಕಚೇರಿಯಲ್ಲಿ ಈ ಕಿಟ್‌ಗಳು ತಯಾರಾಗುತ್ತಿವೆ.

ಅಣಬೆಯ ಕಿಟ್‌ ಒಳಗೆ: ರುಚಿಯಲ್ಲಿ ಸಾಟಿಯಿಲ್ಲದ ಈ ಸಿಂಪಿ ಅಣಬೆ ಬೆಳೆಯಲು ವಾತಾವರಣ ಹದವಾಗಿರಬೇಕು. ಉಷ್ಣತೆ 24 ಡಿಗ್ರಿ ಇರಬೇಕು. ತೇವಾಂಶ ಪೂರಕವಾಗಿರಬೇಕು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಿಟ್‌ ತಯಾರಿಸಲಾಗಿದೆ. ಕಿಟ್‌ ಒಳಗೆ ನೆಲ್ಲು ಹುಲ್ಲು, ಮಶ್ರೂಮ್ ಸ್ಪಾಂಜ್, ಬೀಜ, ಸ್ಪ್ರೇ, ಮಶ್ರೂಮ್ ಮೈಸಿಲಿಯಂ ಇರುತ್ತದೆ. ಇವುಗಳನ್ನು ಹಾಕುವ ಮುನ್ನ ಪಾಶ್ಚರೀಕರಣದ ಕ್ರಿಯೆ ನಡೆಯುತ್ತದೆ. ನಂತರ ಪ್ಯಾಕಿಂಗ್ ಕೆಲಸ.  ಕಿಟ್‌ ಬಳಸುವುದು ಹೀಗೆ...

ಕಿಟ್‌ ಬಳಸಲು ಕಷ್ಟಪಡಬೇಕಿಲ್ಲ. ಬಾಕ್ಸ್‌ನ ಮೇಲೆ ನಮೂದಿಸಿದ್ದಂತೆ ಅದರ ಮುಂಭಾಗ ಕತ್ತರಿಸಿ, ಒಳಗಿನ ಕವರ್‌ ಮೇಲೆ ಬ್ಲೇಡ್‌ನಲ್ಲಿ ಎಕ್ಸ್‌ ಆಕಾರದಲ್ಲಿ ಗೆರೆ ಎಳೆಯಬೇಕು. ದಿನಕ್ಕೆ ಎರಡು ಬಾರಿ,  ಸ್ಪ್ರೇ ಮೂಲಕ ನೀರು ಹಾಯಿಸಬೇ­ಕು. ನೇರ ಬಿಸಿಲು ಬೀಳುವ ಕಡೆ ಇದನ್ನು ಇಡಬಾರದು. ಹತ್ತು ಹದಿನೈದು ದಿನಗಳಲ್ಲಿ ಅಣಬೆ ಚಿಗುರಲು ಆರಂಭಿಸುತ್ತದೆ. 20 ದಿನಗಳಲ್ಲಿ ಅಣಬೆ ಚೆನ್ನಾಗಿ ಬೆಳೆದಿರುತ್ತದೆ. ನಂತರ ಅದನ್ನು ಕಿತ್ತಬಹುದು.

ಮುಂದಿನ ಭಾಗ ಖಾಲಿಯಾದ ನಂತರ ಬಾಕ್ಸ್‌ನ ಹಿಂಭಾಗದಲ್ಲಿಯೂ ತೆರೆಯಬೇಕು. ಅದೇ ಪ್ರಕ್ರಿಯೆಯನ್ನು ಮುಂದುವರೆಸಬೇಕು. ಒಟ್ಟಾರೆ 400–450 ಗ್ರಾಂ ಅಣಬೆ ಒಂದು ಬಾಕ್ಸ್‌ನಿಂದ ಸಿಗುತ್ತದೆ. ಕಿಟ್‌ನ ಬೆಲೆ ಸ್ವಲ್ಪ ದುಬಾರಿ. ಅಂದರೆ ₹325. ಅದಕ್ಕೆ ಕಾರಣವನ್ನೂ ಜಿತು ಅವರು ವಿವರಿಸುವುದು ಹೀಗೆ...‘ಈ ಜಾತಿಯ ಅಣಬೆ ಬೆಲೆ ಹೆಚ್ಚಿರುವುದರಿಂದ ಕಿಟ್‌ ಬೆಲೆಯೂ ಹೆಚ್ಚಿದೆ. ತಯಾರು ಮಾಡಿದ ಇಪ್ಪತ್ತು ದಿನಗಳಲ್ಲಿ ಮಾರಾಟವಾಗದಿದ್ದರೆ ಅಣಬೆ ಬೆಳೆಯಲು ಸಾಧ್ಯವಾಗುವುದಿಲ್ಲ. ಅದು ನಷ್ಟವಾದಂತೇ ಲೆಕ್ಕ. ಆದ್ದರಿಂದ ಬೆಲೆ ಹೆಚ್ಚಿದೆ’.

ಆರಂಭವಾದ ಮೂರು ತಿಂಗಳಲ್ಲಿ ಮುನ್ನೂರಕ್ಕೂ ಹೆಚ್ಚು ಕಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಕೆಲವು ಮಳಿಗೆಗಳಿಗೂ ಮಾರಾಟ ಮಾಡುತ್ತಿದ್ದು, ಆನ್‌ಲೈನ್, ಪ್ರದರ್ಶನಗಳಲ್ಲಿ ಮಾರಾಟವಾದ ಪಾಲು ಹೆಚ್ಚಿದೆ ಎಂದು ಮಾಹಿತಿ ನೀಡಿದರು.

ಕಿಟ್‌ ಅನ್ನು ಕ್ರಿಯಾತ್ಮಕ, ಸಾವಯವ ಉಡುಗೊರೆಯಾಗಿಯೂ ನೀಡಬಹುದು. ಈಗೀಗ ಕಾರ್ಪೊರೇಟ್‌ ಕಂಪೆನಿ, ಪಾರ್ಟಿಗಳಲ್ಲಿ, ‘ಸಾವಯವ ಉಡುಗೊರೆ’ಗಳನ್ನು ನೀಡುವ ಪರಿಪಾಠ ಹೆಚ್ಚಿದ್ದು, ಈ ಕಿಟ್‌ ಅನ್ನೂ ಅದೇ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಮಕ್ಕಳಿಗೆ ಪ್ಲಾಸ್ಟಿಕ್ ಆಟಿಕೆಗಳನ್ನು ನೀಡುವ ಬದಲು ಇದನ್ನು ನೀಡಿದರೆ, ಅವರಲ್ಲಿ ಕುತೂಹಲ ಮೂಡಿಸುವ ಜೊತೆಗೆ ಅವರಿಗೆ ತಾಜಾ ತಿನ್ನುವ  ಮೌಲ್ಯವೂ ತಿಳಿಸಿದಂತಾಗುತ್ತದೆ. ಈ ಮೂಲಕ ಪ್ರಕೃತಿಗೂ ಅವರು ಹತ್ತಿರವಾಗುವ ಸಣ್ಣ ಪ್ರಯತ್ನ ಎನ್ನುತ್ತಾರೆ ಅವರು.

ಜೊತೆಗಿದೆ ರೆಸಿಪಿ: ಅಣಬೆ ಬೆಳೆಯುವುದು ಮಾತ್ರವಲ್ಲ, ಅದರಲ್ಲಿನ ಪಾಕವೈವಿಧ್ಯವನ್ನೂ ಪರಿಚಯಿಸಲಾಗಿದೆ. ಮಾಸ್ಟರ್ ಶೆಫ್ ಅರುಪ್ ಅವರ ಸಹಕಾರದೊಂದಿಗೆ ಕಿಟ್‌ನೊಂದಿಗೆ ಬೆಂಗಳೂರು, ಕೇರಳ, ಯುರೋಪ್, ಚೀನೀಯರ ಶೈಲಿಯ ಅಣಬೆ ಖಾದ್ಯದ ರೆಸಿಪಿ ನೀಡಲಾಗಿದೆ.  ಇದೇ ರೀತಿ ಕಿಟ್‌ನಲ್ಲಿ ತರಕಾರಿ, ಸೊಪ್ಪು, ಹೂವಿನ ಗಿಡಗಳನ್ನು ಬೆಳೆಸುವ ಯೋಜನೆಯಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯೋಗಗಳೂ ಸಾಗುತ್ತಿವೆ. ಸಂಪರ್ಕಕ್ಕೆ: 9916435784.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT