ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚಿಸಿ

ಸರ್ಕಾರಿ ಶಾಲೆಗಳ ಸುಧಾರಣೆಗೆ ಬಸವರಾಜ ಮನವಿ
Last Updated 17 ಜನವರಿ 2017, 6:12 IST
ಅಕ್ಷರ ಗಾತ್ರ

ಬೀದರ್: ‘ಸರ್ಕಾರಿ ಶಾಲೆಗಳ ಸ್ಥಿತಿಗತಿ ಅಧ್ಯಯನ ಮಾಡಿ ಅವುಗಳ ಸುಧಾರಣೆಗೆ ಕಾಲಮಿತಿಯೊಳಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಬೇಕು. ಸರ್ಕಾರಿ ಶಾಲೆಗಳ ಪ್ರಗತಿಗೆ ತ್ವರಿತ ಕ್ರಮಕೈಗೊಳ್ಳಬೇಕು’ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಸಮಿತಿ ಕಾರ್ಯದರ್ಶಿ ಇ. ಬಸವರಾಜ ಮನವಿ ಮಾಡಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ  ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಚೆನ್ನಾಗಿ ಬೋಧಿಸಬೇಕು. ರಜೆ ಕೊಡುವುದನ್ನು ಕಡಿಮೆ ಮಾಡಬೇಕು. ಸರ್ಕಾರಿ ಶಾಲೆಗಳು ಹೆಚ್ಚಿನ ಅವಧಿಗೆ ನಡೆಯಬೇಕು. ಮಕ್ಕಳು ಶಾಲೆಯಲ್ಲೇ ಅಧಿಕ ಸಮಯ ಕಳೆದರೆ ಚೆನ್ನಾಗಿ ಕಲಿಯಲು ಸಾಧ್ಯವಾಗುತ್ತದೆ. ಮೂಲಸೌಕರ್ಯ ಒದಗಿಸದೇ ‘ಮರಳಿ ಬಾ ಶಾಲೆಗೆ’ ಅಭಿಯಾನ ನಡೆಸಿದರೆ ಏನೂ ಪ್ರಯೋಜನವಾಗಲಾರದು ಎಂದರು.

ಹೆಚ್ಚುವರಿ ಶಿಕ್ಷಕರ ಪರಿಕಲ್ಪನೆಯೇ ತಪ್ಪು. ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಬಿಟ್ಟು ಉಳಿದ ಶಿಕ್ಷಕರನ್ನು ಲೆಕ್ಕ ಹಾಕಬೇಕು. ಪ್ರತಿಯೊಂದು ವಿಷಯಕ್ಕೂ ಒಬ್ಬರು ಶಿಕ್ಷಕರು ಇರಬೇಕು. ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದರು.

ನಿಮ್ಮ ಮಕ್ಕಳನ್ನೂ ಸರ್ಕಾರಿ ಶಾಲೆಗೆ ಕಳುಹಿಸಿ: ಸರ್ಕಾರಿ ಶಾಲಾ ಶಿಕ್ಷಕರಷ್ಟೇ ಅಲ್ಲ ಸರ್ಕಾರಿ ನೌಕರರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು. ನ್ಯಾಯಾಧೀಶರ ಹಾಗೂ ಅಧಿಕಾರಿಗಳ ಮಕ್ಕಳೂ ಶಾಲೆಗೆ ಬಂದರೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ.  ಸರ್ಕಾರಿ ಶಾಲೆಗಳೂ ಉಳಿಯಲು ಸಾಧ್ಯವಾಗಲಿದೆ ಎಂದು ಬಸವರಾಜ ಹೇಳಿದರು.

ಶಿಕ್ಷಕರೇ ಸರ್ಕಾರಿ ಶಾಲೆಗಳ ಬಗ್ಗೆ ಉದಾಸೀನ ತೋರುವ ಮೂಲಕ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಿದರೆ ಬೇರೆ ಸಮುದಾಯದ ಮಕ್ಕಳು ಸರ್ಕಾರಿ ಶಾಲೆಗೆ ಬರಲು ಸಾಧ್ಯವಿಲ್ಲ. ಸರ್ಕಾರಿ ನೌಕರಿಯಲ್ಲಿರುವ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಲು ಶುರು ಮಾಡಿದರೆ ಇನ್ನುಳಿದವರಿಗೂ ಆಸಕ್ತಿ ಮೂಡುತ್ತದೆ ಎಂದರು. ರಾಮಕೃಷ್ಣ  ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ ದಿನದರ್ಶಿಕೆ ಬಿಡುಗಡೆ ಮಾಡಿದರು. ಶಿಕ್ಷಕಿ ಸುನೀತಾ ದಾಡಗೆ ಅವರು  ಸಾವಿತ್ರಿಬಾಯಿ ಫುಲೆ ಜೀವನ ಕುರಿತು ಉಪನ್ಯಾಸ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಮಹಮ್ಮದ್‌ ಗುಲ್ಶಿನ್, ಅಕ್ಷರ ದಾಸೋಹ ಯೋಜನೆ ಅಧಿಕಾರಿ ಇನಾಯತ್‌ ಅಲಿ ಶಿಂಧೆ, ಯೋಜನಾಧಿಕಾರಿ ಬಾಬುಮಿಯ, ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ, ಸಾಯಿ ಪ್ರೀತ್‌ ಭಾಲ್ಕೆ ವೈದೇಹಿ ಆಸ್ಪತ್ರೆಯ ಅಧ್ಯಕ್ಷ ಡಾ. ಸೋಮನಾಥ ಎಸ್. ಭಾಲ್ಕೆ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಸಿಆರ್‌ಪಿ ಸಂಜುಕುಮಾರ ಅತಿವಾಳೆ ಹಾಗೂ ಮುಖ್ಯ ಶಿಕ್ಷಕಿ ಪ್ರತಿಭಾ ಚಾಮಾ ಕಾರ್ಯಕ್ರಮ ನಿರೂಪಿಸಿದರು.

ನಿಗಾ ವಹಿಸಿ:
ಮಕ್ಕಳ ಮೇಲೆ ನಿಗಾ ಇಡಲು, ಶಿಸ್ತು ಬೆಳೆಸಲು ಅನು­ಕೂಲ­ವಾಗುವಂತೆ ಶಿಕ್ಷಕರು ಶಾಲೆಗೆ ಅರ್ಧಗಂಟೆ ಮೊದಲು ಬರಬೇಕು.  ಶಾಲೆ ಬಿಟ್ಟ ನಂತರ ಅರ್ಧ­ಗಂಟೆ ತಡವಾಗಿ ಹೋಗುವ ಹವ್ಯಾಸ ರೂಢಿಸಿ­ಕೊಳ್ಳಬೇಕು. ಶಿಕ್ಷಕರು ಬಹುಭಾಷಾ ಕೌಶಲ ಪಡೆಯ­ಬೇಕು. ಇದರಿಂದ ಹೊರ ಹಾಗೂ ನೆರೆಯ ರಾಜ್ಯದ ಮಕ್ಕಳು ಶಾಲೆಯಲ್ಲಿ ಪ್ರವೇಶ ಪಡೆದರೂ ಅವರಿಗೆ ಸರಿಯಾದ ಶಿಕ್ಷಣ ನೀಡಲು ಸಾಧ್ಯ ಎಂದರು.

ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಂದಾಗಿ ಸಮಾಜದಲ್ಲಿ ಬಡ, ಕೂಲಿಕಾರ್ಮಿಕರ ಹಾಗೂ ಶ್ರೀಮಂತರ ಮಕ್ಕಳು ಎನ್ನುವ ಎರಡು ವರ್ಗ ನಿರ್ಮಾಣವಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT