ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಸಿದ್ದರಾಮೇಶ್ವರ ಜಯಂತಿ

Last Updated 17 ಜನವರಿ 2017, 6:37 IST
ಅಕ್ಷರ ಗಾತ್ರ

ಕುಷ್ಟಗಿ:  ಶರಣ ಶಿವಯೋಗಿ ಸಿದ್ದರಾಮೇಶ್ವರ ವಚನಗಳಲ್ಲಿ ಸಮಾನತೆ ಶ್ರೇಷ್ಠತೆಯನ್ನು ಎತ್ತಿ ಹಿಡಿದಿರುವುದನ್ನು ಕಾಣಬಹುದು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶರಣಬಸವ ಡಾಣಿ ಹೇಳಿದರು.

ಸರ್ಕಾರದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರರ  ಜಯಂತ್ಯುತ್ಸವದಲ್ಲಿಅವರು ವಿಶೇಷ ಉಪನ್ಯಾಸ ನೀಡಿದರು.
ಭೋವಿ ಸಮಾಜದ ಪರವಾಗಿ ಮಾತನಾಡಿದ ಕೃಷ್ಣಪ್ಪ ಹಿರೇಮನಿ, ಸಿದ್ಧರಾಮೇಶ್ವರರ ವಚನಗಳಲ್ಲಿನ ಆಶಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಬದುಕು ಸಾರ್ಥಕಗೊಳ್ಳುತ್ತದೆ ಎಂದರು.

ತಹಶೀಲ್ದಾರ್‌ ಎಂ.ಗಂಗಪ್ಪ, ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಕಲ್ಲೇಶ ತಾಳದ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾಂತಮ್ಮ ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು.

ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶೇಖರಪ್ಪ ಮ್ಯಾಗೇರಿ, ಪ್ರಮುಖರಾದ ಯಂಕಪ್ಪ ಹಿರೇಮನಿ, ಸೂಚಪ್ಪ ಭೋವಿ, ಪುರಸಭೆ ಸದಸ್ಯ ಹೊನ್ನಪ್ಪ ಭೋವಿ, ಮುಖ್ಯಶಿಕ್ಷಕ ಸಿದ್ರಾಮಪ್ಪ ಅಮರಾವತಿ, ಶಿವಶಂಕರಪ್ಪ ಗೋನಾಳ, ಗುರಪ್ಪ ಕುರಿ, ಅಹ್ಮದ್‌ ಹುಸೇನ್‌, ಚಂದ್ರಕಾಂತ ವಡಗೇರಿ, ಕಾಶೀಮಪ್ಪ ಬಿಜಕಲ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೋರಟಗಿ, ಅರವಿಂದಕುಮಾರ ದೇಸಾಯಿ, ದೈಹಿಕ ಶಿಕ್ಷಣಾಧಿಕಾರಿ ವೆಂಕನಗೌಡ ದಾದ್ಮಿ  ಇದ್ದರು.
ಭೋವಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಾಲ್ಕು ತಾಸುಗಳವರೆಗೆ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಿದ್ಧರಾಮೇಶ್ವರರ ವಚನಗಳು ಕೇಳಿಬರಲಿಲ್ಲ. ಆದರೆ ಕಿವಿಗಡಚಿಕ್ಕುವ ಡಿಜೆ ಸೌಂಡ್‌ನಲ್ಲಿ ಚಲನಚಿತ್ರಗಳ ಪ್ರೇಮ ಗೀತೆಗಳಿಗೆ ಹಿರಿಯರು ಬೇಸರ ವ್ಯಕ್ತಪಡಿಸಿದರು.

ಯಲಬುರ್ಗಾ ವರದಿ:  ಕಾಯಕ ಶಿವಯೋಗಿ ಸಿದ್ದರಾಮೇಶ್ವರರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಮೂಲಕ ಮಹತ್ವದ ಮಾಹಿತಿ ಜನಸಾಮಾನ್ಯರಿಗೆ ತಿಳಿಯ ಪಡಿಸುವ ಕೆಲಸ ಸರ್ಕಾರ ಮಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ನಿರ್ದೇಶಕ ಬಸವರಾಜ ಉಳ್ಳಾಗಡ್ಡಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕ ಕಲ್ಯಾಣಕ್ಕೆ ಸಮಾಜ ಸುಧಾರಣೆಗೆ ವಿಶೇಷ ಕೊಡುಗೆ ನೀಡಿದ ಶರಣರನ್ನು ಯಾವತ್ತು ಮರೆಯುವಂತಿಲ್ಲ ಎಂದರು.

ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಮಾತನಾಡಿ, ಭೋವಿ ಸಮಾಜದವರು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕಾಗಿದೆ. ಸಿದ್ದರಾಮೇಶ್ವರರ ವಚನಗಳ ಬಗ್ಗೆ ವಿವಿಧ ವಿಶ್ವ ವಿದ್ಯಾಲಯಗಳು ಹೆಚ್ಚಿನ ಸಂಶೋಧನೆ ನಡೆಸಬೇಕು ಎಂದರು. ತಹಶೀಲ್ದಾರ ರಮೇಶ ಅಳವಂಡಿಕರ್‌ ಮಾತನಾಡಿ, ಜಯಂತಿ ಆಚರಣೆ ಒಂದು ಸೌಭಾಗ್ಯ ಎಂದು ನುಡಿದರು. ತಾ.ಪಂ ಅಧ್ಯಕ್ಷೆ ಲಕ್ಷ್ಮಿ ಗೌಡ್ರ ಚಾಲನೆ ನೀಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಅರಕೇರಿ ಅಧ್ಯಕ್ಷತೆ ವಹಿಸಿದ್ದರು.

ತಾಪಂ ಮಾಜಿ ಅಧ್ಯಕ್ಷ ವೀರನಗೌಡ ಮಾಲಿಪಾಟೀಲ, ಭೋವಿ ಸಮಾಜದ ಮುಖಂಡ ನಾಗಪ್ಪ ವಡ್ಡರ್‌, ತಾಪಂ ಇಓ ಕೆ.ತಿಮ್ಮಪ್ಪ, ಅಧಿಕಾರಿ ನಾಗೇಶ , ಬಸವರಾಜಸ್ವಾಮಿ, ತಿಪ್ಪಣ್ಣ ತಳಕಲ್ಲ, ವೈ.ಜಿ.ಪಾಟೀಲ, ಅರೋಣಿ ರಶೀದ್‌, ಮುಖಂಡ ಸ.ಶರಣಪ್ಪ ಪಾಟೀಲ ಬಸವರಾಜ ಭೋವಿ ಹುಲಗಪ್ಪ ಬಂಡಿವಡ್ಡರ್‌ ಇದ್ದರು. 

ತಾವರಗೇರಾ ವರದಿ:  ಇಲ್ಲಿಯ ಪಟ್ಟಣ ಪಂಚಾಯತಿ ಕಾರ್ಯಾಲಯದ ಮುಂದೆ ಕರ್ನಾಟಕ ರೈತ ಸಂಘ ಮತ್ತು ವೆಲ್‍ಫೇರ್ ಫಾರ್ಟಿ ಆಪ್ ಇಂಡಿಯಾ ,ಜಂಟಿ ಸಂಘಟನೆಗಳ ಕಾರ್ಯಕರ್ತರು ಕುಡಿವ ನೀರು ಮತ್ತು ಮೂಲ ಸೌಕರ್ಯಗಳಿಗೆ  ಆಗ್ರಹಿಸಿ ಸೋಮವಾರ ಉಪವಾಸ , ಮೌನ ಸತ್ಯಾಗ್ರಹ  ನಡೆಸಿದರು.

ರೈತ ಸಂಘದ  ಬಸವರಾಜ ಬುನ್ನಟ್ಟಿ, ವೆಲ್‍ಫೇರ್ ಫಾರ್ಟಿ ಆಪ್ ಇಂಡಿಯಾ ತಾಲೂಕ ಉಪಾಧ್ಯಕ್ಷ ರಾಜಾನಾಯಕ್, ದಲಿತ ಮುಖಂಡ ಆನಂದ ಭಂಡಾರಿ,  ಹೋಬಳಿ ಅಧ್ಯಕ್ಷ ರಫೀಕ್ , ಮಹಿಬೂಬ ನಾಡಗೌಡ, ಸಲೀಂ ನಾಯಕ್, ಶ್ಯಾಮೀದ್ ಮೆಣೆದಾಳ, ರಫಿ, ಅಮಾಜಪ್ಪ ಇತರರು ಇದ್ದರು.

ಸಿದ್ಧರಾಮ ಅಲ್ಲ ‘ದೇವರದಾಸೀಮಯ್ಯ’ ಜಯಂತಿ!

ಕುಷ್ಟಗಿ: ತಾಲ್ಲೂಕಿನ ಕ್ಯಾದಿಗುಪ್ಪಾ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಸೋಮವಾರ ಇಲ್ಲಿ ಈ ವಿಷಯ ಕುರಿತು ತಹಶೀಲ್ದಾರ್‌ ಎಂ.ಗಂಗಪ್ಪ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು ಬೆಳಿಗ್ಗೆ 11 ಗಂಟೆವರೆಗೂ ಸಿಬ್ಬಂದಿ, ಪ್ರತಿನಿಧಿಗಳು ಕಚೇರಿಯಲ್ಲಿ ಇರಲಿಲ್ಲ ಮತ್ತು ಜಯಂತಿ ಆಚರಿಸದ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಅಲ್ಲದೆ ಆಚರಣೆ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮರಮ್ಮ ಅವರ ಸಹಿ ಇರುವ ಪ್ರಕಟಣೆ ನೀಡಿರುವ ಪಂಚಾಯಿತಿ ಅಧಿಕಾರಿಗಳು ಸಿದ್ದರಾಮೇಶ್ವರರ ಹೆಸರಿನ ಬದಲಾಗಿ ದೇವರ ದಾಸೀಮಯ್ಯ ಎಂದು ತಪ್ಪಾಗಿ ನಮೂದಿಸಿದ್ದಾರೆ ಎಂಬ ಪಂಚಾಯಿತಿಯ ದಾಖಲೆ ಪ್ರತಿಯನ್ನೂ ಗ್ರಾಮಸ್ಥರು ತಹಶೀಲ್ದಾರ್‌ಗೆ ಸಲ್ಲಿಸಿದರು.

ಹೇಳಿಕೆ: ಸುದ್ದಿಗಾರರಿಗೆ ಮಾಹಿತಿ ನೀಡಿದ ತಹಶೀಲ್ದಾರ್‌ ಗಂಗಪ್ಪ, ಪಂಚಾಯಿತಿ ನೀಡಿದ ಪ್ರಕಟಣೆಯಲ್ಲಿ ದೇವರದಾಸೀಮಯ್ಯ ಎಂದು ತಪ್ಪಾಗಿ ನಮೂದಾಗಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ, ಆದರೆ ಗ್ರಾ.ಪಂ ಕಚೇರಿಯಲ್ಲಿ ಜ 16ರಂದೆ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರ ಇಟ್ಟು ಜಯಂತಿ ಆಚರಿಸಿರುವ ಬಗ್ಗೆ ಕ್ಯಾದಿಗುಪ್ಪಾ ಗ್ರಾಮಸ್ಥರು ತಮಗೆ ತಿಳಿಸಿದ್ದಾರೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳುವುದಾಗಿ ಹೇಳಿದರು.

ಕಾರಟಗಿ ವರದಿ: ಪಟ್ಟಣದ ಪುರಸಭೆಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಎನ್. ಶಿವಲಿಂಗಪ್ಪ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣಮ್ಮ ಬೂದಿ, ಉಪಾಧ್ಯಕ್ಷೆ ಮಹಾದೇವಿ ಭಜಂತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ, ಸದಸ್ಯರಾದ ಯುಸೂಫ್ ಪ್ರಮುಖರಾದ ಗಿರಿಯಪ್ಪ ಬೂದಿ, ಜೆ. ರಾಮರಾವ್, ಕಾಳಪ್ಪ ಬಡಿಗೇರ, ಸಿದ್ಧರಾಮೇಶ್ವರ ಸಂಘದ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT