ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಹರಿಸಲು ನಾಲ್ಕು ದಿನದ ಗಡುವು

ಆನವಟ್ಟಿ: ಎಣ್ಣೆಕೊಪ್ಪ ಗ್ರಾಮದ ನೂತನ ಪಂಚಾಯ್ತಿ ಕಟ್ಟಡ ಉದ್ಘಾಟಿಸಿದ ಶಾಸಕ ಮಧು ಬಂಗಾರಪ್ಪ
Last Updated 17 ಜನವರಿ 2017, 7:23 IST
ಅಕ್ಷರ ಗಾತ್ರ

ಆನವಟ್ಟಿ: ‘ಗ್ರಾಮೀಣ ಭಾಗದ ಜನರು ಗ್ರಾಮಸಭೆಗಳಿಗೆ ತಪ್ಪದೇ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಶಾಸಕ ಮಧು ಬಂಗಾರಪ್ಪ ಸಲಹೆ ನೀಡಿದರು.

ಎಣ್ಣೆಕೊಪ್ಪ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಮಾಹಿತಿ ಸೇವಾ ಕೇಂದ್ರ ಹಾಗೂ ಗ್ರಾಮ ಪಂಚಾಯ್ತಿ 13ನೇ ಹಣಕಾಸು ಯೋಜನೆಯಲ್ಲಿ ನಿರ್ಮಾಣಗೊಂಡ ಕಟ್ಟಡಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಕುಡಿಯುವ ನೀರು, ಬೆಳೆ ಪರಿಹಾರ, ನಿರಂತರ ಜ್ಯೋತಿ, ನೀರಾವರಿ ಯೋಜನೆ, ಆಶ್ರಯ ಮನೆಗಳ ಬಗ್ಗೆ ಸಮರ್ಪಕ ವ್ಯವಸ್ಥೆ ಆಗಿಲ್ಲದ ಬಗ್ಗೆ ದೂರುಗಳು ಕೇಳಿ ಬಂದವು. ಕುಡಿಯುವ ನೀರಿನ ಸಮಸ್ಯೆ ದೊಡ್ಡಮಟ್ಟದಲ್ಲಿ ಇದ್ದ ಕಾರಣ ಶಾಸಕರು ಪಿಡಿಒ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

‘ಎಣ್ಣೆಕೊಪ್ಪ, ಕಮನವಳ್ಳಿ, ಗೊಲ್ಲರ ತಾಂಡಗಳಲ್ಲಿ ಪೈಪ್‌ಲೈನ್ ಇದ್ದರೂ ಇದುವರೆಗೂ ನೀರು ಏಕೆ ಕೊಟಿಲ್ಲ? ಕನಿಷ್ಠ ಕುಡಿಯುವ ನೀರು ಪೂರೈಸುವ ಸೌಜನ್ಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇಲ್ಲವೇ? ಇನ್ನೂ ನಾಲ್ಕು ದಿನಗಳ ಒಳಗಾಗಿ ನೀರು ಒದಗಿಸಬೇಕು’ ಎಂದು ತಾಕೀತು ಮಾಡಿದರು.

‘ನಲ್ಲಿಗೆ ಮೋಟರ್ ಅಳವಡಿಸದಂತೆ ನಿಗಾ ವಹಿಸಿ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದ ಅವರು, ‘ಬರಗಾಲದಿಂದಾಗಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿದಿದೆ. ಕುಡಿಯುವ ನೀರಿನ ವಿಚಾರದಲ್ಲಿ ಸಹಕಾರ ಮನೋಭಾವದಿಂದ ವರ್ತಿಸಬೇಕು’ ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.

‘ಗ್ರಾಮ ಪಂಚಾಯ್ತಿಯ ಎಲ್ಲ ಕೆಲಸಗಳೂ ಗಣಕೀಕೃತವಾಗಿರುವುದರಿಂದ ಎಂಟು ಕಿ.ಮೀ ದೂರದ ಆನವಟ್ಟಿಗೆ  ಜನರು ಹೋಗಬೇಕು. ಹಾಗಾಗಿ ಗ್ರಾಮ
ಮಟ್ಟದಲ್ಲಿ ಅಂತರ್ಜಾಲದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಪರಿಹಾರಕ್ಕೆ ಮನವಿ: ‘ರೈತರ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ₹ 1.86 ಕೋಟಿ ಬೆಳೆ ಪರಿಹಾರ ಬರಬೇಕಿದೆ. ಅದನ್ನು ನಾನು ಖಂಡಿತ ಕೊಡಿಸುತ್ತೇನೆ. ಈ ವರ್ಷದಲ್ಲಿ ಹೆಚ್ಚಿನ ಬೆಳೆ ಪರಿಹಾರ ನೀಡುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಕೋರಲಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಅಧ್ಯಕ್ಷೆ ಹೇಮಲತಾ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಸತೀಶ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಯನಾ ಶ್ರೀಪಾದ್, ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯೆ ಲತಾ ಸುರೇಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ರುದ್ರಪ್ಪ ಕಡ್ಲರ್, ಕೆ.ಪಿ.ರುದ್ರಗೌಡ, ಭರಮಗೌಡ, ಸಂಜೀವ ಲಕ್ಕವಳ್ಳಿ, ಎಸ್‌ಡಿಎಂಸಿ ಸದಸ್ಯರಾದ ಜಯಶೀಲಪ್ಪ, ರಾಜಶೇಖರ್, ಪಿಡಿಒ ಈಶ್ವರ್ ಕಾಖಂಡಕಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT