ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ, ಹಗಲೆನ್ನದೆ ಮರಳು ಅಕ್ರಮ ಸಾಗಾಟ

ತೀರ್ಥಹಳ್ಳಿ: ಮರಳುಗಳ್ಳರಿಗೆ ವರದಾನವಾದ ಗಣಿಗಾರಿಕೆಗೆ ಆಕ್ಷೇಪಿಸುವ ಡಾ.ಕಸ್ತೂರಿ ರಂಗನ್‌ ವರದಿ!
Last Updated 17 ಜನವರಿ 2017, 7:28 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮರಳು ಅಕ್ರಮ ಸಾಗಾಟ ನಿರಾತಂಕವಾಗಿ ನಡೆಯುತ್ತಿದ್ದರೂ, ತಡೆಗಟ್ಟಬೇಕಿದ್ದ ತಾಲ್ಲೂಕು ಆಡಳಿತ ಮೌನಕ್ಕೆ ಶರಣಾಗಿದೆ. ಸಣ್ಣ–ಪುಟ್ಟ ನದಿ, ತೊರೆಗಳಲ್ಲಿ ಶೇಖರಣೆಗೊಂಡ ಮರಳು ಕಳ್ಳಕಾಕರ ಪಾಲಾಗುತ್ತಿದ್ದು, ಪರಿಸರ ನಾಶದ ಕೃತ್ಯ ನಿರಂತರವಾಗಿ ನಡೆಯುತ್ತಿದೆ.

ತಾಲ್ಲೂಕಿನ ತುಂಗಾ, ಮಾಲತಿ, ಕುಂಟೆಹಳ್ಳ, ಗೋಪಿನಾಥಹಳ್ಳ ಸೇರಿದಂತೆ ಸಣ್ಣ ಪುಟ್ಟ ಹಳ್ಳಗಳಲ್ಲಿ ಶೇಖರಣೆಗೊಂಡ ಮರಳನ್ನು ರಾತ್ರಿ– ಹಗಲೆನ್ನದೇ ದೋಚುವ ಮೂಲಕ ನದಿ ಪಾತ್ರವನ್ನು ಬರಡು ಮಾಡಲಾಗುತ್ತಿದೆ.

ಲೋಕೋಪಯೋಗಿ ಇಲಾಖೆಗೆ ಈ ಹಿಂದೆ ಸೇರಿದ್ದ ಹೆದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಳ್ಳಿ, ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಹಿಷಿ ಕ್ವಾರಿಗಳು ಡಾ.ಕಸ್ತೂರಿ ರಂಗನ್‌ ವರದಿ, ಅರಣ್ಯ ಇಲಾಖೆಯ ಆಕ್ಷೇಪಣೆ ಕಾರಣ ಸ್ಥಗಿತಗೊಂಡಿವೆ. ಹೀಗಿದ್ದೂ ಈ ಪ್ರದೇಶಗಳಲ್ಲಿ ಅನಧಿಕೃತ
ವಾಗಿ ಮರಳು ಸಾಗಾಟ ನಿರಂತರವಾಗಿ ನಡೆಯುತ್ತಿದೆ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರದ ಈ ಮರಳು ಕ್ವಾರಿಗಳಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಅರಣ್ಯ, ಕಂದಾಯ, ಪೊಲೀಸ್‌ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡುತ್ತಿರುವ ಪರೋಕ್ಷ ಬೆಂಬಲ ‘ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ’ ಎಂದು ಸಾರ್ವಜನಿಕರು ದೂರಿದ್ದಾರೆ.
ತುಂಗಾ, ಮಾಲತಿ ನದಿ ತೀರದ ಕುಶಾವತಿ, ಕುಂಟೆಹಳ್ಳ, ಗೋಪಿನಾಥ ಹಳ್ಳ ಸೇರಿದಂತೆ ಸಣ್ಣ ಪುಟ್ಟ ಹಳ್ಳ, ತೊರೆಗಳಲ್ಲಿ ಸಂಗ್ರಹಗೊಂಡ ಮರಳನ್ನು ಸಾಗಿಸಲಾಗುತ್ತಿದೆ.

ನದಿ ಪ್ರವೇಶಿಸುವ ಜಮೀನಿನ ಮಾಲೀಕರಿಗೆ ದಾರಿ ಬಿಟ್ಟುಕೊಟ್ಟಿರುವುದಕ್ಕೆ ಹಣ ಕೊಟ್ಟು, ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮರಳನ್ನು ದೋಚುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಕೆಲವು ಕಡೆ ಮರಳನ್ನು ಸಂಸ್ಕರಿಸಿ ಸಿಮೆಂಟ್‌ ಚೀಲದಲ್ಲಿ ತುಂಬಿ ಸಾಗಿಸುವ ದಂಧೆ ಕೂಡ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.

ಕಸ್ತೂರಿ ರಂಗನ್‌ ವರದಿ, ಅರಣ್ಯ ಇಲಾಖೆ ಆಕ್ಷೇಪದ ಕಾರಣ ತುಂಗಾ ನದಿ ಪಾತ್ರದಲ್ಲಿ ಈ ಹಿಂದೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದ ಬಾಳಗಾರು, ಹೊಸಳ್ಳಿ, ಮಹಿಷಿ, ಆರಗ ಸಮೀಪ ಗೋಪಿನಾಥಹಳ್ಳದಲ್ಲಿ ಮರಳು ಖಾಲಿಯಾಗಿದ್ದರೂ ಮರಳು ಸಾಗಣೆ ಮಾತ್ರ ನಿರಂತರವಾಗಿ ನಡೆಯು
ತ್ತಿದೆ.  ಇದರಿಂದ ಸರ್ಕಾರದ ಖಜಾನೆಗೆ ನಷ್ಟವಾಗುತ್ತಿದೆ. ಅಕ್ರಮ ತಡೆಗಟ್ಟಬೇಕಾದ ಕಂದಾಯ, ಅರಣ್ಯ, ಪಂಚಾಯತ್‌ ರಾಜ್‌, ಭೂ ವಿಜ್ಞಾನ ಮತ್ತು ಗಣಿ ಇಲಾಖೆ, ಪೊಲೀಸ್‌ ಇಲಾಖೆ ಮರಳು ಪ್ರದೇಶಗಳ ಸಂರಕ್ಷಣೆ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಹೊಸಳ್ಳಿ, ಮಹಿಷಿ, ಗೋಪಿನಾಥಹಳ್ಳ, ಕುಶಾವತಿ ಕ್ವಾರಿಗಳಿಂದ ಲಾರಿ, ಟ್ರ್ಯಾಕ್ಟರ್‌, ಟಿಪ್ಪರ್‌, ಸಣ್ಣ ಪುಟ್ಟ ವಾಹನಗಳ ಮೂಲಕ ಮರಳು ಸಾಗಾಟ ಮಾಡ
ಲಾಗುತ್ತಿದೆ.  ನದಿ ದಂಡೆ ಒಡೆದು ನದಿಯ ಹರಿವಿಗೆ ಧಕ್ಕೆ ಒದಗುವ ರೀತಿಯಲ್ಲಿ ಮನಬಂದಂತೆ ಮರಳು ಸಾಗಾಟ ನಡೆಯುತ್ತಿದ್ದರೂ ಯಾವುದೇ ಕ್ರಮ ಜರುಗುತ್ತಿಲ್ಲ.

ತೀರ್ಥಹಳ್ಳಿ ಸುತ್ತಮುತ್ತಲಿನಲ್ಲಿ ಅಕ್ರಮವಾಗಿ ದೋಚಿದ ಮರಳನ್ನು ಶಿವಮೊಗ್ಗಕ್ಕೆ ಸಾಗಾಟ ಮಾಡಲಾಗುತ್ತಿದೆ. ಸ್ಥಗಿತಗೊಂಡ ಮರಳು ಕ್ವಾರಿಗಳ ಗೇಟಿನ ಬೀಗ ತೆಗೆದು ರಾತ್ರಿ ಮರಳು ಕದಿಯುವ ಕುರಿತು ಮಾಹಿತಿ ಇದ್ದರೂ ಕ್ರಮ ತೆಗೆದುಕೊಳ್ಳದೇ ಇರುವುದು ಜನರ ಅಚ್ಚರಿಗೆ ಕಾರಣವಾಗಿದೆ.

ಅಕ್ರಮ ಮರಳು ಸಾಗಣೆ ಕೇವಲ ಸ್ಥಳೀಯ ಸಮಸ್ಯೆಯಲ್ಲ. ಈ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಏಕರೂಪದ ಮರಳು ನೀತಿಯನ್ನು ದೇಶದಾದ್ಯಂತ ಜಾರಿಗೆ ತರುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಈ ನಡುವೆ ಗ್ರಾಹಕರು ದುಬಾರಿ ಬೆಲೆ ತೆತ್ತು ಮರಳನ್ನು ಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
– ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT