ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಚರಂಡಿ: ಗುಣಮಟ್ಟದ ಕಾಮಗಾರಿಗೆ ತಾಕೀತು

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್
Last Updated 17 ಜನವರಿ 2017, 7:42 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದಾದ್ಯಂತ ಕೈಗೊಳ್ಳಲಾದ ಒಳಚರಂಡಿ ಕಾಮಗಾರಿಗಳ ವಾಸ್ತವಸ್ಥಿತಿ ಸೋಮವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಅನಾವರಣ
ಗೊಂಡಿತು. ನಗರಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ್ ಅಧ್ಯಕ್ಷತೆಯಲ್ಲಿ ನಡೆದ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲಿಕೆ ಸದಸ್ಯರು, ಅಸಮರ್ಪಕ ಒಳಚರಂಡಿ ಕಾಮಗಾರಿ ಹಾಗೂ ಕಾಮಗಾರಿಯಲ್ಲಾದ ಲೋಪದೋಷಗಳನ್ನು ವಿವರಿಸಿದರು.

ಗುಣಮಟ್ಟದ ಕಾಮಗಾರಿಗೆ ಸೂಚನೆ:  ‘ಶಿವಮೊಗ್ಗ ನಗರವನ್ನು ರಾಜ್ಯದ ಎಲ್ಲ ನಗರಗಳಿಗಿಂತಲೂ ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ಪಾಲಿಕೆಯಿಂದ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಪಾಲಿಕೆ ಆಯುಕ್ತರಿಗೆ ಹಾಗೂ ಎಂಜಿನಿಯರ್‌ಗಳಿಗೆ ಸಚಿವ ರೋಷನ್ ಬೇಗ್ ತಾಕೀತು ಮಾಡಿದರು.

‘ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ಶಿವಮೊಗ್ಗದಲ್ಲಿ ಒಳಚರಂಡಿ ಕಾಮಗಾರಿಯಲ್ಲಿ ಲೋಪಗಳಾಗಿರುವುದು ಗಮನಕ್ಕೆ ಬಂದಿದೆ. ಕಾಮಗಾರಿ ಕೈಗೆತ್ತಿಕೊಂಡಾಗ ಸ್ಥಳೀಯ ಜನಪ್ರತಿನಿಧಿಗಳ ಸಲಹೆ ಪಡೆಯುವುದು ಅಗತ್ಯ. ಯಾವುದೇ ಕಾಮಗಾರಿ ಇರಲಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ವಿಳಂಬವಾದಲ್ಲಿ ಗುತ್ತಿಗೆದಾರರಿಗೆ ತಕ್ಷಣವೇ ನೋಟಿಸ್ ನೀಡಿ’ ಎಂದು ಸೂಚನೆ ನೀಡಿದರು.

ಮುಖ್ಯ ಎಂಜಿನಿಯರ್ ಕೇಶವ್ ಮಾತನಾಡಿ, ‘ನಗರದ ಒಳಚರಂಡಿ ಕಾಮಗಾರಿ ಶೇ 85ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಳಿ
ಸಲು ಒಟ್ಟು ₹  115 ಕೋಟಿ ವೆಚ್ಚದ ಮಾರ್ಪಾಡಿತ ಅಂದಾಜು ಪಟ್ಟಿ ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಪಾಲಿಕೆ ಸದಸ್ಯ ಕಾಶಿ ವಿಶ್ವನಾಥ್ ಮಾತನಾಡಿ, ‘ಒಳಚರಂಡಿ ಕಾಮಗಾರಿ ಮಳೆಗಾಲದ ಸಮಯದಲ್ಲಿ ನಡೆಸುವುದರಿಂದ, ಮತ್ತೆ ಮಳೆಗಾಲ ಪೂರ್ಣಗೊಳ್ಳುವಷ್ಟರಲ್ಲಿ ಸಮಸ್ಯೆ ಉದ್ಭವವಾಗುತ್ತದೆ’ ಎಂದು ದೂರಿದರು.

ಪಾಲಿಕೆ ಎಂಜಿನಿಯರ್ ಗಣೇಶ್ ಮಾಹಿತಿ ನೀಡಿ, ‘ನಗರಪಾಲಿಕೆ ವ್ಯಾಪ್ತಿಯಲ್ಲಿ 19,040 ಬೀದಿ ದೀಪಗಳಿವೆ. ಈಗಾಗಲೇ 1,706 ಬೀದಿ ದೀಪಗಳಿಗೆ ಎಲ್ಇಡಿ ದೀಪ ಅಳವಡಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆ ಅಡಿ ನಗರದಾದ್ಯಂತ ಎಲ್‌ಇಡಿ ದೀಪ ಅಳವಡಿಸಲು ಚಿಂತನೆ ಇದೆ. ಇದರಿಂದ ಶೇ 50ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ’ ಎಂದು ಮಾಹಿತಿ ನೀಡಿದರು.

ಎಲ್ಇಡಿ ದೀಪ ಅಳವಡಿಸಲು ಸೂಚನೆ:  ‘ನಗರ ಪ್ರದೇಶದಲ್ಲಿ ಎಲ್ಇಡಿ ಬೀದಿದೀಪ ಅಳವಡಿಸಲು ಒತ್ತು ನೀಡಿ. ಪ್ರಸ್ತುತ ₹ 4 ಕೋಟಿ ಬೀದಿದೀಪಗಳಿಗಾಗಿ ಮೆಸ್ಕಾಂಗೆ ಹಣ ಪಾವತಿ ಮಾಡಲಾಗುತ್ತಿದೆ. ನಗರದಲ್ಲೆಡೆ ಎಲ್ಇಡಿ ದೀಪ ಅಳವಡಿಕೆಯಾದಲ್ಲಿ ₹ 3 ಕೋಟಿ ಉಳಿತಾಯವಾಗಲಿದೆ. ಈ ಸಂಬಂಧ ಎಲ್ಇಡಿ ದೀಪ ಸರಬರಾಜು ಮಾಡುವ ಗುತ್ತಿಗೆದಾರರೇ ಅದರ ನಿರ್ವಹಣೆ ಮಾಡುವಂತೆಯೂ ಷರತ್ತು ವಿಧಿಸಿ. ಒಂದು ಏಜೆನ್ಸಿಗೆ ಗುತ್ತಿಗೆ ವಹಿಸಿ’ ಎಂದು ಸಚಿವರು ತಾಕೀತು ಮಾಡಿದರು.

‘ಶಿವಮೊಗ್ಗ ನಗರ ಬಯಲುಶೌಚ ಮುಕ್ತ ನಗರವಾಗಬೇಕು. ಈ ಸಂಬಂಧ ವ್ಯಾಪಕ ಪ್ರಚಾರ ಮಾಡುವಂತೆ ಹಾಗೂ ಅಗತ್ಯ ಮೂಲಸೌಲಭ್ಯ ಒದಗಿಸಿ. ಸರ್ವರಿಗೂ ಸೂರು ಯೋಜನೆಯಡಿ ನಗರದ ಬಡವರಿಗೆ 6,000 ಮನೆಗಳನ್ನು ನಿರ್ಮಿಸಿಕೊಡುವ ಪ್ರಕ್ರಿಯೆ ನಡೆಸಿ’ ಎಂದು ಆಯುಕ್ತರಿಗೆ ಸೂಚಿಸಿದರು.
ಆಯುಕ್ತೆ ತುಷಾರ ಮಣಿ ಮಾಹಿತಿ ನೀಡಿ, ‘ಗೋಪಶೆಟ್ಟಿ ಕೊಪ್ಪ ಹಾಗೂ ಗೋವಿಂದಾಪುರದಲ್ಲಿ ಮನೆ ನಿರ್ಮಾಣ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದರು.

ಸದಸ್ಯ ವೆಂಕ್ಯಾನಾಯ್ಕ ಮಾತನಾಡಿ, ಹಿಂದೆ ನಗರಸಭೆ ರಚನೆ ಮಾಡುವ ಸಂದರ್ಭದಲ್ಲಿ ಕೆಲವು ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸ
ಲಾಗಿತ್ತು. ಆದರೆ, ಅಲ್ಲಿನ ನಿವೇಶನಗಳ ಅಳತೆ ದಾಖಲಾಗಿಲ್ಲ ಎಂದು ಹೇಳಿದರು.

‘ಸೂಡಾ’ ಅಧ್ಯಕ್ಷ ಕೆ.ಎಂ.ಉಸ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮೇಯರ್ ಎಸ್.ಕೆ.ಮರಿಯಪ್ಪ, ಉಪ ಮೇಯರ್ ಮಂಗಳಾ ಅಣ್ಣಪ್ಪ, ‘ಸೂಡಾ’ ಅಧ್ಯಕ್ಷ ಉಸ್ಮಾನ್, ಆಯುಕ್ತ ಮೂಕಪ್ಪ ಕರಭೀಮಣ್ಣನವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT