ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಕಾಡುತ್ತಿದೆ ‘ಹೈ ಟೆನ್ಶನ್‌’ ಸಮಸ್ಯೆ

ಆತಂಕದಲ್ಲಿ ಬದುಕುತ್ತಿರುವ ಲೆನಿನ್‌ ನಗರದ ನಿವಾಸಿಗಳು: ಅಧಿಕ ವಿದ್ಯುತ್ ಪ್ರವಹಿಸಿ ಅವಘಡ
Last Updated 17 ಜನವರಿ 2017, 8:32 IST
ಅಕ್ಷರ ಗಾತ್ರ

ದಾವಣಗೆರೆ: ಸಾವು ಕಣ್ಣೆದುರಲ್ಲೇ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಸಾವು ಖಚಿತ. ಸದಾ ಭಯದ ನೆರಳು. ಆತಂಕದ ವಾತಾವರಣ. ಇದೇ ಬದುಕು–ಬವಣೆ. 

ಇದು ಒಂದು ದಿನದ ಸಾವು–ಬದುಕಿನ ಹೋರಾಟ ಅಲ್ಲ. ಪ್ರತಿನಿತ್ಯದ ಪಡಿಪಾಟಲು. ಪ್ರಾಣದ ಜತೆ 40 ವರ್ಷದ ಜೂಜಾಟ. ಇಲ್ಲಿ ಜೀವಕ್ಕೆ ಬೆಲೆ ಇಲ್ಲ, ಜೀವನಕ್ಕೆ ಅನ್ಯ ಮಾರ್ಗವಿಲ್ಲ.

ಒಂದು ಕಾಲದ ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಹೆಸರಾಗಿದ್ದು ದಾವಣಗೆರೆ. ಹತ್ತಾರು ಕಾರ್ಖಾನೆಗಳ ಸಾವಿರಾರು ಕಾರ್ಮಿಕರು ಮೊದಲು ನೆಲೆ ಕಂಡುಕೊಂಡಿದ್ದೇ ಲೆನಿನ್‌ ನಗರದಲ್ಲಿ. ಇಲ್ಲಿ ಹಾದುಹೋದ ಹೈಟೆನ್ಶನ್ ವಿದ್ಯುತ್ ಮಾರ್ಗ ಜನರ ಜೀವ ಹಿಂಡುತ್ತಿದೆ. ಇಷ್ಟು ವರ್ಷಗಳಲ್ಲಿ ನಡೆದ ಅವಘಡಗಳು ಅಸಂಖ್ಯ.

ಸಾವು–ನೋವುಗಳ ಸಂಖ್ಯೆ ಸಾಕಷ್ಟು. ಕಳೆದ ಎರಡೂವರೆ ವರ್ಷದಲ್ಲಿ ನಡೆದ ಐದು ಪ್ರಕರಣಗಳಲ್ಲಿ ನಾಲ್ಕು ಸಾವು. ಮೂರು ಮಂದಿಗೆ ಗಾಯ. ರಾಜೇಶ್ವರಿ ಬಡಾವಣೆ ವ್ಯಾಪ್ತಿಯ ಲೆನಿನ್ ನಗರದ 2ನೇ ಅಡ್ಡರಸ್ತೆಯ ಜನರಿಗೆ ಅಕ್ಷರಶಃ ನಿದ್ದೆ ಇಲ್ಲದ ರಾತ್ರಿ.

‘ಆ ಮನೆಯಲ್ಲಿ ಒಬ್ಬ ಹೆಂಗಸು ತೀರಿಕೊಂಡು ಹೋದ್ರು, ಈ ಮನೆಯ ಗಂಡಸೊಬ್ಬರು ಸಾವು ಕಂಡರು. ಅದೇ ಅಲ್ಲೊಂದು ಮನೆ ಇದೆಯಲ್ಲಾ ಅವರ ಅದೃಷ್ಟ ಚೆನ್ನಾಗಿತ್ತು, ಶಾಕ್‌ ಆದರೂ ಯಜಮಾನ್ರು ಬದುಕಿದರು’ –ಹೀಗೆ ಒಂದೊಂದು ಮನೆಯ ಸಾವು–ನೋವಿನ ಸಂಗತಿ ಹೇಳುತ್ತಾ ಹೋದರು ಇಲ್ಲಿನ ನಿವಾಸಿ ಸೋಮಶೇಖರ್.

‘40 ವರ್ಷದ ಹಿಂದೆ ನಾವು ನಿವೇಶನ ತಗೊಂಡು ಮನೆ ಕಟ್ಟಿದಾಗ ಇದು ಸಮಸ್ಯೆ ಅನ್ನಿಸಿರಲಿಲ್ಲ. ಈಗ ಬೇರೆಡೆ ಹೋಗಾಕೆ ಆಗಲ್ಲ, ಇಲ್ಲಿ ಇರಕೂ ಆಗಲ್ಲ. ಬಿರು ಬೇಸಿಗೆಯಲ್ಲಿ ಹೈಟೆನ್ಶನ್ ತಂತಿ ಕಾದು ವಿಚಿತ್ರ ಶಬ್ದ ಹೊರಡಿಸುತ್ತಿದ್ದರೆ ನಮ್ಮ ಹೃದಯ ಬಡಿದು ಕೊಳ್ಳುತ್ತಿರುತ್ತದೆ. ಮಳೆಗಾಲ ದಲ್ಲಿ ಇನ್ನೂ ಬೇರೆಯ ರೀತಿಯಲ್ಲಿ ಭಯ. ಬಂದವರಿಗೆಲ್ಲ ಮನವಿ ಕೊಟ್ಟೆವು. ನಾವೂ ಹೋಗಿ ಆ ಕಚೇರಿ, ಈ ಕಚೇರಿ ಅಲೆದೆವು. ಪರಿಹಾರ ಮಾತ್ರ ಶೂನ್ಯ’ ಎಂದು ಹತಾಶೆ ವ್ಯಕ್ತಪಡಿಸುತ್ತಾರೆ ಚಂದ್ರಪ್ಪ.

‘ಟಿ.ವಿ. ಫ್ಯಾನ್, ಫ್ರಿಜ್, ಶಾರ್ಟ್‌ ಸರ್ಕೀಟ್‌ನಿಂದ ಎಷ್ಟು ಸಲ ಹಾಳಾಗುತ್ತಾವೋ ದೇವರೇ ಬಲ್ಲ. ವಿದ್ಯುತ್ ಅವಘಡಗಳಿಂದ ಸತ್ತವರಿಗೇ ಪರಿಹಾರ ಸಿಕ್ಕಿಲ್ಲ. ಇನ್ನು ಟಿ.ವಿ., ಫ್ಯಾನ್‌ ಹಾಳಾದರೆ ಪರಿಹಾರ ಸಿಗುತ್ತಾ?’ ಎಂದು ಪ್ರಶ್ನಿಸುತ್ತಾರೆ ಯುವಕ ಆಸಿಫ್.

‘ಮೊದಲಿಗೆ ಈ ಹೈಟೆನ್ಶನ್ ವೈರ್ ತೆಗಿಬೇಕು. ಪಕ್ಕದ ರಾಷ್ಟ್ರೋತ್ಥಾನ ಬಳಗದ ಕ್ಯಾಂಪಸ್‌ ಮೇಲೆ ಹಾದು ಹೋಗಿದ್ದ ಹೈಟೆನ್ಶನ್ ವೈರ್ ತೆರವು ಸಾಧ್ಯವಾಗುವುದಾದರೆ ಸಾವಿರಾರು ಜನರ ನೆಲೆಸಿರುವ ವಸತಿ ಪ್ರದೇಶದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ?’ ಎಂಬ ಮತ್ತೊಂದು  ಪ್ರಶ್ನೆಯನ್ನೂ ಮುಂದಿಡುತ್ತಾರೆ ಆಸೀಫ್.

ಇಲ್ಲಿ ಹೈಟೆನ್ಶನ್ ವೈರ್ ತೀರಾ ಕೆಳಮಟ್ಟದಲ್ಲಿದೆ. ಮನೆ ಮೇಲೆ ನಿಂತುಕೊಂಡರೆ ಕೈಗೆ ತಾಗುತ್ತದೆ. ಇನ್ನೂ ಆಶ್ಚರ್ಯ ಎಂದರೆ ಅಪಾಯ ಎಂಬ ಬೋರ್ಡ್‌ ತಗುಲಿಸಿಕೊಂಡ ಹೈಟೆನ್ಶನ್ ಕಂಬ ರಸ್ತೆ ಮಧ್ಯದಲ್ಲೇ ನಿಂತಿದೆ.

ಕುಂಬಾರ ಓಣಿ, ಬಳೆಗಾರರ ಓಣಿ, ತಳವಾರಪೇಟೆಗಳದ್ದು ಇನ್ನೊಂದು ಕಥೆ. ಒತ್ತೊತ್ತಾದ ಮನೆಗಳು, ಕೈ–ಕಾಲು ಆಡಿಸುವಷ್ಟೂ ಜಾಗ ಇಲ್ಲದ ಮನೆ ವರಾಂಡಗಳು. ಮೂರು ಜನ ಒಟ್ಟಿಗೆ ನಡೆದು ಹೋಗಲು ಸಾಧ್ಯವಾಗದಷ್ಟು ಕಿರಿದಾದ ದಾರಿ. ಆದರೆ, ಇಂತಹ ರಸ್ತೆಗಳಿಗೂ ಸಿಮೆಂಟ್ ಭಾಗ್ಯ ಸಿಕ್ಕಿದೆ.
ವಾರ್ಡ್‌ ವ್ಯಾಪ್ತಿ: ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನ ಮುಂಭಾಗ ದಿಂದ ಡಿಆರ್‌ಎಂ ಪಾಲಿಟೆಕ್ನಿಕ್ ಕಾಲೇಜು ರಸ್ತೆ, ಎಚ್‌ಕೆಆರ್ ವೃತ್ತ, ಕೆಟಿಜೆ ನಗರ ಪೊಲೀಸ್ ಠಾಣೆ ಮುಖಾಂತರ ಇಎಸ್‌ಐ ಆಸ್ಪತ್ರೆ ವಾರ್ಡ್‌ ವ್ಯಾಪ್ತಿಗೆ ಒಳಪಡುತ್ತದೆ.

ಅಭಿವೃದ್ಧಿಗೆ ಕಿರು ರಸ್ತೆಗಳು ಅಡ್ಡಿ
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಅವರ ವಿಶೇಷ ಅನುದಾನದಿಂದ ವಾರ್ಡ್‌ ವ್ಯಾಪ್ತಿಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗಳು ಭರದಿಂದ ಸಾಗಿವೆ. ಇದುವರೆಗೂ ₹ 5 ಕೋಟಿ ವೆಚ್ಚದಲ್ಲಿ ಒಳಚರಂಡಿ, ನೀರಿನ ಪೈಪ್‌, ವಿದ್ಯುತ್ ದೀಪ ಅಳವಡಿಕೆ ಮತ್ತಿತರ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

ಸಚಿವರ, ವಾರ್ಡ್‌ ವ್ಯಾಪ್ತಿಯ ಮುಖಂಡ ಆರ್.ಎಸ್‌.ಶೇಖರಪ್ಪ ಅವರ ಸಲಹೆ–ಸೂಚನೆ ಮೇರೆಗೆ ವಾರ್ಡಿನ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಇದಕ್ಕೆ ಇನ್ನೂ ₹3 ಕೋಟಿ ಅನುದಾನದ ಅಗತ್ಯವಿದೆ.
ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕಿರಿದಾದ ರಸ್ತೆಗಳಿಂದಾಗಿ ಸಮಸ್ಯೆ ಆಗಿದೆ. ಕೆಲವು ಕಡೆ ರಸ್ತೆ ವಿಸ್ತರಣೆ ಅನಿವಾರ್ಯ. ಇದಕ್ಕೆ ಜನರ ಸಹಕಾರವೂ ಬೇಕು. 

ಲೆನಿನ್‌ ನಗರದ 2ನೇ ಅಡ್ಡರಸ್ತೆಯಲ್ಲಿ ಹಾದು ಹೋಗಿರುವ ಹೈಟೆನ್ಶನ್ ವೈರ್ ಸಮಸ್ಯೆ ಬಹುಕಾಲದ್ದು, ಇದನ್ನು ಸ್ಥಳಾಂತರಗೊಳಿಸಲು ಸರ್ಕಾರದ ಮಟ್ಟದಲ್ಲಿ ದೊಡ್ಡ ಯೋಜನೆ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸದಾ ಇದೆ ಎನ್ನುತ್ತಾರೆ ವಾರ್ಡ್ ಸದಸ್ಯ ಶ್ರೀನಿವಾಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT