ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆ: ನಡೆಯದ ನಗದು ರಹಿತ ವ್ಯವಹಾರ

ಬರ, ಮೇವಿನ ಕೊರತೆ ಹಿನ್ನೆಲೆ: ಜಾನುವಾರು ಖರೀದಿಗೆ ನಿರಾಸಕ್ತಿ
Last Updated 17 ಜನವರಿ 2017, 10:11 IST
ಅಕ್ಷರ ಗಾತ್ರ

ರಾಮನಗರ:  ಈಗ ಎಲ್ಲೆಡೆ ನಗದು ರಹಿತ ವ್ಯವಹಾರದ್ದೇ ಮಾತು. ಆದರೆ ಕೆಂಗಲ್‌ನ ದನಗಳ ಜಾತ್ರೆಯಲ್ಲಿ ಮಾತ್ರ ಈ ವ್ಯವಹಾರಕ್ಕೆ ಅವಕಾಶವೇ ಇಲ್ಲ. ಕೊಡು–ಕೊಳ್ಳುವುದೆಲ್ಲವೂ ಸಂಪೂರ್ಣ ನಗದು ರೂಪದಲ್ಲಿ ನಡೆಯುತ್ತಿರುವ ಕಾರಣ  ಹಣದ ಕೊರತೆಯಿಂದಾಗಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.

 ಹೌದು! ರೈತರು ಇನ್ನೂ ನಗದಿಗಾಗಿ ಪರದಾಡತೊಡಗಿದ್ದು, ಅದು ಜಾನುವಾರು ಸಂತೆಯಲ್ಲೂ ಕಂಡುಬಂದಿತು. ₹80 ಸಾವಿರ, ₹1 ಲಕ್ಷದವರೆಗೆ ಕೆಲವರು ದನಗಳನ್ನು ಕೊಳ್ಳಲು ಬಯಸಿದ್ದರು. ಆದರೆ ಅಷ್ಟೂ ಪ್ರಮಾಣದ ಹಣವನ್ನು ಸಂಪೂರ್ಣ ನಗದು ರೂಪದಲ್ಲಿಯೇ ನೀಡುವಂತೆ ಮಾರಾಟ ಮಾಡುವವರು ಒತ್ತಾಯಿಸಿದ್ದರು. ಚೆಕ್‌ ವ್ಯವಹಾರ ಬೇಡವೇ ಬೇಡ ಎಂದು ಕೈಮುಗಿದರು.

ಇದರಿಂದಾಗಿ ಕೆಲವು ಕಡೆ ಖರೀದಿ ಮುರಿದುಬಿದ್ದಿತು. ಪರಸ್ಪರ ಪರಿಚಯ ಇದ್ದವರು ಮಾತ್ರ ಸಾಲದ ರೂಪದಲ್ಲಿ ವ್ಯವಹಾರ ಮಾಡಿ ಮುಗಿಸಿದ ದೃಶ್ಯ ಕಂಡುಬಂದಿತು.

ಕಳೆಗುಂದಿದ ಜಾತ್ರೆ:ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್‌ನ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಸಂಕ್ರಾಂತಿ ಸಂದರ್ಭದಲ್ಲಿ ಪ್ರತಿ ವರ್ಷ ಜಾನುವಾರು ಸಂತೆಯು ನಡೆಯುತ್ತಾ ಬಂದಿದೆ. ಆದರೆ ಬರದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿಗೆ ಬರುವ ದನಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.

‘ಹಿಂದೆಲ್ಲ ದೇವಸ್ಥಾನದ ಸುತ್ತಮುತ್ತ ಎರಡು ಕಿಲೋಮೀಟರ್‌ವರೆಗೆ ರೈತರು ದನಗಳನ್ನು ತಂದು ಕಟ್ಟುತ್ತಿದ್ದರು. ಆದರೆ ಈಗ ಇಲ್ಲಿಗೆ ಬರುವ ರಾಸುಗಳ ಸಂಖ್ಯೆ ಅರ್ಧಕ್ಕಿಂತ ಕಡಿಮೆಯಾಗಿದೆ. ಮೇವು, ನೀರಿನ ಸೌಲಭ್ಯ ಇರದ ಕಾರಣ ಜನರು ದನ ಸಾಕುವುದನ್ನೇ ಕಡಿಮೆ ಮಾಡಿದ್ದಾರೆ’ ಎಂದು ಚನ್ನಪಟ್ಟಣದ ಅಕ್ಕೂರು ನಿವಾಸಿ ರಮೇಶ್‌ ಎಂಬುವರು ವಿವರಿಸಿದರು.‘ಈ ಮೊದಲು ದೂರದ ಹಾವೇರಿ, ವಿಜಯಪುರ ಮೊದಲಾದ ಜಿಲ್ಲೆಗಳಿಂದಲೂ ದನಗಳ ಖರೀದಿಗಾಗಿ ಇಲ್ಲಿಗೆ ಜನರು ಬರುತ್ತಿದ್ದರು. ಆದರೆ ಈ ವರ್ಷ ಅಂತಹವರು ಯಾರೂ ಕಾಣಿಸುತ್ತಿಲ್ಲ. ಬರ ಹಾಗೂ ನಗದು ಕೊರತೆಯಿಂದಾಗಿ ವ್ಯಾಪಾರ ಕಳೆಗುಂದಿದೆ’ ಎಂದು ಅವರು ಹೇಳಿದರು.

ಸಂತೆಯಲ್ಲಿ ₹10 ಸಾವಿರದಿಂದ ಹಿಡಿxದು ₹ 6.5 ಲಕ್ಷದವರೆಗೂ ವಿವಿಧ ಬೆಲೆಯ ದನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.
3–4 ತಿಂಗಳ ಪ್ರಾಯದ ಕರುವಿನ ಬೆಲೆಯೇ ಹತ್ತು ಸಾವಿರದ ಮೇಲೆ ಇದೆ. ದಷ್ಟಪುಷ್ಟವಾದ ದನಗಳಿಗೆ ಒಂದೊಂದಕ್ಕೆ ಲಕ್ಷ ರೂಪಾಯಿ ಬೆಲೆ ಹೇಳಲಾಗುತ್ತಿದೆ.

ಜಾತ್ರೆಗೆ ಬಂದ ದನಗಳಿಗೆ ಮೇವಿನ ಕೊರತೆ ಕಾಡುತ್ತಿದೆ. ರೈತರು ಎತ್ತಿನ ಗಾಡಿಗಳಲ್ಲಿ ಒಣ ಹುಲ್ಲು, ಜೋಳದ ಕಡ್ಡಿಗಳನ್ನು ತಂದಿದ್ದಾರೆ. ಸ್ಥಳೀಯವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಉಳ್ಳವರು ಪೆಂಡಾಲ್‌ ಹಾಕಿ ಶಾಮಿಯಾನದ ವ್ಯವಸ್ಥೆ ಸಹ ಮಾಡಿಕೊಂಡಿದ್ದಾರೆ. ಕೃಷಿ ಕಾರ್ಯಕ್ಕೆ ಅನುವಾಗುವ ವಿವಿಧ ತಳಿಗಳ ದನಗಳ ಜೊತೆಗೆ ‘ಬಿತ್ತನೆ ಹೋರಿ’ಗಳೂ ಪ್ರದರ್ಶನದಲ್ಲಿವೆ.

ಈ ಜೋಡಿಯ ಬೆಲೆ ₹ 6.5 ಲಕ್ಷ!

ಚನ್ನಪಟ್ಟಣದ ಮಂಗಳವಾರ ಪೇಟೆಯ ನಿವಾಸಿ ಪ್ರದೀಪ್‌ ಎಂಬುವರು ದನದ ಜೋಡಿಯೊಂದನ್ನು ಸಂತೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇದಕ್ಕೆ ಅವರು ಘೋಷಿಸಿರುವ ಬೆಲೆ ಬರೋಬ್ಬರಿ ₹ 6.5 ಲಕ್ಷ! 10 ತಿಂಗಳಿನಿಂದ ಅವರು ಈ ದನಗಳನ್ನು ಪೋಷಿಸುತ್ತಿದ್ದಾರೆ.

ಸದ್ಯ ಇವುಗಳನ್ನು ಕೃಷಿ ಉದ್ದೇಶಕ್ಕೆ ಬಳಸುವುದನ್ನು ನಿಲ್ಲಿಸಿದ್ದು, ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಇವಕ್ಕೆ ಪ್ರತಿ ದಿನ 10 ಲೀಟರ್ ಹಾಲು, 10 ಮೊಟ್ಟೆ, 10 ಕೆ.ಜಿ.ಯಷ್ಟು ಹುರುಳಿ ನುಚ್ಚು ಸೇರಿದಂತೆ ವಿವಿಧ ಬಗೆಯ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತಿದೆ. ಇದಕ್ಕೆಂದೇ ತಿಂಗಳಿಗೆ ₹15 ಸಾವಿರ ಖರ್ಚಾಗುತ್ತಿದೆ ಎಂದು ಪ್ರದೀಪ್‌ ಹೇಳಿದರು.

‘ಈ ಜೋಡಿ ಸುತ್ತೂರು, ಮುಡುಕುತೊರೆ ಸೇರಿದಂತೆ ವಿವಿಧ ಜಾತ್ರೆಗಳಲ್ಲಿನ ಪ್ರದರ್ಶನದಲ್ಲಿ ಪಾಲ್ಗೊಂಡು ಚಾಂಪಿಯನ್‌ ಆಗಿದೆ. ಇವುಗಳನ್ನು ಸಾಕುವುದೇ ಪ್ರತಿಷ್ಠೆಯ ವಿಷಯ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT