ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈರಿ ಬರೆಯೋಣ, ಹಗುರಾಗೋಣ!

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ಹೊಸ ವರ್ಷಕ್ಕೆ ಡೈರಿ ಖರೀದಿಸುವ ಅಭ್ಯಾಸ ನಮ್ಮಲ್ಲಿ ಬಹುಜನಕ್ಕೆ ಇದೆ. ಆದರೆ ಡೈರಿ ಬರೆಯುವ ಅಭ್ಯಾಸ? ಪತ್ರ ಬರೆಯುವುದೇ ಮರೆಯುತ್ತಿರುವಾಗ, ಬರೆಯುವುದನ್ನು ಕ್ಲಿಕ್ಕಿಸುವುದು! ಟೈಪಿಸುವುದು /ಸ್ಕ್ರೀನ್ ಮೇಲೆ ಮುಟ್ಟುವುದು, ಹಿಂದೆ ತಳ್ಳಿ ಹಾಕಿರುವಾಗ ಪ್ರತಿನಿತ್ಯ ಡೈರಿ ಬರೆಯುವ ಆಸಕ್ತಿ, ಸಮಯ ಯಾರಿಗಿದೆ?

ಡೈರಿಯನ್ನು ಬರೆಯುವುದು ಒಂದು ಪುರಾತನ ಪದ್ಧತಿ. 10ನೇ ಶತಮಾನದಲ್ಲಿ ಜಪಾನ್‌ನಲ್ಲಿ ಇದು ಕಂಡುಬಂದದ್ದು. ಅದಾದ ಮೇಲೆ ಹಲವರ ‘ಡೈರಿ’ಗಳು ನಮಗೆ ಅಪೂರ್ವ ಎನ್ನಬಹುದಾದ ಮಾಹಿತಿ ನೀಡಿದೆ. ನಾವು ಚಿಕ್ಕವರಿದ್ದಾಗ ಇಂಗ್ಲಿಷ್ ಪಠ್ಯಪುಸ್ತಕಗಳಲ್ಲಿದ್ದ  Anne Frank's diary - ಆನ್ನಾ ಫ್ರಾಂಕ್‌ಳ ಡೈರಿ ಕರಾಳ ನಾಜಿ ದಿನಗಳನ್ನು ಚಿತ್ರಿಸಿದ್ದು, ಉತ್ತರಧ್ರುವದ ತುದಿಯನ್ನು ಮುಟ್ಟಲು ತನ್ನ ತಂಡದೊಡನೆ ಹೊರಟಿದ್ದ ಸ್ಕಾಚ್- ಸಾಯುವ ಮೊದಲು ತನ್ನ ಕೊನೆಯ ದಿನಗಳನ್ನು ದಾಖಲಿಸಿದ ಡೈರಿ - ಹೀಗೆ ಮತ್ತೊಬ್ಬ ವ್ಯಕ್ತಿಯ ಡೈರಿಯನ್ನಂತೂ ಓದುವ ಅನುಭವ ರೋಚಕ! ಮತ್ತೊಬ್ಬರ ಮನಸ್ಸಿನೊಳಗೆ ಹೊಕ್ಕಂತೆ!
 
ಆದರೆ ಈಗ ನಾನು ಹೇಳುತ್ತಿರುವುದು ಸ್ವತಃ ನಮಗೆ ನಮ್ಮ ದಿನಚರಿಯನ್ನು ದಾಖಲಿಸುವುದು ತರಬಹುದಾದ ಆರೋಗ್ಯದ ಬಗೆಗೆ ಹದಿಹರೆಯದಲ್ಲಿ ಯಾವಾಗಲಾದರೂ ಡೈರಿ ಬರೆದ ಅಭ್ಯಾಸ ನಿಮಗಿದ್ದರೆ ಒಮ್ಮೆ ನೆನಪಿಸಿಕೊಳ್ಳಿ. ಅಪ್ಪ-ಅಮ್ಮ ಬೈದಾಗ, ಶಾಲೆಯಲ್ಲಿ ಮನಸ್ಸಿಗೆ ಬೇಸರವಾದಾಗ ಸುಮ್ಮನೇ ಮುಖ ಸಪ್ಪೆ ಮಾಡಿ, ಅಳುವ/ಕೊರಗುವ ಬದಲು ನೀವೇನಾದರೂ ಡೈರಿ ಬರೆಯುವ ಮೂಲಕ ಮನಸ್ಸಿನ ಬೇಸರಕ್ಕೆ ಮಾತಿನ-ಬರಹದ ರೂಪ ಕೊಟ್ಟಿದ್ದರೆ ಅದು ನಿಮಗೆ ನೀಡಿದ್ದ ನಿರಾಳತೆಯನ್ನು ಮರೆಯಲು ಸಾಧ್ಯವಿಲ್ಲ.
 
ಡೈರಿ ಬರೆಯುವುದನ್ನು ಮನೋವಿಜ್ಞಾನ ‘Journal writing’ ಎಂಬ ಚಿಕಿತ್ಸಾ ಕ್ರಮವನ್ನಾಗಿಯೇ ನೋಡುತ್ತದೆ. ವೈಜ್ಞಾನಿಕ ಸಂಶೋಧನೆಗಳು ಹಾಗೆ ಬರೆಯುವುದರ ಉಪಯುಕ್ತತೆಯನ್ನು ಪರೀಕ್ಷಿಸಿದೆ. ‘ಬರೆಯುವುದ’ರ ಪ್ರಕ್ರಿಯೆ ನೀವು ಬಲಗೈಯವರಾದರೆ ನಿಮ್ಮ ಎಡಮೆದುಳಿನ ಕೆಲಸ. ಅದರ ಕಾರ್ಯವೇ ವಿಶ್ಲೇಷಣೆ ಮತ್ತು ಅರಿವಿನೊಂದಿಗೆ ಯೋಚಿಸುವ ಸಾಮರ್ಥ್ಯ - Rational thinking. ಎಡಮೆದುಳು ಬರೆಯುತ್ತಾ ಕೆಲಸ ಮಾಡುತ್ತಿರುವಾಗ ಬಲಮೆದುಳಿಗೆ ಆರಾಮ! ಅದೂ ಸುಮ್ಮನಿರುವುದಿಲ್ಲ. ಹೊಸತನ್ನು ಸೃಷ್ಟಿಸುತ್ತದೆ, ಸಂವೇದನೆಗಳನ್ನು ಗ್ರಹಿಸುತ್ತದೆ. ಅಂದರೆ ಸ್ವಂತ ಅನುಭವಗಳನ್ನು ಬರೆಯುವಾಗ ತನ್ನಿಂತಾನೇ ಹಲವು ಮಾನಸಿಕ ತಡೆಗಳು ಒಡೆದುಹೋಗುತ್ತವೆ. ನಮ್ಮನ್ನು ನಾವು ಅರಿತುಕೊಳ್ಳುವ, ಬೇರೆಯವರನ್ನು ಅರ್ಥ ಮಾಡಿಕೊಳ್ಳುವ, ಮೆದುಳಿನ ಸಾಮರ್ಥ್ಯ ಹೆಚ್ಚುತ್ತದೆ.
ಡೈರಿಯನ್ನು ಬರೆದಿರುವ ಹಲವು ಪ್ರಸಿದ್ಧರು ಬೇರೆಯವರು ಅದನ್ನು ಓದಲೆಂಬ ಉದ್ದೇಶಕ್ಕಾಗಿಯೇ ಬರೆದಿರಬಹುದು! ಆದರೆ ಡೈರಿ ಬರೆಯುವುದು ನಿಜವಾಗಿ ಉಪಯೋಗವಾಗಬೇಕೆಂದರೆ ಬೇರೆಯವರು ಅದನ್ನು ಓದಬಹುದೆಂಬ ಕಿಂಚಿತ್ ಸಾಧ್ಯತೆಯ ಅನುಮಾನವೂ ನಮಗೆ  ಇರಬಾರದು. ನಮ್ಮ ಭಾವನೆಗಳು, ನಮಗೆ ಅನ್ನಿಸಿದ ಎಲ್ಲವೂ ಯಾವುದೇ ‘ಸೆನ್ಸಾರ್’ ಇಲ್ಲದೆ ಡೈರಿಯಲ್ಲಿ ಹೊರಬೀಳಬೇಕು. ಒಂದು ರೀತಿ ನಮ್ಮ ಮನಸ್ಸಿಗೆ ನಾವೇ ಚಿಕಿತ್ಸೆ ನೀಡಿದ ಹಾಗೆ!
 
ಬೇಸರವಾದಾಗ, ದುಃಖವಾದಾಗ ಮಾತ್ರ ಡೈರಿಯನ್ನು ಬರೆಯಬೇಕೆಂದಿಲ್ಲ. ಪ್ರತಿನಿತ್ಯ ಕೆಲವು ಸಾಲುಗಳನ್ನು ಬರೆಯುವುದು, ಅವುಗಳನ್ನು ಆಗಾಗ್ಗೆ ಗಮನಿಸುವುದು ನಮ್ಮ ನಡವಳಿಕೆಯಲ್ಲಿನ ‘Pattern’ - ಮಾದರಿಗಳನ್ನು ನಮಗೆ ತೋರಿಸಬಲ್ಲದು. ಯಾವ ಸಂದರ್ಭಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನಮಗೇ ಮನದಟ್ಟು ಮಾಡಿಸುತ್ತದೆ. ಇನ್ನು ದುಃಖ-ಕೋಪ-ಬೇಸರವುಂಟಾದಾಗ ಅವುಗಳನ್ನು ತಂದ ಘಟನೆಗಳ ಬಗ್ಗೆ ಬರೆಯುವುದು ದುಃಖದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಮನಸ್ಸಿಗೆ ಸಮಾಧಾನ ತರುತ್ತದೆ. ವರ್ತಮಾನದಲ್ಲಿ ಬದುಕಲು ಸಹಾಯ ಮಾಡುತ್ತದೆ.
 
ಸಮಸ್ಯೆಗಳ ಪರಿಹಾರಕ್ಕೂ ಡೈರಿ ಬರೆಯುವುದು ಕಾರಣವಾಗಬಹುದು. ಹೇಗೆ? ಸಾಮಾನ್ಯವಾಗಿ ಈ ಕೆಲಸವನ್ನು ನಮ್ಮ ಎಡಮೆದುಳು ಮಾಡುತ್ತದೆ. ಇದು ವಿಶ್ಲೇಷಣೆಯಿಂದ, ತರ್ಕಬದ್ಧವಾಗಿ ಮಾಡುವಂಥದ್ದು. ಆದರೆ ಬದುಕಿನ ಎಲ್ಲ ಸಮಸ್ಯೆಗಳಿಗೂ ತರ್ಕಬದ್ಧವಾದ ಉತ್ತರ ಸಾಧ್ಯವಿರಲೇಬೇಕೆಂದಿಲ್ಲ. ಕೆಲವೊಮ್ಮೆ ಸಮಸ್ಯೆಗೆ ಪರಿಹಾರ ಬಲಮೆದುಳು ಕೊಡಬಹುದಾದ ಸೃಜನಾತ್ಮಕ-ಮನಸ್ಸಿನ ಸ್ಫೂರ್ತಿಯುತ ಚಿಂತನೆಯಿಂದ ಮಾತ್ರ ಸಾಧ್ಯವಾದೀತು. ಡೈರಿ ಬರೆಯುವುದು ಈ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತದೆ. ಅನಾಯಾಸವಾಗಿ, ಅನಿರೀಕ್ಷಿತವಾಗಿ ಪರಿಹಾರವೊಂದು ಹೊಳೆಯುತ್ತದೆ!
 
ಬೇರೆಯವರ ‘ತಪ್ಪು-ಕೆಟ್ಟ ಬುದ್ಧಿ’ಯ ಬಗೆಗೆ ನಾವು ಡೈರಿಯಲ್ಲಿ ಬರೆಯುವಾಗ, ಸಹಜವಾಗಿ ಅವರು ಎದುರು ಇಲ್ಲದಿರುವಾಗ, ನಮ್ಮನ್ನು ಅವರ ಸ್ಥಾನದಲ್ಲಿಟ್ಟು ನೋಡಿಕೊಳ್ಳುವ ಸದವಕಾಶವದು. ಆ ಸಂದರ್ಭದಲ್ಲಿ ನಮ್ಮ ನಡವಳಿಕೆಯನ್ನು ಪರಿಶೀಲಿಸಿಕೊಳ್ಳಲು ಸಾಧ್ಯ. ಸಹಜವಾಗಿ ಇನ್ನೊಬ್ಬರ ಬಗೆಗಿನ ನಮ್ಮ ಕಟುಧೋರಣೆ ಮೃದುವಾಗುತ್ತದೆ. ಬೇರೆಯವರಿಗೆ ಅದು ಹಿತವೋ ಅಹಿತವೋ ನಮ್ಮ ಮನಸ್ಸಿಗಂತೂ ಅದು ಖಂಡಿತ ಆರೋಗ್ಯಕರ.
 
ಡೈರಿಯನ್ನು ನಿಯಮಿತವಾಗಿ ಬರೆಯುವುದು ನಮ್ಮ ಭಾಷಾಕೌಶಲವನ್ನು ಹೆಚ್ಚಿಸುತ್ತದೆ. ಡೈರಿ ಬರೆಯುವುದು ಕವಿತೆ ಬರೆಯಲು-ಕಥೆ ಕಾದಂಬರಿ ರಚಿಸಲು ಮುನ್ನುಡಿಯೂ ಆಗಬಹುದು. ಇವೆಲ್ಲವೂ ಮನಸ್ಸಿನ ಭಾವನೆಗಳ ಅಭಿವ್ಯಕ್ತಿಯಷ್ಟೆ. ಆದರೆ ನಮ್ಮ ಮನಸ್ಸಿನ ಭಾವನೆಗಳನ್ನು ಕುರಿತು ನೇರವಾಗಿ ಡೈರಿ ಬರೆಯುವುದಕ್ಕೂ, ಅದಕ್ಕೆ ಬೇರೆಯವರ ಅನುಭವ/ಕಾಲ್ಪನಿಕ ಸಂಗತಿಗಳನ್ನು ಸೇರಿಸಿ ಬರೆಯುವುದಕ್ಕೂ ವ್ಯತ್ಯಾಸವಿದೆ. ಮೊದಲಿನದು ಆರೋಗ್ಯದ ದೃಷ್ಟಿಯಿಂದ, ಭಾವನೆಗಳ ನಿಯಂತ್ರಿಸುವಿಕೆಯ ದೃಷ್ಟಿಯಿಂದ ಹೆಚ್ಚು ಉಪಯುಕ್ತ ಎಂಬುದು ಸಂಶೋಧನೆಗಳಿಂದ ಸ್ಪಷ್ಟಗೊಂಡಿದೆ. ಆದರೆ ಡೈರಿ ಬರೆಯುವಾಗಲೂ ಹೊಸ ಹೊಸ ಪದಗಳಿಗಾಗಿ ಹುಡುಕತೊಡಗುತ್ತೇವೆ. ಅದದೇ ಪದಗಳು ಪುನರಾವರ್ತನೆಯಾಗುವುದು, ಮನಸ್ಸಿನ ಸ್ಥಿತಿಯೂ ಪುನರಾವರ್ತನೆಯಾಗುವುದನ್ನು ತೋರಿಸುತ್ತವೆ!. 
 
ಯುವಜನರಲ್ಲಿ ಡೈರಿ ಬರೆಯುವುದು ಕನಸುಗಳನ್ನು - ಮುಂದಿನ ಗುರಿ - ಮಹತ್ವಾಕಾಂಕ್ಷೆಗಳನ್ನು ಮನಸ್ಸಿಗೆ ಸ್ಪಷ್ಟಪಡಿಸಲು ಸಹಾಯಕವಾಗಬಹುದು. ಎಷ್ಟೋ ಜನರು ತಮ್ಮ ಗುರಿಗಳನ್ನು ಸಾಧಿಸಲು ತಮ್ಮ ಹದಿಹರೆಯ - ಯೌವನದಲ್ಲಿ ಬರೆಯುತ್ತಿದ್ದ ‘ಡೈರಿ’ ಸ್ಫೂರ್ತಿದಾಯವಾಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಅಂದರೆ ಒಂದು ಕಟ್ಟಡ ಕಟ್ಟಲು ಹೇಗೆ ಬ್ಲೂ ಪ್ರಿಂಟ್- ನೀಲಿನಕ್ಷೆ ಸಹಾಯಕವಾಗುವುದೋ ಹಾಗೇ ಡೈರಿಯ ಮುಖೇನ ನಮ್ಮ ಗುರಿಗಳು, ಮನಸ್ಸಿನ ಆಕಾಂಕ್ಷೆಗಳನ್ನು ಬರೆದಿಡುವುದು ಮುಂದಿನ ಸಾಧನೆಗೆ ಒಂದು ಮಾನಸಿಕ ನೀಲನಕ್ಷೆ - Psychological blue print. ಇದರಿಂದ ಆ ಗುರಿಗಳನ್ನು ನಾವು ಸಾಧಿಸಿಯೇ ಬಿಡುವ ಸಾಧ್ಯತೆಯೂ ಹೆಚ್ಚು!
 
ಸ್ವಲ್ಪ ಸಮಯ, ಅಂದರೆ ಸುಮಾರು 15–20 ನಿಮಿಷ ಪ್ರತಿದಿನ ಡೈರಿ ಬರೆಯುವ ಅಭ್ಯಾಸ ಒಂದು ಶಿಸ್ತು. ದೇಹದ ಒಂದು ಸ್ನಾಯು ಹೇಗೆ ನಿಯಮಿತ ವ್ಯಾಯಾಮದಿಂದ ಬಲಗೊಳ್ಳುತ್ತದೆಯೋ, ಹಾಗೆಯೇ ಶಿಸ್ತನ್ನು ಪ್ರತಿನಿತ್ಯ ಪಾಲಿಸುವುದು ಅದನ್ನು ಮತ್ತಷ್ಟು ನಮ್ಮ ಜೀವನದಲ್ಲಿ ಅಡಕವಾಗುವಂತೆ ಮಾಡುತ್ತದೆ. ಜೀವನದ ಇತರ ಕೆಲಸಗಳೂ ಈ ಶಿಸ್ತಿನಿಂದ ಪ್ರಭಾವಿತವಾಗುತ್ತವೆ.
 
ಡೈರಿ ಬರೆಯುವುದರ ಉಪಯುಕ್ತತೆಯ ಬಗ್ಗೆ ಸಂಶೋಧನೆಗಳನ್ನು ಮಾಡಿದ್ದಾರೆ ಮನೋವಿಜ್ಞಾನಿ ಡಾ. ಲೀಬರ್‌ಮನ್. ಅವರ ಪ್ರಕಾರ ಡೈರಿ ಬರೆಯುವುದು ಎಂದರೆ ಕೈಯಿಂದ ಕಾಗದದ ಮೇಲೆ ಬರೆಯುವುದು, ಟೈಪು ಗುಟ್ಟಿಸುವುದಕ್ಕಿಂತ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. 
 
ಹಾಗೆಯೇ ಡೈರಿ ಬರೆಯುವುದು ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಲಾಭ ನೀಡುತ್ತದೆ. ಇದಕ್ಕೆ ಕಾರಣವೂ ಇದೆ. ಮಹಿಳೆಯರು ತಮ್ಮ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುವಷ್ಟು ಪುರುಷರು ಮಾಡಲಾರರಷ್ಟೆ. ಹಾಗಾಗಿ ಡೈರಿ ಬರೆಯುವುದು ಮಹಿಳೆಯರಿಗೆ ತಮ್ಮ ಮನಸ್ಸಿನ ಬಗ್ಗೆ ಹೊಸ ಅನುಭವವನ್ನುಂಟು ಮಾಡುವ ಸಾಧ್ಯತೆ ಕಡಿಮೆ. ಆದರೂ ಮಹಿಳೆಯರಿಗಾದರೂ ಮಾತಿನ ಮೂಲಕ ತೀವ್ರವಾಗಿ ಹೊರಹಾಕುವ ಭಾವನೆಗಳನ್ನು ಒಂದು ಚೌಕಟ್ಟಿಗೆ ತರಲು ‘ಡೈರಿ ಬರೆಯುವುದು’ ಸಹಾಯಕ ಎನಿಸಬಹುದು.
 
ಇವೆಲ್ಲವೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ್ದು. ಆದರೆ ಮನಸ್ಸು-ದೇಹದ ಸಂಬಂಧ ದಿನದಿನಕ್ಕೆ ‘ಅನ್ಯೋನ್ಯ’ ಎಂದು ನಿರೂಪಿಸಲ್ಪಡುತ್ತಿರುವ ದಿನಗಳಲ್ಲಿ ಡೈರಿ ಬರೆಯುವುದಕ್ಕೂ ದೈಹಿಕ ಆರೋಗ್ಯಕ್ಕೂ ಸಂಬಂಧವನ್ನು ವಿಜ್ಞಾನ ಶೋಧಿಸಿದೆ. 
 
ನಮ್ಮ ರೋಗನಿರೋಧಕ ಶಕ್ತಿಯ ಸೈನ್ಯವಾದ ಟಿ-ಲಿಂಪೋಸೈಟ್ಸ್ ಎಂಬ ಜೀವಕೋಶಗಳು ಡೈರಿ ಬರೆಯುವವರಲ್ಲಿ ಹೆಚ್ಚು. ನಿಯಮಿತವಾಗಿ ಡೈರಿ ಬರೆಯುವವರಲ್ಲಿ ಅಸ್ತಮಾ ಮತ್ತು ರ್‍ಯುಮಟಾಯಿಡ್ ಆರ್ಥ್ರ್ರೈಟಿಸ್ ಕಾಯಿಲೆಗಳ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
 
ಇಷ್ಟೆಲ್ಲ ಆರೋಗ್ಯದ ಉಪಯೋಗಗಳಿಗೆ ಎಂದ ಮೇಲೆ ನೀವೂ ಡೈರಿ ಬರೆಯಲು ಆರಂಭಿಸಿಯೇ ಬಿಡಿ! ಆದರೆ ಸಹನೆ-ನಿಯಮಿತ ವೇಳಾಪಟ್ಟಿ  ಕಾಯ್ದುಕೊಳ್ಳುವುದು ಯಾವುದೇ ಹೊಸ ಅಭ್ಯಾಸ ಆರಂಭಿಸಲು ಅಗತ್ಯ ಎಂಬುದನ್ನು ಮರೆಯಬೇಡಿ. ಬಹುಶಃ ಮೊದಲು ವಾರಕ್ಕೆ ಮೂರು ದಿನ, ದಿನಕ್ಕೆ 15–20 ನಿಮಿಷ, ಮಲಗುವ ಮುನ್ನ ಡೈರಿ ಬರೆಯಲು ಪ್ರಯತ್ನಿಸಿ. ಡೈರಿಯ ಮೂಲಕ ಮನಸ್ಸಿನೊಂದಿಗೆ ಮಾತನಾಡಿ, ಹಗುರಾಗಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT