ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಟ್ರಾ ಎಚ್‌ಡಿ ಟಿವಿ ನೋಡುವ ಸಮಯ

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ
ಅಂತರರಾಷ್ಟ್ರೀಯ  ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬೃಹತ್‌ ಪ್ರದರ್ಶನ ಮೇಳ (ಸಿಇಎಸ್‌) ಹಿಂದಿನ ವಾರ ಲಾಸ್‌ವೆಗಾಸ್‌ನಲ್ಲಿ ನಡೆಯಿತು. ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಹೊಸ ತಲೆಮಾರಿನ ಉತ್ಪನ್ನಗಳು, ನವೀನ ತಾಂತ್ರಿಕ ಆವಿಷ್ಕಾರಗಳು ಸೇರಿದಂತೆ ಒಟ್ಟಾರೆ ಭವಿಷ್ಯದ ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆಯ ದಿಕ್ಸೂಚಿ ಎಂದೇ ಈ ಮೇಳವನ್ನು ಬಣ್ಣಿಸಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಯಾವ ಗ್ಯಾಡ್ಜೆಟ್‌ ಮಾರುಕಟ್ಟೆ ಆಳಲಿದೆ ಎಂಬುದರ ಸ್ಪಷ್ಟ ಸುಳಿವೂ ಈ ಮೇಳದಲ್ಲಿ ಲಭಿಸುತ್ತದೆ. 
 
ಗೂಗಲ್‌, ಅಮೆಜಾನ್‌, ಫೇಸ್‌ಬುಕ್‌, ಮೈಕ್ರೊಸಾಫ್ಟ್‌, ಆ್ಯಪಲ್‌ ಸೇರಿದಂತೆ ದಿಗ್ಗಜ ಕಂಪೆನಿಗಳು ಈ ಮೇಳದಲ್ಲಿ ತಮ್ಮ ಹೊಸ ಉತ್ಪನ್ನಗಳನ್ನು ಪ್ರದರ್ಶಿಸುತ್ತವೆ. ಕಂಪೆನಿಗಳ ಜಾಗತಿಕ ಮಾರುಕಟ್ಟೆ ವಿಸ್ತರಣೆಯ ದೃಷ್ಟಿಯಿಂದಲೂ ‘ಸಿಇಎಸ್‌’ ಮಹತ್ವ ಪಡೆದುಕೊಂಡಿದೆ.
 
ಈ ಬಾರಿ ಮೇಳದಲ್ಲಿ ಗೂಗಲ್‌, ಫೇಸ್‌ಬುಕ್‌ ಮತ್ತು ಅಮೆಜಾನ್‌ ಕಂಪನಿಗಳು ಕ್ಲೌಡ್‌ ಕಂಪ್ಯೂಟಿಂಗ್‌ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಉಪಕರಣಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಹೈಡೆಫಿನಿಷನ್‌ (ಎಚ್‌ಡಿ) ಗುಣಮಟ್ಟದ, ವಿಲಾಸಿ ಡಿಜಿಟಲ್‌ ಟಿವಿಗಳು, ಸ್ಮಾರ್ಟ್‌ ಹೋಂ ಪರಿಕರಕಗಳು, ಮತ್ತು ಡ್ರೋನ್‌ ಈ ವರ್ಷ ಬಹು ಬೇಡಿಕೆ ಇರುವ ಸರಕುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ. 
 
 4ಕೆ ಡಿಜಿಟಲ್‌ ಟಿವಿ 
‘4ಕೆ’ ಡಿಜಿಟಲ್‌ ಟಿವಿ ಎಂದರೆ, ಅಡ್ಡವಾಗಿ 4 ಸಾವಿರ ಪಿಕ್ಸಲ್ಸ್‌ ಮತ್ತು  ಉದ್ದವಾಗಿ 2 ಸಾವಿರ ಪಿಕ್ಸಲ್ಸ್‌ ಸಾಮರ್ಥ್ಯದ ಬೃಹತ್‌ ಟಿವಿ. ಇದನ್ನು ಅಲ್ಟ್ರಾ ಎಚ್‌ಡಿ ಟಿವಿ ಎಂದೂ ಕರೆಯುತ್ತಾರೆ. ಈವರೆಗೆ 1080 ಪಿಕ್ಸಲ್ಸ್‌ ಸಾಮರ್ಥ್ಯದ ಟಿವಿಗಳು ಮಾರುಕಟ್ಟೆ ಆಳುತ್ತಿದ್ದವು. ಇದರ ಎರಡುಪಟ್ಟು ಸಾಮರ್ಥ್ಯದ  4ಕೆ ಮಾದರಿ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಸೋನಿ, ಸ್ಯಾಮ್ಸಂಗ್‌, ಪಾನಾಸೋನಿಕ್‌ ಕಂಪೆನಿಗಳು ಈ ಮಾದರಿಯ ಟಿವಿಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ. 
 
ಸೋನಿ ಕಂಪೆನಿ ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಲಿರುವ  84 ಇಂಚಿನ ಇಂತಹ ಅಲ್ಟ್ರಾ ಟಿವಿಯೊಂದರ ದರ 25 ಸಾವಿರ ಅಮೆರಿಕನ್‌ ಡಾಲರ್‌. ಅಂದರೆ ಅಂದಾಜು ₹ 17 ಲಕ್ಷ.  ಈ ಟಿವಿಯಲ್ಲಿ ಸಾಮಾನ್ಯ ಎಚ್‌ಡಿ ಟಿವಿಗಿಂತ ಹೆಚ್ಚಿನ ದೃಶ್ಯಾನುಭವವೇನೂ ಇಲ್ಲ ಎಂಬ ಟೀಕೆಗಳು ಮಾರುಕಟ್ಟೆ ತಜ್ಞರಿಂದ ಕೇಳಿಬಂದಿದ್ದವು. ಇದರ ಬೆನ್ನಲ್ಲೇ 4ಕೆ ಟಿವಿ ತಯಾರಕ ಕಂಪೆನಿಗಳು ಈ ಸರಣಿಯ ಟಿವಿಗಳ ಕಲರ್‌ ತಂತ್ರಜ್ಞಾನದಲ್ಲಿ ಆಮೂಲಾಗ್ರ ಬದಲಾವಣೆ ತಂದಿವೆ. 
 
ಅಂದರೆ, ಇದಕ್ಕಾಗಿಯೇ ವಿಶೇಷ ತಂತ್ರಾಂಶವೊಂದನ್ನು ಅಳವಡಿಸಲಾಗಿದ್ದು,  ಹೈ ಡೈನಾಮಿಕ್‌ ಕಲರ್‌ ಪರಿಚಯಿಸಲಾಗಿದೆ. ದೃಶ್ಯಗಳಿಗೆ ತಕ್ಕಂತೆ ಟಿವಿ ಪರದಲ್ಲಿ ಮೂಡುವ ಚಿತ್ರದ ಗುಣಮಟ್ಟವೂ ಬದಲಾಗುತ್ತಿರುತ್ತದೆ. ಸದ್ಯ ಎಲ್‌ಜಿ ಕಂಪೆನಿ ಇಂತಹ ತಂತ್ರಜ್ಞಾನವನ್ನು ವಾಲ್‌ಮೌಂಟ್‌ ಟಿವಿಗಳಲ್ಲಿ ಪರಿಚಯಿಸಿದೆ. 
 
ಸದ್ಯ ಹೈಡೆಫಿನಿಷನ್‌ ವಿಡಿಯೊಗಳು, ಲೊ ಡೆಫಿನಿಷನ್‌ ಟಿವಿಗಳಲ್ಲಿ ಪ್ರಸಾರವಾಗುತ್ತಿವೆ. ಹೀಗಾಗಿ ಅಲ್ಟ್ರಾ ಡಿಜಿಟಲ್‌ ಟಿವಿ ಖರೀದಿಸಲು ಇದು ಸಕಾಲ, ಇದಕ್ಕೆ ಹೆಚ್ಚಿನ ಮಾರುಕಟ್ಟೆ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳೂ ನಡೆಯುತ್ತಿವೆ. 
 
ಸ್ಮಾರ್ಟ್‌ ಹೋಂ ತಂತ್ರಜ್ಞಾನ
ಇಂಟರ್‌ನೆಟ್‌ ಅಥವಾ ಮೊಬೈಲ್‌ ಅಪ್ಲಿಕೇಷನ್ಸ್‌ಗಳ ಮೂಲಕ ಇಡೀ ಮನೆಯನ್ನೇ ನಿಯಂತ್ರಿಸಬಹುದಾದ ಸ್ಮಾರ್ಟ್‌ಹೋಂ ಪರಿಕರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಮಾರುಕಟ್ಟೆಯನ್ನು ಕೇಂದ್ರೀಕರಿಸಿ, ಡಿಜಿಟಲ್‌ ಬೀಗಗಳು, ದೀಪಗಳು, ಮೊಬೈಲ್‌ ಅಪ್ಲಿಕೇಷನ್ಸ್‌ಗಳು ಅಭಿವೃದ್ಧಿಯಾಗುತ್ತಿವೆ. ಆ್ಯಪಲ್‌, ಗೂಗಲ್,  ಅಮೆಜಾನ್‌ನಂತಹ ಕಂಪೆನಿಗಳು ಸ್ಮಾರ್ಟ್‌ ಹೋಂ ನಿರ್ವಹಣೆಗೆಂದೇ ಕೃತಕ ಬುದ್ಧಿಮತ್ತೆ ಹೊಂದಿರುವ ಡಿಜಿಟಲ್‌ ಮಾರ್ಗದರ್ಶಕ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿವೆ. ಬಳಕೆದಾರನ ಧ್ವನಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವ ಗೃಹೋಪಕರಣಗಳು, ದೀಪಗಳು ಮಾರುಕಟ್ಟೆಗೆ ಬರುತ್ತಿವೆ. ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಸಿಸಿಟಿವಿ ಕ್ಯಾಮೆರಾಗಳು, ಮತ್ತು ಕಳೆದ ಸೆಪ್ಟೆಂಬರ್‌ನಲ್ಲಿ ಗೂಗಲ್‌ ಮಾರುಕಟ್ಟೆ ಪರಿಚಯಿಸಿದ, ಮನೆಯಲ್ಲಿ ಬಳಸಬಹುದಾದ ಸ್ಮಾರ್ಟ್‌ ಸ್ಪೀಕರ್‌  ಸೇರಿದಂತೆ ಹಲವು ಉಪಕರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. 
 
ಅಗ್ಗದ ಡ್ರೋನ್‌ಗಳು 
ಗೃಹ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸಬಹುದಾದ, ಅತ್ಯುತ್ತಮ ಕ್ಯಾಮೆರಾ ಗುಣಮಟ್ಟದ ಪುಟ್ಟ ಡ್ರೋನ್‌ಗಳ ಬೆಲೆ ಗಣನೀಯವಾಗಿ ತಗ್ಗಿದೆ. ಪ್ರಸಿದ್ಧ ಬ್ರ್ಯಾಂಡ್‌ಗಳ ಡ್ರೋನ್‌ಗಳ ಬೆಲೆ 1400 ಡಾಲರ್‌ನಿಂದ 999 ಡಾಲರ್‌ಗಳಿಗೆ ಅಂದರೆ ಅಂದಾಜು ₹ 1 ಲಕ್ಷದಿಂದ ₹ 70 ಸಾವಿರಕ್ಕೆ ಇಳಿದಿದೆ. ಚೀನಾದಲ್ಲಿ ಅಗ್ಗದ ದರದ ಅಂದರೆ 600 ಡಾಲರ್‌ಗಳಿಗೆ (ಅಂದಾಜು ₹ 40ರಿಂದ ₹ 50 ಸಾವಿರ) ಸಿಗುವ ಡ್ರೋನ್‌ಗಳೂ ತಯಾರಾಗುತ್ತಿವೆ. ಇಂತಹ ಡ್ರೋನ್‌ಗಳಿಗೂ ಬೇಡಿಕೆಯು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚುತ್ತಿದೆ.
(ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT