ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳವಾದ ಭಕ್ತಿ: ಜನರ ಶೋಷಣೆ

ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಕುರಿತ ಉಪನ್ಯಾಸ
Last Updated 18 ಜನವರಿ 2017, 5:00 IST
ಅಕ್ಷರ ಗಾತ್ರ

ತುಮಕೂರು: ಭಕ್ತಿಯನ್ನು ಬಂಡವಾಳ ಮಾಡಿಕೊಂಡವರು ಜನರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾಲಯದ ಡಾ.ನಾಗಭೂಷಣ ಬಗ್ಗನಡು ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜು ವಿಭಾಗ ಹಾಗೂ ಸಮುದಾಯ ಸಂಘಟನೆ ವಿ.ವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೇವರು ಜನರಲ್ಲಿ ಭಯ ಹುಟ್ಟಿಸುತ್ತದೆ. ಭಯ ಹುಟ್ಟಿದಾಗ ಭಕ್ತಿ ಮೂಡುತ್ತದೆ. ಇಂತಹ ಸ್ಥಿತಿಯಲ್ಲಿ ಭಕ್ತರು ಭಯದಿಂದ ದೇವರಿಗೆ ಕಾಣಿಕೆ ಸಲ್ಲಿಸುವುದು ಕಂಡು ಬರುತ್ತದೆ. ಎಲ್ಲ  ದೇವರುಗಳು ಹೈಜಾಕ್ ಆಗಿವೆ. ಇಂತಹ ಪಟ್ಟಭದ್ರರಿಂದ ದೇವರನ್ನು ಬಿಡುಗಡೆ ಮಾಡಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ವಚನಕಾರರು ದೇಹದಲ್ಲಿಯೇ ದೇವಾಲಯವನ್ನು ಕಂಡರು. ಸ್ವರ್ಗ– ನರಕಗಳು ಇಲ್ಲಿಯೇ ಇವೆ ಎಂಬುದನ್ನು ಸಾರಿದರು. ಕುವೆಂಪು ಕೂಡ ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು ಎಂಬುದನ್ನು ಹಲವು ಕವನದಲ್ಲಿ ಹೇಳಿದ್ದಾರೆ’ ಎಂದರು.

‘ದೇವರಿಗೆ ವಜ್ರದ ಕಿರೀಟಗಳನ್ನು ಮಾಡಿಸಲಾಗುತ್ತದೆ. ಅನೈತಿಕ ಮಾರ್ಗದಿಂದ ದುಡಿದವರು ಇಂತಹ ಕಿರೀಟಗಳನ್ನು ಮಾಡಿಸಲು ಸಾಧ್ಯ. ಕಿರೀಟಗಳಿಲ್ಲದೆ ಇದ್ದರೆ ದೇವರು ಇರುವುದಿಲ್ಲವೇ? ಅದಕ್ಕೆ ಕುವೆಂಪು ಹೇಳಿದ್ದು ಪ್ರಕೃತಿಯಲ್ಲಿ ದೇವರನ್ನು ಕಾಣು ಎಂದು. ದೇವರನ್ನು ಪ್ರಕೃತಿಯ ಸೊಬಗಿನಲ್ಲಿ ಕಾಣಬೇಕು’ ಎಂದು ಸಲಹೆ ನೀಡಿದರು.

‘ನೂರು ದೇವರನೆಲ್ಲ ನೂಕಾಚೆ ದೂರ, ಗುಡಿ, ಚರ್ಚ್‌,  ಮಸೀದಿಗಳನ್ನು ಬಿಟ್ಟು ಹೊರಬರಬೇಕು. ಆಗ ಮಾತ್ರ ಮನುಷ್ಯ ಎಲ್ಲರೊಂದಿಗೆ ಬೆರೆಯಲು ಸಾಧ್ಯ. ಮನುಷ್ಯ ಮನುಷ್ಯರ ನಡುವೆ ಪ್ರೀತಿ ಇರಬೇಕು. ಕಂದಾಚಾರ, ಮೌಢ್ಯ, ಬ್ರಾಹ್ಮಣ್ಯದಿಂದ ಹೊರ ಬಂದು ಸರ್ವ ಜನಾಂಗದ ಸುಂದರ ನಾಡನ್ನು ಕಟ್ಟಬೇಕೆಂದು ಕುವೆಂಪು ಸಾರಿದರು. ಅದರಂತೆ ನಾವು ನಡೆಯಬೇಕು’ ಎಂದರು.

‘ಮಹಿಳೆಯ ಮೇಲೆ ಇನ್ನಿಲ್ಲದ ನಿಯಮಗಳನ್ನು ಹೇರಲಾಗಿದೆ. ಮಹಿಳೆಯ ಮೇಲೆ ದೆವ್ವ ಬಂದರೆ, ಪುರುಷನ ಮೇಲೆ ದೇವರು ಬರುತ್ತದೆ. ಮಹಿಳೆ ಮದುವೆಯಾಗದಿದ್ದರೂ ಮರ ಸುತ್ತಬೇಕು. ಮದುವೆಯಾದ ಮೇಲೂ ಮರ ಸುತ್ತುವ ಕೆಲಸ ನಡೆಯುತ್ತದೆ. ಇದನ್ನು ದೇವರ ಅರ್ಚಕರು ಹೇರಿದ್ದಾರೆ’ ಎಂದು ಟೀಕಿಸಿದರು.

ಸಾಹಿತಿ ಎನ್.ನಾಗಪ್ಪ ಮಾತನಾಡಿ, ‘ಕುವೆಂಪು ಅಲಕ್ಷಿತ ವಸ್ತುಗಳು, ಸಮುದಾಯಗಳಿಗೆ ಸಾಹಿತ್ಯದಲ್ಲಿ ಗೌರವ ತಂದುಕೊಟ್ಟರು. ಈರೇ ಹೂವು, ಗೊಬ್ಬರ, ನೇಗಿಲಯೋಗಿ ಕುರಿತು ಪದ್ಯ ಬರೆದು ಶ್ರಮಿಕರು ಕೂಡ ಆಡಳಿತ ನಡೆಸುವಂತಾಗಬೇಕು ಎಂದು ಬಯಸಿದ್ದರು’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಕುವೆಂಪು ಅವರ ವೈಚಾರಿಕ ಬರಹಗಳನ್ನು ಅಧ್ಯಯನ ಮಾಡಬೇಕು. ಕುವೆಂಪು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಜಾತಿ, ಮತ, ಧರ್ಮದಿಂದ ಹೊರ ಬಂದು ಮಾನವೀಯ ನೆಲೆಯಲ್ಲಿ ಬದುಕು ನಡೆಸಬೇಕು’ ಎಂದರು.

‘ಕುವೆಂಪು ತಮ್ಮ ಅನಿಕೇತನ ಪದ್ಯದಲ್ಲಿ ಮನೆಯನೆಂದು ಕಟ್ಟದಿರು ಎಂದ ಹೇಳಿದರು. ಇದನ್ನೇ ಕೆಲವರು ಗೇಲಿ ಮಾಡಿದರು. ಮನೆಯಿಲ್ಲದೆ ಇರಲು ಹೇಗೆ ಸಾಧ್ಯ ಎಂದು ಟೀಕಿಸಿದರು. ಇದರ ಅರ್ಥ ಮನೆಯನ್ನು ಕಟ್ಟಬಾರದು ಎಂದಲ್ಲ. ಜಾತಿಯ ಮನೆ ಕಟ್ಟದೆ, ವಿಶಾಲವಾಗಿ ಆಲೋಚಿಸ ಬೇಕು. ಪ್ರತಿಯೊಬ್ಬರೂ ಮನುಷ್ಯರು ಎಂಬ ನೆಲೆಯಲ್ಲಿ ನೋಡಬೇಕು. ಆಗ ಮಾತ್ರ ಸಮಾಜ ಸರ್ವಜನಾಂಗದ ಶಾಂತಿಯ ತೋಟವಾಗಲು ಸಾಧ್ಯ. ಇದು ಕುವೆಂಪು ಅವರ ದೃಷ್ಟಿಯಾಗಿತ್ತು’ ಎಂದು ಹೇಳಿದರು. ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶಿವಣ್ಣ ಬೆಳವಾಡಿ ಸ್ವಾಗತಿಸಿದರು. ಕೆ.ಈ.ಸಿದ್ದಯ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT