ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದಿಂದ ರಾಷ್ಟ್ರೀಯ ಹೆದ್ದಾರಿ ಬಂದ್

ರೈತರಿಗೆ ವೈಜ್ಞಾನಿಕ ಬೆಳೆ ಪರಿಹಾರಕ್ಕೆ ಒತ್ತಾಯ; ಪಟ್ಟು ಬಿಡದ ರೈತರನ್ನು ವಶಕ್ಕೆ ಪಡೆದ ಪೊಲೀಸರು
Last Updated 18 ಜನವರಿ 2017, 5:04 IST
ಅಕ್ಷರ ಗಾತ್ರ

ತುಮಕೂರು: ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ತುಮಕೂರು ಜಿಲ್ಲೆಯ ಎಲ್ಲ ರೈತರಿಗೆ ವೈಜ್ಞಾನಿಕ ಬೆಳೆ ಪರಿಹಾರ ನೀಡಬೇಕು ಎಂಬುದು ಸೇರಿ 18 ಬೇಡಿಕೆಗಳ ಈಡೇರಿಕೆಗೆ ಮಂಗಳವಾರ ರೈತರು ಜಾಸ್ ಟೋಲ್‌ ಗೇಟ್ ಹತ್ತಿರ ಹೆದ್ದಾರಿ ತಡೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮತ್ತು ಜನಾಂದೋಲನಗಳ ಮಹಾಮೈತ್ರಿ ಆಶ್ರಯದಲ್ಲಿ ಹಮ್ಮಿಕೊಂಡ ಹೆದ್ದಾರಿ ಬಂದ್‌ನಲ್ಲಿ ಭಾಗವಹಿಸಿದ್ದ ರೈತರು ಒಂದು ತಾಸಿಗೂ ಹೆಚ್ಚು ಹೊತ್ತು ಹೆದ್ದಾರಿ ತಡೆ ನಡೆಸಿದರು.

ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಶಾಂತಾರಾಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅವರು ರೈತರ ಮನವೊಲಿಕೆಗೆ ನಡೆಸಿದ ಪ್ರಯತ್ನ ವಿಫಲವಾಯಿತು.

ಮೋಹನ್‌ರಾಜ್ ಮಾತನಾಡಿ, ‘ಬೆಳೆನಷ್ಟಕ್ಕೆ ₹ 246 ಕೋಟಿ ಪರಿಹಾರ ಕೋರಲಾಗಿದೆ. ಈ ಬಾರಿ ಪರಿಹಾರ ನೇರವಾಗಿ ಬೆಂಗಳೂರಿನಿಂದಲೇ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ತ್ವರಿತವಾಗಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ರೈತರ ಬ್ಯಾಂಕ್ ಖಾತೆಗೆ ಅಪ್‌ಲೋಡ್ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

‘ಜಿಲ್ಲೆಯ 2 ಲಕ್ಷ 88 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಮೂರುವರೆ ಲಕ್ಷಕ್ಕೂ ಹೆಚ್ಚು ರೈತರಿಗೆ ಪರಿಹಾರ ಕೊಡಿಸಲು ಜಿಲ್ಲಾಡಳಿತ ಪ್ರಯತ್ನ ಮಾಡುತ್ತಿದೆ. ಹಾಲಿನ ಪ್ರೋತ್ಸಾಹ ಧನ ವಿತರಣೆಗೆ ಕೆಎಂಎಫ್ ಕ್ರಮ ಕೈಗೊಂಡಿದೆ. ಯಾವ ರೈತರೂ ಬೆಳೆ ನಷ್ಟ ಪರಿಹಾರದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಅತ್ಯಂತ ಕಟ್ಟುನಿಟ್ಟಾಗಿ ಬೆಳೆ ನಷ್ಟ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

ರೈತ ಸಂಘದ ರಾಜ್ಯ ಘಟಕದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ‘ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ನೀಡುವ ಪರಿಹಾರ ಮೊತ್ತ ತ್ವರಿತವಾಗಿ ಲಭಿಸುವಂತೆ ಮಾಡಬೇಕು. ಈಗಾಗಲೇ ರಾಜ್ಯ ಕಂದಾಯ ಸಚಿವರು ಹೇಳಿಕೆ ನೀಡಿ, ಕೇಂದ್ರ ಸರ್ಕಾರವು ಪರಿಹಾರ ಮೊತ್ತ ರೈತರಿಗೆ ಕಡಿಮೆ ನೀಡಿದರೆ ಉಳಿಕೆ ಹಣವನ್ನು ರಾಜ್ಯ ಸರ್ಕಾರವು ಭರಿಸಿ ರೈತರಿಗೆ ಸಕಾಲಕ್ಕೆ ನೆರವಾಗುವುದಾಗಿ ಭರವಸೆ ನೀಡಿದ್ದಾರೆ. ಈ ದಿಶೆಯಲ್ಲೂ ಜಿಲ್ಲಾಡಳಿತ ಗಮನಹರಿಸಿ ರೈತರಿಗೆ ನೆರವಾಗಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್ ಮಾತನಾಡಿ, ರೈತರು ಶೇ 100ರಷ್ಟು ಬೆಳೆ ನಷ್ಟ ಅನುಭವಿಸಿದ್ದಾರೆ. ಪರಿಹಾರ ಕೋರುವುದು, ಮನವಿ ಸಲ್ಲಿಸುವುದು, ಧರಣಿ ಸೇರಿದಂತೆ ಎಲ್ಲ ರೀತಿಯ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೆ, ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಹೆದ್ದಾರಿ ಬಂದ್ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಅಧಿಕಾರಿಗಳೂ ರೈತರ ಕಷ್ಟ ಅರಿತು ತುರ್ತಾಗಿ ಸ್ಪಂದಿಸುವ ರೀತಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

‘ಒಂದು ತಾಸು ಸಮಯಾವಕಾಶ ಕೊಡಲಾಗುವುದು. ಅಲ್ಲಿಯವರೆಗೆ ಹೆದ್ದಾರಿ ಒಂದು ಬದಿ ಧರಣಿ ನಡೆಸುತ್ತೇವೆ. ಬಳಿಕ ಎರಡೂ ಬದಿ ಧರಣಿ ಕೂಡುತ್ತೇವೆ’ ಎಂದು ಹೇಳಿದರು.

ಪೊಲೀಸರ ಬಲ ಪ್ರದರ್ಶನ: ಗಂಗಾಧರ್ ಹೀಗೆ ಹೇಳುತ್ತಿದ್ದಂತೆಯೇ ಪೊಲೀಸರು ರೈತರನ್ನು ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದರು. ಮುಖಂಡರು ಸೇರಿ ನೂರಾರು ರೈತರನ್ನು ಹೊತ್ತೊಯ್ದು ಪೊಲೀಸ್ ವ್ಯಾನ್ ಸಾರಿಗೆ ಬಸ್‌ಗೆ ತುಂಬಿದರು.

ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಎಸ್ಪಿ ಮಂಜುನಾಥ್, ಡಿಎಸ್ಪಿ ಚಿದಾನಂದಸ್ವಾಮಿ ಸೇರಿ ಹಿರಿಯ ಅಧಿಕಾರಿಗಳೇ ಓಡಾಡಿ ರೈತರನ್ನು ವ್ಯಾನ್‌ಗೆ ತುಂಬಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನ, ಚಿಲುಮೆ ಸಭಾಂಗಣ– ಹೀಗೆ ನಾಲ್ಕೈದು ಕಡೆಗೆ ಕಳುಹಿಸಿದರು. ಬಳಿಕ ಬಿಟ್ಟು ಕಳುಹಿಸಿದರು.

ಹದಿನಾಲ್ಕು ಇಲಾಖೆ ಅಧಿಕಾರಿಗಳು ಹಾಜರು
ಕೃಷಿ, ಕಂದಾಯ, ಪಶು, ಕೆಎಂಎಫ್‌, ತೋಟಗಾರಿಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿ ಕೃಷಿಕರಿಗೆ ಸಂಬಂಧಪಟ್ಟ ಒಟ್ಟು 14 ಇಲಾಖೆಗಳ ಮುಖ್ಯ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ರೈತರು ಹೆದ್ದಾರಿ ಬಂದ್ ನಡೆಸಿದ ಸ್ಥಳಕ್ಕೆ ಕರೆಸಿ ವಿವರಣೆ ಕೊಡಿಸುವ ಪ್ರಯತ್ನ ಮಾಡಿದರು.

ಆದರೆ, ಅಧಿಕಾರಿಗಳ ವಿವರಣೆ ಅವಾಸ್ತವಿಕವಾಗಿದೆ. ರೈತರ ಸಮಸ್ಯೆ ಬಗ್ಗೆ ಒಂಚೂರು ಕಣ್ತೆರೆದು ನೋಡಿಲ್ಲ ಎಂದು ಕೆಲ ರೈತ ಮುಖಂಡರು ತಾಳ್ಮೆ ಕಳೆದುಕೊಂಡು ಕೂಗಾಡಿದರು.

ಹೆದ್ದಾರಿ ತಡೆ ನಡೆಸುವುದು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ. ಹೆದ್ದಾರಿ ಬಂದ್ ಮಾಡಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್ ರೈತ ಮುಖಂಡರಿಗೆ ಮನವಿ ಮಾಡಿದರು.

ಪೊಲೀಸ್ ಇಲಾಖೆ ಸೇರಿ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ರೈತರು ಲಂಚ ಕೊಡದೇ ಇದ್ದರೆ ಕೆಲಸಗಳೇ ಆಗುವುದಿಲ್ಲ. ಲಂಚ ಪಡೆಯುವುದು ಅಪರಾಧ. ಅದನ್ನು ನಿಲ್ಲಿಸಿದ್ದೀರಾ? ನೀವು ಲಂಚ ಪಡೆಯುವುದು ಬಿಡಿ. ನಾವು ಹೆದ್ದಾರಿ ಬಂದ್ ಮಾಡುವುದು ಬಿಡುತ್ತೇವೆ ಎಂದು ಗಂಗಾಧರ್ ಹೇಳಿದರು.

ರೈತರ ಬೇಡಿಕೆಗಳು: ಶಿರಾ, ಪಾವಗಡ ತಾಲ್ಲೂಕುಗಳಿಗೆ ಭದ್ರಾ ಮೇಲ್ದಂಡೆಯಿಂದ ನೀರು ಹರಿಸಲು ತುರ್ತಾಗಿ  ಕೆಲಸ ಪ್ರಾರಂಭಿಸಬೇಕು, ಕೂಡಲೇ ಬರಗಾಲ ಕಾಮಗಾರಿ ಕೈಗೊಳ್ಳಬೇಕು, ಪಂಚಾಯಿತಿಗೊಂದು ಗೋಶಾಲೆ ತೆರೆಯಬೇಕು, ಕುಡಿಯುವ ನೀರು ಸಮರ್ಪಕವಾಗಿ ಒದಗಿಸಬೇಕು, ಕೃಷಿ ಪಂಪ್‌ಸೆಟ್‌ಗೆ 10 ಗಂಟೆ ತ್ರೀ ಫೇಸ್ ವಿದ್ಯುತ್ ಕೊಡಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಹಾಲು ಉತ್ಪಾದಕರಿಗೆ ಸರ್ಕಾರ ಪ್ರೋತ್ಸಾಹ ಧನವಾಗಿ ₹10 ನೀಡಬೇಕು,ಹಾಲು ಉತ್ಪಾದಕ ಒಕ್ಕೂಟಗಳು 1 ಲೀಟರ್‌ಗೆ ₹ 30  ನಿಗದಿ ಮಾಡಬೇಕು, ಗುಣಮಟ್ಟ ನೆಪವೊಡ್ಡಿ ರೈತರ ಪ್ರೋತ್ಸಾಹ ಧನ ಕಡಿತ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂಬುದು ಸೇರಿ 18 ಬೇಡಿಕೆಗಳ ಈಡೇರಿಕೆಗೆ ರೈತರು ಒತ್ತಾಯ ಮಾಡಿದರು.

ಸಾಲುಗಟ್ಟಿ ನಿಂತ ವಾಹನಗಳು
ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1ರವರೆಗೂ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಆ ಕಡೆಯಿಂದ ಬರುವ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ತುಮಕೂರು ಕಡೆಯಿಂದ ಹೋಗುವ ವಾಹನಗಳಿಗೆ ಪೊಲೀಸರು ಮಾರ್ಗ ಬದಲಾಯಿಸಿದ್ದರು. ಊರ್ಡಿಗೆರೆ, ಬೆಳಗುಂಬ ಮಾರ್ಗವಾಗಿ ದಾಬಸ್ ಪೇಟೆ ಸಂಪರ್ಕಿಸಿ ಬೆಂಗಳೂರು ತಲುಪಲು ಪೊಲೀಸರು ಮಾರ್ಗ ತೋರಿಸಿದರು.

ವಿದೇಶಗಳಿಂದ ಆಮದು ಬೇಡ
ಶೇಂಗಾಕ್ಕೆ ಪ್ರತಿ ಕ್ವಿಂಟಲ್‌ಗೆ ₹ 10 ಸಾವಿರ, ರಾಗಿಗೆ ₹ 5 ಸಾವಿರ, ಜೋಳಕ್ಕೆ ₹ 5 ಸಾವಿರ, ಅಡಿಕೆಗೆ ₹ 45 ಸಾವಿರ, ಕೊಬ್ಬರಿಗೆ ₹ 15 ಸಾವಿರ ಬೆಲೆ ನಿಗದಿಪಡಿಸಬೇಕು. ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಅಡಿಕೆ, ಕೊಬ್ಬರಿ ಮತ್ತು ಎಣ್ಣೆ ಪದಾರ್ಥ, ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ರೈತ ಮುಖಂಡರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT