ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ವಿದ್ಯಾರ್ಥಿಗಳಿಗೆ ಹಣ ಕಡಿತ

ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸದಸ್ಯರ ಪ್ರತಿಭಟನೆ
Last Updated 18 ಜನವರಿ 2017, 5:07 IST
ಅಕ್ಷರ ಗಾತ್ರ

ಬಂಗಾರಪೇಟೆ: ಆರ್‌ಟಿಇ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಹಣದಲ್ಲಿ ತೀವ್ರ ಕಡಿತಗೊಳಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಧೋರಣೆ ಖಂಡಿಸಿ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸದಸ್ಯರು ಮಂಗಳವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

‘ತಾಲ್ಲೂಕಿನ 44ಕ್ಕೂ ಹೆಚ್ಚು ಖಾಸಗಿ ಶಾಲೆಗಳು 2015–16 ನೇ ಸಾಲಿನ ಆರ್‌ಟಿಇ ಹಣ ಪಡೆಯುವುದಕ್ಕಾಗಿ ಶಿಕ್ಷಣ ಇಲಾಖೆ ಆನ್‌ಲೈನ್‌ ತಂತ್ರಾಂಶದಲ್ಲಿ ವಿವರಗಳನ್ನು ಅಪ್ಲೋಡ್ ಮಾಡಿ, ಆಡಿಟ್ ವರದಿ ಪ್ರಕಾರ ಖರ್ಚು ವೆಚ್ಚ ತೋರಿಸಿದ್ದೆವು.  ಸದರಿ ಶಾಲೆಗಳಿಗೆ ಸರ್ಕಾರ ನೀಡಬಹುದಾದ ಹಣವನ್ನು ಕೂಡ  ಆನ್‌ಲೈನ್‌ ತಂತ್ರಾಂಶದಲ್ಲಿ ಸ್ಪಷ್ಟವಾಗಿ ನಮೂದಿಸಿತ್ತು. ಆದರೆ ಖಾಸಗಿ ಶಾಲೆಗಳು ಸಲ್ಲಿಸಿದ ವಿವರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಳ್ಳಿ ಹಾಕಿ, ತೀವ್ರ ಕಡಿತಗೊಳಿಸಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

ಸರ್ಕಾರ ನಿಗದಿ ಮಾಡಿದ್ದ ಹಣಕ್ಕಿಂತ ಮೂರು-ನಾಲ್ಕು ಪಟ್ಟು ಹಣವನ್ನು ಕಡಿತಗೊಳಿಸಲಾಗಿದೆ. ಸರ್ಕಾರದ ಸುತ್ತೋಲೆಯಂತೆ ನೀಡಬೇಕಾದ ಹಣವನ್ನು ಸಹ ನೀಡಿಲ್ಲ. ಇದು ಖಾಸಗಿ ಶಾಲೆಗಳ ಮೇಲೆ ನಡೆಯುತ್ತಿರುವ ಗದಾಪ್ರಹಾರ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸದಸ್ಯರು ದೂರಿದರು.

ನ್ಯಾಯಬದ್ದವಾಗಿ ನೀಡಬೇಕಾದ ಹಣವನ್ನು ಕೇಳುತ್ತಿದ್ದೇವೆ. ಜಿಲ್ಲೆಯ ಮತ್ತು ರಾಜ್ಯದ ಇತರ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ತಕರಾರು ಸಲ್ಲಿಸದೆ ಅಧಿಕೃತ ಆಡಿಟ್ ವರದಿ ಪ್ರಕಾರ ಹಣ ನೀಡುತ್ತಿದ್ದಾರೆ. ಆದರೆ ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತ್ರ ಅನಾವಶ್ಯಕ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೋಲಾರ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುನಿಯಪ್ಪ ಆರೋಪಿಸಿದರು.

ಕಳೆದ ಬಾರಿ ಸಹ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ಯಾಯ ಮಾಡಲಾಗಿದೆ. ಲಕ್ಷಾಂತರ ರೂಪಾಯಿಗಳನ್ನು ತಡೆಹಿಡಿಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ನಡೆಸುವುದೇ ಇಂದಿನ ಪರಿಸ್ಥಿತಿಯಲ್ಲಿ ದುಸ್ತರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೈಗೊಂಡ ಕ್ರಮ ಸರಿಯಲ್ಲ. ಕೂಡಲೇ ಹಿಂದಿನ ವರ್ಷದ ಬಾಕಿ ಹಣವನ್ನು ಕೂಡ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ ಒತ್ತಾಯಿಸಿದರು.

ಬಂಗಾರಪೇಟೆ ತಾಲ್ಲೂಕು ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಸರ್ಕಾರ ನಿಗದಿ ಮಾಡಿರುವ ಮಾನದಂಡದಂತೆ ಹಣ ಬಿಡುಗಡೆಯಾಗಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಯರಾಜು, ಹಣ ಲೆಕ್ಕಾಚಾರದಲ್ಲಿ ಲೋಪವಾಗಿದ್ದಲ್ಲಿ ಅದನ್ನು ಸರಿಪಡಿಸಲಾಗುವುದು. ಇಲಾಖೆಯ ತಂತ್ರಾಂಶದಲ್ಲಿ ಖಾಸಗಿ ಶಾಲೆಗಳು ಲಾಗಿನ್ ಆಗಿ ಆಗಿರುವ ತಪ್ಪನ್ನು ಸರಿಪಡಿಸಿ.

ನಂತರ ಅದನ್ನು ಅಂಗೀಕರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪದಾಧಿಕಾರಿಗಳಾದ ಕೃಷ್ಣ, ಚಿಕ್ಕಮುನೇಗೌಡ, ಕೃಷ್ಣಮೂರ್ತಿ, ಶ್ರೀನಿವಾಸ್, ಸತೀಶ್, ರಘುನಾಥ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT