ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಮಾಸಾಶನದಲ್ಲಿ ‘ಗೋಲ್‌ಮಾಲ್‌’

ಮುಳಬಾಗಿಲಿನಲ್ಲಿ ನಕಲಿ ದಾಖಲೆಪತ್ರ ಸೃಷ್ಟಿಸಿ ಕೃತ್ಯ
Last Updated 18 ಜನವರಿ 2017, 5:08 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ವ್ಯಕ್ತಿಯೊಬ್ಬ ತನ್ನ ಮಗನ ಹೆಸರಿನಲ್ಲಿ ನಕಲಿ ದಾಖಲೆಪತ್ರ ಸೃಷ್ಟಿಸಿ ಕಳೆದ ಎರಡು ವರ್ಷಗಳಿಂದ ಅಂಗವಿಕಲರ ಮಾಸಾಶನ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮುಳಬಾಗಿಲು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಳಬಾಗಿಲು ಪಟ್ಟಣದ ಬಳಿಯ ಪಳ್ಳಿಗಾರ ಪಾಳ್ಯದ ಶಬ್ಬೀರ್‌ ಉಲ್ಲಾ ಎಂಬಾತ ಈ ಕೃತ್ಯ ಎಸಗಿದ್ದು, ಆತ ತನ್ನ ಮಗ ಸಾಹಿಲ್‌ ಉಲ್ಲಾ ಅಂಗವಿಕಲನೆಂದು ಹೇಳಿಕೊಂಡು 2014ರ ಡಿಸೆಂಬರ್‌ ತಿಂಗಳಿನಿಂದ ಮಾಸಾಶನ ಪಡೆದಿದ್ದಾನೆ.

ಶಬ್ಬೀರ್‌ ಗಾರೆ ಕೆಲಸ ಮಾಡುತ್ತಾನೆ. ಆತನ ಸಂಬಂಧಿ ಆಸೀಫಾ ಎಂಬುವರ ಮಗನಾದ ಹಬೀಬ್‌ ವುಲ್ಲಾ ಅಂಗವಿಕಲ. ಹಬೀಬ್‌ಗೆ ಎರಡೂ ಕೈಗಳು ಇಲ್ಲ. ಆರೋಪಿ ಶಬ್ಬೀರ್‌, ಹಬೀಬ್‌ನ ಭಾವಚಿತ್ರ ತೋರಿಸಿ ಆತನೇ  ತನ್ನ ಮಗನೆಂದು ಮುಳಬಾಗಿಲು ತಹಶೀಲ್ದಾರ್‌ ಕಚೇರಿಯಲ್ಲಿ ಸುಳ್ಳು ಹೇಳಿ ಅಂಗವಿಕಲರ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದ್ದ. ಅಲ್ಲದೇ, ಅಂಗವಿಕಲತೆಗೆ ಸಂಬಂಧಪಟ್ಟ ವೈದ್ಯಕೀಯ ಪ್ರಮಾಣಪತ್ರ ಸಹ ಸಲ್ಲಿಸಿದ್ದ.

ಆರೋಪಿಯು ಅರ್ಜಿಯಲ್ಲಿ ಹಬೀಬ್‌ನ ಹೆಸರಿನ ಬದಲಿಗೆ ತನ್ನ ಮಗ ಸಾಹಿಲ್‌ನ ಹೆಸರು ನಮೂದಿಸಿದ್ದ. ಆದರೆ, ಭಾವಚಿತ್ರದ ಸ್ಥಳದಲ್ಲಿ ಹಬೀಬ್‌ನ ಭಾವಚಿತ್ರ ಅಂಟಿಸಿದ್ದ. ಅರ್ಜಿ ಹಾಗೂ ದಾಖಲೆಪತ್ರಗಳನ್ನು ಪರಿಶೀಲಿಸಿದ ಅಧಿಕಾರಿಗಳು ಭಾವಚಿತ್ರದಲ್ಲಿ ಇರುವುದು ಸಾಹಿಲ್‌ ಎಂದು ನಂಬಿ 2014ರ ಡಿ.1ರಿಂದ ಅನ್ವಯವಾಗುವಂತೆ ಅಂಗವಿಕಲರ ಮಾಸಾಶನ ಮಂಜೂರು ಮಾಡಿ ಆದೇಶಪತ್ರ ನೀಡಿದ್ದಾರೆ.

ಹಬೀಬ್‌ನ ತಾಯಿ ಆಸೀಫಾ ಅವರು ಪತಿ ಮತ್ತು ಮಕ್ಕಳೊಂದಿಗೆ ಬೆಂಗಳೂರಿನ ಕೆ.ಆರ್‌.ಪುರ ಬಳಿಯ ಹೆಗಡೆ ನಗರದಲ್ಲಿ ವಾಸವಾಗಿದ್ದಾರೆ. ಅವರು ತಿಂಗಳ ಹಿಂದೆ ಪಳ್ಳಿಗಾರ ಪಾಳ್ಯದಲ್ಲಿನ ಶಬ್ಬೀರ್‌ನ ಮನೆಗೆ ಬಂದಿದ್ದರು. ಆಗ ಅವರಿಗೆ ಆತನ ವಂಚನೆ ಕೃತ್ಯ ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಸಕರಿಗೂ ವಂಚನೆ:  ಆರೋಪಿ ಶಬ್ಬೀರ್‌, ತನ್ನ ಮಗ ಅಂಗವಿಕಲನೆಂದು ಹೇಳಿಕೊಂಡು ಹಬೀಬ್‌ನ ಭಾವಚಿತ್ರವಿರುವ ವೈದ್ಯಕೀಯ ಪ್ರಮಾಣಪತ್ರ ತೋರಿಸಿ ಮುಳಬಾಗಿಲು ಶಾಸಕ ಜಿ.ಮಂಜುನಾಥ್‌ ಅವರಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ಗೊತ್ತಾಗಿದೆ. ಈ ಸಂಗತಿಯನ್ನು ಆಸೀಫಾ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆಸೀಫಾ ಅವರು ಆರೋಪಿಯ ಕುಕೃತ್ಯದ ಬಗ್ಗೆ ಸ್ಥಳೀಯ ತಹಶೀಲ್ದಾರ್‌ ಕಚೇರಿಗೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಮಾಸಾಶನ ಕಡಿತಗೊಳಿಸಲು ಕ್ರಮ ಕೈಗೊಂಡಿಲ್ಲ. ಹೀಗಾಗಿ ಅವರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ಮುಳಬಾಗಿಲು ಪೊಲೀಸರು ಶಬ್ಬೀರ್‌ ವಿರುದ್ಧ ವಂಚನೆ, ನಕಲಿ ದಾಖಲೆಪತ್ರಗಳ ಸೃಷ್ಟಿ, ಅಪರಾಧ ಸಂಚು ಮತ್ತು ನಕಲಿ ದಾಖಲೆಪತ್ರಗಳನ್ನು ಅಸಲಿ ಎಂದು ಬಳಸಿ ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಳಂಬ ಮಾಡುತ್ತಿದ್ದಾರೆ: ‘ಸಂಬಂಧಿ ಶಬ್ಬೀರ್‌, ಮಗನ ಭಾವಚಿತ್ರ ದುರ್ಬಳಕೆ ಮಾಡಿಕೊಂಡು ನಕಲಿ ವೈದ್ಯಕೀಯ ಪ್ರಮಾಣಪತ್ರ ಮತ್ತು ದಾಖಲೆಪತ್ರಗಳನ್ನು ಸೃಷ್ಟಿಸಿ ಅಂಗವಿಕಲರ ಮಾಸಾಶನ ಪಡೆದಿದ್ದಾನೆ. ಈ ಬಗ್ಗೆ ತಹಶೀಲ್ದಾರ್‌ ಕಚೇರಿಗೆ ದೂರು ನೀಡಿದರೂ ಅಧಿಕಾರಿಗಳು ಮಾಸಾಶನ ತಡೆ ಹಿಡಿಯಲಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದೆ. ಆದರೆ, ಪೊಲೀಸರು ಆರೋಪಿಯನ್ನು ಬಂಧಿಸಲು ವಿಳಂಬ ಮಾಡುತ್ತಿದ್ದಾರೆ’ ಎಂದು ಆಸೀಫಾ ‘ಪ್ರಜಾವಾಣಿ’ಗೆ ತಿಳಿಸಿದರು.

150 ಪ್ರಕರಣ
ತಾಲ್ಲೂಕಿನಲ್ಲಿ ಸುಮಾರು 150 ಮಂದಿ ನಕಲಿ ವೈದ್ಯಕೀಯ ಪ್ರಮಾಣಪತ್ರ ಮತ್ತು ದಾಖಲೆಪತ್ರಗಳನ್ನು ಸೃಷ್ಟಿಸಿ ಅಂಗವಿಕಲರ ಮಾಸಾಶನ ಪಡೆದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಮಾಸಾಶನ ಕಡಿತಗೊಳಿಸಲಾಗಿದೆ. ಶಬ್ಬೀರ್‌ ಪ್ರಕರಣದ ಬಗ್ಗೆ ಪರಿಶೀಲನೆ ಮಾಡಿ ಆರೋಪ ಸಾಬೀತಾದರೆ ಆತನ ವಿರುದ್ಧ ಪ್ರಕರಣ ದಾಖಲಿಸುತ್ತೇವೆ.
–ಬಿ.ಎನ್‌.ಪ್ರವೀಣ್‌, ಮುಳಬಾಗಿಲು ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT