ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ

ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ
Last Updated 18 ಜನವರಿ 2017, 5:18 IST
ಅಕ್ಷರ ಗಾತ್ರ

ದಾವಣಗೆರೆ: ‘ಕಾಲ್ಪನಿಕ ವೇತನ ಬಡ್ತಿ, 7ನೇ ವೇತನ ಆಯೋಗ ಜಾರಿ ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಿಜೆಪಿ ಆಡಳಿತದ ಅವಧಿಯವರೆಗೆ ಕಾಯುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರ ಕಾಂಗ್ರೆಸ್‌ ಸರ್ಕಾರದ ಮೂಗು ಹಿಡಿದು ಹೋರಾಟ ಮಾಡಿ, ಈ ಸರ್ಕಾರದಲ್ಲಿಯೇ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಕರ್ನಾಟಕ ವಿಧಾನಪರಿಷತ್‌ ಉಪ ಚುನಾವಣೆಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪಿ.ಆರ್‌.ಬಸವರಾಜ್‌ (ಪೆಪ್ಸಿ) ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್‌ ಆಡಳಿತದ ಸರ್ಕಾರವು ಶಿಕ್ಷಣ ಇಲಾಖೆಗೆ ಕೇವಲ ₹ 3ಸಾವಿರ ಕೋಟಿ ಅನುದಾನ ನೀಡಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಶಿಕ್ಷಣ ಇಲಾಖೆಯ ಅನುದಾನವನ್ನು ₹ 17ಸಾವಿರ ಕೋಟಿಗೆ ಹೆಚ್ಚಿಸುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ’ ಎಂದು ಹೇಳಿದರು.

‘ಬಿಜೆಪಿ ಆಡಳಿತದ ಅವಧಿಯಲ್ಲಿ  ₹ 40 ಕೋಟಿ ವೆಚ್ಚದಲ್ಲಿ ಕನಕ ಪೀಠವನ್ನು ಅಭಿವೃದ್ಧಿ ಪಡಿಸಲಾಗಿದೆ. ಜೊತೆಗೆ ಯಾವುದೇ ಜಾತಿ, ಮತ, ಧರ್ಮವನ್ನು ನೋಡದೆ ಎಲ್ಲಾ ಸಮುದಾಯದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನೂ ನೀಡಲಾಗಿದೆ’ ಎಂದು ಹೇಳಿದರು.

‘ದೊಡ್ಡ ನೋಟುಗಳನ್ನು ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಣಯವನ್ನು ಇಡೀ ವಿಶ್ವವೇ ಶ್ಲಾಘನೆ ಮಾಡಿದೆ’ ಎಂದ ಅವರು, ಪ್ರಧಾನಿ ಅವರು ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಶಾಲಾ–ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಹದಗೆಟ್ಟ ಕಾನೂನು ಸುವ್ಯವಸ್ಥೆ: ರಾಜ್ಯದಲ್ಲಿ ಕಾನೂನು ಸುವೆವಸ್ಥೆ ಹದಗೆಟ್ಟಿದ್ದು, ಕೊಲೆ, ಸುಲಿಗೆ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಮಹಿಳೆಯರ ಹಾಗೂ ಮಕ್ಕಳ ರಕ್ಷಣೆ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ದೂರಿದರು.

ಅಭ್ಯರ್ಥಿಯನ್ನು ಗೆಲ್ಲಿಸಿ: ‘ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 3,350 ಶಿಕ್ಷಕ ಮತದಾರರಿದ್ದು, ಶಿಕ್ಷಕರ ಚುನಾವಣೆಗೆ ನಾನೇ ಸ್ಪರ್ಧಿಸಿದ್ದೇನೆ ಎಂದು ಭಾವಿಸಿ,  ಬಸವರಾಜ್‌ (ಪೆಪ್ಸಿ) ಅವರಿಗೆ ಒಂದೇ ಮತ ನೀಡುವ ಮೂಲಕ ಅವರನ್ನು ಭಾರೀ ಅಂತರದಿಂದ ಗೆಲ್ಲಿಸ ಬೇಕು’ ಎಂದು ಮನವಿ ಮಾಡಿದರು.
‘ಮುಂದಿನ ವಿಧಾನಸಭೆಯ ಚುನಾವಣೆಗೆ ಕೇವಲ 15 ತಿಂಗಳು ಮಾತ್ರ ಉಳಿದಿವೆ. ಪಕ್ಷದ ಯಾವ ಕಾರ್ಯಕರ್ತರೂ ನಿರ್ಲಕ್ಷಿಸದೇ ಪಕ್ಷ ಸಂಘಟನೆಗೆ ಶ್ರಮಿಸಬೇಕು’ ಎಂದರು.

ಶಾಸಕ ವೈ.ಎ.ನಾರಾಯಣ ಸ್ವಾಮಿ ಮಾತನಾಡಿ, ‘ಕಾಲ್ಪನಿಕ ವೇತನ ಬಡ್ತಿ ಸೇರಿದಂತೆ ಶಿಕ್ಷಕರು ಇಂದಿಗೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆ ಸಮಸ್ಯೆಗಳನ್ನು ಪರಿಹರಿಸುವಂತಹ ಸಾಮಾನ್ಯ ಜ್ಞಾನ ಕಾಂಗ್ರೆಸ್‌ ಸರ್ಕಾರಕ್ಕೆ ಇಲ್ಲ’ ಎಂದು ಟೀಕಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ 5ನೇ ವೇತನ ಹಾಗೂ 6ನೇ ವೇತನ ಜಾರಿಗೆ ತಂದು ನೌಕರರ ಕಲ್ಯಾಣಕ್ಕೆ ಶ್ರಮಿಸಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದ ತಕ್ಷಣ 7ನೇ ವೇತನ ಆಯೋಗವನ್ನು ಜಾರಿಗೆ ತರಲಾಗು ವುದು’ ಎಂದು ಭರವಸೆ ನೀಡಿದರು.

ಅಭ್ಯರ್ಥಿ ಪಿ.ಆರ್‌.ಬಸವರಾಜ್‌, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮುಖಂಡರಾದ ಎಸ್‌.ಎ.ರಾಮಚಂದ್ರಪ್ಪ, ಮಾಡಾಳು ವಿರೂಪಾಕ್ಷಪ್ಪ, ಬಿ.ಪಿ.ಹರೀಶ್‌, ಶಿವಾನಂದ, ಅರುಣ್‌ ಶಾಹಪುರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿದರು.

ಜಿ.ಪಂ. ಅಧ್ಯಕ್ಷೆ ಉಮಾ ರಮೇಶ್‌, ಗುರುಸಿದ್ದನಗೌಡ, ಜಯಪ್ರಕಾಶ್‌ ಅಂಬರ್‌ಕರ್‌, ಎಲ್‌.ಬಸವರಾಜ್‌, ಆನಂದಪ್ಪ, ಪ್ರೊ.ಲಿಂಗಣ್ಣ, ಓಂಕಾರಪ್ಪ, ಶಿವಾನಂದ, ಡಾ.ಮಂಜುನಾಥ ಗೌಡ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

ಬರಗಾಲ: ಬಿಜೆಪಿ ಸಂಸದ, ಶಾಸಕರಿಂದ ದೇಣಿಗೆ ಸಂಗ್ರಹ
‘ರಾಜ್ಯದಲ್ಲಿ ಬರಗಾಲದಿಂದ ಎದುರಾಗಿರುವ ಸಮಸ್ಯೆಗಳಿಗೆ ಸ್ವಲ್ಪಮಟ್ಟಿಗಾದರೂ ಪರಿಹಾರ ದೊರಕಿಸಿಕೊಡಲು ಪಕ್ಷದ ಸಂಸದರು, ಶಾಸಕರು ಹಾಗೂ ಮಠ–ಮಂದಿರ ಸೇರಿದಂತೆ ಕಾರ್ಯಕರ್ತ ರಿಂದ ದೇಣಿಗೆ ಸಂಗ್ರಹಿಸುವ ಪ್ರಯತ್ನ ನಡೆಸಿದ್ದೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

‘ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಜನ– ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಗೋಶಾಲೆಯಲ್ಲಿ ಮೇವಿಲ್ಲ. ಹೀಗಾಗಿ ಬಿಪಿಪಿಯ ಪ್ರತಿ ಸಂಸದರಿಂದ ₹ 1 ಕೋಟಿ, ಶಾಸಕರಿಂದ  ₹ 25 ಲಕ್ಷ ಹಾಗೂ ಮಠಗಳಿಂದಲೂ ದೇಣಿಗೆ ಸಂಗ್ರಹಿಸಲಾಗುವುದು. ಸಮಸ್ಯೆ ಎದುರಿಸುತ್ತಿರುವ  ಜಿಲ್ಲೆಗಳ ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು.

ಅಗತ್ಯವಿರುವ ಕಡೆ ಗೋಶಾಲೆಗಳನ್ನು ತೆರೆದು ಮೇವು ಸಂಗ್ರಹಿಸಲಾ ಗುವುದು. ಇದಕ್ಕೆ ಪಕ್ಷದ ಎಲ್ಲ ಸಂಸದರು, ಶಾಸಕರು ಹಾಗೂ ಮಠಾ ಧೀಶರು ಸಹಕರಿಸಬೇಕು’ ಎಂದು ಅವರು ಮನವಿ ಮಾಡಿಕೊಂಡರು.

*
ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ಪಕ್ಷದೊಳಗೆ ಅವುಗಳನ್ನು ಬಗೆಹರಿಸಿಕೊಂಡು ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳಲಾಗುವುದು.
–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT