ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕ್ಕೆ 600 ಕ್ವಿಂಟಲ್ ತೊಗರಿ ಖರೀದಿಗೆ ಸೂಚನೆ

ತೊಗರಿ ಮಂಡಳಿ ಕಚೇರಿ ಕಟ್ಟಡಕ್ಕೆ ₹10.80 ಕೋಟಿ ಪ್ರಸ್ತಾವ: ಭಾಗಣ್ಣ ಗೌಡ ಪಾಟೀಲ
Last Updated 18 ಜನವರಿ 2017, 5:46 IST
ಅಕ್ಷರ ಗಾತ್ರ

ಚಿತ್ತಾಪುರ: ತೊಗರಿ ಮಂಡಳಿಯಿಂದ ತಾಲ್ಲೂಕಿನ ರೈತರು ಬೆಳೆದ ತೊಗರಿ ಯನ್ನು ₹ 5,500 ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಪ್ರಾಂಗಣ ದಲ್ಲಿ ಮಂಗಳ ವಾರ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣ ಗೌಡ ಪಾಟೀಲ  ತೊಗರಿ ತುಂಬಿದ ಚೀಲ ತಕ್ಕಡಿಯಲ್ಲಿಟ್ಟು, ರಿಬ್ಬನ್‌ ಕತ್ತರಿಸಿ ಚಾಲನೆ ನೀಡಿದರು.

ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ಅವರು, ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿತ ದಿಂದ ರೈತರಿಗೆ ಆಗಿರುವ ತೊಂದರೆಗೆ ಸ್ಪಂದಿಸಲು ಸರ್ಕಾರದ ಅನುಮತಿ ಪಡೆದು ಮಂಡಳಿಯಿಂದ ತೊಗರಿ ಖರೀದಿಸಲಾಗುತ್ತಿದೆ. ಹಿಂದೆ ಈ ಪದ್ಧತಿ ಮಂಡಳಿ ಅನುಸರಿಸುತ್ತಿರಲಿಲ್ಲ ಎಂದರು.

ಚಿತ್ತಾಪುರ ತಾಲ್ಲೂಕಿನಲ್ಲಿ 4, ಸೇಡಂ, ಜೇವರ್ಗಿ ಮತ್ತು ಅಫಜಲಪುರ ತಾಲ್ಲೂಕಿನಲ್ಲಿ ತಲಾ 2 ಖರೀದಿ ಕೇಂದ್ರ ಆರಂಭಿಸಲಾಗಿದೆ. ಮಂಡಳಿಯಲ್ಲಿ ಅಗತ್ಯ ವ್ಯವಸ್ಥೆ ಮತ್ತು ಸಿಬ್ಬಂದಿ ಕೊರತೆ ಇರುವುದರಿಂದ ಆಯಾ ತಾಲ್ಲೂಕಿನ ಎಪಿಎಂಸಿ ಆಡಳಿತದ ಸಹಕಾರ ದೊಂದಿಗೆ ಖರೀದಿ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ರೈತರು ತರುವ ತೊಗರಿ ಸರಿಯಿಲ್ಲ ಎಂದು ಅನಗತ್ಯ ಜೆನ್ನಿ ಹಾಕುವ ಕೆಲಸ ಮಾಡಬಾರದು. ಸಣ್ಣ ಮತ್ತು ಬಡ, ಪರಿಶಿಷ್ಟ ರೈತರಿಗೆ ಮೊದಲ ಆದ್ಯತೆ ನೀಡಬೇಕು. ಅಲ್ಪ ಪ್ರಮಾಣದಲ್ಲಿ ತರುವ ತೊಗರಿ ಚೀಲಗಳನ್ನು ಖರೀದಿ ಮಾಡಲು ಹೆಸರು ನೋಂದಣಿ ಮಾಡಿಲ್ಲ ಎನ್ನುವ ನೆಪ ಹೇಳದೆ ಅವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಖರೀದಿ ಕೇಂದ್ರದ ಸಿಬ್ಬಂದಿಗೆ ತಾಕೀತು ಮಾಡಿದರು.

ಪ್ರತಿ ದಿವಸ ಪ್ರತಿ ಕೇಂದ್ರದಲ್ಲಿ ಕನಿಷ್ಠವೆಂದರೂ 600 ಕ್ವಿಂಟಾಲ್‌ ತೊಗರಿ ಖರೀದಿ ಮಾಡಬೇಕು. ರೈತರಿಂದ ಖರೀದಿ ಮಾಡಿದ ತೊಗರಿ ಕೇಂದ್ರದ ಉಗ್ರಾಣಕ್ಕೆ ಸೇರಿದ ವಾರದೊಳಗೆ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಲಾ ಗುತ್ತದೆ. ಮಂಡಳಿಯ ಖರೀದಿ ಕೇಂದ್ರ ಗಳ ಬಾಗಿಲು ಯಾವಾಗ ಮುಚ್ಚು ತ್ತದೆ ಎಂದು ನಿಖರವಾಗಿ ಹೇಳಲಾಗದು. ಕಾಲ ಮಿತಿಯಲ್ಲಿಯೆ ತ್ವರಿತವಾಗಿ ಖರೀದಿ ಪ್ರಕ್ರಿಯೆ ನಡೆಯಬೇಕು ಎಂದು ಅವರು ಎಪಿಎಂಸಿ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿದರು.

ತೊಗರಿ ಮಂಡಳಿಯ ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಮಾಡಲೆಂದು ಈಗಾಗಲೇ ₹10.80 ಕೋಟಿ ಅಂದಾಜು ಪಟ್ಟಿಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕಾಗಿ 5 ಎಕರೆ ಜಮೀನು ಖರೀದಿ ಮಾಡಲಾಗಿದೆ. ಹೃದರಾಬಾದ ಕರ್ನಾಟಕ ಪ್ರದೇಶಾ ಭಿವೃದ್ಧಿ ಮಂಡಳಿಯಿಂದ ಅನು ಮೋದನೆ ದೊರೆಯುವ ಭರವಸೆಯಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ತಾ.ಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್‌, ಜಿ.ಪಂ ಸದಸ್ಯ ಶಿವರುದ್ರ ಭೀಣಿ, ಪುರಸಭೆ ಉಪಾಧ್ಯಕ್ಷ ಮಹ್ಮದ್‌ ರಸೂಲ್‌ ಮುಸ್ತಫಾ, ಮುಖಂಡರಾದ ನಾಗರೆಡ್ಡಿ ಪಾಟೀಲ್‌ ಕರದಾಳ, ಬಸವರಾಜ ಪಾಟೀಲ್‌ ಹೇರೂರ್‌, ನಾಗರೆಡ್ಡಿ ಗೋಪಸೇನ್‌, ಚಂದ್ರಶೇಖರ ಸಾತನೂರ, ಹಣಮಂತ ಸಂಕನೂರ, ಭೀಮಣ್ಣ ಹೋತಿನಮಡಿ, ರಸೀದ್‌ ಎಂ.ಎ, ಮುಕ್ತಾರ್‌ ಪಟೇಲ್‌, ಸಿದ್ರಾಮೇಶ್ವರ ಸಜ್ಜನಶೆಟ್ಟಿ, ಶಿವಾಜಿ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಮಲ್ಲಿಕಾರ್ಜುನ ಬಮ್ಮನಳ್ಳಿ, ರಾಜಶೇಖರ ಪಾಟೀಲ್‌ ಸಂಕನೂರ ಉಪಸ್ಥಿತರಿದ್ದರು.

ಹಳೆ ತೊಗರಿ ಖರೀದಿಗೆ ಮನವಿ:  ಚಿತ್ತಾಪುರ: ಕಳೆದ 2016ರಲ್ಲಿ ರೈತರು ಬೆಲೆ ಕುಸಿತದಿಂದ ಮಾರಾಟ ಮಾಡದೆ ಉಗ್ರಾಣಗಳಲ್ಲಿ ಸಂಗ್ರಹಿಸಿಟ್ಟ ಹಳೆ ತೊಗರಿಯನ್ನು ತೊಗರಿ ಮಂಡಳಿಯಿಂದ  ₹ 5,500 ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿ ಮಂಡಳಿಯು ರೈತರ ನೆರವಿಗೆ ಮುಂದಾಗಬೇಕು ಎಂದು ಮುಖಂಡ ನಾಗರೆಡ್ಡಿ ಪಾಟೀಲ್‌ ಕರದಾಳ ಅವರು ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕ ನೂರ ಅವರಿಗೆ ಮನವಿ ಮಾಡಿದರು.

ತೊಗರಿ ಮಂಡಳಿಯಿಂದ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲು ಮಂಗಳವಾರ ಪಟ್ಟಣಕ್ಕೆ ಆಗಮಿಸಿದ ಸಂಕನೂರ ಅವರನ್ನು ಎಪಿಎಂಸಿ ಕಚೇರಿಯಲ್ಲಿ ಭೇಟಿ ಮಾಡಿದ ಅವರು, ಹಳೆ ತೊಗರಿಯನ್ನು ಉಗ್ರಾಣಗಳಲ್ಲಿ ಸಂಗ್ರಹಿಸಿಟ್ಟ ರೈತರು ಬ್ಯಾಂಕ್‌ಗಳಲ್ಲಿ ತೊಗರಿ ರಸೀದಿ ಅಡವಿಟ್ಟು  ₹ 7,000 ದರದ ಆಧಾರದಲ್ಲಿ ಸಾಲ ಪಡೆದುಕೊಂಡಿದ್ದಾರೆ. ಈಗ ತೊಗರಿ ಬೆಲೆ ಕುಸಿದ ಪರಿಣಾಮ ತೊಗರಿ ಮಾರಿದರೂ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲಾಗದ ಸ್ಥಿತಿಯಲ್ಲಿ ನರಳಾಡುತ್ತಿದ್ದಾರೆ ಎಂದು ಅವರು ಅಧ್ಯಕ್ಷರ ಗಮನ ಸೆಳೆದರು.

ತೊಗರಿ ಮಂಡಳಿಯಲ್ಲಿ ಹಳೆಯದು ಮತ್ತು ಹೊಸದು ಎಂದು ತಾರತಮ್ಯ ನೀತಿ ಅನುಸರಿಸಬಾರದು. ಹಳೆ ತೊಗರಿ ಖರೀದಿ ಮಾಡದೆ ರೈತರಿಗೆ ಮಂಡಳಿ ಯಿಂದ ಅನ್ಯಾಯ ಆಗದಂತೆ ನೋಡಿ ಕೊಳ್ಳಬೇಕು.

ಒಂದು ವೇಳೆ ಹಳೆ ತೊಗರಿ ಖರೀದಿ ಮಾಡದಿದ್ದರೆ ಮಂಡಳಿಯಿಂದ ರೈತರಿಗೆ ಅನ್ಯಾಯ ಮಾಡಿ ದಂತ್ತಾ ಗುತ್ತದೆ. ಇದನ್ನು ಮನಗಂಡು ರೈತರಿಂದ ಹಳೆ ತೊಗರಿ ಖರೀದಿಗೆ ಕ್ರಮ ಕೈಗೊಳ್ಳ ಬೇಕು ಎಂದು ಅವರು ಕೋರಿದರು.

ಮಾರುಕಟ್ಟೆಯಲ್ಲಿ ತೊಗರಿ ಬೆಲೆ ತೀರಾ ಕುಸಿದು ರೈತರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರದ ಬೆಂಬಲ ಬೆಲೆ  ₹ 5,500 ಸಮರ್ಪಕವಾಗಿಲ್ಲ.
ತೊಗರಿ ಬೆಳೆಯಲು ದುಬಾರಿ ಖರ್ಚಾಗಿದೆ. ಕನಿಷ್ಠ  ₹ 6,500 ಬೆಂಬಲ ಬೆಲೆ ನೀಡುವಂತೆ  ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದು ರೈತರಿಗೆ ನೆರವಾಗಬೇಕು ಎಂದು ಅವರು ಹೇಳಿದರು.

ಸರ್ಕಾರದ ನಿರ್ದೇಶನದ ಹೊರ ತಾಗಿ ಮಂಡಳಿಯಲ್ಲಿ ಯಾವುದೇ ಕೆಲಸ ಮಾಡುವಂತ್ತಿಲ್ಲ. ನಬಾರ್ಡ್‌ ನೀಡುವ ಅನುದಾನದಡಿ ತೊಗರಿ ಖರೀದಿ ನಡೆಯುತ್ತಿದೆ. ತೊಗರಿಯ ಬೆಂಬಲ ಬೆಲೆಗೆ ಇನ್ನೂ  ₹ 500 ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಮಂಡಳಿಯ ಅಧ್ಯಕ್ಷ ಹುದ್ದೆಯ ಅಧಿಕಾರ ಸ್ವೀಕರಿಸುತ್ತಿದ್ದಂತೆ ತೊಗರಿಗೆ  ₹ 6,500 ಬೆಂಬಲ ಬೆಲೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ರೈತರ ಬೇಡಿಕೆ ಯಂತೆ ಮತ್ತೊಮ್ಮೆ ಸರ್ಕಾರಕ್ಕೆ ರೈತರ ಕಷ್ಟದ ಕುರಿತು ಪತ್ರ ಬರೆಯುವೆ. ಪ್ರಸ್ತುತ ಕನಿಷ್ಠವೆಂದರೂ ತೊಗರಿಗೆ ₹ 6,000 ಬೆಂಬಲ ಬೆಲೆ ಸಿಗಬೇಕು ಎಂದು  ಭಾಗಣ್ಣಗೌಡ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT