ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಬಳಕೆಗೆ ಉತ್ತಮ ಕಾರ್ : ಇ2ಒ ಪ್ಲಸ್

ಪ್ರಜಾವಾಣಿ ಟೆಸ್ಟ್‌ಡ್ರೈವ್
Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ಕೆಲವು ತಿಂಗಳ ಹಿಂದೆ ಮಹಿಂದ್ರಾ ಕಂಪೆನಿ ತನ್ನ ವಿದ್ಯುತ್ ಚಾಲಿತ ಕಾರು ಇ2ಒ ಅನ್ನು ತುಸು ಮೇಲ್ದರ್ಜೆಗೆ ಏರಿಸಿ, ಇ2ಒ ಪ್ಲಸ್ ಅನ್ನು ಬಿಡುಗಡೆ ಮಾಡಿತ್ತು. ಕಂಪೆನಿಯ ಕಾರ್‌ಗಳ ವಿತರಕ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಅನಂತ್‌ ಕಾರ್ಸ್ ಇ2ಒ ಪ್ಲಸ್‌ ಅನ್ನು ಪರೀಕ್ಷಾರ್ಥ ಚಾಲನೆಗಾಗಿ ‘ಪ್ರಜಾವಾಣಿ’ಗೆ ಒದಗಿಸಿತ್ತು.

ಭಾರತಕ್ಕೆ ವಿದ್ಯುತ್ ಚಾಲಿತ ಕಾರ್‌ ಅನ್ನು ಪರಿಚಯಿಸಿದ್ದು, ಬೆಂಗಳೂರು ಮೂಲದ ರೇವಾ. ರೇವಾವನ್ನು ಮಹಿಂದ್ರಾ ಅಂಡ್ ಮಹಿಂದ್ರಾ ಖರೀದಿಸಿದ್ದು ಈಗ ಹಳೆಯ ಕಥೆ. ಹಳೆಯ ರೇವಾವನ್ನು ತುಸು ಬದಲಿಸಿ, ಮಹೀಂದ್ರಾ ಇ2ಒ ಎಂಬ ಕಾರ್‌ ಅನ್ನು ನಮ್ಮ ರಸ್ತೆಗೆ ಇಳಿಸಿತ್ತು. ಹಳೆಯ ರೇವಾಗಿಂತ ದೊಡ್ಡದಾಗಿದ್ದ ಇದು, ನಿಜಕ್ಕೂ ಉತ್ತಮ ಕಾರ್‌ ಆಗಿತ್ತು. ಆದರೆ ಬಹುದೊಡ್ಡ ಕೊರತೆ ಎಂದರೆ ಅದರ ಹಿಂಬದಿಯ ಸೀಟ್‌ಗಳಲ್ಲಿ ಕೂರಬೇಕೆಂದರೆ, ಮುಂಬದಿಯ ಸೀಟ್‌ಗಳನ್ನು ಮಡಚಿ ಹೋಗಬೇಕಾಗಿದ್ದದ್ದು. ಇ2ಒ ಎರಡು ಡೋರ್‌ನ ಕಾರ್‌ ಆಗಿದ್ದದ್ದೇ ಇದಕ್ಕೆ ಕಾರಣ.

ಉಳಿದಂತೆ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು ಶಕ್ತಿಯುತ ಮೋಟಾರ್ ನಗರದ ಬಳಕೆಗೆ ಇದನ್ನು ಹೇಳಿ ಮಾಡಿಸಿದಂತಿತ್ತು. ₹10 ಲಕ್ಷದ ಆಸುಪಾಸಿನ ಕಾರ್‌ನಲ್ಲಿ ಇಲ್ಲದಿದ್ದ ಕ್ಲಿಯರ್‌ಲೆನ್ಸ್‌ ಹ್ಯಾಲೊಜನ್ ಲ್ಯಾಂಪ್‌ ಇದರಲ್ಲಿತ್ತು. ಉತ್ತಮ ಇಂಟೀರಿಯರ್‌, ಉತ್ತಮ ಹವಾನಿಯಂತ್ರಣ ವ್ಯವಸ್ಥೆ, ತನ್ನ ಕಾಲದ ಅತ್ಯುತ್ತಮ ಸವಲತ್ತುಗಳನ್ನೆಲ್ಲಾ ಇದು ಹೊಂದಿತ್ತು. ಲೀಥಿಯಂ ಬ್ಯಾಟರಿ ಇದ್ದುದ್ದರಿಂದ ನಿರ್ವಹಣೆ ಸುಲಭ. ಜತೆಗೆ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 100 ಕಿ.ಮೀ. ಚಲಾಯಿಸಬಹುದಿತ್ತು. ಪೂರ್ಣ ಬ್ಯಾಟರಿ ಚಾರ್ಜ್‌ ಆಗಲು 5 ತಾಸು ಬೇಕಾಗುತ್ತದೆ.

ಒಂದು ತಾಸು ಚಾರ್ಜ್ ಮಾಡಿದರೆ 15–ಕಿ.ಮೀ.ನಿಂದ ಗರಿಷ್ಠ 20 ಕಿ.ಮೀವರೆಗೂ ಚಲಾಯಿಸಬಹುದಿತ್ತು. ಭಾರತದಲ್ಲಿ ಇದು ಹೆಚ್ಚು ಜನಪ್ರಿಯತೆ ಗಳಿಸಿದಿದ್ದರೂ, ವಿದೇಶಿ ಮಾರುಕಟ್ಟೆಯಲ್ಲಿ ಇ2ಒ ಮಹೀಂದ್ರಾ ಕಂಪೆನಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಇ2ಒನಲ್ಲಿ ಇದ್ದ ಕೆಲವು ಕೊರತೆಗಳನ್ನು ನಿವಾರಿಸಿ ಮಹೀಂದ್ರಾ ಇ2ಒ ಪ್ಲಸ್‌ ಅನ್ನು ಅಭಿವೃದ್ಧಿಪಡಿಸಿದೆ.

ಇ2ಒ ಪ್ಲಸ್‌ನಲ್ಲಿ ಸ್ಮಾರ್ಟ್‌ ಕೀ ಇದೆ. ಇದು ‘ಪ್ರೀಮಿಯಂ’ ಆದ ಅನುಭವ ನೀಡುತ್ತದೆ. ಡ್ಯಾಶ್‌ಬೋರ್ಡ್‌ ಮತ್ತು ಸ್ಟೀರಿಂಗ್ ವಿನ್ಯಾಸ ಉತ್ತಮವಾಗಿದೆ. ಹೆಡ್‌ ರೂಂ, ಷೋಲ್ಡರ್‌ ರೂಂ ವಿಶಾಲವಾಗಿದೆ. ಹಿಂಬದಿಯ ಸೀಟ್‌ಗಳಲ್ಲೂ ಕುಳಿತುಕೊಳ್ಳುವ ಅನುಭವ ಚೆನ್ನಾಗಿದೆ. ಅಲ್ಲೂ ವಿಶಾಲವಾದ ಹೆಡ್‌ ರೂಂ, ಷೋಲ್ಡರ್‌ ರೂಂ ಇದೆ. ಜತೆಗೆ ಲೆಗ್‌ ರೂಂ ಸಹ ತೀರಾ ಇಕ್ಕಾಟಾಗಿಯೇನೂ ಇಲ್ಲ. ಹೀಗಾಗಿ ನಾಲ್ವರು ವಯಸ್ಕರು ಆರಾಮಾಗಿ ಕುಳಿತುಕೊಳ್ಳುವಷ್ಟು ಇ2ಒ ಪ್ಲಸ್‌ನ ಒಳಾಂಗಣ ವಿಶಾಲವಾಗಿದೆ. ಜತೆಗೆ ಇದು ಐದು ಡೋರ್‌ (ಹ್ಯಾಚ್‌ ಸೇರಿ) ಕಾರ್‌ ಆಗಿರುವುದರಿಂದ ಹಿಂಬದಿ ಸೀಟ್‌ಗಳ ಬಳಕೆ ಸುಲಭ. ಡೋರ್‌ಪ್ಯಾಡ್‌, ಡ್ಯಾಶ್‌ಬೋರ್ಡ್‌ ಸೇರಿದಂತೆ ಒಳಾಂಗಣದ ಸೌಂದರ್ಯ ಕಣ್ಣಿಗೆ ರಾಚುವಂತೆ ಇಲ್ಲ. ಸರಳವಾಗಿದ್ದರೂ, ಉತ್ತಮವಾದ ವಿನ್ಯಾಸ, ಬಣ್ಣಗಳ ಸಂಯೋಜನೆ ಚೆನ್ನಾಗಿದೆ. ಒಳಾಂಗಣ ತುಸು ಗಂಭೀರವಾದ ಭಾವನೆ ಹುಟ್ಟು ಹಾಕುತ್ತದೆ.

ಹವಾನಿಯಂತ್ರಣ ವ್ಯವಸ್ಥೆ (ಎ.ಸಿ) ಉತ್ತಮವಾಗಿದೆ. ಬೆಂಗಳೂರಿನ ಬಿಸಿಲಿನಲ್ಲಿ ಎ.ಸಿಯನ್ನು ಬಳಸಿ ಹಲವು ಕಿ.ಮೀ ಚಲಾಯಿಸಲಾಯಿತು. ಕಾರ್‌ ಒಳಗಿನ ವಾತಾವರಣ ತಂಪಾಗಿಯೇ ಇತ್ತು. ಹೊರಗಿನ ಬಿಸಿಲನ್ನು ಪರೀಕ್ಷಿಸುವ ಸಲುವಾಗಿ ಎ.ಸಿ.ಯನ್ನು ಸ್ಥಗಿತಗೊಳಿಸಿ, ಗಾಜುಗಳನ್ನು ಇಳಿಸಲಾಯಿತು. ಹೀಗೆ ಮಾಡಿದ್ದು, ಮೈಸೂರು ರಸ್ತೆಯ ಮೇಲ್ಸೇತುವೆ ಮೇಲೆ. ಒಂದು ನಿಮಿಷ ಕಳೆಯುವ ಮುನ್ನವೇ ಕಾರ್ ಒಳಗಿನ ವಾತಾವರಣ ಬಿಸಿಯಾಯಿತು. ಮತ್ತೆ ಎ.ಸಿ ಚಾಲನೆ ಮಾಡಿದ ಒಂದೆರಡು ನಿಮಿಷದಲ್ಲಿ ತಂಪಾಯಿತು. ಹೀಗಾಗಿ ಎ.ಸಿ ಕಾರ್ಯನಿರ್ವಹಣೆ ಉತ್ತಮವಾಗಿದೆ ಎನ್ನಬಹುದು. ನಗರದೊಳಗೆ, ಸಂಚಾರ ದಟ್ಟಣೆಯಲ್ಲಿ ಚಲಾಯಿಸುವಾಗ ಇದು ಹೆಚ್ಚು ಅನುಕೂಲಕ್ಕೆ ಬರುತ್ತದೆ.

ವಿದ್ಯುತ್ ಚಾಲಿತ ವಾಹನಗಳು ವೇಗವಾಗಿ ಚಲಿಸುವುದಿಲ್ಲ, ವೇಗವರ್ಧನೆ ಕಡಿಮೆ ಎಂದೆಲ್ಲಾ ಸಾಮಾನ್ಯ ಜನರಲ್ಲಿ ಪೂರ್ವಗ್ರಹವಿದೆ. ಹಾಗೆ ನೋಡಿದರೆ, ವೈಜ್ಞಾನಿಕ ಸಿದ್ಧಾಂತಗಳ ಪ್ರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ಗಳಿಗಿಂತ ವಿದ್ಯುತ್‌ ಮೋಟಾರ್‌ನ ವೇಗವರ್ಧನೆ ಹೆಚ್ಚು. ಇ2ಒ ಪ್ಲಸ್‌ನಲ್ಲಿರುವ ಮೋಟಾರ್‌ ಸಹ ಇದಕ್ಕೆ ಹೊರತಲ್ಲ. ಅಂದರೆ, ಇ2ಒ ಪ್ಲಸ್‌ನ ವೇಗವರ್ಧನೆ ಉತ್ತಮವಾಗಿದೆ. ನಗರದ ಮಿತಿಯಲ್ಲಿ ಪ್ರತಿ ಗಂಟೆಗೆ 65 ಕಿ.ಮೀ ವೇಗ ಮುಟ್ಟಲು ಸಾಧ್ಯವಾಯಿತಾದರೂ, ಆ ವೇಗ ಮುಟ್ಟಲು ಕಾರ್ ತೆಗೆದುಕೊಂಡ ಸಮಯ ತೀರಾ ಕಡಿಮೆ.

ಬೇರೆ ಯಾವ ಕಾರ್‌ಗಳೂ ಇ2ಒ ಅನ್ನು ಹಿಂದಿಕ್ಕದಂತೆ ಅದನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಸಾಧ್ಯವಿದೆ. ಸ್ವಯಂಚಾಲಿತ ಗಿಯರ್‌ ವ್ಯವಸ್ಥೆಯಲ್ಲಿ ಸ್ಪೋರ್ಟ್ಸ್ ಮೋಡ್‌ (ಇದಕ್ಕೆ ಬೂಸ್ಟರ್‌ ಎಂದು ಹೆಸರಿಡಲಾಗಿದೆ) ಆಯ್ಕೆಯಿದೆ. ಇದು ಕಾರ್‌ನ ವೇಗವರ್ಧನೆಯನ್ನು ಹೆಚ್ಚಿಸುತ್ತದೆ. ಈ ಮೋಡ್‌ನಲ್ಲಿದ್ದರೆ, ಥ್ರೋಟಲ್ ಒತ್ತದೆಯೇ ವಾಹನಗಳು ಕಿಕ್ಕಿರಿದ ಸಂಚಾರ ದಟ್ಟಣೆಯ ರಸ್ತೆಯಲ್ಲಿ ಸುಲಭವಾಗಿ ಚಲಾಯಿಸಿಕೊಂಡು ಹೋಗಬಹುದು. ಒಟ್ಟಾರೆ ವೇಗವರ್ಧನೆ ವಿಚಾರದಲ್ಲಿ 10 ಲಕ್ಷ ಬೆಲೆಯ ಕಾರುಗಳ ಅನುಭವವನ್ನು ಇ2ಒ ಕೊಡುತ್ತದೆ.

ರಸ್ತೆ ಹಿಡಿತ ಮತ್ತು ನಿಯಂತ್ರಣವೂ ಹಿಂದಿನ ಇ2ಒಗಿಂತ ಉತ್ತಮವಾಗಿದೆ. ಎಲೆಕ್ಟ್ರಿಕಲ್ ಸ್ಟೀರಿಂಗ್ ಅನ್ನು ಉತ್ತಮವಾಗಿ ಸಂಯೋಜನೆ ಮಾಡಲಾಗಿದೆ. ಕಡಿಮೆ ವೇಗದಲ್ಲಿ ಸ್ಟೀರಿಂಗ್‌ನ ಭಾರ ತೀರಾ ಕಡಿಮೆ ಇದೆ. ಇದು ರೇರ್‌ ವ್ಹೀಲ್‌ ಡ್ರೈವ್‌ ಕಾರ್‌ ಆಗಿರುವುದರಿಂದ ಇಕ್ಕಟ್ಟಾದ ತಿರುವಿನಲ್ಲಿ, ಪಾರ್ಕಿಂಗ್‌ ರ್‍್ಯಾಂಪ್‌ಗಳಲ್ಲಿ ತೀರಾ ಸುಲಭವಾಗಿ ತಿರುಗಿಸಬಹುದು. ಚಿಕ್ಕ ಕಾರ್‌ಗಳು ಫ್ರಂಟ್‌ ವ್ಹೀಲ್‌ ಡ್ರೈವ್‌ ಆಗಿರುವುದರಿಂದ ಇಂತಹ ಪರಿಸ್ಥಿತಿಯಲ್ಲಿ ಮೊಣಕೈ ನೋವು ಬರುವಷ್ಟು ಸ್ಟೀರಿಂಗ್ ಭಾರವಾಗಿರುತ್ತವೆ. ಈ ವಿಚಾರದಲ್ಲಿ ಈ ಕಾರ್‌ ನಗರದ ದಟ್ಟಣೆಯಲ್ಲಿ ಬಳಕೆಗೆ ಹೇಳಿ ಮಾಡಿಸಿದಂತಿದೆ. ಇನ್ನು ಕಾರ್‌ನ ವೇಗ ಹೆಚ್ಚಿದಂತೆ ಸ್ಟೀರಿಂಗ್‌ನ ಭಾರ ಹೆಚ್ಚುತ್ತದೆ. ಹೀಗಾಗಿ ಭಯಪಡದೆಯೇ ವೇಗವಾಗಿ ಚಾಲನೆ ಮಾಡಬಹುದು.

ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ನೂರು ಕಿ.ಮೀ ದೂರ ಕ್ರಮಿಸಲಷ್ಟೇ ಸಾಧ್ಯವಿರುವುದರಿಂದ, ನಗರದಲ್ಲಿ ಬಳಸಲು ಈ ಕಾರ್‌ ಉತ್ತಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT