ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಿಯಕರ ತಂದಿದ್ದ ಆ್ಯಸಿಡ್, ಆತನ ಮೇಲೆಯೇ ಬಿತ್ತು’

Last Updated 18 ಜನವರಿ 2017, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಿಯಕರನೇ ನನ್ನ ಮೇಲೆ ಆ್ಯಸಿಡ್ ಎರಚಲು ಯತ್ನಿಸಿದ. ಅದಕ್ಕೆ ನಾನು ಪ್ರತಿರೋಧ ತೋರಿದಾಗ ಅದು ಆತನ ಮೇಲೆಯೇ ಚೆಲ್ಲಿತು...’
ಆ್ಯಸಿಡ್ ದಾಳಿ ಪ್ರಕರಣ ಸಂಬಂಧ ಬಂಧಿತಳಾಗಿರುವ ಲಿಡಿಯಾ ಫಿಸಿಬಾ (26), ಪೊಲೀಸ್ ವಿಚಾರಣೆ ವೇಳೆ ನೀಡಿದ ಹೇಳಿಕೆ ಇದು.

‘ಲಿಡಿಯಾಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದೆವು. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶರು ಆಕೆಯನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದರು. ಸಂಜೆ ಆರು ಗಂಟೆವರೆಗೆ ವಿಚಾರಣೆ ನಡೆಸಿ, ನಂತರ ಮಹಿಳಾ ವಸತಿ ನಿಲಯಕ್ಕೆ (ಸ್ಟೇಟ್‌ ಹೋಂ) ಬಿಟ್ಟು ಬಂದೆವು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಜಯಕುಮಾರ್‌ನನ್ನು ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೆ. ಆತ ನನ್ನ ಧರ್ಮಕ್ಕೆ ಮತಾಂತರಗೊಳ್ಳಲು ಒಪ್ಪಲಿಲ್ಲ. ಮದುವೆ ಆಗುವುದಕ್ಕೂ ಹಿಂದೇಟು ಹಾಕುತ್ತಿದ್ದ. ಈ ಕಾರಣಕ್ಕೆ ನಾನೇ ಆತನಿಂದ ದೂರ ಉಳಿದಿದ್ದೆ. ಸೋಮವಾರ ಸಂಜೆ 8.30ರ ಸುಮಾರಿಗೆ ನಾನು ಸ್ಕೂಟರ್‌ನಲ್ಲಿ ಪೈಪ್‌ಲೈನ್ ರಸ್ತೆಯಲ್ಲಿ ಹೋಗುತ್ತಿದ್ದೆ. ಆಗ ಕಾರಿನಲ್ಲಿ ಬಂದು ಅಡ್ಡಗಟ್ಟಿದ ಆತ, ಏಕಾಏಕಿ ಆ್ಯಸಿಡ್ ಎರಚಲು ಯತ್ನಿಸಿದ’ ಎಂದು ಆಕೆ ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಗಳು ವಿವರಿಸಿದರು.

ನಂಬರ್ ಪ್ಲೇಟ್ ಬದಲಿಸಿದ್ದೇಕೆ:  ‘ಆ್ಯಸಿಡ್ ಬಾಟಲಿ ಕಿತ್ತುಕೊಳ್ಳಲು ಯತ್ನಿಸಿದೆ. ಆಗ ಅದು ಆತನ ಮೈಮೇಲೆ ಚೆಲ್ಲಿತು. ಅದರಿಂದ ಹೆದರಿ ಅಲ್ಲಿಂದ ಹೊರಟುಹೋದೆ’ ಎಂದಳು. ಆದರೆ, ಸ್ಕೂಟರ್‌ನ ನಂಬರ್‌ ಪ್ಲೇಟ್ ಬದಲಿಸಿದ್ದೇಕೆ? ಮುಖಕ್ಕೆ ಬಟ್ಟೆ ಕೊಟ್ಟಿಕೊಂಡಿದ್ದೇಕೆ? ಈಗ ಸುನೀಲ್ ಮನೆ ಬಿಟ್ಟು ಹೋಗಿರುವುದೇಕೆ ಎಂಬ ಪ್ರಶ್ನೆಗಳನ್ನು ಕೇಳಿದಾಗ ಆಕೆ ಮೌನಕ್ಕೆ ಶರಣಾದಳು ಎಂದು ಪೊಲೀಸರು ಮಾಹಿತಿ ನಿಡಿದರು.

ಲಿಡಿಯಾಳನ್ನು ಮಂಗಳವಾರ ವಿಚಾರಣೆ ನಡೆಸಿದ್ದಾಗ, ‘ಜಯಕುಮಾರ್ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹೋಗಿರುವ ವಿಷಯ ತಿಳಿಯಿತು. ಹೀಗಾಗಿ, ಆತ ವಾಪಸ್ ಬರುವವರೆಗೂ ನಾನು ಹಾಗೂ ಮಾವನ ಮಗ ಸುನೀಲ್ ಅತ್ತಿಗುಪ್ಪೆ ಬಸ್ ನಿಲ್ದಾಣದ ಬಳಿ ಹೊಂಚು ಹಾಕಿ ಕುಳಿತಿದ್ದೆವು. ಆತ ಬರುತ್ತಿದ್ದಂತೆಯೇ ಆ್ಯಸಿಡ್ ಎರಚಿದ್ದೆವು’ ಎಂದು ಹೇಳಿಕೆ ಕೊಟ್ಟಿದ್ದಳು.

ಆದರೆ, ಅವರಿಬ್ಬರೂ ಅತ್ತಿಗುಪ್ಪೆ ಬಳಿ ಹೊಂಚು ಹಾಕಿರಲಿಲ್ಲ. ಬದಲಾಗಿ, ರಾಜರಾಜೇಶ್ವರಿ ದೇವಸ್ಥಾನದಿಂದಲೂ ಜಯಕುಮಾರ್ ಅವರ ಕಾರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಘಟನೆ ವೇಳೆ ಜಯಕುಮಾರ್ ಜತೆಗಿದ್ದ ಅವರ ಸ್ನೇಹಿತ ಪದ್ಮನಾಭ್ ಕೂಡ ನಡೆದ ಘಟನೆಯನ್ನು ವಿವರಿಸಿದ್ದಾರೆ. ಯುವತಿಯೇ ಆ್ಯಸಿಡ್ ಎರಚಿದಳು ಎಂಬುದಕ್ಕೆ ಆಕೆಯ ಮೊದಲ ದಿನದ ಹೇಳಿಕೆ ಸೇರಿದಂತೆ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT