ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಯುವಕನ ಬೆತ್ತಲೆ ಪ್ರಕರಣ: ಮೂವರ ಬಂಧನ, ಇಬ್ಬರಿಗೆ ಹುಡುಕಾಟ

Last Updated 19 ಜನವರಿ 2017, 8:45 IST
ಅಕ್ಷರ ಗಾತ್ರ

ಗುಬ್ಬಿ/ಕೊರಟಗೆರೆ: ದಲಿತ ಯುವಕ ಅಭಿಷೇಕ್‌  (19) ಅವರನ್ನು ಬೆತ್ತಲೆಗೊಳಿಸಿ ಚಪ್ಪಲಿ ಹಾರ ಹಾಕಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

‘ಗುಬ್ಬಿ ಪಟ್ಟಣದ ನಿವಾಸಿಗಳಾದ ಕಾಡುಪ್ರಕಾಶ್‌, ಮಾರುತಿ, ರಮೇಶ್‌ ಅವರನ್ನು ಬಂಧಿಸಲಾಗಿದೆ. ಅವರನ್ನು ಕೊರಟಗೆರೆ ಠಾಣೆಯಲ್ಲಿ ಇಡಲಾಗಿದೆ. ಇನ್ನೂ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾಪಂಥ್‌  ಗುಬ್ಬಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯ ದಲಿತ ಸೇನೆ ಹಾಗೂ ಇತರ ದಲಿತ ಸಂಘಟನೆಗಳ ಮುಖಂಡರು ಗುಬ್ಬಿ ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟಿಸಿ, ಆರೋಪಿಗಳನ್ನು ಬಂಧಿಸಬೇಕು ಹಾಗೂ ರೌಡಿಶೀಟರ್‌ ತೆರೆದು ಗುಬ್ಬಿಯಿಂದ ಗಡಿ ಪಾರು ಮಾಡಬೇಕೆಂದು ಒತ್ತಾಯಿಸಿದರು.

‘ಆರೋಪಿಗಳ ಮೇಲೆ ರೌಡಿ ಶೀಟರ್‌ ತೆರೆಯಲು ಹಾಗೂ ಗಡಿ ಪಾರು ಮಾಡುವ ಸಂಬಂಧ ಕ್ರಮ ಕೈಗೊಳ್ಳುವ ಭರವಸೆಯನ್ನು ಇಶಾ ಪಂಥ್‌ ದಲಿತ ಮುಖಂಡರಿಗೆ ನೀಡಿದರು. ನಂತರ ಪ್ರತಿಭಟನೆ ವಾಪಸ್‌ ಪಡೆದರು.

‘ಗುಬ್ಬಿಯಲ್ಲಿ ದಲಿತರಿಗೆ ರಕ್ಷಣೆ ಇಲ್ಲವಾಗಿದೆ. ಇಂಥ ಅನೇಕ ಘಟನೆಗಳು ನಡೆದರೂ ಬೆಳಕಿಗೆ ಬಂದಿಲ್ಲ’ ಎಂದು ದಲಿತ ಮುಖಂಡರು ಹೇಳಿದರು.
ದಲಿತ ರಾಜ್ಯ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಜಗನ್ನಾಥ್‌, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜು, ಮುಖಂಡರಾದ ಮಂಜುನಾಥ್‌, ಕೊಟ್ಟಾ ಶಂಕರ್‌, ಮೂರ್ತಿ ಇತರರು ಇದ್ದರು. 

ನನಗೆ ಗೊತ್ತಿಲ್ಲ– ಸಚಿವ 
ಬೆಂಗಳೂರು:
‘ದಲಿತ ಯುವಕನನ್ನು ಬೆತ್ತಲೆಗೊಳಿಸಿ, ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ’ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾನೂನು ಸಚಿವ ಟಿ.ಬಿ. ಜಯಚಂದ್ರ  ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ‘ಹೌದಾ? ಯಾವಾಗ ನಡೆದಿದೆ. ಸಂಜೆ 4ಗಂಟೆಯವರೆಗೂ ತುಮಕೂರಿನಲ್ಲಿಯೇ ಇದ್ದೆ. ಯಾರೂ ನನಗೆ ತಿಳಿಸಲಿಲ್ಲ. ವಿವರ ಪಡೆಯುತ್ತೇನೆ’ ಎಂದು ಪ್ರತಿಕ್ರಿಯೆ ನೀಡಿದರು.

ಪೊಲೀಸರಲ್ಲಿ ಬಿಗಿ ಇಲ್ಲ
ಗುಬ್ಬಿ ಪೊಲೀಸರು ಬಿಗಿ ಇಲ್ಲದೆ ಇರುವುದೇ ಇಂಥ ಘಟನೆಗಳಿಗೆ ಕಾರಣ ಎಂದು ಬುಧವಾರ ಸಾರ್ವಜನಿಕವಾಗಿ ಮಾತುಗಳು ಕೇಳಿ ಬಂದವು. ಪಟ್ಟಣದ ಬಸ್‌ ನಿಲ್ದಾಣ, ಸರ್ಕಾರಿ ಜ್ಯೂನಿಯರ್ ಕಾಲೇಜು, ಚನ್ನಬಸವೇಶ್ವರ ದೇವಸ್ಥಾನದ ಬಳಿ, ಎಪಿಎಂಸಿ ಆವರಣದಲ್ಲಿ ಪುಢಾರಿಗಳ ಕೀಟಲೆ ಹೆಚ್ಚಿರುತ್ತದೆ. ಆದರೂ ಪೊಲೀಸರು ಇಲ್ಲಿ ಬಿಗಿ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಜನರು ಆರೋಪಿಸಿದರು.

ಇಂಥ ಘಟನೆಗಳ ಬಗ್ಗೆ ಸಾರ್ವಜನಿಕರು ದೂರಿದಾಗಲೆಲ್ಲ ಸಿಬ್ಬಂದಿ ಕೊರತೆ ಎಂಬ ನೆಪ ಹೇಳಲಾಗುತ್ತದೆ. ಸಮುದಾಯಗಳ ಮುಖಂಡರ ಸಭೆ ನಡೆಸುವುದನ್ನು ಪೊಲೀಸರು ಕಡಿಮೆ ಮಾಡಿದ್ದಾರೆ. ವಿವಿಧ ಸಮುದಾಯಗಳ ಮುಖಂಡರ ಸಮನ್ವಯ ಸಭೆಗಳನ್ನು ಹೆಚ್ಚು ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ವಿಡಿಯೊ ಅಪ್‌ಲೋಡ್‌ ಮಾಡಿದರು
ಆರೋಪಿಗಳು ಯುವಕನಿಗೆ ಬಟ್ಟೆ ಬಿಚ್ಚಿಸಿ ಚಪ್ಪಲಿ ಹಾರ ಹಾಕಿದ್ದನ್ನು ವಿಡಿಯೊ ಮಾಡಿಕೊಂಡು ತಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್‌ ಒಂದಕ್ಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ಈ ಗ್ರೂಪ್‌ನಲ್ಲಿ ಇದ್ದವರು ಇದನ್ನು ತಮ್ಮ ಸ್ನೇಹಿತರು ಸೇರಿ ಬೇರೆ ಬೇರೆಯ ಹಲವಾರು ವಾಟ್ಸಾಪ್‌ ಗ್ರೂಪ್‌ಗಳಿಗೆ ಕಳುಹಿಸಿದ್ದರು. ಅಲ್ಲದೆ ಆರೋಪಿಗಳು ಈ ಬಗ್ಗೆ ತಮ್ಮ ಪರಿಚಿತರ ಬಳಿ ಹೇಳಿಕೊಂಡು ತಿರುಗಾಡಿದ್ದು ಘಟನೆ ಬೆಳಕಿಗೆ ಬರಲು ಕಾರಣ ಎಂದು ಹೇಳಲಾಗಿದೆ.

ಘಟನೆಗೆ ಕಾರಣ ಏನು?
‘ಎರಡು– ಮೂರು ತಿಂಗಳಿಂದ ಹೈಸ್ಕೂಲು ವಿದ್ಯಾರ್ಥಿನಿಯೊಂದಿಗೆ ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದೆ. ಅದೇ ನನ್ನ ಮೇಲಿನ ಹಲ್ಲೆಗೆ ಕಾರಣ’ ಎಂದು ಹಲ್ಲೆಗೆ ಒಳಗಾಗಿರುವ ಅಭಿಷೇಕ್‌ ಪೊಲೀಸರಿಗೆ ತಿಳಿಸಿದ್ದಾರೆ. 

‘ಇದೇ ಕಾರಣದಿಂದ ನನ್ನನ್ನು  ತೋಟದ ಮನೆಗೆ ಕರೆಯಿಸಿಕೊಂಡು ಹಲ್ಲೆ ನಡೆಸಿದರು. ಅಶ್ಲೀಲವಾಗಿ ನಿಂದಿಸಿದರು’ ಎಂದು ತಿಳಿಸಿದ್ದಾನೆ. ಯುವಕನು ವಿದ್ಯಾರ್ಥಿನಿಗೆ ಪದೇಪದೇ ಕೀಟಳೆ ಕೊಡುತ್ತಿದ್ದನು. ಇದರಿಂದ ಬೇಸತ್ತು ಆತನನ್ನು ಹೆದರಿಸಿ ಸುಮ್ಮನಿರಿಸಲು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

‘ಎರಡೂ ಕಡೆಯೂ ತಪ್ಪಿರಬಹುದು. ಆದರೆ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡುವಂಥ ಕೆಲಸ ಮಾಡಬಾರದಿತ್ತು.  ಪ್ರಕರಣ ಸೂಕ್ಷ್ಮವಾಗಿ ನಿಭಾಯಿಸಬೇಕು’ ಎಂದು ಪಟ್ಟಣದ ಜನರು  ಮಾತನಾಡಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT