ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘ ಪುನಃ ಸಂಘಟನೆಯಾಗಲಿದೆ

ಚಿಕ್ಕಬಳ್ಳಾಪುರ ರೈತಸಂಘ ಮಹಿಳಾ ಘಟಕಕ್ಕೆ ಪದಾಧಿಕಾರಿಗಳ ನೇಮಕ
Last Updated 19 ಜನವರಿ 2017, 5:02 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಬುಧವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಘಟಕಗಳಿಗೆ ನೂತನವಾಗಿ ನೇಮಕವಾದ ಪದಾಧಿಕಾರಿಗಳಿಗೆ  ಹಸಿರು ಶಾಲು ಹೊದಿಸಿ ಸನ್ಮಾನಿಸಲಾಯಿತು.

ರೈತ ಸಂಘದ ಮಹಿಳಾ ಘಟಕದ ಜಿಲ್ಲಾ ಘಟಕದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಸುಷ್ಮಾ ಶ್ರೀನಿವಾಸ್ ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳಿಗೆ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಸಮಾರಂಭದಲ್ಲಿ  ಮಾತನಾಡಿದ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್.ನರಸಿಂಹಪ್ಪ, ‘ಪ್ರೊ.ನಂಜುಂಡಸ್ವಾಮಿ ಅವರು ಊರೂರು ಸುತ್ತಿ ರಾಜ್ಯದಲ್ಲಿ ಮೊದಲ ಬಾರಿ ಸಂಘಟಿಸಿದ ರೈತ ಸಂಘವನ್ನು ನಾವು ಸಂಘಟಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಪ್ರತಿಯೊಂದು ಹಂತದ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಸಂಘ ರಾಜ್ಯದಾದ್ಯಂತ ಪುನಃ ಸಂಘಟನೆಯಾಗಲಿದೆ’ ಎಂದು ಹೇಳಿದರು.

‘ಪ್ರಜಾಪ್ರಭುತ್ವದಡಿಯಲ್ಲಿ ಯಾರು ಯಾವ ಸಂಘವನ್ನಾದರೂ ಮಾಡಿಕೊಳ್ಳಲಿ ನಮಗೆ ಬೇಕಾಗಿಲ್ಲ. ನಮಗಿರುವುದು ಒಂದೇ ಸಂಘಟನೆ ಅದು ನಂಜುಂಡಸ್ವಾಮಿ ಅವರು ಕಟ್ಟಿದ ರೈತಸಂಘ. ಹೀಗಾಗಿ ನಾವು ಅವರ ಸಿದ್ಧಾಂತಗಳಲ್ಲಿ ನಡೆಯುತ್ತೇವೆ. ಇವತ್ತಿನಿಂದ ನಾವು ಒಳ್ಳೆಯ ಹೋರಾಟ ಮಾಡೋಣ’ ಎಂದು ತಿಳಿಸಿದರು.

‘ಬಯಲು ಸೀಮೆಗೆ ಜಿಲ್ಲೆಗಳ ಶಾಶ್ವತ ನೀರಾವರಿ ಯೋಜನೆಗೆ ಪರಮಶಿವಯ್ಯ ಅವರು ಕೊಟ್ಟಿರುವ ಸಮಗ್ರ ವರದಿಯಂತೆ ಯೋಜನೆ ಅನುಷ್ಟಾನಕ್ಕೆ ತರಬೇಕು ಎಂದು ನಾವು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯೊಂದೇ ನಿಜವಾದ ಪರಿಹಾರ. ಎತ್ತಿನಹೊಳೆ, ಕೊಳಚೆ ನೀರು ಸಂಸ್ಕರಿಸಿ ಬಳಸುವ ಯೋಜನೆಗಳೆಲ್ಲ ಅವೈಜ್ಞಾನಿಕ. ಆದರೆ ಇಚ್ಛಾಶಕ್ತಿ ಇಲ್ಲದ ರಾಜಕೀಯ ಪಕ್ಷಗಳು ಪರಮಶಿವಯ್ಯ ವರದಿ ಅನುಷ್ಟಾನಕ್ಕೆ ಮುಂದಾಗುತ್ತಿಲ್ಲ’ ಎಂದು ಆರೋಪಿಸಿದರು.

ರೈತಸಂಘದ ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ‘ನಾವು ರೈತಸಂಘವನ್ನು ಜಾತ್ಯತೀತ, ಪಕ್ಷಾತೀತವಾಗಿ ಮುಂದುವರಿಸಿಕೊಂಡು ಹೋಗೋಣ. ಆ ಬಣ, ಈ ಬಣ ಎನ್ನುವುದು ಬಿಟ್ಟುಬಿಡೋಣ. ಯಾವುದೇ ಬಣಕ್ಕೆ ನಾವು ಸೀಮತವಾಗಿಲ್ಲ. ಕಾಲಕಾಲಕ್ಕೆ ಬರುವ ರೈತರ ಸಮಸ್ಯೆಗಳಿಗೆ ಹೋರಾಟ ರೂಪಿಸೋಣ’ ಎಂದರು.

‘ಬಯಲು ಸೀಮೆ ಜಿಲ್ಲೆಗಳಿಗೆ ಬೇಕಾದ ನೀರಾವರಿಗಾಗಿ ಅನೇಕ ಸಂಘಟನೆಗಳು ಹೋರಾಡುತ್ತ ಬರುತ್ತಿದ್ದರೂ ಈ ಭಾಗ ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ. ಚುನಾವಣೆ ಬಂದಾಗ ನೀರು ಬಿಡುತ್ತೇವೆ ಎಂದು ಹೇಳುತ್ತಲೇ ಸಂಸದ ವೀರಪ್ಪ ಮೊಯಿಲಿ ಎರಡು ಬಾರಿ ಇಲ್ಲಿ ಗೆದ್ದಿದ್ದಾರೆ. ಈವರೆಗೆ ನೀರು ಮಾತ್ರ ಸಿಕ್ಕಿಲ್ಲ. ಮುಂದಿನ ಚುನಾವಣೆಯಲ್ಲಿ ಮಾತು ತಪ್ಪಿದವರನ್ನು ಮನೆಗೆ ಕಳುಹಿಸುವ ಕೆಲಸ ಮಾಡಬೇಕು. ನೀರು ಪಡೆಯುವವರೆಗೂ ನಾವು ವಿಶ್ರಮಿಸುವುದಿಲ್ಲ’ ಎಂದು ಹೇಳಿದರು.

‘ತೆಂಗು, ಅಡಿಕೆ, ಕಬ್ಬು, ಭತ್ತದ ಬೆಲೆ ಏರಿಕೆಗೆ ವಿಧಾಸಸೌಧದಲ್ಲಿ ಆಯಾ ಭಾಗದ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಾರೆ. ಆದರೆ ಈ ಭಾಗದವರು ಶಾಶ್ವತ ನೀರಾವರಿ ವಿಚಾರವಾಗಿ ಮಾತನಾಡುತ್ತಿಲ್ಲ. ಹೀಗಾಗಿ 11 ವರ್ಷಗಳಿಂದ ಹೋರಾಟ ನಡೆಸಿದರೂ ಈವರೆಗೆ ನಾವು ಸಾಧಿಸಿರುವುದು ಏನಿಲ್ಲಾ.

ಬದಲು ಎತ್ತಿನಹೊಳೆ ಯೋಜನೆಯ ಮೊದಲ ಹಂತದಲ್ಲಿಯೇ ₹ 1,500 ಕೋಟಿ ಹಗರಣ ನಡೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್.ರಾಜಪ್ಪ, ಸಂಚಾಲಕ ಟಿ.ರಾಮಕೃಷ್ಣಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ರಘುನಾಥ ರೆಡ್ಡಿ ಇತರರಿದ್ದರು.

ದುಡ್ಡು ಕೊಟ್ಟವರ ಪರವಾಗಿರುತ್ತಾರೆ
‘ಮೊನ್ನೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ರೈತರು ನಮ್ಮ ಪರವಾಗಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ರೈತರು ದುಡ್ಡು ಕೊಟ್ಟರೆ ಯಾರ ಪರವಾಗಿಯಾದರೂ ಇರುತ್ತಾರೆ. ಯಾಕೆಂದರೆ ನಮಗೆ ತಿನ್ನಲು ತಿಂಡಿ ಇಲ್ಲ. ಕುಡಿಯಲು ನೀರಿಲ್ಲ. ಮಾಡಲು ಕೆಲಸವಿಲ್ಲ. ಈ ರೀತಿ ಇರುವಾಗ ನೀವು ದುಡ್ಡುಕೊಟ್ಟು ಮತ ಹಾಕಿಸಿಕೊಂಡು ನಮ್ಮನ್ನು ದರೋಡೆ ಮಾಡುತ್ತಿದ್ದಿರಿ’ ಎಂದು ನಾರಾಯಣಸ್ವಾಮಿ ಕಿಡಿಕಾರಿದರು.

*
ಜಾನುವಾರುಗಳಿಗೆ ನೀರು, ಮೇವಿಲ್ಲದೆ ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ಗ್ರಾಮ ಪಂಚಾಯಿತಿ ಮುಖಾಂತರ ಮೇವು ವಿತರಿಸಲು ಕ್ರಮಕೈಗೊಳ್ಳಬೇಕು.
-ನಾರಾಯಣಸ್ವಾಮಿ, ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT